26.2 C
Udupi
Friday, October 2, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 658

ಭರತೇಶ್ ಶೆಟ್ಟಿ , ಎಕ್ಕಾರು

ರಾಕ್ಷಸ ಸತ್ರ ಪರಾಶರರಿಂದ ನಡೆಯುತ್ತಿರುವ ಸಮಯ ವಸಿಷ್ಠರು ತಮ್ಮ ಮೊಮ್ಮಗ ಪರಾಶರ ಮಹರ್ಷಿಯನ್ನು ತಡೆಯದೆ ಸುಮ್ಮನಾಗಿ ಉಳಿದಿದ್ದಾರೆ. ಯಾಕೆಂದರೆ ಮೊದಲಾಗಿ ಪರಾಶರರಿಗೆ ಜಗತ್ತಿನ ಮೇಲೆ ಕೋಪ ಉಕ್ಕೇರಿ ಒಮ್ಮೆಗೆ ಸಮಸ್ತ ಲೋಕಗಳನ್ನು ನಾಶ ಪಡಿಸುತ್ತೇನೆ ಎಂದು ಪ್ರತಿಜ್ಞಾ ಬದ್ದರಾದಾಗ ಮಧ್ಯ ಪ್ರವೇಶಿಸಿ ಹಾಗೆ ಮಾಡಬಾರದೆಂದು ತಡೆದಿದ್ದರು. ಮೊಮ್ಮಗನ ಕ್ರೋಧಾಗ್ನಿಯನ್ನು ಲೋಕದ ಮೇಲೆ ಪ್ರಯೋಗಿಸದೆ, ಸಂಕಲ್ಪಕ್ಕೂ ಚ್ಯುತಿ ಬಾರದಂತೆ ಸಮಸ್ತ ಲೋಕಕ್ಕೆ ಆಧಾರವಾಗಿರುವ ಜಲಧಿಯ ಮೇಲೆ ಪ್ರಯೋಗಿಸುವಂತೆ ಕೇಳಿಕೊಂಡಿದ್ದರು. ಅಜ್ಜನ ಮಾತಿಗೆ ಮಾನ್ಯತೆ ನೀಡಿದ ಮೊಮ್ಮಗ ಹಾಗೆ ಮಾಡಲು ಒಪ್ಪಿದ್ದರು. ಈಗ ಮತ್ತೆ ತಡೆಯಲು ಹೋದರೆ ನನ್ನ ಅಜ್ಜ ನಾನೇನು ಯೋಚಿಸಿದರೂ ಆಕ್ಷೇಪಿಸುತ್ತಾರೆ ಎಂಬ ಅಪವಾದ ಬಂದೀತು ಎಂಬ ಚಿಂತೆ ಅವರದ್ದಾಗಿ ಹೋಯಿತು.

ಹಿರಿದಾದ ಮೂರು ಪ್ರಧಾನ ಹೋಮ ಕುಂಡಗಳು ಪ್ರಜ್ವಲಿಸುತ್ತಿವೆ. ರಾಕ್ಷಸ ಕುಲದ ಮಗು, ಮಹಿಳೆ, ವೃದ್ಧ, ಯುವಕ ಹೀಗೆ ಯಾವ ಪರಿಭೇದವೂ ಇಲ್ಲದೆ ಆಹುತಿಯಾಗುತ್ತಿವೆ. ದಹಿಸಲ್ಪಡುವಾಗಿನ ಚೀತ್ಕಾರ, ಆಕ್ರಂದನ, ಘರ್ಜನೆ – ಇದೆಲ್ಲವನ್ನೂ ಮೀರಿಸುವ ತಂತ್ರ ಮಂತ್ರಗಳು, ಸುಟ್ಟು ಕರಟಿ ಹೋಗುವಾಗಿನ ಕಮಟು ವಾಸನೆಗಳು ಎಲ್ಲ ಸೇರಿ ಭೀಕರ ದೃಶ್ಯ ಸೃಷ್ಟಿಯಾಗಿದೆ. ಈ ಮಧ್ಯೆ ಕ್ರೋಧಾಗ್ನಿಯಿಂದ ಪರಾಶರರು ನಾಲ್ಕನೆಯ ಅಗ್ನಿಕುಂಡದಂತೆ ಜ್ವಾಜಾಲ್ಯಮಾನವಾಗಿ ಕಾಣಿಸುತ್ತಿದ್ದಾರೆ.

