‘ದೇವರೇ ಈ ದೇಶವನ್ನು ಕಾಪಾಡಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್

ಬೆಂಗಳೂರು: ರೈಲು ಪ್ರಯಾಣದ ವೇಳೆ ಸಹಪ್ರಯಾಣಿಕರ ಗದ್ದಲದಿಂದ ತೀವ್ರ ತೊಂದರೆ ಅನುಭವಿಸಿರುವುದಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ, ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುರುವಾರ ‘ಎಕ್ಸ್’ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ಐದು ಗಂಟೆಗಳ ಪ್ರಯಾಣದ ಅನುಭವ ಹಂಚಿಕೊಂಡಿದ್ದಾರೆ.
56 ಆಸನಗಳಿದ್ದ ಕೋಚ್ನಲ್ಲಿ ಸುಮಾರು 40 ಮಂದಿ ಮಧ್ಯವಯಸ್ಕ ಪುರುಷರು ನಿರಂತರವಾಗಿ ಗದ್ದಲ ಮಾಡುತ್ತಿದ್ದರು. ಜೋರಾಗಿ ಮಾತನಾಡುವುದು, ನಗುವುದು, ಉನೊ ಆಟವಾಡುವುದು ಹಾಗೂ ಹಾಡು ಹಾಡುವುದರಿಂದ ಪ್ರಯಾಣದುದ್ದಕ್ಕೂ ಕಿರಿಕಿರಿ ಉಂಟಾಯಿತು ಎಂದು ಅವರು ತಿಳಿಸಿದ್ದಾರೆ.
ಗದ್ದಲದಿಂದ ಬೇಸತ್ತ ಶಿವಶ್ರೀ ಟಿಟಿಇಗೆ ದೂರು ನೀಡಿ, ಬೇರೆ ಕೋಚ್ಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದರು. ಆದರೆ ಆಸನ ಲಭ್ಯವಿಲ್ಲದ ಕಾರಣ ಸ್ಥಳಾಂತರ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ ನಾಗರಿಕ ಪ್ರಜ್ಞೆಯೂ ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ‘ದೇವರೇ ಈ ದೇಶವನ್ನು ಕಾಪಾಡಬೇಕು’ ಎಂದು ಬರೆದುಕೊಂಡಿದ್ದಾರೆ.































































































































