25.2 C
Udupi
Saturday, September 5, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 633

ಭರತೇಶ ಶೆಟ್ಟಿ,ಎಕ್ಕಾರು

ಹೀಗೆ ವೈಭವೋಪೇತವಾಗಿ ಸರ್ವ ಸಿದ್ಧತೆಗಳೊಂದಿಗೆ ಮೆರವಣಿಗೆಯ ಉಪಾದಿಯಲ್ಲಿ ದಿಗ್ವಿಜಯ ಪೂರೈಸಿ ಬಂದಿರುವ ಅರ್ಜುನ ನೇತೃತ್ವದ ಮಹಾಸೇನೆಯನ್ನು ಹಸ್ತಿನೆಯಿಂದ ಬಂದ ಸ್ವಾಗತ ತಂಡ ಇದಿರ್ಗೊಂಡಿತು. ಮೊದಲಾಗಿ ನಾಲ್ಕು ಮಂದಿ ಮುತ್ತೈದೆಯರು ಚಿನ್ನದ ಕಲಶದಲ್ಲಿ ಕುಂಕುಮ ಕಲಸಿದ ನೀರನ್ನು ಯಜ್ಞಾಶ್ವಕ್ಕೆ ಪ್ರದಕ್ಷಿಣೆಗೈದು ಅವುಗಳ ಪಾದಕ್ಕೆ ಸುರಿದರು. ಹಣೆಗೆ ಕುಂಕುಮದ ತಿಲಕವಿಟ್ಟು, ತೆಂಗಿನಕಾಯಿ ನಿವಾಳಿಸಿ ಹೊಡೆದರು. ನಂತರ ಸುಮಪುಷ್ಪಗಳ ಮಾಲೆಯನ್ನು ಜಲ್ಲಿಯಂತೆ ಅಲಂಕರಿಸಿ ಆರತಿ ಬೆಳಗಿದರು. ಇಷ್ಟಾದ ಬಳಿಕ ಬಹಳಷ್ಟು ಮಂದಿ ಸುಮಂಗಲೆಯರು ಮುಂದೆ ಬಂದು ಅರ್ಜುನನ ಪಾದಗಳಿಗೆ ನೀರು ಹುಯಿದರು. ನಂತರ ಗಂಧ, ಅಕ್ಷತೆ, ಸುಗಂಧ ದ್ರವ್ಯಗಳ ತಟ್ಟೆಗಳನ್ನು ಮುಂದೆ ಹಿಡಿದರು. ಬಿಳಿಯ ಹೂವು, ಅಕ್ಕಿಯ ಕಾಳು, ಗರಿಕೆಯ ಕಟ್ಟುಗಳನ್ನು ತಲೆಯ ಮೇಲೆ ಹಾರಿಸಿದರು. ಮುತ್ತು ಮತ್ತು ಮಂತ್ರಾಕ್ಷತೆಗಳನ್ನು ಬೆರೆಸಿ ಸೇಸೆ ತಳಿದರು. ಗಂಧ, ಚಂದನ, ಹಾಲು, ಮೊಸರು, ಜೇನುತುಪ್ಪ, ಅರಗು, ಅರಸಿನ, ಪುನುಗು, ಕಸ್ತೂರಿ, ಹೂವು, ಅಕ್ಷತೆ, ಗರಿಕೆಯ ಹುಡಿ, ನವರತ್ನದ ಹರಳುಗಳು, ಮತ್ತು ಫಲ ತಾಂಬೂಲಗಳು ತುಂಬಿರುವ ತಳಿಗೆಗಳನ್ನು ಗೌರವ ಸೂಚಕವಾಗಿ ಸಮರ್ಪಿಸಿದರು. ವೃಷಕೇತು, ಹಾಗು ಸೇನೆಯ ಮಹಾರಾಜ, ವೀರಾದಿವೀರರಿಗೂ ಇದೇ ರೀತಿಯ ಗೌರವ, ತಳಿಗೆಗಳ ಸಮರ್ಪಣೆ ನಡೆಯಿತು. ಮಯೂರಧ್ವಜ ಹಾಗು ತಾಮ್ರಧ್ವಜರ ಕುದುರೆ ಹಾಗೂ ಅವರೀರ್ವರಿಗೂ ಹೀಗೆಯೆ ಯಥಾವತ್ತಾದ ಗೌರವಗಳು ಅದೇ ಸಮಯದಲ್ಲಿ ಪ್ರತ್ಯೇಕವಾಗಿ ನೆರವೇರಿದವು.