ಅತ್ರಿ ಮಹರ್ಷಿಗಳಿಗೆ ಈ ಯಾಗದ ವಿಚಾರ ತಿಳಿದು ತರ್ಕಿಸತೊಡಗಿದರು. ಸಾಮಾನ್ಯವಾಗಿ ಯಾರಿಗೂ ಈ ಯಾಗ ಮಾಡಲು ದುಸ್ಸಾಧ್ಯವಾದ ಕಾರ್ಯವೇ ಹೌದು. ಪರಾಶರ ಮಹರ್ಷಿ ಅಸಾಮಾನ್ಯ ತಪಃಶಕ್ತಿ ಸಾಧಿಸಿದ್ದಾನೆ ಎಂಬ ಸತ್ಯವನ್ನು ಮನಗಂಡರು. ಲೋಕಗಳ ಸಮತೋಲನಕ್ಕೆ ರಾಕ್ಷಸರೂ ಬೇಕು. ಕಶ್ಯಪ ವಂಶೀಯರಾದ ರಕ್ಕಸರನ್ನು ಉಳಿಸುವ ಯೋಚನೆ ಮಾಡತೊಡಗಿದರು. ಈ ಸಮಯ ಪುಲಸ್ತ್ಯ, ಪುಲಹ, ಕ್ರತು ಮೊದಲಾದ ಮಹಾತ್ಮರಾದ ಮಹರ್ಷಿಗಳು ಈ ತೆರನಾಗಿ ಯೋಚಿಸಿ ಸಮಾನ ಮನಸ್ಕ ಋಷಿಗಳೆಲ್ಲರೂ ಜೊತೆಯಾಗಿ ಚರ್ಚಿಸಿ ಪರಾಶರರ ಯಾಗಶಾಲೆಗೆ ಆಗಮಿಸಿದರು.

ಮಹರ್ಷಿ ಪುಲಸ್ತ್ಯರು ಪರಾಶರರನ್ನು ಕುರಿತು “ಮಗೂ! ನಿನ್ನ ಜ್ಞಾನ ಹಾಗು ಶಕ್ತಿಗೆ ವಂದಿಸಿದ್ದೇನೆ. ಯಜ್ಞಕಾರ್ಯ ಮಧ್ಯದಲ್ಲಿ ಯಾಜ್ಞಿಗೆ ತೊಂದರೆ ನೀಡಬಾರದು. ಆದರೂ ನಿನ್ನ ಬಳಿ ತುಸು ಕಾಲಾವಕಾಶ ಕೇಳುತ್ತಿದ್ದೇನೆ. ಆಜ್ಞರೂ, ದೋಷರಹಿತರೂ ಆಗಿರುವ ರಾಕ್ಷಸ ಕುಲಜಾತರನ್ನು ಸಮಸ್ತ ರಕ್ಕಸರೊಡನೆ ಹೋಮಿಸುತ್ತಿರುವೆ. ಇದು ನ್ಯಾಯವೇ? ಇಂತಹ ಹತ್ಯಾಕಾಂಡದಿಂದ ನಿನಗೆ ಸಂತೋಷವಾಗುತ್ತಿದೆಯೇ? ಎಂದು ಪ್ರಶ್ನೆ ಮಾಡಿದರು. ಪರಾಶರರು ಏನೂ ಉತ್ತರ ನೀಡಲಿಲ್ಲ. ಯಾಗ ಸಾಗುತ್ತಲೆ ಇತ್ತು.

ಅತ್ರಿ ಮಹರ್ಷಿಗಳು ” ಹೇ ಋಷಿವರನೇ! ನೀನು ಯಾಗ ಮಾಡುತ್ತಿರುವುದು ನಿನ್ನ ತಂದೆಯ ಮರಣಕ್ಕೆ ಕಾರಣನಾದ ರಕ್ಕಸನ ವಿರುದ್ದ ಪ್ರತಿಕಾರ ತೀರಿಸುವುದಕ್ಕಾಗಿ ಅಲ್ಲವೇ? ನಿನ್ನ ತಂದೆಯನ್ನು ಕೊಂದದ್ದು ಓರ್ವ ರಕ್ಕಸ ಕುಲದಲ್ಲಿ ಜನಿಸಿದವನಲ್ಲ. ಶಾಪದಿಂದ ರಕ್ಕಸನಾದವ. ಸೌದಾಸನೆಂಬ ಇಕ್ಷ್ವಾಕು ಕುಲದ ಸೂರ್ಯವಂಶಿ ಕ್ಷತ್ರಿಯ ರಾಜ‌. ನಿನ್ನ ಪಿತನಾದ ಶಕ್ತಿ ಮಹರ್ಷಿ ಮತ್ತು ಸೌದಾಸ ಇಬ್ಬರೂ ಸದ್ಗತಿ ಪ್ರಾಪ್ತವಾಗಿ ಸ್ವರ್ಗದಲ್ಲಿದ್ದಾರೆ. ಅಲ್ಲಿ ಅವರೀರ್ವರ ಮಧ್ಯೆ ಯಾವ ವೈರವೂ ಇಲ್ಲ. ಸತ್ಯ ಹೀಗಿರುವಾಗ ನೀನು ಮಾಡುತ್ತಿರುವ ಯಾಗದ ಉದ್ದೇಶದಲ್ಲಿ ವ್ಯತ್ಯಾಸವಾಗುತ್ತದೆ. ಆ ಕುರಿತಾಗಿ ಯೋಚಿಸಿ ಮುಂದುವರಿದರೆ ಒಳಿತು ಎಂಬುವುದು ನನ್ನ ಅಭಿಪ್ರಾಯ” ಎಂದು ಪೂರ್ವಾಪರ ವಿಚಾರ ತಿಳಿಸಿದರು.

