
ಬೆಂಗಳೂರು: ಉಚಿತ ಅಕ್ಕಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಆಯುಷ್ಮಾನ್ ಭಾರತ್ ಸೇರಿದಂತೆ ಹಲವು ಸರ್ಕಾರಿ ಯೋಜನೆಗಳಿಗೆ ರೇಷನ್ ಕಾರ್ಡ್ ಪ್ರಮುಖವಾಗಿದೆ. ರೇಷನ್ ಕಾರ್ಡ್ ಸಕ್ರಿಯವಾಗಿರಲು ನಿಗದಿತ ಗಡುವಿನೊಳಗೆ ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದ್ದು, ವಿಳಂಬವಾದರೆ ಕೆಲವು ಸೌಲಭ್ಯಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಇ-ಕೆವೈಸಿ ಮಾಡಿಸದ ಸದಸ್ಯರ ಪಾಲಿನ ಉಚಿತ ಪಡಿತರ ವಿತರಣೆಯನ್ನು ತಡೆಹಿಡಿಯಬಹುದು. ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ದಾರರಿಗೆ ಸಿಗುವ ಗೃಹಲಕ್ಷ್ಮಿ ಯೋಜನೆಯ ಮಾಸಿಕ ₹ 2,000 ಹಾಗೂ ಅನ್ನಭಾಗ್ಯ ಯೋಜನೆಯ ನಗದು ವರ್ಗಾವಣೆಯೂ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ದೀರ್ಘಕಾಲ ಇ-ಕೆವೈಸಿ ಪೂರ್ಣಗೊಳಿಸದ ರೇಷನ್ ಕಾರ್ಡ್‌ಗಳನ್ನು ನಿಷ್ಕ್ರಿಯ ಅಥವಾ ಅನರ್ಹ ಎಂದು ಪರಿಗಣಿಸಿ ಅಮಾನತು ಅಥವಾ ರದ್ದು ಮಾಡುವ ಸಾಧ್ಯತೆಯೂ ಇದೆ. ಇದರಿಂದ ಆಯುಷ್ಮಾನ್ ಭಾರತ್, ವಿದ್ಯಾರ್ಥಿ ವೇತನ, ವಸತಿ ಹಾಗೂ ಇತರೆ ಸಬ್ಸಿಡಿ ಯೋಜನೆಗಳ ಸೌಲಭ್ಯ ಪಡೆಯುವುದಕ್ಕೂ ತೊಂದರೆಯಾಗಬಹುದು.
ಇ-ಕೆವೈಸಿ ಮಾಡಿಸುವುದು ಹೇಗೆ?
ಕುಟುಂಬದ ಎಲ್ಲಾ ಸದಸ್ಯರು ಆಧಾರ್ ಕಾರ್ಡ್‌ನೊಂದಿಗೆ ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಪೋಸ್ ಯಂತ್ರದಲ್ಲಿ ಹೆಬ್ಬೆರಳಿನ ಗುರುತು ನೀಡಿ ಉಚಿತವಾಗಿ ಇ-ಕೆವೈಸಿ ಮಾಡಿಸಬಹುದು.
ಇದಲ್ಲದೆ, ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಮುಖಚರ್ಯೆ ಆಧಾರಿತ ಮೊಬೈಲ್ ಇ-ಕೆವೈಸಿ ಸೌಲಭ್ಯವನ್ನು ಶೀಘ್ರದಲ್ಲೇ ಜಾರಿಗೆ ತರಲು ಮುಂದಾಗಿದ್ದಾರೆ. ಇದರಿಂದ ಮನೆಯಲ್ಲೇ ಕುಳಿತು ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಸಿಗಲಿದೆ.
ಬೇಕಾಗುವ ದಾಖಲೆಗಳು:
- ರೇಷನ್ ಕಾರ್ಡ್ ಸಂಖ್ಯೆ
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್






























































































