ಹೀಗೆ ಸಂಪ್ರದಾಯಬದ್ದವಾಗಿ ಸ್ವಾಗತ ಕಾರ್ಯಕ್ರಮ ನೆರವೇರಿದ ಬಳಿಕ ಗಂಗಾ ಯಮುನಾ ಸಂಗಮವಾಗಿ ಬೋರ್ಗರೆಯುತ್ತಾ ಹರಿಯುವ ನದಿಯಂತೆ ಅದ್ದೂರಿಯಾಗಿ ವಿಜಯೀ ಸೇನೆ, ಸ್ವಾಗತಕ್ಕಾಗಿ ಬಂದ ಹಸ್ತಿನೆಯ ಸೇನೆಗಳು ಹಾಗೂ ಯಜ್ಞಾಶ್ವಗಳೊಂದಿಗೆ ಪುರ ಪ್ರವೇಶವಾಯಿತು. ಎಷ್ಟು ವಿಧದ ಕಲಾಪ್ರಾಕರಗಳಿವೆಯೊ ಅಷ್ಟೂ ಕಲಾವಿದರೂ ಕಲಾ ಪ್ರದರ್ಶನ ನೀಡುತ್ತಿದ್ದಾರೆ. ಅಲ್ಲಲ್ಲಿ ಸ್ವಾಗತ ಗೋಪುರಗಳು, ಪುಷ್ಪವೃಷ್ಟಿಗೈಯುವ ಪ್ರಜಾಕೋಟಿ, ವಾದ್ಯಗಳು, ವಾದನಗಳು, ಜಯಭೇರಿಗಳು, ಶಂಖನಾದಗಳು ಹೀಗೆ ಸಂಭ್ರಮ, ಸಡಗರ ದಶದಿಕ್ಕುಗಳಲ್ಲೂ ಪ್ರತಿಧ್ವನಿಸುವಂತೆ ಮೇಳೈಸತೊಡಗಿದೆ. ಯಾಗಶಾಲೆಯವರೆಗೂ ಬಹಳ ವಿಜ್ರಂಭಣೆಯಿಂದ ಸಾಗಿ ಬಂದಾಗ ಅರ್ಜುನ ಮೊದಲಾಗಿ ಕೃಷ್ಣನಿಗೆ ವಂದಿಸಿದನು. ನಂತರ ಭೀಮಸೇನನಿಗೆ ಪ್ರಣಾಮಗಳನ್ನು ಸಲ್ಲಿಸಿದನು. ಆಗ ನಕುಲ ಸಹದೇವರು ಬಂದು ಅರ್ಜುನನಿಗೆ ನಮಸ್ಕರಿಸಿ ಆಲಿಂಗಿಸಿದರು. ನಂತರ ಅರ್ಜುನ ತಮ್ಮವರಿಗೆ ನೀಲಧ್ವಜ, ಹಂಸಧ್ವಜ, ಬಬ್ರುವಾಹನ, ಮಯೂರಧ್ವಜ, ತಾಮ್ರಧ್ವಜ, ವೀರವರ್ಮ ಸಹಿತ ಎಲ್ಲ ಅರಸರ ಪರಿಚಯವನ್ನು ಮಾಡಿಸಿದನು. ನಂತರ ಅರ್ಜುನನು ಯಜ್ಞಾಶ್ವಗಳೊಂದಿಗೆ ಯಾಗಶಾಲೆಯ ಪ್ರವೇಶ ಮಾಡಿದನು. ವ್ಯಾಸರು, ಧೌಮ್ಯಾದಿ ಮಹರ್ಷಿಗಳೊಂದಿಗೆ ಋಷಿಗಡಣ, ಶ್ರೋತ್ರಿಗಳು, ವಿಪ್ರರೆಲ್ಲರೂ ಮಂತ್ರಾಕ್ಷತೆ, ಸ್ವಸ್ತ್ಯಯನದೊಂದಿಗೆ ದಿಗ್ವಿಜಯಿಯಾದ ಪಾರ್ಥನಿಗೆ ಶುಭಹಾರೈಸಿದರು. ಅರ್ಜುನನು ಎಲ್ಲರಿಗೂ ಶಿರಬಾಗಿ ವಂದಿಸುತ್ತಾ ಯಾಗ ದೀಕ್ಷಿತನಾಗಿ ಕುಳಿತಿದ್ದ ಧರ್ಮರಾಯನ ಬಳಿಗೆ ಬಂದು ವಿನಮ್ರತೆಯಿಂದ ನಮಿಸಿ ಸಂಗ್ರಹವಾಗಿದ್ದ ಕಪ್ಪಕಾಣಿಕೆಗಳನ್ನು ಸಮರ್ಪಿಸಿ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸಿದನು. ಯುಧಿಷ್ಠಿರನ ಕಂಗಳಿಂದ ಸಂತೋಷದ ಪ್ರತೀಕವಾಗಿ ಆನಂದಬಾಷ್ಪಗಳು ತೊಟ್ಟಿಕ್ಕಿದವು. ಉದ್ದಂಡವಾಗಿ ನಮಿಸಿದ್ದ ಅರ್ಜುನನ್ನು ಹಿಡಿದೆತ್ತಿ ನಿಲ್ಲಿಸಿ ಆಲಿಂಗಿಸಿ ಕೆಲಹೊತ್ತು ಎಲ್ಲವನ್ನೂ ಮರೆತು ಒಂದು ವರ್ಷಕಾಲ ಅರಮನೆ ತೊರೆದು ಎಲ್ಲೆಲ್ಲೋ ತಿರುಗಾಡುತ್ತಾ, ಮಳೆ, ಚಳಿ, ಬಿಸಿಲು ಎಲ್ಲವನ್ನೂ ಸಹಿಸುತ್ತಾ ಸೇನೆಯೊಂದಿಗೆ ಸಾಗುತ್ತಾ ಯುದ್ದಕರ್ಮಿಯಾಗಿ ಗೆದ್ದು ಬಂದಿರುವ ಸಹೋದರನ ಅಪ್ಪುಗೆಯಲ್ಲಿ ತನ್ಮಯನಾಗಿ ಮೈಮರೆತು ಹೋದನು. ನಂತರ ಅರ್ಜುನನು ಅಣ್ಣನನ್ನು ಜಾಗೃತಗೊಳಿಸಿ ಮಂದಹಾಸ ಬೀರಿ ದ್ರೌಪದಿಯ ಜೊತೆ ಯಾಗ ಮುಂದುವರಿಸುವಂತೆ ಬೇಡಿಕೊಂಡನು. ಇಷ್ಟಾಗುತ್ತಿರುವಾಗ ನಕುಲ ಸಹದೇವರು ರಾಜೋಚಿತವಾಗಿ ಸಮಗ್ರ ಸೇನೆಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಿಸಿ ಅವರ ವಿಶ್ರಾಂತಿ ಹಾಗು ಸೇವೆಯ ಹೊಣೆ ಹೊತ್ತು ಎಲ್ಲವನ್ನೂ ಮುತುವರ್ಜಿಯಿಂದ ನೋಡಿಕೊಳ್ಳುವ ಉಸ್ತುವಾರಿ ನಿರತರಾಗಿದ್ದರೆ, ಭೀಮಸೇನ ಯಾಗಶಾಲೆಯ ಸಂರಕ್ಷಣೆಯಲ್ಲಿ ನಿರತನಾಗಿದ್ದಾನೆ.

ಇತ್ತ ಅರ್ಜುನ ಕೃಷ್ಣನೊಂದಿಗೆ ಅರಮನೆಯೊಳಗೆ ಪ್ರವೇಶಿಸಿ ರಾಜ ಮಂದಿರದತ್ತ ಹೋದರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page