10ನೇ ತರಗತಿ ವಿದ್ಯಾರ್ಥಿಗಳೇ ಆರೋಪಿಗಳು..!

ಆಂಧ್ರಪ್ರದೇಶ: ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೆಪಲ್ಲಿ ಮಂಡಲದ ಜೆಬಿ ಕಾಲೋನಿಯಲ್ಲಿ ನಡೆದ ಶಾಲಾ ಪ್ರಾಂಶುಪಾಲೆಯ ಬರ್ಬರ ಹತ್ಯೆ ಪ್ರಕರಣಕ್ಕೆ ಪೊಲೀಸರು ತೆರೆ ಎಳೆದಿದ್ದಾರೆ. ನಾಗಾರ್ಜುನ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಕೆ.ರೂಪಾ ರೆಡ್ಡಿ ಅವರನ್ನು ಹೊಟ್ಟೆಗೆ 27 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಆಗಸ್ಟ್ 11ರಂದು ನಡೆದಿದ್ದ ಪ್ರಕರಣದ ತನಿಖೆಯಲ್ಲಿ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ರೂಪಾ ರೆಡ್ಡಿ ಅವರ ಹತ್ಯೆ ಮಾಡಿದ್ದು ಅದೇ ಶಾಲೆಯ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಎಂಬುದು ಪೊಲೀಸ್ ತನಿಖೆಯಿಂದ ಬಹಿರಂಗವಾಗಿದೆ. ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳು ಸುಮಾರು 80 ಮಂದಿಯನ್ನು ವಿಚಾರಣೆ ನಡೆಸಿದ್ದವು. ಈ ವೇಳೆ ಇಬ್ಬರು ವಿದ್ಯಾರ್ಥಿಗಳ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ.
ಘಟನೆ ನಡೆದ ರಾತ್ರಿ ಇಬ್ಬರು ವಿದ್ಯಾರ್ಥಿಗಳು ರೂಪಾ ರೆಡ್ಡಿ ಅವರ ಮನೆಗೆ ತೆರಳಿದ್ದರು. ಒಬ್ಬ ಮನೆಯೊಳಗೆ ನುಗ್ಗಿ ಹಣಕ್ಕೆ ಬೇಡಿಕೆ ಇಟ್ಟಿದ್ದರೆ, ಮತ್ತೊಬ್ಬ ಹೊರಗೆ ಕಾವಲು ಕಾಯುತ್ತಿದ್ದ. ಈ ವೇಳೆ ಮಾಸ್ಕ್ ಕಳಚಿಬಿದ್ದಿದ್ದು, ವಿದ್ಯಾರ್ಥಿಯನ್ನು ಪ್ರಾಂಶುಪಾಲೆ ಗುರುತಿಸಿ ಕಿರುಚಿದ್ದಾರೆ. ಇದರಿಂದ ಆತ ಅವರನ್ನು ಒಳಮನೆಗೆ ಎಳೆದೊಯ್ದು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಬಳಿಕ ಮನೆಯಲ್ಲಿದ್ದ ₹2.20 ಲಕ್ಷ ಹಣವನ್ನು ವಿದ್ಯಾರ್ಥಿಗಳು ಕದ್ದುಕೊಂಡು ಪರಾರಿಯಾಗಿದ್ದರು. ಅದರಲ್ಲಿ ಹೊರಗೆ ಕಾವಲು ಕಾಯುತ್ತಿದ್ದ ವಿದ್ಯಾರ್ಥಿಗೆ ₹40 ಸಾವಿರ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ತದ ಕಲೆ ಇದ್ದ ನೋಟುಗಳಿಂದ ಸಿಕ್ಕಿಬಿದ್ದರು
ತನಿಖೆ ವೇಳೆ ಪೊಲೀಸರು ವಿದ್ಯಾರ್ಥಿಗಳ ಬಳಿಯಿದ್ದ ಹಣವನ್ನು ಪರಿಶೀಲಿಸಿದಾಗ ಮಹತ್ವದ ಸುಳಿವು ಸಿಕ್ಕಿದೆ. ಓರ್ವ ವಿದ್ಯಾರ್ಥಿಯ ಬಳಿ ₹1.60 ಲಕ್ಷ ಪತ್ತೆಯಾಗಿದ್ದು, ನೋಟುಗಳ ಮೇಲೆ ರಕ್ತದ ಕಲೆಗಳಿರುವುದು ಕಂಡುಬಂದಿದೆ. ವಿಚಾರಣೆ ತೀವ್ರಗೊಳಿಸಿದಾಗ ವಿದ್ಯಾರ್ಥಿ ಕೊಲೆ ಹಾಗೂ ಹಣ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಇಬ್ಬರು ವಿದ್ಯಾರ್ಥಿಗಳು ಈ ಹಿಂದೆಯೂ ಕಳ್ಳತನದಲ್ಲಿ ತೊಡಗಿದ್ದು, ಕದ್ದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.



















































































