
ಬಜಗೋಳಿ: ಕಾರ್ಕಳ ತಾಲೂಕು ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ, ಬಜಗೋಳಿಯ ವಿದ್ಯಾರ್ಥಿಗಳು ಅದ್ಭುತ ಕ್ರೀಡಾ ಪ್ರತಿಭೆ, ಆತ್ಮವಿಶ್ವಾಸ ಹಾಗೂ ತಂಡಸ್ಫೂರ್ತಿಯನ್ನು ಮೆರೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.
14 ವರ್ಷದೊಳಗಿನ ಬಾಲಕರ ವಿಭಾಗ, 14 ವರ್ಷದೊಳಗಿನ ಬಾಲಕಿಯರ ವಿಭಾಗ ಹಾಗೂ 17 ವರ್ಷದೊಳಗಿನ ಬಾಲಕಿಯರ ವಿಭಾಗ—ಈ ಮೂರು ವಿಭಾಗಗಳಲ್ಲೂ ಪ್ರಥಮ ಸ್ಥಾನ ಗಳಿಸುವ ಮೂಲಕ ಶಾಲೆಯ ಕ್ರೀಡಾ ಇತಿಹಾಸದಲ್ಲಿ ವಿಜಯದ ಹ್ಯಾಟ್ರಿಕ್ ಸಾಧಿಸಿದ್ದಾರೆ. ಮಾತ್ರವಲ್ಲದೆ, ಈ ಮೂರು ವಿಭಾಗಗಳಲ್ಲೂ ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಮೈದಾನದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಅದಮ್ಯ ಉತ್ಸಾಹ, ಶಿಸ್ತು, ಆತ್ಮವಿಶ್ವಾಸ, ಕಠಿಣ ಪರಿಶ್ರಮ ಹಾಗೂ ತಂಡಸ್ಫೂರ್ತಿ ಈ ಅಭೂತಪೂರ್ವ ಗೆಲುವಿಗೆ ಕಾರಣವಾಗಿದೆ.
ವಿದ್ಯಾರ್ಥಿಗಳ ಈ ಹೆಮ್ಮೆಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯಿನಿ, ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿ, ವಿಜೇತ ವಿದ್ಯಾರ್ಥಿಗಳಿಗೆ ಮತ್ತು ಮಾರ್ಗದರ್ಶಕ ಶಿಕ್ಷಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.






























































































