ವಸಿಷ್ಠರು ತನ್ನ ಮೊಮ್ಮಗನನ್ನು ಕರೆದು “ವತ್ಸಾ! ನಿನ್ನ ಯೋಚನೆ ಹಾಗೂ ನಿರ್ಧಾರ ನಿನ್ನ ದೃಷ್ಟಿಯಲ್ಲಿ ಸರಿಯಾಗಿ ಇರಬಹುದು. ಆದರೆ ನಿನಗೆ ಅಪ್ಪನಾದವ ಶಕ್ತಿ ಮಹರ್ಷಿ. ಆತ ನನಗೆ ಸ್ವಂತ ಮಗನಲ್ಲವೆ?. ಪಿತೃವಿಯೋಗ ನಿನಗಾದರೆ ಪುತ್ರವಿಯೋಗ ನನಗಿಲ್ಲವೇ? ದುಡುಕಿ ಅನಾಹುತಕ್ಕೆ ನಾವು ಕಾರಣರಾಗುವುದು ಬೇಡ ಕಂದಾ! ನಿನ್ನ ಅಪ್ಪ ಸ್ವರ್ಗದಲ್ಲಿ ಆತನ ತಮ್ಮಂದಿರೊಂದಿಗೆ ಅಂದರೆ ನನ್ನ ಉಳಿದ ಮಕ್ಕಳೊಂದಿಗೆ ಪರಮ ಸಂತೋಷಿಯಾಗಿದ್ದಾನೆ. ಸುಖ ಭೋಗಗಳಿಂದ ಸತ್ಕೃತನಾಗಿ ಸೌಖ್ಯವಾಗಿದ್ದಾನೆ. ಆತನ ಗತಿಯನ್ನು ಅರಿತು ನನಗೂ ನೆಮ್ಮದಿಯಿದೆ. ಹಾಗಾಗಿ ನೀನು ಈ ರಾಕ್ಷಸ ಸತ್ರವನ್ನು ನಿಲ್ಲಿಸಬೇಕು. ಇದು ನಿನಗೆ ಮಂಗಳಕರವೂ ಆಗಲಿದೆ. ನೀನು ಮಾಡುತ್ತಿರುವ ಯಾಗ ನಿಲ್ಲಿಸಲ್ಪಡಲಿ” ಎಂದು ಹೇಳಿದರು.

ವಸಿಷ್ಠರು, ಅತ್ರಿ, ಪುಲಸ್ತ್ಯರು ಪರಾಶರರ ಬಳಿ ಬಂದು ಯಾಗ ಮುಂದುವರಿಸುವುದು ಸರಿಯಲ್ಲ ಎಂದಾಗ ಹಿರಿಯರಿಗೆ ಗೌರವಸೂಚಕವಾಗಿ ಮಹರ್ಷಿ ಪರಾಶರರು ಯಾಗ ನಿಲ್ಲಿಸಿದರು. ನಂತರ ಯಾಗಾಗ್ನಿ ಅಂದರೆ ಪರಾಶರರ ಕ್ರೋಧಾಗ್ನಿಯನ್ನು ಏನು ಮಾಡುವುದು. ಯಾಗ ಅರ್ಧದಲ್ಲಿ ನಿಲ್ಲಿಸುವಂತಾಗಿದೆ ಎಂಬ ಜಿಜ್ಞಾಸೆ ಮೂಡಿತು. ಸಮಸ್ತ ರಾಕ್ಷಸ ಕುಲವನ್ನು ಸಂಹಾರ ಮಾಡುವ ಸಂಕಲ್ಪ ಈಡೇರದ ತನ್ನ ಕ್ರೋಧಾಗ್ನಿ ಮುಂದೆ ನನ್ನನ್ನೇ ಸುಟ್ಟರೂ ಸುಟ್ಟೀತು ಎಂದು ಪರಾಶರರು ನುಡಿದರು.

