24.7 C
Udupi
Wednesday, September 30, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 656

ಭರತೇಶ ಶೆಟ್ಟಿ,ಎಕ್ಕಾರು

ಈ ಸಮಯ ಒಂದು ವಿಶೇಷ ಘಟನೆ ನಡೆದು ಹೋಯಿತು. ಏನೆಂದರೆ ಅಪ್ಸರೆಯರಾದ ರಂಭೆ ಮತ್ತು ಘೃತಾಚಿ ಕೌಶಿಕರ ಬಳಿಗೆ ಬಂದರು. ಆದರೆ ಇವರೀರ್ವರ ಗುಣದಲ್ಲಿ ಒಂದು ವ್ಯತ್ಯಾಸವಿತ್ತು. ರಂಭೆ ಅಹಂ ಅಂದರೆ ಮದ ತುಂಬಿಕೊಂಡು ತದ್ರೀತಿಯ ಗುಣದ ನುಡಿ ನಡತೆ ತೋರುತ್ತಿದ್ದಳು. ಘೃತಾಚಿ ತುಂಬಾ ಗೌರವ ಮತ್ತು ವಿನಯದಿಂದ ವರ್ತಿಸುತ್ತಿದ್ದಳು. ಈ ರೀತಿಯ ಗುಣದಿಂದ ಮಹರ್ಷಿ ಕೌಶಿಕರ ಬಳಿಗೆ ಇವರೀರ್ವರೂ ಬರುವಾಗ ಭೈರವ ಇವರಿಗೆದುರಾದನು. ಅವನೊಂದಿಗೆ ರಂಭೆ ಮದದಿಂದ, ಘೃತಾಚಿ ಗೌರವ, ವಿನಯ ಭಾವದಿಂದ ನಡೆದುಕೊಂಡರು. ಪರಿಣಾಮ ರಂಭೆ ಭೈರವನ ಕೋಪಕ್ಕೆ ಗುರಿಯಾಗಿ ತಲೆಯ ಬೈತಲೆಗೆ ಹೊಡೆತ ತಿನ್ನುವಂತಾಯಿತು. ಅಷ್ಟಕ್ಕೆ ಮುಗಿಯದ ಪ್ರಕರಣ ರಂಭೆ ಶಿಲೆಯಾಗಿ ಹೋಗುವ ಪ್ರಕರಣದೊಂದಿಗೆ ಪರ್ಯಾವಸಾನ ಕಂಡಿತು. ನಂತರ ಘೃತಾಚಿ ಕೌಶಿಕರ ಬಳಿಗೆ ಬಂದಳು. ಅಪ್ಸರೆಯರ ಬಗ್ಗೆ ಅಂತಹ ಗೌರವ ಹೊಂದಿರದೆ ಸ್ಥಿತ ಪ್ರಜ್ಞರಾಗಿದ್ದ ಮಹರ್ಷಿಯನ್ನು ಕಂಡು ಘೃತಾಚಿ “ಪೂಜ್ಯರೇ, ನಾನು ಪ್ರಾಮಾಣಿಕಳಾಗಿ ನಿಮ್ಮ ಸೇವೆಗೆಂದು ಬಂದವಳು. ನನ್ನಲ್ಲಿ ಯಾವುದೆ ರೀತಿಯ ಕಪಟವಾಗಲಿ, ಪೂರ್ವ ನಿರ್ಧಾರಿತ ಉದ್ದೇಶವಾಗಲಿ ಇಲ್ಲ. ನಿಮ್ಮ ಸೇವೆಯನ್ನು ಆಶ್ರಮದಲ್ಲಿದ್ದುಕೊಂಡು ಶೃದ್ಧೆಯಿಂದ ಮಾಡುತ್ತೇನೆ” ಎಂದು ಬೇಡಿಕೊಂಡಳು. “ಹಾಗೆಯೆ ಆಗಲಿ” ಎಂಬ ಒಪ್ಪಿಗೆ ಸಿಕ್ಕಿತು. ಆಕೆ ಆಶ್ರಮದಲ್ಲಿ ಉಳಿಯುವ ಅವಕಾಶ ಪ್ರಾಪ್ತವಾಯಿತು. ಆದರೆ ಕೌಶಿಕ ಮಹರ್ಷಿ ಆಶ್ರಮದಲ್ಲಿ ಉಳಿಯಲು ಅವಕಾಶ ನೀಡುವಾಗ ಒಂದು ಸ್ಪಷ್ಟ ನಿಬಂಧನೆಯನ್ನು ಹಾಕಿದರು. ಅದೇನೆಂದರೆ ಘೃತಾಚಿ ನೂರು ಮಕ್ಕಳನ್ನು ಕೌಶಿಕರ ಸಾಧನೆಗಾಗಿ ಹೆತ್ತು ಕೊಡಬೇಕು. ಅದರಲ್ಲಿ ಐವತ್ತು ಮಕ್ಕಳನ್ನು ಕೊಲ್ಲಲು ಬಿಡಬೇಕು. ಮತ್ತು ಉಳಿದ ಐವತ್ತು ಮಕ್ಕಳನ್ನು ಪೂರ್ಣ ಅಧಿಕಾರಯುತವಾಗಿ ಕೌಶಿಕರಿಗೆ ನೀಡಬೇಕು. ಘೃತಾಚಿ ಯೋಚಿಸಿ “ಸರಿ ನಿಮ್ಮ ಇಚ್ಚೆಯಂತೆ ಆಗಲಿ” ಎಂದು ಒಪ್ಪಿಗೆ ನೀಡಿ, ತನ್ನ ಕೋರಿಕೆಯೊಂದನ್ನು ಋಷಿವರ್ಯನ ಮುಂದಿರಿಸಿದಳು. ಅದೇನೆಂದರೆ, “ತಾನು ನೂರು ಬಾರಿ ಗರ್ಭಿಣಿಯಾದಾಗಲೂ ತನಗೆ ಹೆರಿಗೆ ನೋವು ಬಾಧಿಸಬಾರದು‌. ಮತ್ತು ನಮ್ಮ ಮಕ್ಕಳನ್ನು ಕೊಂದಾಗ ನನಗೆ ಪುತ್ರಶೋಕ ಬರಬಾರದು. ಮಾತ್ರವಲ್ಲ ಉಳಿದ ಮಕ್ಕಳನ್ನು ನಿಮಗೆ ಸಮರ್ಪಿಸಿದ ಬಳಿಕ ಯಾವ ರೀತಿಯ ಪುತ್ರ ವ್ಯಾಮೋಹವೂ ನನಗೆ ಉಂಟಾಗಬಾರದು”. ಘೃತಾಚಿಯ ಮಾತು ಕೇಳಿ “ಹಾಗೆಯೆ ಆಗಲಿ” ಎಂದು ಮಹರ್ಷಿ ಕೌಶಿಕರು ತಮ್ಮ ತಪಶಕ್ತಿಯ ಬಲದಿಂದ ಅನುಗ್ರಹಿಸಿದರು. ಹೀಗೆ ಇವರಿಬ್ಬರ ಆಶ್ರಮ ಜೀವನದಲ್ಲಿ ನೂರು ಮಕ್ಕಳು ಜನಿಸಿದರು. ವರಬಲದಂತೆ ಘೃತಾಚಿಗೆ ಪ್ರಸವ ವೇದನೆ ಅನುಭವಕ್ಕೆ ಬರಲಿಲ್ಲ. ನಂತರ ಐವತ್ತು ಮಕ್ಕಳನ್ನು ವೈದಿಕ ಬಲಿದಾನದಿಂದ ಮಂತ್ರಾಸ್ತ್ರಗಳನ್ನಾಗಿಯೂ, ಉಳಿದ ಐವತ್ತು ಮಕ್ಕಳನ್ನು ಆ ಮಂತ್ರಾಸ್ತ್ರಗಳಿಗೆ ಅಧಿದೇವತೆಗಳನ್ನಾಗಿಯೂ ಮಹರ್ಷಿ ಕೌಶಿಕ ಪರಿವರ್ತಿಸಿದನು.

