26.3 C
Udupi
Friday, September 11, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ -637

ಭರತೇಶ ಶೆಟ್ಟಿ, ಎಕ್ಕಾರು

ಗಂಧರ್ವನು ಸವಿವರವಾಗಿ ಅರ್ಜುನನ್ನು ತಾಪತ್ಯ, ತಪತಿ ವಂಶವರ್ಧನ ಎಂದು ಕರೆಯಲು ಕಾರಣವಾದ ಕಥೆಯನ್ನು ಹೇಳಲು ತೊಡಗಿದನು. “ಈ ಜಗತ್ತನ್ನು ಬೆಳಗುವ ಸೂರ್ಯನನ್ನು ಅರಿಯದವರು ಯಾರಾದರೂ ಇದ್ದಾರೆಯೆ? ಆ ಜಗಚ್ಚಕ್ಷು ಸೂರ್ಯನಿಗೆ ತಪತಿ ಎಂಬ ಓರ್ವ ಮಗಳಿದ್ದಳು. ಆಕೆ ಅತಿ ಸುಂದರಿಯಾಗಿದ್ದು ಯಾವುದೆ ದೇವತಾ ಸ್ತ್ರೀಯಾಗಲಿ, ಅಸುರ ಕನ್ಯೆಯಾಗಲಿ, ಯಕ್ಷಿಣಿಯಾಗಲಿ, ಅಪ್ಸರೆಯಾಗಲಿ ಅಥವಾ ಗಂಧರ್ವ ಸ್ತ್ರೀಯಾಗಲಿ ಯಾರಾದರೂ ತಪತಿಯ ಸೌಂದರ್ಯ ಸಿರಿಯೆದುರು ಮಂಕಾಗಿ ಕಾಣುತ್ತಿದ್ದರು. ಜೊತೆಗೆ ತಪತಿಯ ಗುಣ, ಸುಪ್ರಮಾಣ, ದೋಷರಹಿತ, ಸದಾಚಾರ ಸಂಪನ್ನ, ಸಾಧು ಸ್ವಭಾವದಿಂದ ಮತ್ತಷ್ಟು ಪ್ರಸಿದ್ಧಿಯನ್ನು ಒದಗಿಸಿತ್ತು. ಇಂತಹ ಅಪ್ರತಿಮಳಾದ ಮಗಳಿಗೆ ರೂಪ, ಶೀಲ, ಕುಲ, ವಿದ್ಯೆಯಲ್ಲಿ ಸಮಸದೃಶನಾದ ವರನು ಮೂರು ಲೋಕಗಳಲ್ಲಿಯೂ ಸೂರ್ಯನಿಗೆ ಕಾಣದಾಗಿ ವ್ಯಥೆಗೊಳಗಾಗಿದ್ದನು.

ಹೀಗಿರಲು ಸೂರ್ಯದೇವನ ಪರಮಭಕ್ತ, ನಿತ್ಯ ಆರಾಧಕ ಆಗಿರುವ ಕುರುವಂಶ ಶ್ರೇಷ್ಠನಾದ ಸಂವರಣ ಎಂಬವನು ರಾಜನಾಗಿದ್ದನು. ಸೇವಾಪರ, ಅಹಂಕಾರರಹಿತ, ಭಕ್ತಿವಂತ, ಆಗಿದ್ದ ಸಂವರಣ ಆಕಾಶದಲ್ಲಿ ಸೂರ್ಯ ಪ್ರಜ್ವಲಿಸುವಂತೆ ಭೂಮಿಯಲ್ಲಿ ಶೋಭಾಯಮಾನನಾಗಿದ್ದನು. ತನ್ನ ಭಕ್ತನ ಗುಣ, ರೂಪ, ಸಾಮರ್ಥ್ಯ, ಧರ್ಮಬುದ್ಧಿಯನ್ನು ಅರಿತು ಸೂರ್ಯನು ತನ್ನ ಮಗಳಿಗೆ ಈತನು ತಕ್ಕ ವರ ಎಂದು ತೀರ್ಮಾನಿಸಿ, ಮದುವೆ ಮಾಡಿಸಬಹುದು ಎಂದು ಯೋಚಿಸುತ್ತಿದ್ದನು.

ಒಂದು ದಿನ ಸಂವರಣನು ಬೇಟೆಗಾಗಿ ಹಿರಿದಾದ ಪರ್ವತದಲ್ಲಿ ಸಂಚರಿಸುತ್ತಾ ಬಹುದಿನಗಳ ಕಾಲ ವ್ಯಸ್ಥನಾಗಿ ಅವಿಶ್ರಾಂತನಾಗಿ ತೊಡಗಿಕೊಂಡನು. ಪರಿಣಾಮ ಆತನು ಏರಿದ್ದ ಕುದುರೆ ಹಸಿವು ಬಾಯಾರಿಕೆಗಳಿಂದ ಬಸವಳಿದು ಪಥ ಮಧ್ಯದಲ್ಲಿ ಸಾವಿಗೀಡಾಯಿತು. ಕುದುರೆ ಸತ್ತರೂ ವಿಚಲಿತನಾಗದೆ ಹಿಡಿದ ಕಾರ್ಯ ಸಾಧಿಸ ಬೇಕೆಂದು ಕಾಲ್ನಡಿಗೆಯಲ್ಲಿ ಓಡುತ್ತಾ, ನಡೆಯುತ್ತಾ ಬೇಟೆ ಮುಂದುವರಿಸಿದನು. ಹೀಗೆ ಗಗನ ಚುಂಬಿಯಾದ ಪರ್ವತವೇರಿ ಶಿಖರ ತಲುಪಿದಾಗ ಅಲ್ಲಿ ಅಪ್ರತಿಮ ಚೆಲುವೆಯಾದ ತಪತಿಯನ್ನು ನೋಡಿದನು. ಯಾವಾಗ ತಪತಿಯನ್ನು ನೋಡಿದನೊ ಆ ಕ್ಷಣದಿಂದ ರಾಜಾ ಸಂವರಣನಿಗೆ ತಾನು ಕೈಗೊಂಡಿದ್ದ ಬೇಟೆಯೂ ಮರೆತು ಹೋಯಿತು. ತನ್ನ ಜೀವಮಾನದಲ್ಲಿ ಇಂತಹ ರೂಪರಾಶಿಯನ್ನು ನೋಡಿಲ್ಲವೆಂದು ಆಕೆಯ ಚೆಲುವಿಗೆ ಮನಸೋತು ಮದುವೆಯಾದರೆ ಈಕೆಯನ್ನು ವರಿಸಬೇಕು ಎಂದು ತೀರ್ಮಾನಿಸಿದನು. ಇನ್ನು ವ್ಯರ್ಥ ಚಿಂತೆ ಬೇಡವೆಂದು ಯಾರಾಗಿರಬಹುದು ಈಕೆ ಎಂದು ತಿಳಿದುಕೊಳ್ಳಲು ನೇರವಾಗಿ ಆಕೆಯನ್ನು ಪ್ರಶ್ನಿಸಿ ತನ್ನ ಮನದಾಸೆಯನ್ನು ಹೇಳಿಕೊಂಡನು “ಹೇ ಸುಂದರಿಯೆ, ನೀನು ಯಾರು? ಈ ಗೊಂಡಾರಣ್ಯದ ತುತ್ತ ತುದಿಯಲ್ಲಿ ಒಬ್ಬಾಕೆ ನೀನು ಏನು ಮಾಡುತ್ತಿರುವೆ. ನಿನ್ನನ್ನು ಕಂಡ ಕ್ಷಣ ನಾನು ಮೋಹ ಪಾಶಕ್ಕೆ ಸಿಲುಕಿದ್ದೇನೆ. ನನ್ನನ್ನು ವಿವಾಹವಾಗುವೆಯಾ? ಗಾಂಧರ್ವ ವಿಧಾನದಲ್ಲಾದರೆ ಈಗಲೇ ಇಲ್ಲಿಯೆ ನಿನ್ನನ್ನು ಪತ್ನಿಯಾಗಿ ಸ್ವೀಕರಿಸಲು ಸಿದ್ಧನಿದ್ದೇನೆ” ಎಂದು ಹೇಳಿ ಬಿಟ್ಟನು.

