24.8 C
Udupi
Sunday, September 6, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 634

ಭರತೇಶ್ ಶೆಟ್ಟಿ,ಎಕ್ಕಾರು

ರಾಜಮಂದಿರದಲ್ಲಿ ಹಿರಿಯರಿಗೆಲ್ಲ ವಂದಿಸುತ್ತಾ ಕೃಷ್ಣಾರ್ಜುನರು ಧೃತರಾಷ್ಟ್ರ, ಗಾಂಧಾರಿ, ಕುಂತಿ, ವಿದುರ, ಸಂಜಯಾದಿಗಳೆಲ್ಲರಿಗೂ ನಮಿಸಿ ಕುಶಲೋಪರಿ ವಿಚಾರಿಸಿ ರಾಣಿಯರ ಭವನದತ್ತ ತೆರಳಿದರು. ಅರ್ಜುನನು ಶ್ರೀಕೃಷ್ಣ ಸಹಿತನಾಗಿ ಸುಭದ್ರೆಯ ಅಂತಃಪುರದತ್ತ ಹೋದನು. ಅಲ್ಲಿ ದಿಗ್ವಿಜಯದ ಸಾಹಸಗಾಥೆಗಳ ಕಥೆಗಳನ್ನು ಅಣ್ಣ ಶ್ರೀಕೃಷ್ಣನಿಂದಲೂ, ಪತಿದೇವ ಅರ್ಜುನನಿಂದಲೂ ಕೇಳಿ ತಿಳಿದುಕೊಂಡ ಸುಭದ್ರೆ ಸಂತಸಗೊಂಡಳು. ಬಹು ಸಮಯದ ಅಂದರೆ ಪೂರ್ತಿ ಒಂದು ವರ್ಷದ ಬಳಿಕ ಕಣ್ಣಾರೆ ಕಾಣಲು ಸಿಕ್ಕಿದ ಪತಿಯಲ್ಲಿ ಎಲ್ಲಿಂದ ಏನೇನು ನನಗಾಗಿ ತಂದಿದ್ದೀರಿ? ಎಂದೆಲ್ಲ ಸ್ತ್ರೀ ಸಹಜ ಗುಣದಂತೆ ಪ್ರಶ್ನೆ, ಸರ್ವಾಂತರ್ಯಾಮಿಯಾದ ಕೃಷ್ಣನ ಸನಿಹದಲ್ಲಿ ಕಣ್ಮುಚ್ಚಾಲೆಯ ಸರಸ ಸಲ್ಲಾಪಗಳು ಹಾಸ್ಯ, ಸರಸೋಕ್ತಿಗಳು ಸಾಗಿದವು. ಎಲ್ಲವನ್ನೂ ಅರಿತು ಭಗವಂತ ಗೋವಿಂದ ಮಂದಸ್ಮಿತನಲ್ಲವೆ? ನಗುನಗುತ್ತಲೆ ತಂಗಿಯನ್ನು ಚೇಡಿಸುತ್ತಾ ಪರಿಹಾರ ಸೋಕ್ತಿಗಳನ್ನು ನುಡಿದು ಎಲ್ಲರೂ ಸಂಭ್ರಮಿಸಿ ನಗುವಂತೆ ಮಾಡಿದನು. ಇದೆಲ್ಲಾ ನಡೆಯುತ್ತಿದ್ದಂತೆ ಸುಭದ್ರೆಗೆ ತನ್ನ ವೀರಾಗ್ರಣಿ ವಲ್ಲಭ ಹೇಳಿದ ಮಣಿಪುರದ ಬಬ್ರುವಾಹನನ ಬಗ್ಗೆ ವಿಶೇಷ ಆಸಕ್ತಿ ಮೂಡಿತು. ಆತನನ್ನು ಒಮ್ಮೆ ನೋಡಬೇಕು. ಅತುಲ ವಿಕ್ರಮಿಯಾದ ತನ್ನ ಕುಮಾರ ಅಭಿಮನ್ಯು ಮಡಿದ ಬಳಿಕ ಪುತ್ರ ವಿಯೋಗದ ದುಃಖ ಆಕೆಯನ್ನು ಸುಡುತ್ತಿತ್ತು. ಹಾಗಾಗಿ ತನ್ನ ಮನದಾಸೆಯಾಗಿ ಬಬ್ರುವಾಹನನ್ನೊಮ್ಮೆ ನಾನು ಕಣ್ಣಾರೆ ಕಂಡು ಮಾತನಾಡಿಸಬಹುದೆ ಎಂದು ಕೇಳಿಕೊಂಡಳು. ಒಪ್ಪಿದ ಕೃಷ್ಣಾರ್ಜುನರು ಬಬ್ರುವಾಹನನನ್ನು ಸುಭದ್ರೆಯ ಅಂತಃಪುರಕ್ಕೆ ಕರೆಸಿದರು. ಅರ್ಜುನ ಕುಮಾರ ಮಣಿಪುರದರಸು ಅಭಿಮನ್ಯುವಿನಂತೆಯೆ ಕಾಣಿಸುತ್ತಿದ್ದಾನೆ. ತಾನು ಹೆತ್ತ ಮಗನಲ್ಲದಿದ್ದರೂ ತನ್ನ ಪತಿಯ ಪುತ್ರ ತನಗೂ ಮಗ ಅಲ್ಲವೆ? ತಾನು ಮಾತೆಯಾಗಿ ಸುಭದ್ರೆ ಅಂಜಿಕೆ ಅಳುಕಿಲ್ಲದೆ “ಬಾ ಮಗನೇ! ನಾನು ನಿನ್ನ ಅಮ್ಮ ಸುಭದ್ರೆ.” ಎಂದು ಬಳಿ ಕರೆದು ಬರಸೆಳೆದು ಬಿಗಿದಪ್ಪಿ ಮುದ್ದಾಡಿದಳು. ಸುಭದ್ರೆಗೆ ತನ್ನ ಕಂದ ಅಭಿಮನ್ಯುವನ್ನು ಬಿಗಿದಪ್ಪಿದ ಸುಖ. ಮನಸ್ಸು ನಿರಾಳವಾದಂತೆ ಭಾಸವಾಗುತ್ತಿದೆ. ಆಕೆ ಭಾವುಕಳಾಗಿ “ಮಗೂ ಬಬ್ರುವಾಹನ, ಇನ್ನು ನೀನು ಎಲ್ಲೂ ಹೋಗಬೇಡ ಮಗಾ, ನನ್ನ ಜೊತೆಯಲ್ಲಿ ಇಲ್ಲಿಯೆ ಇರಬಹುದೆ?” ಎಂದು ಬೇಡಿಕೊಂಡಳು. ಮಣಿಪುರದ ಅರಸನಾದ ಬಬ್ರುವಾಹನಿಗೆ ಹಾಗೆ ಮಾಡಲು ಸಾಧ್ಯವೆ? ಏನು ಉತ್ತರಿಸಬೇಕೆಂದು ತೋಚದೆ, ದೇವ ಶ್ರೀಕೃಷ್ಣ, ಪಿತ ಅರ್ಜುನನತ್ತ ನೋಡಿದಾಗ “ಆಯಿತು ಸುಭದ್ರ ಬಬ್ರುವಾಹನ ಕೆಲ ಸಮಯ ಇಲ್ಲಿರುತ್ತಾನೆ. ನೀನೂ ಹೊರ ಹೋಗದೆ ಬಹು ಸಮಯವಾಯಿತಲ್ಲ. ನಿನ್ನ ಮಗನ ಜೊತೆ ಮಣಿಪುರಕ್ಕೆ ಹೋಗಿ ತಿರುಗಾಡಿಕೊಂಡು ಬರುವೆಯಂತೆ. ನಿನ್ನ ಮಗ ಮಣಿಪುರ ದೇಶದ ಮಹಾರಾಜ. ನೀನು ಅಲ್ಲಿ ಹೋದರೆ ನಿನಗೆ ರಾಜಮಾತೆಯ ಮಾನ್ಯತೆ ಸಿಗಲಿದೆ” ಎಂದು ಕೃಷ್ಣ ನುಡಿದನು. ಈ ಮಾತು ಕೇಳಿದಾಗ ಸುಭದ್ರೆಗೆ ಹೌದಲ್ಲಾ! ಬಬ್ರುವಾಹನ ಇಲ್ಲಿ ಉಳಿಯಲು ಸಾಧ್ಯವಿಲ್ಲ. ಆತನಿಗೆ ಅವನದ್ದಾದ ಹೊಣೆಗಾರಿಕೆಯಿದೆ ಎಂದರಿತು ಸುಮ್ಮನಾದಳು‌. ಆದರೂ ಬಬ್ರುವಾಹನನ್ನು ಪದೇ ಪದೇ ಅಪಾದಮಸ್ತಕ ನೋಡುತ್ತಾ ಕಣ್ತುಂಬಿಕೊಳ್ಳುತ್ತಿದ್ದಳು. ಅವಳ ಕಂಗಳು ತುಂಬಿದ ಸರೋವರದಂತಾಗಿ ಜಿಣುಗುತ್ತಿತ್ತು. “ಅಮ್ಮಾ! ನೀನು ನಿನ್ನ ಮಗನ ಅಪರಾಧವನ್ನು ಕ್ಷಮಿಸಬೇಕಮ್ಮ. ಅರಿಯದೆ ದುಡುಕಿ ನನ್ನಿಂದ ಅಪರಾಧವಾಗಿತ್ತು. ಯುದ್ದದ ವೀರಾವೇಶದಲ್ಲಿ ಒಂದೊಮ್ಮೆಗೆ ನನ್ನ ಪಿತನ ಶಿರಗಡಿದು ಕೊಂದ ಪಾತಕಿ ನಾನು. ಆದರೆ ಶ್ರೀಕೃಷ್ಣ ಪರಮಾತ್ಮನ ದಯೆಯಿಂದ ನನಗೆ ತಂದೆ, ನಿಮಗೆ ಪತಿ ಮರಳಿ ಸಿಗುವಂತಾಯಿತು. ದೇವನ ಕೃಪೆಯಿರದಿದ್ದರೆ ನನ್ನಿಂದಾಗಿ ನಿಮಗೆ ಪತಿ ವಿಯೋಗದ ದುಃಖ ಒದಗುತ್ತಿತ್ತೋ ಏನೋ! ನಾನು ಜೀವನ ಪರ್ಯಂತ ಶೋಕ ಸಾಗರದಲ್ಲಿ ನನ್ನ ಮಾತೆಯರ ತಾಪ ಶಾಪಗಳಿಗೆ ತುತ್ತಾಗಿ ಕೊರಗುವಂತಾಗುತ್ತಿತ್ತು. ಅಮ್ಮಾ ನನ್ನ ಮಹಾಪರಾಧವನ್ನು ಕ್ಷಮಿಸುವೆಯಾ ತಾಯಿ?” ಎಂದು ಪಾದಕ್ಕೆರಗಿದನು.

ಮಮ್ಮಲ ಮರುಗಿ ಪಾಪಪ್ರಜ್ಞೆಯಿಂದ ಕೊರಗುತ್ತಿದ್ದ ಮಗನ ಭುಜವನ್ನಾವರಿಸಿ ಹಿಡಿದೆತ್ತಿ “ಮಗನೇ! ಸಮರ ಮುಖದಲ್ಲಿ ಸಂಬಂಧಗಳಿಲ್ಲ ಕಂದಾ. ನೀನು ಯಾವ ಅಪರಾಧವನ್ನೂ ಎಸಗಿಲ್ಲ‌. ಕ್ಷತ್ರಿಯರಾದ ನಮಗೆ ಕ್ಷಾತ್ರ ಧರ್ಮ ಪ್ರಧಾನ. ಅನಿವಾರ್ಯ ಸಂದರ್ಭದಲ್ಲಿ ಯುದ್ದ ಪರ್ಯಾಪ್ತ ಮಾರ್ಗ ಎಂದು ನಿರ್ಣಯವಾದ ಹೊತ್ತು ಎದುರಾಳಿ ಯಾರು ಎಂದು ನೋಡಿ ಯುದ್ದ ಮಾಡಲು ಸಾಧ್ಯವೆ? ನಿಮ್ಮ ಪಿತನು ನಿನಗೆ ಆದರ್ಶ. ಮಹಾಭಾರತ ಯುದ್ಧದಲ್ಲಿ ಅಜ್ಜ, ಗುರುಗಳು, ಸೋದರರು ಎಂದು ನೋಡದೆ ಎದುರಾಗಿ ಬಂದವರನ್ನೆಲ್ಲಾ ಸೋಲಿಸಿದ್ದು ಮಾತ್ರವಲ್ಲ ಅವರನ್ನೆಲ್ಲ ವಧಿಸಿಲ್ಲವೆ? ಸಮರವೆಂದರೆ ಹಾಗೆಯೆ, ಒಂದೋ ನೀನು ಮರಣವನ್ನು ಅಪ್ಪಬೇಕು, ಇಲ್ಲಾ ನಿನ್ನ ಎದುರಾಳಿಗೆ ಮರಣವನ್ನು ಒಪ್ಪುವಂತೆ ಮಾಡಬೇಕು. ಲೋಕಲೋಕಗಳಲ್ಲೂ ಅಪ್ರತಿಮ ವೀರನೆಣಿಸಿದ ವೀರ ಪಾರ್ಥನನ್ನು ಗೆದ್ದುದರಿಂದ ನಿನಗೂ ಅಜರಾಮರ ಕೀರ್ತಿ ಪ್ರಾಪ್ತವಾಗಿದೆ. ಸಿಂಹದ ಹೊಟ್ಟೆಯಲ್ಲಿ ಸಿಂಹವೆ ಹುಟ್ಟಿದೆ ಎಂದು ಸಾಧಿಸಿ ತೋರಿಸಿರುವೆ. ನಮಗೂ ನಿನ್ನ ಕೃತಿಯಿಂದ ಪ್ರೀತಿಯಾಗಿದೆ” ಎಂದು ಕ್ಷತ್ರಿಯೋಚಿತ ನುಡಿಗಳನ್ನು ನುಡಿದಳು. ಕೃಷ್ಣಾರ್ಜುನರು ಅಲ್ಲಿಂದ ಹೊರಟು ಹೋದ ಬಳಿಕವೂ ಸುಭದ್ರೆ ಬಬ್ರುವಾಹನನ್ನು ಅಲ್ಲಿಯೆ ಉಳಿಸಿಕೊಂಡು ರಾತ್ರಿಯವರೆಗೂ ಮಗನ ಜೊತೆ ಬಹಳಷ್ಟು ವಿಚಾರಗಳನ್ನು ಮಾತನಾಡುತ್ತಾ, ಮಾತೆಯಾಗಿ ಬಹುವಿಧ ತಿನಸುಗಳನ್ನು ತಿನಿಸುತ್ತಾ ಗಂಟಲಿನವರೆಗೂ ತುಂಬಿದರೂ ಬಿಡದೆ ಖಾದ್ಯ, ಭೋಜ್ಯ, ಪೇಯ, ಲೇಹ್ಯಾದಿಗಳೆಲ್ಲವನ್ನೂ ಕೈಯಾರೆ ತಿನಿಸಿದಳು.

ಇತ್ತ ಹಸ್ತಿನೆಗೆ ಶಿಬಿಕೆಯೇರಿ ಬಂದಿದ್ದ ಬಕದಾಲ್ಭ್ಯರು ಗಂಗಾತೀರದಲ್ಲಿ ಪ್ರತ್ಯೇಕ ಪರ್ಣ ಮಂದಿರದಲ್ಲಿ ಉಳಿದಿದ್ದರು. ರಾಜವೈಭವಗಳಿಂದ ದೂರ ಉಳಿದಿದ್ದ ಮಹರ್ಷಿ ಅಲ್ಲೂ ಕುಳಿತು ಗಂಗೆಯನ್ನು ದಿಟ್ಟಿಸಿ ನೋಡುತ್ತಿದ್ದಾರೆ. ಕಣ್ತೆರೆದು ಧ್ಯಾನ ನಿರತರಾಗಿದ್ದಾರೋ? ಅಥವಾ ಗಂಗೆಯ ಮೂಲವನ್ನು ಕುರಿತು ಯೋಚಿಸುತ್ತಿದ್ದಾರೋ?…

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page