
ಜ್ಞಾನಸುಧಾ ಶಿಕ್ಷಣ ಸಂಸ್ಥೆಗೆ ನಾನು ಅತಿಥಿಯಾಗಿ ಬರದೆ ವಿದ್ಯಾರ್ಥಿಯಾಗಿ ಬರುವುದರಲ್ಲಿ ಸಂತೋಷವಿದೆ. ನನ್ನ ಮಗಳು
ಇಲ್ಲಿ ವಿದ್ಯಾಭ್ಯಾಸ ಮಾಡಿ ಎಂ.ಬಿ.ಬಿ.ಎಸ್.ಗೆ ಸೇರ್ಪಡೆಗೊಂಡಿದ್ದಾಳೆ ಅವಳ ತಂದೆ ಎಂಬ ಹಿರಿಮೆ ನನ್ನದು. ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರ ನುಡಿಗಳು ಕೇವಲ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡದೆ ಪೋಷಕರನ್ನು ಉತ್ತಮ ದಾರಿಯಲ್ಲಿ ನಡೆಸುವ ಸುಧೆಯಂತಿರುತ್ತದೆ ಎಂದು ವಾಣಿಜ್ಯ ತೆರಿಗೆ ಉಪ ಆಯುಕ್ತರಾದ ಹೊಳೆಯಪ್ಪ ಎಚ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಇವರು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು. ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಮಾತನಾಡಿ ತಮ್ಮ ಉಸಿರನ್ನು ವಿದ್ಯಾರ್ಥಿಗಳ ಉಸಿರಿನೊಂದಿಗೆ ಬೆಸೆಯುವ ಗುರುಗಳನ್ನು ಸದಾ ಸ್ಮರಿಸಿಕೊಳ್ಳಬೇಕು. ಜನನಿ ತಾನೆ ಮೊದಲ ಗುರು ಎಂಬ ನುಡಿಯನ್ನು ಕೇಳಿ ಬೆಳೆದಿದ್ದೇವೆ. ದೇವರಿಗೆ ನಮಿಸುವಂತೆ ವಿದ್ಯೆ ಕಲಿಸಿದಾತನಿಗೆ, ಜನ್ಮದಾತರಿಗೆ ನಮಿಸುವ ಗುಣ ನಮ್ಮೆಲ್ಲರದ್ದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಉಮಾ ಮಾಧವಿ, ನಿವೃತ್ತ ಮುಖ್ಯ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಪಾಡಿ, ರಮೇಶ ಕಲ್ಮಾಡಿ, ನಿವೃತ್ತ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಟ್ಲುಪಾಡಿ, ಮುನಿಯಾಲು, ಕುಮುದಾ ಎಸ್, ನಿವೃತ್ತ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮಾವರ ಮತ್ತು ಶ್ರೀಮತಿ ಉಷಾ ಬಾಯಿ, ನಿವೃತ್ತ ಶಿಕ್ಷಕಿ ಸರಕಾರಿ ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿದ ಉಮಾ ಮಾಧವಿಯವರು ಮಾತನಾಡಿ ವಿದ್ಯಾರ್ಥಿಗಳು ಸನ್ನಡತೆಯೊಂದಿಗೆ ಮುಂದೆ ಸಾಗಬೇಕು. ಜ್ಞಾನದ ಸುಧೆ ಹರಿಸುತ್ತಿರುವ ಈ ಸಂಸ್ಥೆ ನಾಡಿನುದ್ದಕ್ಕೂ ವಿಸ್ತರಿಸಲಿ ಎಂದು ಶುಭ ಹಾರೈಸಿದರು. ರಮೇಶ್ ಕಲ್ಮಾಡಿ ಇವರು ಮಾತನಾಡಿ ನಾನು ಅನೇಕ ಪ್ರಶಸ್ತಿಗಳನ್ನು ಪಡೆದರೂ ಇಲ್ಲಿನ ಸನ್ಮಾನದ ರೀತಿ ನನ್ನ ಹೃದಯ ತುಂಬಿ ಬರುವಂತೆ ಮಾಡಿತು. ಎಂದರು.
ಕುಮುದಾ ಇವರು ಮಾತನಾಡಿ ತಂದೆ ತಾಯಿ ಗುರುಗಳನ್ನು ಗೌರವಿಸುವ ಸಹೃದಯ ವ್ಯಕ್ತಿತ್ವ ಬೆಳೆಸಿಕೊಳ್ಳಿ ಎಂದರು. ಶ ಉಷಾ
ಬಾಯಿ ಇವರು ಮಾತನಾಡಿ ಎಂತಹ ಕ್ಲಿಷ್ಟ ಸಂದರ್ಭದಲ್ಲೂ ಹಿಂದಡಿಯಿಡಬೇಡಿ. ಸವಾಲುಗಳನ್ನು ಎದುರಿಸಿ ಮುಂದೆ ಸಾಗುವ
ಧೈರ್ಯ ನಿಮ್ಮಲ್ಲಿರಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್
ಟ್ರಸ್ಟ್ನ ಟ್ರಸ್ಟಿಗಳಾದ ವಿದ್ಯಾ ಸುಧಾಕರ ಶೆಟ್ಟಿ, ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿಧಿ ಭಾಗವತ್, ಜೆ.ಇ.ಎ. ಸಂಯೋಜಕರಾದ ಪ್ರವೀಣ್ ಜೋನ್ ಡಿ ಅಲ್ಮೆಡಾ ಮೊದಲಾದವರು ಉಪಸ್ಥಿತರಿದ್ದರು, ಉಪಪ್ರಾಂಶುಪಾಲರಾದ ಪ್ರಕಾಶ್ ಜೋಗಿ ವಂದಿಸಿದರು. ಭೌತಶಾಸ್ತ್ರ ಉಪನ್ಯಾಸಕರಾದ ದರ್ಶನ್ ಇವರು ಕಾರ್ಯಕ್ರಮ ನಿರೂಪಿಸಿದರು.




































