ಭಾಗ – 616
ಭರತೇಶ ಶೆಟ್ಟಿ, ಎಕ್ಕಾರು

ಅಷ್ಟೂ ಬ್ರಹ್ಮರುಗಳೂ ಬಕದಾಲ್ಭ್ಯರ ಸಹಿತವಾಗಿ ಯಾವುದೊ ಒಂದು ಹೊಸ ಲೋಕಕ್ಕೆ ಬಂದಿದ್ದಾರೆ. ಚೈತನ್ಯವೂ, ಹೊಸ ಪ್ರಭೆಯೂ ತುಂಬಿರುವ ಇಲ್ಲಿ ಎಲ್ಲವೂ ವಿಭಿನ್ನವಾಗಿದೆ. ಬಹಳಷ್ಟು ಮಂದಿ ಇದ್ದಾರೆ.
ಬಕದಾಲ್ಭ್ಯರು ಹೀಗೆ ಆ ಲೋಕದ ವರ್ಣನೆಯನ್ನು ಸವಿಸ್ತಾರವಾಗಿ ಅರ್ಜುನನಿಗೆ ವಿವರಿಸುತ್ತಿರುವಾಗ ಅರ್ಜುನನೂ ಏಕಾಗ್ರತೆಯಿಂದ ಸೃಷ್ಟಿಯ ರಹಸ್ಯವನ್ನು, ನಿಗೂಢತೆಯನ್ನು ಆರ್ಜನೆ ಮಾಡುವ ಶಿಷ್ಯನಂತೆ ಆಲಿಸುತ್ತಿದ್ದಾನೆ.
ಬಕದಾಲ್ಭ್ಯರು ಮುಂದುವರಿಸುತ್ತಾ “ಇನ್ನೂ ಸೂಕ್ಷ್ಮವಾಗಿ ನೋಡಿದಾಗ ಋಷಿಗಳು, ತಪಸ್ವಿಗಳು, ಮನು ಮನೀಷಿಗಳು, ದೇವತೆಗಳು, ದಿವ್ಯಾತ್ಮರು, ಹೆಚ್ಚೇಕೆ ಅದೆಷ್ಟೊ ಬ್ರಹ್ಮರು ಈಶರೂ ಇದ್ದಾರೆ. ಇವರೇನು ಮಾಡುತ್ತಿದ್ದಾರೆ? ಇದು ಯಾವ ಲೋಕ ಎಂಬ ಕುತೂಹಲದಿಂದ ಮತ್ತೂ ಗಮನಿಸಿ ನೋಡಿದಾಗ ಅವರಷ್ಟೂ ಮಂದಿ ಧ್ಯಾನ ನಿರತರಾಗಿ ಸ್ತುತಿ ಮಾಡುತ್ತಿದ್ದಾರೆ. ಹಾಗಾದರೆ ಇವರು ಯಾರ ಕುರಿತಾಗಿ ಸ್ತುತಿ ಮಾಡುತ್ತಿದ್ದಾರೆ ಎಂಬ ಕೌತುಕ ನನಗೂ ಹೆಚ್ಚಾಗ ತೊಡಗಿತು. ಮಾತ್ರವಲ್ಲ ಈ ಸತ್ಯವನ್ನು ಅರಿಯ ಬೇಕೆಂಬ ಮಹದಾಸೆಯೂ ಮನ ಮಾಡಿತು. ಹೀಗೆ ಪ್ರಬಲವಾದ ಆಸೆಯ ಹಿಂದೋಡುತ್ತಾ ಎಲ್ಲೆಡೆ ದೃಷ್ಟಿ ಹಾಯಿಸಿದಾಗ ವಿಶೇಷವಾದುದೊಂದು ಗೋಚರವಾಯಿತು. ಆದರೆ ಆ ಕ್ಷಣದಲ್ಲಿ ತೀಕ್ಷ್ಣವಾದ ಮಿಂಚೊಂದು ಮಿಂಚಿತು. ಆ ಬೆಳಕಿನ ಪ್ರಖರತೆಗೆ ಆ ಪೂರ್ಣ ಸ್ವರೂಪವನ್ನು ನನಗೆ ನೋಡಲಾಗಲಿಲ್ಲ. ಆದರೂ ನನಗೆ ಆ ದಿವ್ಯಶಕ್ತಿಯ ಮುಖ ದರ್ಶನ ಭಾಗ್ಯ ದೊರೆತಿತ್ತು. ಒಂದು ವಿಚಾರ ಸ್ಪಷ್ಟವಾಯಿತು ಏನೆಂದರೆ ಕಲ್ಪಾಂತ್ಯ ಕಾಲದಲ್ಲಿ ಆಲದೆಲೆಯ ಮೇಲೆ ತೇಲಿ ಬರುತ್ತಿದ್ದ ಆ ಮಗುವಿನ ಮುಖವೂ ಇಲ್ಲಿ ಗೋಚರಿಸಿದ ಪರಮಾತ್ಮನ ಮುಖವೂ ಏಕತಾನತೆಯನ್ನು ಹೊಂದಿತ್ತು. ಆ ಸಾಮ್ಯತೆಯಿಂದ ನಾನು ಇದೇ ಅದು, ಅದೇ ಇದು ಆಗಿರಬಹುದೆ ಎಂದು ತರ್ಕಿಸಿ ಮತ್ತೂ ನೋಡಬೇಕೆಂಬ ಹಂಬಲಿಗನಾದಾಗ ಬಲವಾದ ಗಾಳಿ ಬೀಸಿತು, ಏನಾಯಿತು ಎಂಬ ಅರಿವಾಗಲಿಲ್ಲ, ಕಣ್ತೆರೆದು ನೋಡುವಾಗ ನಾನಿಲ್ಲಿ ಬಂದು ಬಿದ್ದಿದ್ದೆ. ಎದ್ದು ನೋಡಿದರೆ ನಾನೊಬ್ಬ ಮಾತ್ರ ಇದ್ದೇನೆ, ಆ ತನಕ ನನ್ನ ಜೊತೆಗಿದ್ದ ಉಳಿದ ಬ್ರಹ್ಮರು ಏನಾದರೊ? ಅವರವರ ಲೋಕಕ್ಕೆ ಹಾರಿಸಲ್ಪಟ್ಟರೋ! ಒಂದೂ ತಿಳಿಯದಾಗಿದ್ದೇನೆ.” ಎಂದು ತನಗೊದಗಿದ್ದ ಲೋಕ ಲೋಕ ಸಂಚಾರದ ಬ್ರಹ್ಮಾಂಡ ಕಥನವನ್ನೂ, ಅನುಭವ ಸಾರವನ್ನೂ ಅರ್ಜುನನಿಗೆ ವಿಸ್ತೃತವಾಗಿ ವಿವರಿಸಿದರು.
ಆ ಬಳಿಕ ಅರ್ಜುನನಲ್ಲಿ “ಹೇ ಕುಮಾರಾ! ಇಷ್ಟೆಲ್ಲಾ ಆದ ಬಳಿಕ ನನ್ನ ಜೀವನದಲ್ಲಿ ಏನೂ ಇಲ್ಲ, ಏನೂ ಬೇಕಾಗಿಲ್ಲ. ಈಗ ನನ್ನ ಬಳಿ ಉಳಿದಿರುವುದು ನಾನು ಮತ್ತು ನಾನು ನೋಡಿ ನೆನಪಿನಲ್ಲಿ ಉಳಿಸಿರುವ ಆ ಮುಖ ಮಾತ್ರ. ನನ್ನ ಪ್ರಪಂಚವೂ ಅಷ್ಟಕ್ಕೆ ಸೀಮಿತ – ನಾನು ಮತ್ತು ಪ್ರತಿಬಾರಿಯೂ ನೋಡುವ ಆ ಮುದ್ದು ಮುಖ. ಉದ್ದೇಶವಂತೂ ಇನ್ನೂ ಸ್ಪಷ್ಟವಾಗಿದೆ. ಅಂದರೆ ನಾನು ಆ ಪರಮಾತ್ಮನಲ್ಲಿ ಒಂದಾದರೆ ಅಂದರೆ ಆತನಲ್ಲಿ ಲೀನವಾದರೆ ಅಷ್ಟು ಸಾಕು. ಹಾಗಾಗಿ ನೀನೇನು ಹೇಳುವುದಿದ್ದರೂ ಕೇಳುವುದಿದ್ದರೂ ನನ್ನ ಬಳಿ ಈ ಎರಡು ಒಂದು