
ಕಾರ್ಕಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಗಾಂಧಿ ಸ್ಮಾರಕ ಭವನ, ನೀರೆಬೈಲೂರು ಇವರ ವತಿಯಿಂದ 46ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಸೆಪ್ಟೆಂಬರ್ 14 ಮತ್ತು 15ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಿದೆ.
ಸೆ.14ರಂದು ಬೆಳಗ್ಗೆ 9 ಗಂಟೆಗೆ ಗಣಪತಿ ವಿಗ್ರಹವನ್ನು ಮೆರವಣಿಗೆ ಮೂಲಕ ಗಾಂಧಿ ಸ್ಮಾರಕ ಭವನಕ್ಕೆ ತರಲಿದ್ದು ಬೆಳಗ್ಗೆ 10 ಗಂಟೆಗೆ ಪ್ರತಿಷ್ಠೆ ಹಾಗೂ ಗಣಹೋಮ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಮಕ್ಕಳಿಗೆ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆ ಮತ್ತು ಭಕ್ತಿ ಗೀತೆ, ಪುರುಷರಿಗೆ ಮತ್ತು ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಸಂಜೆ 3 ಗಂಟೆಗೆ ಹಗ್ಗ ಜಗ್ಗಾಟ ಮತ್ತು ಸಂಜೆ 5.30ಕ್ಕೆ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಗೆ ರಂಗಪೂಜೆ ನೆರವೇರಲಿದ್ದು, ರಾತ್ರಿ 8 ಗಂಟೆಗೆ ಸಮಾಜರತ್ನ ಶ್ರೀ ಲೀಲಾಧರ ಶೆಟ್ಟಿ ಸಾರಥ್ಯದ ರಂಗ ತರಂಗ ಕಲಾವಿದರು ಪಾಪು ಇವರಿಂದ ‘ಶೋಬಾಜಿ’ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ.
ಸೆ.15ರಂದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಹಾಗೂ ಮಂಗಳಾರತಿ ನಡೆಯಲಿದ್ದು ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಮಧ್ಯಾಹ್ನ 2 ಗಂಟೆಗೆ ‘ಸ್ಟಾರ್ ಧಮಾಕಾ’ ಸಂಗೀತ ರಸಮಂಜರಿ ಹಾಗೂ ‘ಅಮೋಘ ನೃತ್ಯ ಪ್ರದರ್ಶನ’ ನಡೆಯಲಿದೆ. ಸಂಜೆ 6 ಗಂಟೆಗೆ ವಿಸರ್ಜನಾ ಮಹಾಪೂಜೆ ಹಾಗೂ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿದೆ.
ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಮಿತಿ ಮನವಿ ಮಾಡಿದೆ.




































