ಚಲಿಸುತ್ತಿದ್ದ ರೈಲಿನಿಂದ ಬಿದ್ದು ಪ್ರಯಾಣಿಕ ಸಾವು

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಇಂದ್ರಾಳಿ ರೈಲು ನಿಲ್ದಾಣದಲ್ಲಿ ನಡೆದಿದೆ.
ದೆಹಲಿ-ಎರ್ನಾಕುಳಂ ನಡುವೆ ಸಂಚರಿಸುವ ನಿಜಾಮುದ್ದೀನ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12284) ಇಂದ್ರಾಳಿ ಮೂಲಕ ನಿಧಾನವಾಗಿ ಸಾಗುತ್ತಿದ್ದ ವೇಳೆ, ಎರಡನೇ ಬೋಗಿಯಲ್ಲಿದ್ದ ಪ್ರಯಾಣಿಕರೊಬ್ಬರು ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಇಂದ್ರಾಳಿ ನಿಲ್ದಾಣದಲ್ಲಿ ಈ ರೈಲಿಗೆ ನಿಲುಗಡೆ ಇಲ್ಲ.
ಘಟನೆ ತಿಳಿದ ಕೂಡಲೇ ರೈಲ್ವೆ ಆರ್‌ಪಿಎಫ್ ಸಿಬ್ಬಂದಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ದೃಢಪಡಿಸಿದರು.
ಮೃತರ ಬಳಿ ದೊರೆತ ಮತದಾರರ ಗುರುತಿನ ಚೀಟಿಯಲ್ಲಿ ದಿನೇಶ್ ಎಂಬ ಹೆಸರು ಹಾಗೂ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ನಿವಾಸಿ ಎಂಬ ಮಾಹಿತಿ ಇದೆ. ಮೃತರ ವಾರಸುದಾರರು ಮಣಿಪಾಲ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.






















