
ಬೆಂಗಳೂರು : ಸಾಂವಿಧಾನಿಕ ಹುದ್ದೆಯಲ್ಲಿರುವ ವಿಧಾನಸಭಾಧ್ಯಕ್ಷರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಭೇಟಿ ಮಾಡುವ ಮೂಲಕ ನಿಷ್ಪಕ್ಷಪಾತತೆ ಮತ್ತು ಸಂಸದೀಯ ಪರಂಪರೆಗೆ ಎಳ್ಳುನೀರು ಬಿಟ್ಟಿದ್ದಾರೆ ಎಂದು ಮಾಜಿ ಸಚಿವ ವಿ. ಸುನೀಲ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಭಾಧ್ಯಕ್ಷರು ಸದನದ ಅಧ್ಯಕ್ಷರು; ಅವರು ಯಾವುದೇ ಒಂದು ಪಕ್ಷದ ಅಧ್ಯಕ್ಷರಲ್ಲ. ಅವರು ಆಡಳಿತ ಪಕ್ಷಕ್ಕೂ ಸೇರಿದವರಲ್ಲ, ಪ್ರತಿಪಕ್ಷಕ್ಕೂ ಸೇರಿದವರಲ್ಲ—ಇಡೀ ವಿಧಾನಸಭೆಯ ಗೌರವ ರಕ್ಷಕರು. ಇಂತಹ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ಸಕ್ರಿಯ ರಾಜಕೀಯ ನಾಯಕರನ್ನು ಅವರ ಮನೆಗೆ ಹೋಗಿ ಭೇಟಿ ಮಾಡಿರುವುದು ಆಕ್ಷೇಪಾರ್ಹ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಲೆಟರ್ಹೆಡ್ನಲ್ಲಿ ಸಭಾಧ್ಯಕ್ಷರಾಗಿ ಆಯ್ಕೆಯಾದ ಜಿ.ಎಸ್ .ಪಾಟೀಲರು ಈ ಭೇಟಿಗೆ ಮುನ್ನ ಸ್ಪೀಕರ್ ಪೀಠದಲ್ಲಿ ಕುಳಿತ ಮಹಾನ್ ವ್ಯಕ್ತಿಗಳನ್ನು ಒಮ್ಮೆ ಸ್ಮರಿಸಿಕೊಳ್ಳಬೇಕಿತ್ತು. ಕಾಂಗ್ರೆಸ್ ನವರೇ ಆದರೂ ಈ ಪೀಠ ಏರಿದ ನಂತರ ಅವರು ಹೇಗೆ ನಿಸ್ಪೃಹರಾಗಿದ್ದರು ಎಂಬ ಬಗ್ಗೆ ಯೋಚಿಸಬೇಕಿತ್ತು. ಕಾಗೋಡು ತಿಮ್ಮಪ್ಪನವರು ಸ್ಪೀಕರ್ ಆಗಿದ್ದ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ದಿಗ್ವಿಜಯ್ ಸಿಂಗ್ ಅವರನ್ನು ” ದಿಗ್ವಿಜಯ್ ಸಿಂಗ್ ಯಾರು ?” ಎಂದು ಪ್ರಶ್ನಿಸಿದ್ದನ್ನು ಸ್ಮರಿಸಿಕೊಂಡಿದ್ದರೂ ನೀವು ರಾಜ್ಯ ಉಸ್ತುವಾರಿ ಸುರ್ಜೇವಾಲಾರನ್ನು ಭೇಟಿ ಮಾಡುತ್ತಿರಲಿಲ್ಲ ಎಂದು ಟೀಕಿಸಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ನಾಯಕರನ್ನು ಸಭಾಧ್ಯಕ್ಷರು ಭೇಟಿ ಮಾಡಿರುವುದು ‘ಸಭಾಧ್ಯಕ್ಷರ ಹುದ್ದೆ ಪಕ್ಷಾತೀತವೇ?’ ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ. ಸಾಂವಿಧಾನಿಕ ಹುದ್ದೆ ಎಂದರೆ ಅಧಿಕಾರದ ಅಲಂಕಾರವಲ್ಲ. ಸಭಾಧ್ಯಕ್ಷರು ಪಕ್ಷದ ರಾಜಕೀಯ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳುವುದು ನಮ್ಮ ಸಂಸದೀಯ ಸಂಪ್ರದಾಯ. ಆದರೆ ಕರ್ನಾಟಕದಲ್ಲಿ ಆ ಸಂಪ್ರದಾಯಕ್ಕೆ ಎಳ್ಳುನೀರು ಬಿಡುವ ಕೆಲಸ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ಗೆ ಸಭಾಧ್ಯಕ್ಷರನ್ನು ಪಕ್ಷದ ನಾಯಕರಂತೆ ಕಾಣುವ ಮನಸ್ಥಿತಿ ಇದ್ದರೆ ಅದು ಅವರ ತಪ್ಪು. ಆದರೆ ಸಭಾಧ್ಯಕ್ಷರು ಕೂಡ ತಮ್ಮ ಹುದ್ದೆಯ ಘನತೆಯನ್ನು ಅರಿತುಕೊಳ್ಳಬೇಕಿತ್ತು. ಖರ್ಗೆ, ಸುರ್ಜೆವಾಲಾ ಅವರನ್ನು ಭೇಟಿ ಮಾಡುವ ಮೂಲಕ ಸಭಾಧ್ಯಕ್ಷರು ಯಾರಿಗೆ ಸಂದೇಶ ನೀಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ವಿಧಾನಸಭೆಯ ಪೀಠದ ಮೇಲೆ ಕುಳಿತಿರುವ ವ್ಯಕ್ತಿ ಪಕ್ಷದ ಪರವಾಗಿ ಕಾಣಿಸಿಕೊಂಡರೆ, ನಾಳೆ ಸದನದಲ್ಲಿ ಸಭಾಧ್ಯಕ್ಷರು ನೀಡುವ ತೀರ್ಪು, ಕೈಗೊಳ್ಳುವ ನಿರ್ಧಾರ ಮತ್ತು ನಡೆಸುವ ಕಲಾಪದ ಮೇಲಿನ ನಂಬಿಕೆಯನ್ನು ಹೇಗೆ ಉಳಿಸಿಕೊಳ್ಳಲು ಸಾಧ್ಯ? ನಿಮ್ಮ ಪ್ರತಿ ನಿಲುವನ್ನು ಪಕ್ಷಪಾತದ ದೃಷ್ಟಿಯಿಂದ ನೋಡಬೇಕಾಗುವುದಿಲ್ಲವೇ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.






















































