ಈ ಕುರಿತಾಗಿ ವಿಮರ್ಷಿಸಿದ ಬ್ರಹ್ಮರ್ಷಿ ವಸಿಷ್ಠರು, ಪುಲಸ್ತ್ಯರು, ಅತ್ರಿ, ಪುಲಹರು ಯಾಗಾಗ್ನಿಯನ್ನು ಹಿಮವತ್ಪರ್ವತದ ಉತ್ತರ ಪಾರ್ಶ್ವದ, ನಿರ್ಜನವಾದ ದೊಡ್ಡ ಕಾಡಿನ ಮಧ್ಯೆ ವಿಧಿವತ್ತಾಗಿ ವಿಸರ್ಜಿಸಿದರು. ಶೀತಲ ಹಿಮಚ್ಚಾಧಿತ ಪ್ರದೇಶದಲ್ಲಿ ಪ್ರತಿ ಪರ್ವಕಾಲಕ್ಕೊಮ್ಮೆ ಈ ಅಗ್ನಿ ರಾಕ್ಷಸರನ್ನು, ವೃಕ್ಷಗಳನ್ನು, ಕಲ್ಲು ಬಂಡೆಗಳನ್ನೂ ಭಕ್ಷಿಸಿ ಭಸ್ಮಮಾಡುತ್ತಿರುತ್ತದೆ ಎಂಬುವುದು ಇಂದಿಗೂ ನಡೆಯುತ್ತಿರುವ ಸತ್ಯ ಸಂಗತಿ. ಇಷ್ಟು ಮಾತ್ರವಲ್ಲ ಇದಕ್ಕೂ ಮೊದಲು ಪರಾಶರರ ಕ್ರೋಧಾಗ್ನಿಯನ್ನು ಸಾಗರ ಮಧ್ಯಕ್ಕೆ ಬಿಸುಟು ತಳದಲ್ಲಿ ಶಾಂತಗೊಳಿಸಿದ್ದರೂ ಯುಗಯುಗಾಂತರದಲ್ಲೂ ಅದು ಎದ್ದು ಜಲವನ್ನು ಸುಡುತ್ತದೆ ಎಂಬ ವಿಚಾರವಿದೆ. ಇಂತಹ ಮಹಾನ್ ಶಕ್ತಿ ಸಾಮರ್ಥ್ಯವುಳ್ಳ ತಪಸ್ವಿಗಳಾದ ಪರಾಶರರು ಇದ್ದಾರೆ.

ಗಂಧರ್ವ ಅಂಗಾರಪರ್ಣ ಪರಾಶರರ ವಿಷಯ ತಿಳಿಸಿಯಾದ ಬಳಿಕ ಹೇ ಅರ್ಜುನಾ! ನಿನ್ನ ಪಿತಾಮಹ ಭೀಷ್ಮಾಚಾರ್ಯರ ಗುರುಗಳು, ಮಹರ್ಷಿ ಜಮದಗ್ನಿಯ ಕರಕಮಲ ಸಂಜಾತ ಭಾರ್ಗವ ರಾಮರು ಇದ್ದಾರೆ. ಇಪ್ಪತ್ತೊಂದು ಬಾರಿ ಭೂಮಂಡಲ ಸುತ್ತಿ ಕ್ಷಾತ್ರ ಸಂಕುಲವನ್ನು ಸವರಿದ ಪರಶುರಾಮರು ಕೂಡ ಮಹಿಮಾನ್ವಿತರೇ ಹೌದು. ವನವಾಸದಲ್ಲಿರುವ ನಿಮಗೆ ಓರ್ವ ಸಮರ್ಥ ಗುರಿ ತೋರುವ ಗುರುಗಳಾಗಬಲ್ಲ ಎಷ್ಟು ಮಹಾತ್ಮರಿಲ್ಲ ಹೇಳು? ಇನ್ನೂ ನಿನಗೆ ವಿವರಿಸುತ್ತಾ ಹೋದರೆ ಋಷಿ ಪರಂಪರೆಯಲ್ಲಿ ಬದುಕುತ್ತಿರುವ ಅಗಣಿತ ಮಹಾತ್ಮರದ್ದೇ ಕಥನವಾಗಿ ಹೋದೀತು ಎಂದು ಅಂಗಾರಪರ್ಣ ನುಡಿದನು.

ಆಗ ಅರ್ಜುನ “ಹೇ ಗಂಧರ್ವ ಶ್ರೇಷ್ಠನೇ! ಇಷ್ಟೆಲ್ಲಾ ತಿಳಿದಿರುವ ನೀನೇ ನಮಗೊಬ್ಬ ಗುರುಗಳನ್ನು ಆರಿಸಿ ತಿಳಿಸಬೇಕು. ನಾವು ಅವರನ್ನು ನಮ್ಮ ಮಾರ್ಗದರ್ಶಕರಾಗಿ, ರಾಜಗುರುಗಳಾಗಿ ಸ್ವೀಕರಿಸುತ್ತೇವೆ” ಎಂದು ಕೇಳಿಕೊಂಡನು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page