ಭಾಗ – 647
ಭರತೇಶ ಶೆಟ್ಟಿ, ಎಕ್ಕಾರು

ಸಂಚಿಕೆ ೬೪೭ ಮಹಾಭಾರತ
ವಸಿಷ್ಠರು ತನ್ನ ಸಂತಾನವನ್ನು ಕಳಕೊಂಡಿದ್ದಾರೆ. ಈಗ ಅವರಿಗೆ ಉಳಿದಿರುವುದು ಅದೃಶ್ಯವಂತಿಯ ಗರ್ಭದಲ್ಲಿರುವ ಶಿಶು. ಮುಂದೆ ವಂಶವೃಕ್ಷ ಬೆಳೆಸುವ ಚಿಗುರಾಗಿ ಉಳಿದಿರುವುದು ಈ ಗರ್ಭ. ಕಾತರದಿಂದ ಕಾಯುತ್ತಿರುವ ವಸಿಷ್ಟರ ಮುಖ ಕಮಲವರಳಿತು. ಕಾರಣ ಸೊಸೆ ಅದೃಶ್ಯವಂತಿ ಸಲ್ಲಕ್ಷಣ ಸಂಪನ್ನ, ಸರ್ವಾಂಗ ಸುಂದರ, ದಿವ್ಯ ಮೂರ್ತಿಯಂತಿರುವ ಗಂಡು ಮಗುವಿನ ಜನನವಾಗಿದೆ. ಈ ವರೆಗೆ ಜೀವನದಲ್ಲಿ ಉಳಿದಿರುವ ವೈಯಕ್ತಿಕ ಜೀವಿತಾವಧಿಯ ಮೇಲೆ ಯಾವುದೇ ಗುರಿಯನ್ನೂ ಹೊಂದಿರದೆ, ತನ್ನ ಸ್ವಂತ ಬದುಕಿನ ಸಕಲ ಆಶೆಗಳನ್ನೂ ತೊರೆದು “ಪರಾಶಾ” ತತ್ಪರರಾಗಿ ಒಂದು ರೀತಿಯ ಜಿಗುಪ್ಸೆಯನ್ನು ತಳೆದಿರುವ ಸಮಯ ಮೊಮ್ಮಗನ ಜನನವಾಗಿದೆ. ನವಜಾತ ಶಿಶುವಿನ ಜನನ ವಾರ್ತೆ ಮತ್ತೆ ತಾನು ಈತನಿಗಾಗಿ ಅಂದರೆ ಮೊಮ್ಮಗನಿಗಾಗಿ ಬದುಕಬೇಕು ಎಂಬ ಆಶೆಯನ್ನು ಮೂಡಿಸಿದನೋ ಆ ಚೈತನ್ಯದ ಚಿಲುಮೆಗೆ ಪರಾಶರಾ ಎಂದು ನಾಮಕರಣ ಮಾಡಿದರು. ಮಗು ಬೆಳೆಯುತ್ತಿದ್ದಂತೆ ಸಕಾಲದಲ್ಲಿ ಸಂಸ್ಕಾರ ಕರ್ಮಗಳನ್ನು ಬಹಳ ಕಾಳಜಿಯಿಂದ ನೆರವೇರಿಸುತ್ತಾ ಬೆಳೆಸಿದರು. ನಾಮಕರಣ, ಉಪನಯನ, ವೇದ ವೇದಾಂಗ, ಸಕಲ ಶಾಸ್ತ್ರಗಳ ಅಧ್ಯಾಪನ ಹೀಗೆ ಎಲ್ಲವನ್ನೂ ತಾನೇ ಮಾಡುತ್ತಾ ಮೊಮ್ಮಗನನ್ನು ವಿದ್ಯಾ ಪಾರಂಗತನನ್ನಾಗಿ ಮಾಡಿದರು. ತನ್ನ ಅಜ್ಜನೇ ಗುರುವಾಗಿ ಧಾರೆಯೆರೆದ ಜ್ಞಾನದ ಬಲದಿಂದ ಇನ್ನೂ ಮಹತ್ತರವಾದುದನ್ನು ಸಾಧಿಸಿ ಸಂಪಾದಿಸಬೇಕೆಂದು ಬಯಸಿದ ಪರಾಶರರು ಅಜ್ಜ ವಸಿಷ್ಠರ ಅನುಮತಿ ಪಡೆದು ಕಾನನ ಸೇರಿ ಅನೇಕ ವರ್ಷಗಳವರೆಗೆ ಕಠಿಣ ತಪಸ್ಸನ್ನಾಚರಿಸಿದರು. ಆ ಮುಖೇನ ಅತಿಶಯವಾದ ಸುಜ್ಞಾನವನ್ನು ಪಡೆದು ಮಹರ್ಷಿಯಾದರು.