ಇದಾಗಿ ಕೆಲ ಸಮಯದ ಬಳಿಕ ನಾರದ ಮಹರ್ಷಿ ಮತ್ತು ಆಗಸ್ತ್ಯರು ಸಮಾಲೋಚನೆ ನಡೆಸಿ ಕೌಶಿಕರ ಬಳಿಗೆ ಬಂದರು. ಬಂದವರು ಕೌಶಿಕರ ತಪಸ್ಶ್ಯಕ್ತಿ ಮತ್ತು ಸಾಧನೆ ಅರಿತು ಲೋಕಕಲ್ಯಾಣಕರವಾದ ಒಂದು ದಿವ್ಯ ಮಂತ್ರ ಸೃಷ್ಠಿಸಲು ಕೇಳಿಕೊಂಡರು. ಅವರ ಕೋರಿಕೆಗೆ ಒಪ್ಪಿದ ಕೌಶಿಕ ಮಹರ್ಷಿ ಸಾಧನೆಯಲ್ಲಿ ತೊಡಗಿಸಿಕೊಂಡರು. ಮನಸ್ಸನ್ನು ಮಥಿಸಿ, ಅದ್ಬುತ ಫಲಪ್ರದವಾದ ಬ್ರಹ್ಮ ಗಾಯತ್ರಿ ಮಂತ್ರವನ್ನು ಸಪ್ತವ್ಯಾಹೃತಿಗಳಿಂದ ಸರಳಗೊಳಿಸಿ ಮೂರಕ್ಕಿಳಿಸಿದರು. ಮಂತ್ರಗಳನ್ನು ಅತ್ಯಂತ ಸರಳಗೊಳಿಸಿ ಸಾಮಾನ್ಯರಿಗೂ ಸಾಧನೆಗೆ ದಾರಿಯಾಗುವಂತೆ ರೂಪಿಸಿಕೊಟ್ಟು ವಿಶ್ವದ ಮಿತ್ರನಾದರು. ಪರಿಣಾಮ ಆ ದಿವ್ಯ ಮಂತ್ರಕ್ಕೆ ವಿಶ್ವಾಮಿತ್ರ ಗಾಯತ್ರಿ ಎಂದು ಹೆಸರಿಡುವಂತಾಯಿತು. ನಿರಂತರ ಸಾಧನೆಯಿಂದ ಮಹತ್ತರವಾದುದನ್ನು ಸೃಜಿಸಿದ ಕೌಶಿಕ ಮಹರ್ಷಿ ವಿಶ್ವಾಮಿತ್ರರೆಂದು ಖ್ಯಾತನಾಮರಾದರು. ಸಪ್ತಋಷಿ ಮಂಡಲದಲ್ಲಿ ಇದಕ್ಕೆ ಮೆಚ್ಚುಗೆ ಸಹಿತ ಮಾನ್ಯತೆ ದೊರೆಯಿತು. ನಂತರದಲ್ಲಿ ಬ್ರಹ್ಮಜ್ಞಾನವನ್ನು ಸಾಧಿಸಿದ ವಿಶ್ವಾಮಿತ್ರರಿಗೆ ಬ್ರಹ್ಮರ್ಷಿ ಪದವಿಯನ್ನು ಘೋಷಿಸಿದರು. ಆದರೆ ವಿಶ್ವಾಮಿತ್ರರು ಈ ಪದವಿಯನ್ನು ವಸಿಷ್ಠರು ಒಪ್ಪಿ ನೀಡಬೇಕೆಂದು ಹೇಳಿದಾಗ, ವಸಿಷ್ಠರು ಆ ಕುರಿತಾದ ಸಾಮರ್ಥ್ಯವನ್ನು ಪರೀಕ್ಷಿಸಿ ಸಂತೋಷದಿಂದ ಮನಸಾರೆ ವಿಶ್ವಾಮಿತ್ರರನ್ನು “ಬ್ರಹ್ಮರ್ಷಿ” ಎಂದು ಘೋಷಿಸಿದರು.
ಇಂತಹ ಬ್ರಹ್ಮರ್ಷಿ ವಿಶ್ವಾಮಿತ್ರರು ಸಮರ್ಥರಾದ ಗುರುಗಳಾಗಿದ್ದಾರೆ. ತ್ರೇತಾಯುಗದಲ್ಲಿ ಶ್ರೀರಾಮಚಂದ್ರಮನಿಗೆ ಗುರುಗಳಾಗಿ ತಾನು ಸಾಧಿಸಿ ಸಂಪಾದಿಸಿದ ಮಂತ್ರಾಸ್ತ್ರಗಳನ್ನು ಉಪದೇಶಿಸಿ ಲೋಕಕಲ್ಯಾಣಕ್ಕಾಗಿ ನೀಡಿದ ಮಹಾತ್ಮರು.

ಇವರು ಮಾತ್ರವಲ್ಲ. ಇನ್ನೂ ಓರ್ವ ಮಹಾತ್ಮರಿದ್ದಾರೆ. ಅವರು ಪರಾಶರರು. ಅವರ ಬಗ್ಗೆಯೂ ನಿನಗೆ ಹೇಳುತ್ತೇನೆ ಕೇಳು. ಎಂದು ಗಂಧರ್ವ ಅಂಗಾರಪರ್ಣ ಹೇಳತೊಡಗಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page