
ಶ್ರೀ ಭುವನೇಂದ್ರ ವಸತಿ ಶಾಲೆ, ಮಾಧವ ನಗರ, ಕಾರ್ಕಳದ ವತಿಯಿಂದ “SBRS Samvega – 2026” ಎಂಬ ಹೆಸರಿನಲ್ಲಿ AICS ಅಂತರ್ ಶಾಲಾ ಕ್ರಾಸ್–ಕಂಟ್ರಿ ಓಟದ ಸ್ಪರ್ಧೆಯನ್ನು ಅತ್ಯಂತ ಉತ್ಸಾಹ ಹಾಗೂ ಸಂಭ್ರಮದಿಂದ ಆಯೋಜಿಸಲಾಯಿತು. ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ, ದೈಹಿಕ ಸಾಮರ್ಥ್ಯ, ಶಿಸ್ತು, ಆತ್ಮವಿಶ್ವಾಸ, ಸಹಕಾರ ಮನೋಭಾವ ಹಾಗೂ ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿ ಕ್ರೀಡಾಪಟುಗಳು ಕ್ರಾಸ್–ಕಂಟ್ರಿ ಓಟದಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಮುಂಜಾನೆಯೇ ಶಾಲಾ ಆವರಣದಲ್ಲಿ ಕ್ರೀಡಾಪಟುಗಳು, ಶಿಕ್ಷಕರು ಹಾಗೂ ಆಯೋಜಕರು ಸೇರಿ ಕ್ರೀಡಾಕೂಟಕ್ಕೆ ಸಜ್ಜಾದರು. ಬೆಳಿಗ್ಗೆ 7.00 ಗಂಟೆಗೆ ಓಟಕ್ಕೆ ಚಾಲನೆ ನೀಡಲಾಯಿತು. ಓಟಗಾರರು ನಿಗದಿತ ಮಾರ್ಗದಲ್ಲಿ ತಮ್ಮ ವೇಗ, ಸಾಮರ್ಥ್ಯ ಮತ್ತು ಸಹನಶಕ್ತಿಯನ್ನು ಪ್ರದರ್ಶಿಸುತ್ತಾ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಈ ಕ್ರಾಸ್–ಕಂಟ್ರಿ ಓಟವು ಕೇವಲ ಗೆಲುವಿಗಾಗಿ ನಡೆಯುವ ಸ್ಪರ್ಧೆಯಾಗಿರದೆ, “Chase the Victory” ಎಂಬ ಆಶಯದಂತೆ ಗುರಿಯತ್ತ ನಿರಂತರವಾಗಿ ಮುನ್ನಡೆಯುವ ಮನೋಭಾವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿತು. ಓಟಗಾರರು ಎದುರಾದ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ತಮ್ಮ ಶಕ್ತಿಮೀರಿ ಪ್ರಯತ್ನಿಸಿದರು. ಸಹಪಾಠಿಗಳು ಹಾಗೂ ಶಿಕ್ಷಕರು ಕ್ರೀಡಾಪಟುಗಳನ್ನು ಹುರಿದುಂಬಿಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದರು.
ಈ ಕಾರ್ಯಕ್ರ ದ ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದಂತಹ ಮಂಗಳೂರಿನ ಎಕ್ಸ್ಪರ್ಟ್ ಪಿಯು ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀ ಸಂತೋಷ್ ಪ್ರಭು ಇವರು ತಮ್ಮ ಅನುಭವದ ಮೂಲಕ ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಶಿಕ್ಷಣದ ಮಹತ್ವವನ್ನು ತಿಳಿಸಿದರು. ಕ್ರೀಡೆಯು ದೇಹವನ್ನು ಸದೃಢಗೊಳಿಸುವುದರ ಜೊತೆಗೆ ಮನಸ್ಸಿನಲ್ಲಿ ಶಿಸ್ತು, ಏಕಾಗ್ರತೆ, ಸಹನೆ, ಆತ್ಮವಿಶ್ವಾಸ ಮತ್ತು ಗುರಿಸಾಧನೆಯ ಮನೋಭಾವವನ್ನು ಬೆಳೆಸುತ್ತದೆ ಎಂದು ಅವರು ತಿಳಿಸಿದರು. ಗೆಲುವು-ಸೋಲುಗಳನ್ನು ಸಮಚಿತ್ತದಿಂದ ಸ್ವೀಕರಿಸಿ, ನಿರಂತರ ಪರಿಶ್ರಮದ ಮೂಲಕ ತಮ್ಮ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.
ಈ ಸಂದರ್ಭದಲ್ಲಿ ಕ್ರಾಸ್-ಕಂಟ್ರಿ ಓಟದಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳ ಪ್ರಯತ್ನವನ್ನು ಶ್ಲಾಘಿಸಿ, ವಿಜೇತರಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ, ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಕ್ರೀಡಾ ಮನೋಭಾವ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಸಂದೇಶ ನೀಡಲಾಯಿತು.
ಈ ಸ್ಪರ್ಧೆಯಲ್ಲಿ ರನ್ನರಪ್ ಸ್ಥಾನವನ್ನು ಆತಿಥೇಯ ಭುವನೇಂದ್ರ ವಸತಿ ಶಾಲೆ ಮುಡಿಗೇರಿಸಿಕೊಂಡರೆ, ಓವರ್ ಅಲ್ ಚಾಂಪಿಯನ್ಶಿಪ್ ಕಿರೀಟವನ್ನು ಶ್ರೀ ಮೂಕಾಂಬಿಕಾ ಪಬ್ಲಿಕ್ ಸ್ಕೂಲ್ ಕುಂದಾಪುರ ಇವರು ಮುಡಿಗೇರಿಸಿಕೊಂಡರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರು, ಪ್ರಾಂಶುಪಾಲರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






























































































