ಇತ್ತ ಕೌಶಿಕ ಮಹಾರಾಜನೂ ಮುನಿಯಂತೆ ತಪಸ್ಸು ಮಾಡಿ ಸಾಧನೆಗೈಯುತ್ತಾ, ಮಂತ್ರಾಸ್ತ್ರಗಳನ್ನೂ ಸಂಪಾದಿಸಿ ಬಹಳ ಹುಮ್ಮಸ್ಸಿನಿಂದ ವಸಿಷ್ಟರ ಆಶ್ರಮಕ್ಕೆ ಬಂದನು. ವಸಿಷ್ಠರನ್ನು ಕರೆದು, ತನ್ನ ಬಳಿ ಇರುವ ಮಂತ್ರಾಸ್ತ್ರಗಳಿಂದ ವಸಿಷ್ಠರನ್ನು ನಾಶಗೈಯಬೇಕೆಂದು ಯುದ್ಧಾಹ್ವಾನ ನೀಡಿದಂತೆ ಆಮಂತ್ರಿಸಿದನು. ಋಷಿಗಳ ಆಯುಧವಿರುತ್ತದೆಯೇ? ಬ್ರಹ್ಮದಂಡ ಮತ್ತು ಕಮಂಡಲಧಾರಿಗಳಲ್ಲವೇ? ಕೌಶಿಕ ಮಹಾರಾಜ ಮುನಿಯಂತೆ ತಪಸ್ಸನ್ನಾಚರಿಸಿ ಈವರೆಗೆ ಸಾಧಿಸಿದ ಸಕಲ ಮಂತ್ರಾಸ್ತ್ರಗಳನ್ನು ವಸಿಷ್ಠರ ಮೇಲೆ ಪ್ರಯೋಗಿಸಿದರೂ ಅವುಗಳೆಲ್ಲವೂ ಬ್ರಹ್ಮದಂಡದಲ್ಲೇ ಲೀನವಾದವೇ ಹೊರತು ಬೇರೇನೂ ಹಾನಿ ಮಾಡಲಿಲ್ಲ. ಕೌಶಿಕನಿಗೆ ಬಹಳ ವಿಸ್ಮಯವಾಯಿತು. ಹಾಗಾದರೆ ಕ್ಷತ್ರಿಯ, ಕ್ಷಾತ್ರಬಲ, ತಪೋಬಲ, ವರಬಲ ಗಳೆಲ್ಲವನ್ನೂ ಮೀರಿದ ಮಹತ್ತರವಾದ ಶಕ್ತಿಯೊಂದಿದೆಯಲ್ಲ. ಅದೇನು? ಎಂಬ ವಿಶೇಷಾಸಕ್ತಿ ಮೂಡಿತು. ಆ ಬಗ್ಗೆ ತಿಳಿದುಕೊಂಡಾಗ ವಸಿಷ್ಠರು ಬ್ರಹ್ಮಜ್ಞಾನವನ್ನೇ ಸಾಧಿಸಿದ ಬ್ರಹ್ಮರ್ಷಿ, ಆ ಜ್ಞಾನಬಲದಿಂದಲೇ ಅವರು ಈ ತೆರನಾದ ಮಹಾನ್ ಶಕ್ತಿಯನ್ನು ಹೊಂದಿದ್ದಾರೆ ಎಂಬ ಸತ್ಯ ಅರಿವಾಯಿತು. ನಾನೂ ಬ್ರಹ್ಮರ್ಷಿಯಾಗಿ ವಸಿಷ್ಠನ ಸಮಬಲಾನ್ವಿತನಾಗಲೇ ಬೇಕು. ತನ್ನ ಎದುರಾಳಿಯಾದ ವಸಿಷ್ಠನ ಬಾಯಿಯಿಂದಲೇ ನಾನು ಬ್ರಹ್ಮರ್ಷಿ ಎಂದು ಹೇಳಿಸಬೇಕು. ಆ ಅದ್ವಿತೀಯ ಸ್ಥಾನಕ್ಕೆ ಏರಬೇಕು ಎಂದು ನಿರ್ಣಯಿಸಿ ಉಗ್ರ ತಪಸ್ಸಿಗೆ ತೊಡಗಿದರು. ಸಜ್ಜನನಾದ ವಸಿಷ್ಠರ ಜೊತೆ ಹೋರಾಡಿದ ಕಾರಣ ಪರೋಕ್ಷವಾಗಿಯಾದರೂ ಸನ್ಮಾರ್ಗವನ್ನೇ ಹಿಡಿಯುವ ಅವ್ಯಕ್ತ ಮಾರ್ಗದರ್ಶನವಾಯಿತು. ಅಲ್ಲದೇ ಹೋಗಿದ್ದರೆ ವಸಿಷ್ಠರ ನಿಜ ಸಾಮರ್ಥ್ಯದ ಎದುರು ಕೌಶಿಕ ಅರೆಕ್ಷಣ ನಿಲ್ಲುವ ಸಾಮರ್ಥ್ಯವನ್ನೂ ಹೊಂದಿರಲಿಲ್ಲ.