ಆತನು ಆ ರೀತಿ ಕೇಳಿದಾಕ್ಷಣ ತಪತಿ ಅದೃಶ್ಯಳಾದಳು. ಚೆಲುವಿನ ಗಣಿಯಂತಿದ್ದ ಆ ಸ್ತ್ರೀ ಕಾಣದಾದಾಗ ಸಂವರಣ ಕುಸಿದು ಕುಳಿತನು. ಕುಳಿತವನು ಬಿದ್ದು ಬಿಟ್ಟನು‌. ಬಹಳಷ್ಟು ವಿಲಪಿಸಿ ನಿಶ್ಚೇಷ್ಟಿತನಾಗಿ ನೆಲದಮೇಲೆ ಬಿದ್ದು ಬಿಟ್ಟನು. ಆ ರೀತಿ ರಾಜಾ ಸಂವರಣ ಬಿದ್ದಾಗ ಮತ್ತೆ ಅವನೆದುರು ಕಾಣಿಸಿಕೊಂಡ ತಪತಿ “ನಾನು ಸೂರ್ಯದೇವನ ಮಗಳು, ಹೆಸರು ತಪತಿ. ಸತ್ಕುಲ ಪ್ರಸೂತನು, ನರಪತಿಯು ಆದ ನೀನು ಈ ರೀತಿ ಕುಸಿಯಬಾರದು. ನನ್ನ ಈ ಶರೀರಕ್ಕೆ ನಾನು ಒಡತಿಯಲ್ಲ. ನನ್ನ ಮಾತಾ ಪಿತರು ಇದರ ಅಧಿಕಾರಿಗಳು. ಹಾಗಾಗಿ ನೀನು ಕರೆದ ಮಾತ್ರಕ್ಕೆ, ಅಥವಾ ವಿವಾಹ ಪ್ರಸ್ತಾಪ ಮುಂದಿಟ್ಟ ಕಾರಣದಿಂದ ಒಪ್ಪಿ ಬರುವ ಸ್ವಾತಂತ್ರ್ಯವನ್ನು ಹೊಂದಿಲ್ಲ. ಸದ್ಭಕ್ತನು, ಧರ್ಮಿಷ್ಟನು ಆಗಿರುವ ನಿನ್ನ ಬಗ್ಗೆ ನಾನು ತಿಳಿದಿದ್ದೇನೆ. ಗುಣ ಹಾಗು ರೂಪದಲ್ಲಿ ಅತಿಶಯನಾದ ನಿನ್ನನ್ನು ವರಿಸಲು ನನಗೂ ಒಪ್ಪಿಗೆಯಿದೆ. ಆದರೆ ನನ್ನ ತಂದೆ ಒಪ್ಪಿದರೆ ಮಾತ್ರ ಇದು ಸಾಧ್ಯವಾಗಬಲ್ಲುದು. ಹಾಗಾಗಿ ನನ್ನ ಪಿತನ ಭಕ್ತನಾಗಿರುವ ನೀನು ತಪಸ್ಸಿನ ಮೂಲಕ ಅವರನ್ನು ಮೆಚ್ಚಿಸಿ ನಿನ್ನ ಅಭೀಷ್ಟವನ್ನು ಪೂರೈಸಿಕೊಳ್ಳುವ ಪ್ರಯತ್ನ ಮಾಡು” ಎಂದು ಹೇಳಿ ಮತ್ತೆ ಅದೃಶ್ಯಳಾದಳು.

ಅರಸ ಸಂವರಣ ತಪತಿಯ ಮಾತು ಕೇಳಿ ಒಮ್ಮೆಗೆ ಸಂತಸಗೊಂಡರೂ ಆಕೆ ಕಣ್ಮರೆಯಾದ ಬಳಿಕ ಮಂಕಾಗಿ ನೆಲದ ಮೇಲೆ ಬಿದ್ದುಕೊಂಡನು. ಬಹುದಿನಗಳಾದರೂ ಬೇಟೆಗೆ ಹೋದ ಅರಸನ ಪತ್ತೆಯಿಲ್ಲ ಎಂದು ಪರಿವಾರ ಸಹಿತನಾಗಿ ಆತನ ಮಂತ್ರಿ ಹುಡುಕುತ್ತಾ ಕಾಡಿಗೆ ಬಂದನು. ಹಾಗೆ ಬಂದ ಸಂವರಣನ ಮಂತ್ರಿ ತನ್ನ ಅರಸನು ಕುದುರೆಯೂ ಇಲ್ಲದೆ, ನಿರ್ಗತಿಕನಂತೆ ನೆಲದಲ್ಲಿ ಬಿದ್ದುಕೊಂಡಿರುವುದನ್ನು ಕಂಡು ಒಮ್ಮೆಲೆ ಹೌಹಾರಿ ಹೋದನು. ಅವಸರದಿಂದ ಅರಸನ ಬಳಿಗೆ ಧಾವಿಸಿ, ಉಪಚರಿಸಿ “ಏನಾಯಿತು ಪ್ರಭು? ನೀವು ಈ ಸ್ಥಿತಿಯಲ್ಲಿರಲು ಕಾರಣವೇನು” ಎಂದು ಆತಂಕದಿಂದ ಕೇಳಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page