
ಧನಾತ್ಮಕ ಮನೋಭಾವ ಬೆಳೆಸಲು ಮಹಾಭಾರತ ಪ್ರೇರಣೆ
ಜೀವನದಲ್ಲಿ ಸೋಲು ಗೆಲುವು ಬಂದಾಗ ಧೃತಿಗೆಡದೆ ಅದನ್ನು ಧನಾತ್ಮಕವಾಗಿ ತೆಗೆದುಕೊಂಡು ಮುಂದೆ ಸಾಗಿದರೆ ಜಗತ್ತು ನಮ್ಮನ್ನು ಗೌರವಿಸುವ ಸ್ಥಿತಿ ಒದಗಿ ಬರುತ್ತದೆ ಎಂಬ ಸಂದೇಶವನ್ನು ಮಹಾಭಾರತ ನಮಗೆ ನೀಡುತ್ತದೆ ಎಂಬುದಾಗಿ ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆಯವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.
ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ ೨೦೨೬ರ ವರ್ಷ ಪೂರ್ತಿ ಪ್ರತಿ ತಿಂಗಳು ನಡೆಯುತ್ತಿರುವ ಮಹಾಭಾರತ ಭಾವದೀಪ ಎಂಬ ಉಪನ್ಯಾಸ ನವಮ ಸೋಪಾನದಲ್ಲಿ ಅವರು ‘ವನದಲ್ಲಿ ಪಾಂಡವರು’ ಎಂಬ ಕುರಿತಾಗಿ ಸಪ್ಟೆಂಬರ್ ೨೬ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ಇದರ ‘ಸಂಭ್ರಮ’ ಸಭಾಂಗಣದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಅನೇಕ ಅಡೆತಡೆಗಳು, ಕೌರವರ ಕಡೆಯಿಂದ ನಾನಾ ವಿಧದ ಅವಮಾನ, ಕಿರುಕುಳಗಳನ್ನೆದುರಿಸಿದರೂ ಧರ್ಮ ಮಾರ್ಗದಲ್ಲಿ ನಡೆದ ಪಾಂಡವರು ವನವಾಸ ಹಾಗೂ ಅಜ್ಞಾತವಾಸವನ್ನು ಯಶಸ್ವಿಯಾಗಿ ಪೂರೈಸಿದ್ದಲ್ಲದೇ ಎಲ್ಲರೂ ದೈವಾನುಗ್ರಹ, ಹನುಮಂತನ ಭೇಟಿ ದೇವಲೋಕದ ಇಂದ್ರಾದಿಗಳಿಂದ ಹಾಗೂ ಋಷಿಮುನಿಗಳ ಅನುಗ್ರಹದಿಂದಾಗಿ ವಿಶೇಷ ಶಸ್ತ್ರಾದಿ ಶಕ್ತಿಗಳನ್ನೂ ಸಂಪಾದಿಸಿಕೊಳ್ಳುತ್ತಾರೆ. ಮುಂದೆ ಅದು ದುಷ್ಟ ದಮನಕ್ಕೆ ನೆರವಾಗಿ ಅವರ ಗೆಲುವಿಗೆ ಕಾರಣವಾಗುತ್ತದೆ ಎಂದರು. ಡಾ.ನಾ ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮನಾ ಜಗದೀಶ್ ಪ್ರಾರ್ಥಿಸಿದರು. ಡಾ. ಸುಮತಿ. ಪಿ. ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಸುಲೋಚನಾ ಬಿ.ವಿ ವಂದಿಸಿದರು.































































































































