
ಕಾರ್ಕಳ: ಶ್ರೀ ರಾಮಪ್ಪ ಎಜುಕೇಶನ್ ಟ್ರಸ್ಟ್‌ನಲ್ಲಿ ಸೆಪ್ಟೆಂಬರ್ 3ರಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಈ ಪ್ರಯುಕ್ತ ಪುಟಾಣಿ ಮಕ್ಕಳಿಗಾಗಿ ಮುದ್ದು ಕೃಷ್ಣ–ಮುದ್ದು ರಾಧೆ ವೇಷಭೂಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸರಸ್ವತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಶಾಲೆಯ ಹಿತೈಷಿ, ಹಳೆಯ ವಿದ್ಯಾರ್ಥಿ ಹಾಗೂ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ ರಾವ್ ಉದ್ಘಾಟಿಸಿದರು. ವೇದಿಕೆಯಲ್ಲಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಸುವರ್ಣ ಹಾಗೂ ನಿವೃತ್ತ ಶಿಕ್ಷಕಿ ತಂಗಿ ಎಸ್. ಸುವರ್ಣ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 6ನೇ ತರಗತಿ ವಿದ್ಯಾರ್ಥಿ ಅಖಿಲ್ ಅವರ ಹುಟ್ಟುಹಬ್ಬವನ್ನೂ ಆಚರಿಸಲಾಯಿತು.
ಮುದ್ದು ಕೃಷ್ಣ–ಮುದ್ದು ರಾಧೆಯರ ವೇಷದಲ್ಲಿ ಕಂಗೊಳಿಸಿದ ಪುಟಾಣಿಗಳ ಸ್ಪರ್ಧೆ ಎಲ್ಲರ ಮನಸೆಳೆಯಿತು. ಸ್ಪರ್ಧೆಗೆ ಸೌಮ್ಯ ಅಶೋಕ್ ಕೋಟ್ಯಾನ್ ಹಾಗೂ ಹಳೆಯ ವಿದ್ಯಾರ್ಥಿನಿ ಸಂಗೀತಾ ಸುಭಾಷ್ ಅವರು ತೀರ್ಪುಗಾರರಾಗಿದ್ದರು.
ಜೊತೆಗೆ ವಿದ್ಯಾರ್ಥಿಗಳಿಗಾಗಿ ಭಗವದ್ಗೀತೆ ಪಠಣ ಹಾಗೂ ಆಧ್ಯಾತ್ಮಿಕ ಚಿಂತನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಗಳಿಗೆ ಶಾಲಿನಿ ಹಾಗೂ ಚಂಪಾ ಅವರು ತೀರ್ಪುಗಾರರಾಗಿದ್ದರು.
ಸ್ಪರ್ಧೆಗಳ ಬಳಿಕ ನಡೆದ ಭಕ್ತಿ ಸಂಭ್ರಮ ವಿಶೇಷವಾಗಿತ್ತು. ಶಿಕ್ಷಕರು, ಟ್ರಸ್ಟ್ ಅಧ್ಯಕ್ಷರು, ನಿವೃತ್ತ ಶಿಕ್ಷಕಿ ತಂಗಿ ಎಸ್. ಸುವರ್ಣ, ಪೋಷಕರು ಹಾಗೂ ವಿದ್ಯಾರ್ಥಿಗಳು ಒಟ್ಟಾಗಿ ಕೃಷ್ಣನ ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಹಳೆಯ ವಿದ್ಯಾರ್ಥಿ ರವೀಂದ್ರ ಅವರು ಆಗಮಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.
ಶಾಲಾ ಶಿಕ್ಷಕಿ ಲಕ್ಷ್ಮಿ ಅವರು ಕಾರ್ಯಕ್ರಮ ನಿರೂಪಿಸಿದರು. ಚಂಪಾ ಸ್ವಾಗತಿಸಿದರು ಹಾಗೂ ಸುಧಾಕರ್ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದ ಬಹುಮಾನಗಳಿಗೆ ಪ್ರಾಯೋಜಕತ್ವ ನೀಡಿದ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ತಾರನಾಥ್ ಕೋಟ್ಯಾನ್, ರಾಜೇಶ್ ಕೋಟ್ಯಾನ್, ಸಂತೋಷ್ ಕೋಟ್ಯಾನ್ ಹಾಗೂ ವಿಘ್ನೇಶ್ ರಾವ್ ಅವರಿಗೆ ಶಾಲೆಯ ವತಿಯಿಂದ ಹೃತ್ಪೂರ್ವಕ ಧನ್ಯವಾದ ಸಲ್ಲಿಸಲಾಯಿತು.
ಶ್ರೀಕೃಷ್ಣನ ಜಯಘೋಷದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.























































