ನಾನು – ಇನ್ನೊಂದು ಅವನು ಈ ಎರಡರ ಹೊರತು ನನಗೇನು ಕಾಣಿಸದು. ಕಾಣಿಸಿದರೂ ಬೇಕಾಗಿಲ್ಲ. ಹಾಗಾಗಿ ಹೇ ಅರ್ಜುನಾ! ಈ ವಿಚಾರದಿಂದ ವಿಮುಖವಾಗುವ ಯಾವ ಕಾರ್ಯಕ್ಕೂ ನನ್ನನ್ನು ಆಹ್ವಾನಿಸಬೇಡ. ನಾನು ಇಷ್ಟೆಲ್ಲ ಬಲ್ಲವನಾದುದರಿಂದ ಈ ಜಗದಲ್ಲಿ ಶ್ರೇಷ್ಠನು ಎಂದು ನಿನ್ನ ಮನದಲ್ಲಿ ಮೂಡಿರಬಹುದು. ಅಂತಹ ಗೌರವದಿಂದ ನಿನ್ನ ಅಣ್ಣ ದೀಕ್ಷಿತನಾಗಿ ಕೈಗೊಂಡಿರುವ ಯಾಗಕ್ಕೆ ನನ್ನನ್ನು ಕರೆದರೆ ಅಲ್ಲಿ ನಿನ್ನದ್ದಾಗಿರ ಬಹುದಾದ ಸತ್ಕಾರಗಳಿಂದ ನನ್ನ ಮನಸ್ಸು ಗರ್ವ ಪಡಬಹುದು ಅಥವಾ ಗುರಿಯಿಂದ ವಿಕೇಂದ್ರೀಕೃತವಾದರೂ ಆಗಬಹುದು. ಹಾಗಾಗಿ ನಾನು ಎಲ್ಲಿಗೂ ಬರಲಾರೆ, ಯಾವ ಅಪೇಕ್ಷೆಯನ್ನೂ ನನ್ನ ಮೇಲೆ ಹೊಂದಿಕೊಳ್ಳಬೇಡ. ನಿನ್ನ ಜೊತೆಯಲ್ಲಿ ಬಂದಿರುವ ಶ್ರೀಕೃಷ್ಣ ನಿನ್ನಂತೆಯೆ ಮನುಷ್ಯ ರೂಪದಲ್ಲಿ ಕಾಣಿಸಿದರೂ ಆತ ಅತಿಮಾನುಷನು ಆಗಿದ್ದಾನೆ. ಆತನು ಎಲ್ಲದಕ್ಕೂ ಮೂಲನೂ, ಕಾರಣನೂ, ಕರ್ತನೂ ಆಗಿದ್ದಾನೆ. ಅಂತಹ ಮಹಿಮಾನ್ವಿತನು ಇರುವಾಗ ನಿನಗ್ಯಾವ ವಿಷಯದಲ್ಲೂ ಗೊಂದಲ ಮೂಡಬಾರದು. ಆತನೊಬ್ಬನಿದ್ದರೆ ಎಲ್ಲವೂ ಸುಸೂತ್ರವಾಗಿ ಸಾಗಬಲ್ಲುದು” ಎಂದು ಸ್ಪಷ್ಟವಾಗಿ ಹೇಳುತ್ತಾ ತನ್ನ ಧೃಡ ನಿಲುವನ್ನು ಪ್ರಕಟಿಸಿದರು.
ಇಷ್ಟೆಲ್ಲಾ ಅರ್ಜುನನಿಗೆ ವಿವರಿಸಿದ ಬಕದಾಲ್ಭ್ಯರು ಅನತಿ ದೂರದಲ್ಲಿ ನಿಂತಿದ್ದ ಶ್ರೀಕೃಷ್ಣನನ್ನು ಎವೆಯಿಕ್ಕದೆ ನೋಡತೊಡಗಿದರು.
ಮುಂದುವರಿಯುವುದು…


















































































