
ಬೆಂಗಳೂರು: ಕರ್ನಾಟಕ ಹೈಕೋರ್ಟ್ ದುನಿಯಾ ವಿಜಯ್ ಹಾಗೂ ನಾಗರತ್ನ ಅವರ ವಿಚ್ಛೇದನಕ್ಕೆ ಸಂಬಂಧಿಸಿದಂತೆ “ಖ್ಯಾತ ವ್ಯಕ್ತಿಯಾಗಿರುವುದು ಅವರ ನಡವಳಿಕೆಗೆ ಯಾವುದೇ ವಿನಾಯಿತಿ ನೀಡುವುದಿಲ್ಲ. ಬದಲಾಗಿ, ಅವರ ನಡವಳಿಕೆಯ ಮಾನದಂಡ ಮತ್ತಷ್ಟು ಎತ್ತರದಲ್ಲಿರಬೇಕು” ಎಂದು ಅಭಿಪ್ರಾಯಪಟ್ಟಿದೆ.
ನಟ ದುನಿಯಾ ವಿಜಯ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್, ವಿಜಯ್ ಮತ್ತು ನಾಗರತ್ನ ದಂಪತಿಗೆ ವಿಚ್ಛೇದನ ಮಂಜೂರು ಮಾಡಿದೆ. ಇದೇ ವೇಳೆ ನಾಗರತ್ನ ಅವರಿಗೆ ಶಾಶ್ವತ ಜೀವನಾಂಶವಾಗಿ ₹ 2 ಕೋಟಿ ಪಾವತಿಸುವಂತೆ ವಿಜಯ್ ಅವರಿಗೆ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಎಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. 2024ರ ಜೂನ್ 13ರಂದು ಕೌಟುಂಬಿಕ ನ್ಯಾಯಾಲಯ ವಿಜಯ್ ಅವರ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ವಿಜಯ್ ಅವರು ನಾಗರತ್ನ ಪ್ರಸ್ತುತ ವಾಸಿಸುತ್ತಿರುವ ಮನೆಯನ್ನು ಅವರ ಹೆಸರಿಗೆ ವರ್ಗಾಯಿಸಿರುವುದನ್ನು ನ್ಯಾಯಾಲಯ ಪರಿಗಣಿಸಿದೆ. ಅಲ್ಲದೆ, ವಿಜಯ್ ಅವರ ಆರ್ಥಿಕ ಸಾಮರ್ಥ್ಯ ಹಾಗೂ ಪತ್ನಿ ಮತ್ತು ಮಕ್ಕಳ ಆರ್ಥಿಕ ಭದ್ರತೆಯನ್ನು ಗಮನಿಸಿ ₹ 2 ಕೋಟಿ ಜೀವನಾಂಶ ನಿಗದಿಪಡಿಸಲಾಗಿದೆ.
ಜೀವನಾಂಶದ ಮೊತ್ತವನ್ನು ಮೂರು ತಿಂಗಳೊಳಗೆ ಪಾವತಿಸಬೇಕು. ವಿಳಂಬವಾದರೆ, ವಿಚ್ಛೇದನದ ಡಿಕ್ರಿ ನೀಡಿದ ದಿನದಿಂದ ಪಾವತಿ ಮಾಡುವ ದಿನದವರೆಗೆ ಶೇ.6ರ ವಾರ್ಷಿಕ ಬಡ್ಡಿಯನ್ನೂ ಸೇರಿಸಿ ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸೂಚಿಸಿದೆ.
ವಿಜಯ್ ಮತ್ತು ನಾಗರತ್ನ 1999ರ ಆಗಸ್ಟ್ 29ರಂದು ವಿವಾಹವಾಗಿದ್ದು ಇಬ್ಬರ ನಡುವಿನ ಹಲವು ವರ್ಷಗಳ ಕಾನೂನು ಹೋರಾಟಕ್ಕೆ ಹೈಕೋರ್ಟ್‌ನ ಈ ತೀರ್ಪಿನ ಮೂಲಕ ಅಂತ್ಯ ದೊರೆತಿದೆ.
“ಸಾರ್ವಜನಿಕ ಪ್ರಭಾವ ಹೊಂದಿರುವ ವ್ಯಕ್ತಿಯೊಬ್ಬರು ವೈವಾಹಿಕ ಜೀವನದ ಪಾವಿತ್ರ್ಯದಿಂದ ದೂರ ಸರಿದಾಗ, ಅವರ ಪತನವು ಮೆಚ್ಚುಗೆಯ ಕಾರಣವಾಗುವುದಿಲ್ಲ. ಪತಿಯ ನಡವಳಿಕೆಯನ್ನು ಸಂಭ್ರಮಿಸುವ ಉದ್ದೇಶದಿಂದ ಈ ತೀರ್ಪು ನೀಡಲಾಗಿಲ್ಲ. ಪ್ರಕರಣದ ವಿಶಿಷ್ಟ ವಾಸ್ತವಾಂಶಗಳನ್ನು ಪರಿಗಣಿಸಿ ತೀರ್ಪು ನೀಡಲಾಗಿದೆ.
ಪರದೆಯ ಮೇಲೆ ಗಳಿಸಿದ ಗೌರವವು ಮನೆಯಲ್ಲಿ ವೈವಾಹಿಕ ಕರ್ತವ್ಯಗಳ ನಿರ್ಲಕ್ಷ್ಯವನ್ನು ಸರಿದೂಗಿಸಲು ಸಾಧ್ಯವಿಲ್ಲ ಎಂಬುದನ್ನು ಇದು ನೆನಪಿಸುವಂತಿರಲಿ ಎಂದು ನಾವು ಆಶಿಸುತ್ತೇವೆ,” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮೂವರು ಮಕ್ಕಳು ಪ್ರಾಪ್ತವಯಸ್ಕರಾಗಿದ್ದರೂ, ಅವರ ಕಲ್ಯಾಣ, ಶಿಕ್ಷಣ ಮತ್ತು ಭವಿಷ್ಯದ ವಿವಾಹ ವೆಚ್ಚಗಳನ್ನು ಪರಿಗಣಿಸಿ ಆರ್ಥಿಕ ಭದ್ರತೆ ಅಗತ್ಯವಿದೆ ಎಂದು ಹೈಕೋರ್ಟ್ ತಿಳಿಸಿದೆ. ಪೋಷಕರ ನಡುವಿನ ಸುದೀರ್ಘ ಕಾನೂನು ಹೋರಾಟದ ಪರಿಣಾಮ ಮಕ್ಕಳ ಮೇಲೆ ಬೀರದಂತೆ ನೋಡಿಕೊಳ್ಳಬೇಕು ಎಂದು ಕೂಡ ಸೂಚಿಸಿದೆ.




































