
ತಿರುಪತಿ: ತಿರುಮಲ ತಿರುಪತಿ ದೇವಸ್ಥಾನಂ (TTD) ಆಡಳಿತ ಮಂಡಳಿಯು ಹಿಂದೂಗಳ ಪವಿತ್ರ ಕ್ಷೇತ್ರ ತಿರುಮಲದಲ್ಲಿ ಹೂಕೋಸು ಬಳಸಿ ತಯಾರಿಸುವ ಗೋಬಿ ಖಾದ್ಯಗಳ ಮಾರಾಟಕ್ಕೆ ತಾತ್ಕಾಲಿಕ ನಿಷೇಧ ಹೇರಿದೆ.
ತಿರುಮಲಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಭಕ್ತರ ಆರೋಗ್ಯದ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ತಿರುಮಲದ ಹೋಟೆಲ್, ರೆಸ್ಟೋರೆಂಟ್ ಮತ್ತು ಫಾಸ್ಟ್ ಫುಡ್ ಕೇಂದ್ರಗಳಲ್ಲಿ ಹೂಕೋಸು ಬಳಸಿ ತಯಾರಿಸುವ ಆಹಾರವನ್ನು ಸದ್ಯ ಮಾರಾಟ ಮಾಡದಂತೆ ಸೂಚಿಸಲಾಗಿದೆ.
ಇತ್ತೀಚೆಗೆ ಹೂಕೋಸುಗಳಲ್ಲಿ ಹುಳುಗಳು ಹಾಗೂ ಕ್ರಿಮಿ-ಕೀಟಗಳು ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಕ್ತರಿಗೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗದಂತೆ ಟಿಟಿಡಿ ಈ ಕ್ರಮಕ್ಕೆ ಮುಂದಾಗಿದೆ.
ಈ ಸಂಬಂಧ ಟಿಟಿಡಿ ಆರೋಗ್ಯ ಉಪ ಕಾರ್ಯನಿರ್ವಹಣಾಧಿಕಾರಿ ಸೋಮನ್ನಾರಾಯಣ ಅವರು ಶುಕ್ರವಾರ ತಿರುಮಲದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಫಾಸ್ಟ್ ಫುಡ್ ಕೇಂದ್ರಗಳ ಮಾಲೀಕರು ಹಾಗೂ ನಿರ್ವಾಹಕರೊಂದಿಗೆ ಸಭೆ ನಡೆಸಿದರು.
ಭಕ್ತರಿಗೆ ಶುದ್ಧ ಮತ್ತು ನೈರ್ಮಲ್ಯಯುತ ಆಹಾರವನ್ನೇ ನೀಡಬೇಕು ಎಂದು ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೂಕೋಸಿನಲ್ಲಿ ಕ್ರಿಮಿ-ಕೀಟಗಳು ಪತ್ತೆಯಾಗುತ್ತಿರುವ ಕಾರಣ ಗೋಬಿ ಖಾದ್ಯಗಳ ತಯಾರಿಕೆ ಮತ್ತು ಮಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ನಿಷೇಧ ಶಾಶ್ವತವಲ್ಲ. ಪರಿಸ್ಥಿತಿ ಸುಧಾರಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



















































































