ವೈದ್ಯರ ನಿರ್ಲಕ್ಷ್ಯದ ಆರೋಪ…

ರೇವಾ: ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆ ಹಾಗೂ ಆಕೆಯ ಗರ್ಭದಲ್ಲಿದ್ದ ಮಗು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಗಾಂಧಿ ಮೆಮೋರಿಯಲ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಮೃತರನ್ನು ಹತ್ವಾ ಗ್ರಾಮದ ನಿವಾಸಿ ಕಲ್ಪನಾ ಮಿಶ್ರಾ ಎಂದು ಗುರುತಿಸಲಾಗಿದೆ. ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಈ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕಲ್ಪನಾ ಅವರು ಆಗಸ್ಟ್ 26ರ ಮುಂಜಾನೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅದೇ ದಿನ ರಾತ್ರಿ 11.55ರ ಸುಮಾರಿಗೆ ಅವರು ಹಾಗೂ ಗರ್ಭದಲ್ಲಿದ್ದ ಮಗು ಮೃತಪಟ್ಟಿದ್ದಾರೆ.
ಆಪರೇಷನ್‌ಗೆ ಕರೆದೊಯ್ಯುವ ಮುನ್ನ ಕಲ್ಪನಾ ಅವರು ತಂದೆಯ ಬಳಿ “ಅಪ್ಪಾ.. ನನ್ನ ಇಲ್ಲಿಂದ ಕರ್ಕೊಂಡು ಹೋಗು, ಇವ್ರು ನನ್ನನ್ನ ಸಾಯಿಸಿಬಿಡ್ತಾರೆ” ಎಂದು ಕಣ್ಣೀರಿಟ್ಟು ಮನವಿ ಮಾಡಿದ್ದರು ಎನ್ನಲಾಗಿದೆ. ಆದರೆ ಕೆಲವೇ ಸಮಯದ ಬಳಿಕ ಆಕೆ ಹಾಗೂ ಹುಟ್ಟಬೇಕಿದ್ದ ಮಗು ಇಬ್ಬರೂ ಮೃತಪಟ್ಟಿದ್ದಾರೆ.
ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ
ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಹಾಗೂ ವೈದ್ಯಕೀಯ ಲೋಪವೇ ಸಾವಿಗೆ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಅನಸ್ತೇಷಿಯಾ ಓವರ್‌ಡೋಸ್ ಅಥವಾ ರಕ್ತ ವರ್ಗಾವಣೆಯಲ್ಲಿನ ತಪ್ಪಿನಿಂದ ಸಾವು ಸಂಭವಿಸಿರಬಹುದು ಎಂದು ಅವರು ದೂರಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.
ಇಬ್ಬರು ವೈದ್ಯರು, ಇಬ್ಬರು ನರ್ಸ್‌ಗಳ ಅಮಾನತು
ಘಟನೆಗೆ ಸಂಬಂಧಿಸಿದಂತೆ ಇಬ್ಬರು ಹಿರಿಯ ವೈದ್ಯರು ಹಾಗೂ ಕರ್ತವ್ಯದಲ್ಲಿದ್ದ ಇಬ್ಬರು ನರ್ಸ್‌ಗಳನ್ನು ಅಮಾನತುಗೊಳಿಸಲಾಗಿದೆ. ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಡಾ. ಸೋನಲ್ ಅಗರ್ವಾಲ್ ಹಾಗೂ ಅನಸ್ತೇಷಿಯಾ ವಿಭಾಗದ ಡಾ. ನಿಧಿ ಪಾಂಡೆ ಅವರನ್ನು ಮೇಲ್ನೋಟಕ್ಕೆ ಕಂಡುಬಂದ ನಿರ್ಲಕ್ಷ್ಯ ಮತ್ತು ಶಿಸ್ತು ಉಲ್ಲಂಘನೆ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.
ಸಾವಿನ ನಿಖರ ಕಾರಣ ತಿಳಿಯಲು ತನಿಖಾ ಸಮಿತಿ ರಚಿಸಲಾಗಿದೆ. ಪೋಸ್ಟ್‌ಮಾರ್ಟಂ ವರದಿ ಬಂದ ಬಳಿಕ ಸಾವಿಗೆ ನಿಜವಾದ ಕಾರಣ ಸ್ಪಷ್ಟವಾಗಲಿದೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ.
ಕಲ್ಪನಾ ಆರೋಗ್ಯ ಸ್ಥಿತಿ ಹೇಗಿತ್ತು?
ಆಸ್ಪತ್ರೆಯ ವೈದ್ಯಕೀಯ ದಾಖಲೆಗಳ ಪ್ರಕಾರ, ಕಲ್ಪನಾ ಅವರ ಪ್ಲೇಟ್‌ಲೆಟ್‌ಗಳ ಸಂಖ್ಯೆ ಸುಮಾರು 30,000ಕ್ಕೆ ಇಳಿದಿತ್ತು. ಜೊತೆಗೆ ರಕ್ತದೊತ್ತಡ ಅಪಾಯಕಾರಿಯಾಗಿ ಹೆಚ್ಚಾಗಿದ್ದು, ಲಿವರ್ ಎಂಜೈಮ್‌ಗಳ ಮಟ್ಟವೂ ಏರಿಕೆಯಾಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.





















































































