
ಬೆಂಗಳೂರು: ರಾಜ್ಯದಲ್ಲಿ ಗುಟ್ಕಾ ಹಾಗೂ ಪಾನ್ ಮಸಾಲಾ ನಿಷೇಧಕ್ಕೆ ಸಂಬಂಧಿಸಿದ ಆದೇಶವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬ್ಯಾನ್ ಆದೇಶ ವಾಪಸ್ ಪಡೆಯಲಿದೆ ಎಂದು ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದರು. ಶಾಸಕರು ನೀಡುವ ಹೇಳಿಕೆಗಳ ಆಧಾರದಲ್ಲಿ ಸರ್ಕಾರದ ನಿರ್ಧಾರ ಬದಲಾಗುವುದಿಲ್ಲ ಎಂದರು.
2024ರಲ್ಲೇ ತಾವೇ ಗುಟ್ಕಾ ನಿಷೇಧಕ್ಕೆ ಕ್ರಮ ಕೈಗೊಂಡಿದ್ದಾಗಿ ಹೇಳಿದ ಖಾದರ್, ನಿಕೋಟಿನ್ ಮಿಶ್ರಿತ ಉತ್ಪನ್ನಗಳಿಗೆ ಅವಕಾಶ ನೀಡುವುದಿಲ್ಲ. ಈ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ಹೇಳಿದರು.
ಅಡಕೆ ಬೆಳೆಗಾರರಿಗೆ ಈ ನಿರ್ಧಾರದಿಂದ ಯಾವುದೇ ತೊಂದರೆ ಆಗುವುದಿಲ್ಲ. ಬದಲಾಗಿ ಅಡಕೆ ಬೆಳೆಗಾರರಿಗೆ ಇನ್ನಷ್ಟು ಪ್ರಯೋಜನವಾಗಲಿದೆ ಎಂದು ಸಚಿವರು ಹೇಳಿದರು.
ಪಾನ್ ಹಾಗೂ ಮಸಾಲಾದಲ್ಲಿ ನಿಕೋಟಿನ್ ಮಿಶ್ರಣ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕನಿಷ್ಠ ಮೂರು-ನಾಲ್ಕು ತಿಂಗಳು ಕಾದು ನೋಡಿ, ಅಡಕೆ ಬೆಳೆಗಾರರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.


















































































