ಭಾಗ – 615
ಭರತೇಶ ಶೆಟ್ಟಿ, ಎಕ್ಕಾರು

ದ್ವೀಪ ತಲುಪಿದ ಬಳಿಕ ಅರ್ಜುನ ನೋಡುತ್ತಿರುವಾಗ ಕುದುರೆಗಳು ಮತ್ತೂ ಮುಂದಕ್ಕೆ ಸಾಗಿ ಒಂದು ಕಡೆ ನಿಂತವು. ಹಿಂಬಾಲಿಸಿ ಕೃಷ್ಣಾರ್ಜುನರು ಮತ್ತು ಉಳಿದ ನಾಲ್ವರು ಬೆಂಬತ್ತಿ ಹೋದಾಗ ಅಲ್ಲಿ ಒಂದು ಮನುಷ್ಯಾಕೃತಿಯಂತೆ ಕಾಣಿಸಿತು. ಸರಿಯಾಗಿ ಗಮನಿಸಿದಾಗ ಅದು ಆಕೃತಿಯಲ್ಲ ಓರ್ವ ತಪಸ್ವಿ ಎಂದು ಸ್ಪಷ್ಟವಾಯಿತು. ಕೈಯಲ್ಲಿ ತರಗೆಲೆಗಳನ್ನು ಹಿಡಿದು ಕುಳಿತಿದ್ದಾರೆ. ರಾಶಿ ಬಿದ್ದ ಒಣದರಗುಗಳು ತಲೆಯವರೆಗೂ ರಾಶಿ ಬಿದ್ದಿವೆ. ಒಂದು ಕೈ ತಲೆಯ ಮೇಲಿನ ತರಗೆಲೆಗಳನ್ನು ಹಿಡಿದಿದೆ. ಎಲ್ಲರಿಗೂ ವಿಶೇಷವೆನಿಸಿತು. ಸಾಗರ ಮಧ್ಯದಲ್ಲಿ ಅನ್ನಾಹಾರಗಳಿಲ್ಲದೆ ಈ ರೀತಿ ತಪಸ್ಸನ್ನಾಚರಿಸುತ್ತಿರುವವರು ಅಸಾಮಾನ್ಯನು ಇರಬೇಕು ಎಂದು ತರ್ಕಿಸಿಕೊಂಡರು. ಸಂದೇಹವನ್ನು ಪರಿಹರಿಸಿಕೊಳ್ಳಲು ಮನಮಾಡಿದ ಅರ್ಜುನ ಆ ಋಷಿವರ್ಯನ ಬಳಿಗೆ ಹೋಗಿ ವಂದಿಸಿದನು. ಅತಿ ವಿನಯದಿಂದ ಪ್ರಾರ್ಥಿಸಿ ಎಚ್ಚರಿಸಿದನು. ಅಂತರ್ಮುಖಿಯಾಗಿದ್ದ ಮುನಿವರ ಬಹಿರ್ಮುಖನಾಗಿ ಕಣ್ತೆರೆದನು. “ಹೋ! ಪುರುಷೋತ್ತಮನು ತನ್ನ ಜೊತೆ ಕ್ಷಣಿಕ ಜೀವನ ಜೀವಿಸುವ ಐವರು ಮನುಷ್ಯರೊಡನೆ ಬಂದಿದ್ದಾನೆ. ನಿರ್ಜನ ಪ್ರದೇಶವಾದ ಇಲ್ಲಿಗೆ ಮನುಷ್ಯರು ಬಂದ ಮೇಲೆ ನನಗಿನ್ನು ಇಲ್ಲಿರಲು ಅವಕಾಶವಿಲ್ಲ. ಇನ್ನು ಮುಂದೆ ನಾನಿಲ್ಲಿ ಸುಖವಾಗಿರಲು ಸಾಧ್ಯವಿಲ್ಲ. ನನಗುಳಿದಿರುವ ಆಯುಷ್ಯದಲ್ಲಿ ಮುಂದೆ ನಾನೇನು ಮಾಡಲಿ” ಎಂಬ ವ್ಯಥೆ ವ್ಯಕ್ತ ಪಡಿಸಿದನು.
