ಭಾಗ – 639
ಭರತೇಶ್ ಶೆಟ್ಟಿ,ಎಕ್ಕಾರು

ರಾಜದಂಡಧರನಾಗಿ ಧರ್ಮಪಾಲನೆ, ಯಾಗ ಯಜ್ಞ, ಪ್ರಜಾಪರಿಪಾಲನೆ ಮಾಡಬೇಕಾದ ಅರಸನು ಮೈ ಮರೆತಿದ್ದಾನೆ. ಹೀಗಿರುವಾಗ ಆತನಿಗೆ ಇದೆಲ್ಲವೂ ನೆನಪಾಗಬೇಕಾದರೆ ಸರಿಯಾಗಿರುವುದು ಯಾವುದೂ ಸರಿ ಇರದಂತೆ ಮಾಡಬೇಕು. ಅಂದರೆ ಕಾಲ ಕಾಲಕ್ಕೆ ಮಳೆಯಾಗುತ್ತಿರುವ ಈತನ ರಾಜ್ಯಕ್ಕೆ ಮಳೆಯನ್ನು ಸುರಿಸುವುದಿಲ್ಲ. ಎಲ್ಲೆಡೆ ಕ್ಷಾಮ, ಬರಗಾಲ ತಲೆದೋರಲಿ, ಜನರ ಹಾಹಾಕಾರ ಮುಗಿಲು ಮುಟ್ಟಲಿ. ಆಗ ತನ್ನಿಂದ ತಾನೆ ಅರಸ ಸರಸ ಬಿಟ್ಟು ತನ್ನ ಕರ್ತವ್ಯ, ಜವಾಬ್ದಾರಿಗೆ ಮನ ಮಾಡುವಂತೆ ಆಗಬೇಕು. ಹೀಗೆ ಯೋಚಿಸಿದ ದೇವರಾಜ ಇಂದ್ರ ಆ ಕ್ಷಣದಿಂದ ಮಳೆಯನ್ನು ನಿಲ್ಲಿಸಿ ಬಿಟ್ಟನು. ಪರಿಣಾಮ ದಿನಗಳೆದಂತೆ ಭೀಕರ ಬರಗಾಲ, ನೀರಿಲ್ಲದೆ ಪಶು ಪಕ್ಷಿಗಳು ಸಾಯ ತೊಡಗಿದವು, ಕೃಷಿ ಒಣಗಿ ಕರಟಿತು, ಜನರೂ ಸಾಯತೊಡಗಿದರು. ಎಲ್ಲೆಲ್ಲಿ ನೋಡಿದರೂ ಆಕ್ರಂದನ, ದುಃಖ, ಸಾವು, ಗೋಳು ತುಂಬಿ ಹೋಯಿತು. ಸಮೃದ್ಧವಾಗಿದ್ದ ರಾಜ್ಯ ಹಸಿವಿನಿಂದ ಪೀಡಿತರಾಗಿ ದಾರುಣ ಅಂತ್ಯ ಕಂಡ ಪ್ರಜಾಪರಿವಾರ ಪ್ರೇತಗಳಾಗಿ, ಆ ದೇಶ ಪ್ರೇತ ಪಿಶಾಚಿಗಳ ಪಟ್ಟಣವಾಯಿತು. ಇಂತಹ ದುಸ್ಥಿತಿಯಲ್ಲಿ ಮಂತ್ರಿಗಳಿಗೂ ತಾನು ಬದುಕುಳಿಯುವುದಕ್ಕಾಗಿ ಹರಸಾಹಸ ಪಡುವ ದುರ್ಗತಿ ಒದಗಿ, ದೇಶ ರಕ್ಷಣೆಯ ಬಗ್ಗೆ ಯೋಚಿಸುವ ಕ್ಷಮತೆಯನ್ನು ಕಳಕೊಂಡು ಬಿಟ್ಟರು.
ದೇಶಕ್ಕೊದಗಿದ ಇಂತಹ ಚಿಂತಾಜನಕ ದುಸ್ಥಿತಿಯನ್ನು ಕಂಡು ಆಗುತ್ತಿರುವ ಮಾರಣ ಹೋಮವನ್ನು ತಡೆಯಬೇಕು ಎಂದು ನಿರ್ಣಯಿಸಿದ ಮಹರ್ಷಿ ವಸಿಷ್ಟರು ನೇರವಾಗಿ ರಾಜ ಸಂವರಣನನ್ನು ಹುಡುಕುತ್ತಾ ಪರ್ವತ ಶಿಖರಕ್ಕೆ ಬಂದರು. ಅರಸನನ್ನು ಕಂಡು ಆತನಿಂದಾದ ಕರ್ತವ್ಯ ಲೋಪ, ಆತನಿಗಿರಬೇಕಾಗಿದ್ದ ಜವಾಬ್ದಾರಿಯನ್ನು ವಿವರಿಸಿ, ರಾಜ್ಯಕ್ಕೆ ಒದಗಿರುವ ಸಂಕಷ್ಟ ನಿವಾರಣೆಯ ಹೊಣೆಗಾರಿಕೆಯನ್ನು ನಿಭಾಯಿಸಬೇಕು ಎಂದು ಜಾಗೃತಗೊಳಿಸಿ ಎಚ್ಚರಿಸಿದರು.
ಈ ತನಕ ಸೂರ್ಯಪುತ್ರಿ ತಪತಿಯ ಅತಿ ಸೌಂದರ್ಯದೊಳಗೆ ಮೋಹಪಾಶಕ್ಕೆ ಸಿಲುಕಿ ಬಂಧಿಯಾಗಿ, ಕಾಮಾತಿರೇಕವನ್ನು ತಣಿಸುತ್ತಾ ಸರ್ವಸ್ವವನ್ನೂ ಮರೆತಿದ್ದ ರಾಜ ಸಂವರಣನಿಗೆ ತನ್ನ ಕರ್ತವ್ಯ ನೆನಪಾಯಿತು. ಪ್ರಜೆಗಳು ಮತ್ತು ದೇಶವನ್ನು ರಕ್ಷಿಸಬೇಕೆಂದು ತಪತಿ ಮತ್ತು ಗುರು ವಸಿಷ್ಟರ ಜೊತೆ ಮರಳಿ ದೇಶಕ್ಕೆ ಬಂದನು. ರಾಜ ಪುರೋಹಿತರಾಗುವಂತೆ ವಸಿಷ್ಟರನ್ನು ಪ್ರಾರ್ಥಿಸಿ ಪರ್ಜನ್ಯ ಯಾಗ ಮಾಡಿಸಿದನು. ಪ್ರಸನ್ನನಾದ ದೇವೇಂದ್ರ ಮಳೆ ಸುರಿಸಿ ಎದುರಾಗಿದ್ದ ಸಂಕಷ್ಟ ದೂರವಾಯಿತು. ಇದಾದ ಬಳಿಕ ರಾಜ ಸಂವರಣನು ಸಪತ್ನೀಕನಾಗಿ ಮಹರ್ಷಿ ವಸಿಷ್ಟರ ನಿರ್ದೇಶನ ಮತ್ತು ಪೌರೋಹಿತ್ಯದಲ್ಲಿ ಹನ್ನೆರಡು ವರ್ಷಗಳ ಕಾಲ ನಿರಂತರ ಮಹಾಯಾಗಗಳನ್ನು ಮಾಡಿಸಿ ಸಾಮ್ರಾಜ್ಯಕ್ಕೆ ದೇವತಾನುಗ್ರಹ, ಸಮೃದ್ಧಿಯನ್ನು ಸುಸ್ಥಿರಗೊಳಿಸಿದನು. ತಪತಿಯು ಮಹಾರಾಣಿಯಾಗಿ ಸಂವರಣನ ಜೊತೆ ದಾಂಪತ್ಯ ನಡೆಸಿ ವಂಶದ ಶ್ರೇಷ್ಟ ಚಕ್ರವರ್ತಿ “ಕುರು” ವನ್ನು ಮಗನಾಗಿ ಪಡೆದರು.
ಹೀಗೆ ನಿಮ್ಮ ವಂಶವನ್ನು ವರ್ಧನೆ ಮಾಡಿರುವ ಕುರು ತಪತಿಯ ಮಗನಾಗಿರುವ ಕಾರಣ, ಮತ್ತು ಆ ವಂಶದಲ್ಲಿ ಹುಟ್ಟಿ ಬಂದಿರುವ ನಿನ್ನನ್ನು ತಾಪತ್ಯ ಎಂದು ಸಂಭೋದಿಸಿದೆ. ಈ ಗತ ಕಥನದಲ್ಲಿ ಅರಸನನ್ನು ಸಕಾಲದಲ್ಲಿ ಎಚ್ಚರಿಸುವ ಗುರು, ಅರಸನ ಆಶೋತ್ತರಗಳನ್ನು ಈಡೇರಿಸಿ ಹಿತ ಕಾಯುವ ಸಮರ್ಥ ಪುರೋಹಿತ ಎಷ್ಟು ಅನಿವಾರ್ಯ ಎಂಬ ವಿಚಾರ ನಿನಗೆ ಅರಿವಾಯಿತಲ್ಲವೆ? ಎಂದು ಗಂಧರ್ವ ಅರ್ಜುನನಿಗೆ ವಿವರಿಸಿ ರಾಜ ಪುರೋಹಿತನ ಬಗ್ಗೆ ಮನವರಿಕೆ ಮಾಡಿದನು.
ಇದೆಲ್ಲವನ್ನೂ ಏಕಾಗ್ರತೆಯಿಂದ ಆಲಿಸಿದ ಅರ್ಜುನನಿಗೆ ವಸಿಷ್ಠರ ತಪೋಬಲದ ಬಗ್ಗೆ ತಿಳಿಯುವ ಮನಸ್ಸಾಯಿತು. ಆ ಕುರಿತಾಗಿ ಗಂಧರ್ವನಲ್ಲಿ ಕೇಳಲು ಉತ್ಸುಕನಾದನು.
ಮುಂದುವರಿಯುವುದು…




