ಮುಂದೆ ಪರಾಶರ ಮಹರ್ಷಿಗಳು ಮಹಾನ್ ಸಾಧಕರಾದರು. ಮನುಷ್ಯರ ನಾಲ್ಕು ವರ್ಣದವರಿಗೂ, ಬ್ರಹ್ಮಚರ್ಯ, ಆಚರಿಸಬೇಕಾದ ಧರ್ಮ ಮತ್ತು ಕರ್ಮಗಳ ಕುರಿತಾದ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳನ್ನೂ ನಿರ್ದೇಶಿಸಿರುವ ಸ್ಮೃತಿಕಾರರಾದರು. ಮಾತ್ರವಲ್ಲದೆ ಮನುಷ್ಯ ಯಾವ ಕರ್ಮ ಮಾಡಿದರೆ ತತ್ಫಲವಾಗಿ ಪರಿಣಾಮ ಏನಾಗುತ್ತದೆ? ಉಚಿತಾನುಚಿತ ಕರ್ಮಗಳು ಯಾವುದು? ಪಾಪ ಪುಣ್ಯಗಳು ಹೇಗೆ ಪ್ರಾಪ್ತವಾಗುತ್ತವೆ? ಸ್ವರ್ಗ ನರಕಗಳ ಕುರಿತಾದ ಸವಿವರ ವಿವರಣೆ, ಹುಟ್ಟು ಸಾವುಗಳ ರಹಸ್ಯ ಹೀಗೆ ಅತ್ಯಮೂಲ್ಯವೂ ಅನರ್ಘ್ಯವೂ ಆಗಿರತಕ್ಕಂತಹ ದಿವ್ಯ ಜ್ಞಾನವನ್ನು, ಮಾನವಲೋಕ ಅಂದರೆ ಮರ್ತ್ಯಲೋಕದ ಜನರಿಗೆ ಹೇಗೆ ಬದುಕಬೇಕು ಎಂಬ ಮಾರ್ಗದರ್ಶನ, ಮೋಕ್ಷ ಸಾಧನೆ ಹೇಗೆ ಸಾಧ್ಯವಾಗಿಸಬಹುದು ಎಂಬ ಕುರಿತಾಗಿಯೂ ನಿಖರವಾದ ಜ್ಞಾನವನ್ನು ಲೋಕಾರ್ಪಣಗೊಳಿಸಿದ ಪರಾಶರ ಮಹರ್ಷಿಗಳ ದಿವ್ಯ ಜ್ಞಾನಾಮೃತವು ಪರಾಶರ ಗೀತೆ ಎಂದೇ ಸುಪ್ರಸಿದ್ಧವಾಗಿದೆ. ಸ್ಮೃತಿಕಾರರಾಗಿ ಅವರು ನಿರ್ದೇಶಿಸಿರುವ ಪರಾಶರ ಸ್ಮೃತಿ ಕಲಿಯುಗದ ಜನರಿಗೆ ಅನುಕರಣೀಯವೂ ಅನುಸರಣೀಯೂ ಆದಂತಹ ಯುಗಧರ್ಮವನ್ನೂ ವಿವರಿಸಿ ಹೇಳಿದೆ. ಅಂತಹ ಮಹಾನ್ ವ್ಯಕ್ತಿತ್ವದ ಮಹಾತ್ಮನಾದ ಮೊಮ್ಮಗನನ್ನು ಪಡೆದ ವಸಿಷ್ಠರು ಧನ್ಯತೆಯನ್ನು ಪಡೆದರು.
ವಸಿಷ್ಠರ ಮೊಮ್ಮಗ ಮಹರ್ಷಿ ಪರಾಶರರ ಮುಖೇನ ಇನ್ನೂ ಒಂದು ಮಹತ್ಸಾಧನೆಯಾಗಿದೆ. ಆ ಕೌತುಕಪ್ರದವಾದ ಕಥೆಯನ್ನೂ ನಿನಗೆ ತಿಳಿಸುತ್ತೇನೆ ಎಂದು ಗಂಧರ್ವ ಅಂಗಾರಪರ್ಣ ಅರ್ಜುನನಿಗೆ ಹೇಳಿ, ಕಥೆ ನಿರೂಪಿಸಲು ತೊಡಗಿದನು.
ಮುಂದುವರಿಯುವುದು…






























































































































