
ಹೈದರಾಬಾದ್: ವಿವಾದಾತ್ಮಕ ಭವಿಷ್ಯವಾಣಿಗಳಿಂದಲೇ ಆಗಾಗ ಸುದ್ದಿಯಾಗುವ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ. ಟಾಲಿವುಡ್‌ನ ಇಬ್ಬರು ಪ್ರಮುಖ ಕಲಾವಿದರ ಭವಿಷ್ಯದ ಕುರಿತು ಅವರು ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಹಿಂದೆ ನಟಿ ಸಮಂತಾ ಹಾಗೂ ನಾಗಚೈತನ್ಯ ಅವರ ವೈವಾಹಿಕ ಜೀವನ ಸೇರಿದಂತೆ ಹಲವು ವಿಚಾರಗಳ ಬಗ್ಗೆ ವೇಣುಸ್ವಾಮಿ ಭವಿಷ್ಯ ನುಡಿದು ಸುದ್ದಿಯಾಗಿದ್ದರು. ಇತ್ತೀಚೆಗೆ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ದಾಂಪತ್ಯದ ಬಗ್ಗೆಯೂ ಅವರು ಭವಿಷ್ಯ ಹೇಳಿದ್ದರು.
ಸಂದರ್ಶನವೊಂದರಲ್ಲಿ ಮಾತನಾಡಿರುವ ವೇಣುಸ್ವಾಮಿ, 2027-28ರ ಅವಧಿಯಲ್ಲಿ ತೆಲುಗು ಚಿತ್ರರಂಗದ ಯುವ ನಟ ಹಾಗೂ ಜನಪ್ರಿಯ ನಟಿಯೊಬ್ಬರು ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬಹುದು ಎಂದು ಹೇಳಿದ್ದಾರೆ. ಇಬ್ಬರಿಗೂ 45-46 ವರ್ಷಕ್ಕಿಂತ ಕಡಿಮೆ ವಯಸ್ಸಾಗಿರುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಯುವ ನಟನ ಸಾವಿಗೆ ಆರೋಗ್ಯ ಸಮಸ್ಯೆ ಕಾರಣವಾಗಬಹುದು ಅಥವಾ ಕಠಿಣ ಪರಿಸ್ಥಿತಿಯಲ್ಲಿ ಆತ್ಮಹತ್ಯೆಯಂತಹ ಘಟನೆ ಸಂಭವಿಸಬಹುದು ಎಂದು ಅವರು ಹೇಳಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ, ಯಾವುದೇ ನಟ-ನಟಿಯ ಹೆಸರನ್ನು ಅವರು ಬಹಿರಂಗಪಡಿಸಿಲ್ಲ.
ಮೇಷ ರಾಶಿಯ ನಟಿ ಹಾಗೂ ವೃಶ್ಚಿಕ ಅಥವಾ ಮಿಥುನ ರಾಶಿಗೆ ಸೇರಿದ ಹೀರೋ ಕುರಿತು ವೇಣುಸ್ವಾಮಿ ಈ ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ. ಈ ಹೇಳಿಕೆಯ ವಿಡಿಯೊ ವೈರಲ್ ಆಗುತ್ತಿದ್ದಂತೆ, ಇಬ್ಬರು ಸ್ಟಾರ್‌ಗಳು ಯಾರು ಎಂಬ ಬಗ್ಗೆ ಅಭಿಮಾನಿಗಳಲ್ಲಿ ಚರ್ಚೆ ಶುರುವಾಗಿದೆ.
ವೇಣುಸ್ವಾಮಿ ಅವರ ಹೇಳಿಕೆಗೆ ಕೆಲವರು ಇದು ಕೇವಲ ಪ್ರಚಾರದ ತಂತ್ರ ಎಂದು ಟೀಕಿಸಿದರೆ, ಇನ್ನೂ ಕೆಲವರು ಆ ಇಬ್ಬರು ಸ್ಟಾರ್ಸ್ ಯಾರು ಎಂದು ಪ್ರಶ್ನಿಸಿದ್ದಾರೆ. ಈ ಹಿಂದೆ ಕೂಡ ಅವರ ಭವಿಷ್ಯವಾಣಿಗಳು ವಿವಾದಕ್ಕೆ ಕಾರಣವಾಗಿದ್ದು, ಅವರ ವಿರುದ್ಧ ದೂರು ದಾಖಲಾಗಿತ್ತು.





















































































