
ಬೆಂಗಳೂರು: ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಪಿಂಚಣಿ ಪಡೆಯಲು ಇದ್ದ ವಾರ್ಷಿಕ ಆದಾಯ ಮಿತಿಯನ್ನು ₹32 ಸಾವಿರದಿಂದ ₹1.20 ಲಕ್ಷಕ್ಕೆ ಹೆಚ್ಚಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಇದರಿಂದ ಆದಾಯ ಮಿತಿ ಕಾರಣಕ್ಕೆ ಪಿಂಚಣಿ ಕಳೆದುಕೊಂಡಿದ್ದ ಹಲವು ಕುಟುಂಬಗಳಿಗೆ ಅನುಕೂಲವಾಗಲಿದೆ.
ಈ ಕುರಿತು ಡಿಸಿಎಂ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದು, ₹32 ಸಾವಿರಕ್ಕಿಂತ ಹೆಚ್ಚು ಹಾಗೂ ₹1.20 ಲಕ್ಷದೊಳಗೆ ವಾರ್ಷಿಕ ಆದಾಯ ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ₹32 ಸಾವಿರ ಆದಾಯ ಮಿತಿ ನಿಗದಿಯಾಗಿದ್ದರಿಂದ ಅನೇಕರು ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲ ಪಿಂಚಣಿ ಸೌಲಭ್ಯದಿಂದ ಹೊರಗುಳಿದಿದ್ದರು. ಇದೀಗ ಆದಾಯ ಮಿತಿಯನ್ನು ಹೆಚ್ಚಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
18.06 ಲಕ್ಷ ಫಲಾನುಭವಿಗಳ ಪಿಂಚಣಿ ತಾತ್ಕಾಲಿಕ ಸ್ಥಗಿತ
ರಾಜ್ಯದಲ್ಲಿ ಪಿಂಚಣಿ ಪಡೆಯುತ್ತಿದ್ದವರ ಮಾಹಿತಿಯನ್ನು ಕುಟುಂಬ ದತ್ತಾಂಶದೊಂದಿಗೆ ಪರಿಶೀಲಿಸಿದಾಗ 23,14,544 ಫಲಾನುಭವಿಗಳು ಸಂದೇಹಾಸ್ಪದ ಎಂದು ಗುರುತಿಸಲಾಗಿತ್ತು. ಬಳಿಕ ಸಂಯೋಜನೆ ಮೊಬೈಲ್ ಆ್ಯಪ್ ಮೂಲಕ ಭೌತಿಕ ಪರಿಶೀಲನೆ ನಡೆಸಲಾಗಿದ್ದು, ದಾಖಲೆ ನೀಡದ, ವಿಳಾಸದಲ್ಲಿ ವಾಸವಿಲ್ಲದ ಹಾಗೂ ಆದಾಯ ದೃಢೀಕರಣ ಪತ್ರ ಸಲ್ಲಿಸದ 18,06,032 ಮಂದಿಯ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ನಂತರ ಗ್ರಾಮ ಆಡಳಿತಾಧಿಕಾರಿಗಳು ನಡೆಸಿದ ಪರಿಶೀಲನೆಯ ಆಧಾರದ ಮೇಲೆ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮುಂದುವರಿಸಲು ತಾಲೂಕು ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ. ಪರಿಶೀಲನೆ ವೇಳೆ ₹32 ಸಾವಿರಕ್ಕಿಂತ ಹೆಚ್ಚು ಆದರೆ ₹1.20 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.



















































































