
ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ವತಿಯಿಂದ ಕಾಲೇಜಿನ ಪ್ರಥಮ ಹಾಗೂ ತೃತೀಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಉದ್ಯಮ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿವಿಧ ಕೌಶಲಗಳ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು. ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನ ಛೇರ್ಮನ್ ಬ್ರಿಗೇಡಿಯರ್ ಡಾ. ಸುರ್ಜಿತ್ ಸಿಂಗ್ ಪಾಬ್ಲ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಅನೇಕ ಕೌಶಲಗಳನ್ನು ಹೊಂದಿರುವುದು ಅಗತ್ಯವಾಗಿದ್ದು, ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ ಎರಡು ಪದವಿಗಳನ್ನು ಪಡೆಯುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ಐಎಎಸ್, ಐಪಿಎಸ್, ಸಿವಿಲ್ ಸರ್ವಿಸ್ ಹಾಗೂ ಬ್ಯಾಂಕಿಂಗ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಆಸಕ್ತಿ ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಹಾಗೂ ಪರೀಕ್ಷೆ ಬರೆಯುವ ವಿಧಾನದ ಬಗ್ಗೆ ತಿಳುವಳಿಕೆ ಹೊಂದಿರಬೇಕು ಎಂದು ಸಲಹೆ ನೀಡಿದರು. ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನ ರಿಜಿಸ್ಟ್ರಾರ್ ಅಂಜಯ್ಯ ದೇವಿನೇನಿ ಮಾತನಾಡಿ, ಮಣಿಪಾಲ ಸಂಸ್ಥೆಯಲ್ಲಿ ವಿವಿಧ ಡಿಪ್ಲೋಮಾ ಹಾಗೂ ಕೌಶಲಾಭಿವೃದ್ಧಿ ಕೋರ್ಸುಗಳು ಲಭ್ಯವಿದ್ದು, ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮತ್ತು ಉತ್ತಮ ಉದ್ಯೋಗಕ್ಕಾಗಿ ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಎ. ಶಿವಾನಂದ ಪೈ, ಉದ್ಯೋಗ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಇರುವುದರಿಂದ ವಿದ್ಯಾರ್ಥಿಗಳು ಪದವಿಗೆ ಸೇರಿದ ಆರಂಭದಿಂದಲೇ ಉದ್ಯೋಗಕ್ಕೆ ಅಗತ್ಯವಾದ ಕೌಶಲಗಳನ್ನು ಬೆಳೆಸಿಕೊಳ್ಳುವ ಮನೋಭಾವ ಹೊಂದಬೇಕು ಎಂದು ತಿಳಿಸಿದರು. ಮಧ್ಯಂತರ ರಜೆಗಳನ್ನೂ ಕೌಶಲಾಭಿವೃದ್ಧಿಗೆ ಬಳಸಿಕೊಳ್ಳುವಂತೆ ಕರೆ ನೀಡಿದರು. ಸ್ಕೂಲ್ ಆಫ್ ಐಟಿ ಸ್ಕಿಲ್, ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನ ವಿಭಾಗ ಮುಖ್ಯಸ್ಥೆ ರಾಜಲಕ್ಷ್ಮೀ ಆನಂದನ್ ವಿದ್ಯಾರ್ಥಿಗಳಿಗೆ ವಿವಿಧ ಉದ್ಯೋಗ ಕೌಶಲಗಳ ಕುರಿತು ಕಾರ್ಯಾಗಾರ ನಡೆಸಿಕೊಟ್ಟರು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕ ಪ್ರೊ. ಲಕ್ಷ್ಮೀನಾರಾಯಣ ಕೆ.ಎಸ್., ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ವಿಜಯ ಕುಮಾರಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಎ. ಕೋಟ್ಯಾನ್ ಸ್ವಾಗತಿಸಿ, ಪ್ರೊ. ನಂದಕಿಶೋರ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.























































