ಮುನಿವರ್ಯ ಕಣ್ತೆರೆಯುವಾಗ ಹೀಗೆ ನುಡಿದುದನ್ನು ಕೇಳಿ ಅರ್ಜುನ ವಿಸ್ಮಿತನಾದನು. ಋಷಿಯ ಸ್ಥಿತಿಯನ್ನು ಕೂಲಂಕುಷವಾಗಿ ಪರಿಶೀಲಿಸಿ “ಮಹಾತ್ಮರೇ, ನಿಮ್ಮ ಮೊಣಕಾಲಿನ ಸಂಧಿನಲ್ಲಿ ಮುತ್ತುಗದ ಮರ ಬೆಳೆದಿದೆ. ಆ ಮರದಲ್ಲಿ ಹಕ್ಕಿಗಳು ಗೂಡು ಕಟ್ಟಿ ವಾಸ ಮಾಡುತ್ತಿವೆ. ಮಾತ್ರವಲ್ಲ ನಿಮ್ಮ ಸುತ್ತ ಹುತ್ತಗಳು ಬೆಳೆದಿವೆ. ಅದರಲ್ಲಿ ಹಲವು ಹಾವುಗಳು ವಾಸವಾಗಿವೆ. ನಿಮ್ಮ ಕೈ, ತೋಳ ಸಂಧಿ, ಶರೀರದಲ್ಲೆಲ್ಲಾ ಹಾವುಗಳು ಹರಿದಾಡುತ್ತಿವೆ. ನಿಮ್ಮ ಬಳಿ ಕಾಡುಮೃಗಗಳೂ ಗೋಚರಿಸುತ್ತಿವೆ. ಅವುಗಳೂ ನಿಮ್ಮ ಶರೀರಕ್ಕೆ ಮೈಯುಜ್ಜಿ ತುರಿಕೆ ತೀರಿಸಿಕೊಳ್ಳುತ್ತಿವೆ. ನಿಮ್ಮನ್ನು ನೋಡಿದರೆ ಇವುಗಳೆಲ್ಲದರ ಮಧ್ಯೆ ಸಿಲುಕಿ ಹಿಂಸೆ ಅನುಭವಿಸುತ್ತಾ ಬಹಳಷ್ಟು ವರ್ಷ ಹೀಗೆಯೆ ಕಳೆದಂತೆ ಕಾಣಿಸುತ್ತಿದೆ. ನಿಮಗೂ ಒಂದು ಮನೆ ಅಥವಾ ಆಶ್ರಮ ನಿರ್ಮಿಸಿ ವಾಸ ಮಾಡಬಹುದಲ್ಲವೆ? ಅದರ ಬದಲಾಗಿ ಒಣಗಿದ ತರಗೆಲೆಯೊಂದು ನಿಮ್ಮ ತಲೆಯ ಮೇಲಿದೆ. ಅದು ಉದುರಿ ಬಿದ್ದುದಲ್ಲ. ನೀವು ಅದನ್ನು ತಲೆಯ ಮೇಲೆ ಇರಿಸಿ ಹಿಡಿದು ಕುಳಿತು ಕೊಂಡಿದ್ದೀರಿ. ಮತ್ತೊಂದು ಕೈಯಲ್ಲೂ ಬರೇ ಒಣ ತರಗೆಲೆಗಳನ್ನಷ್ಟೆ ಧರಿಸಿದ್ದೀರಿ. ನಿಮ್ಮ ಸ್ಥಿತಿ ಯಾಕೆ ಹೀಗಿದೆ? ನೀವ್ಯಾಕೆ ಹೀಗಾಗಿರುವಿರಿ?” ಎಂದು ಪ್ರಶ್ನೆ ಮಾಡಿದನು.
ಅರ್ಜುನನ ಪ್ರಶ್ನೆಗಳನ್ನು ಕೇಳಿದ ಆ ಮಹಾತ್ಮನಿಗೆ ನಗು ಬಂತು. ನಸು ನಗುತ್ತಾ “ಮನೆ ಅಥವಾ ಆಶ್ರಮವೆ? ಜೀವನವನ್ನು ಆ ಗೂಡೊಳಗೆ ಬಂಧಿಸಿ ಬದುಕಬೇಕೆ? ಮನೆ ಬೇಕೆಂದು ಆಸೆ ಪಡುವ ಮನಸ್ಸು ಅಷ್ಟಕ್ಕೆ ಸುಮ್ಮನುಳಿಯಬಲ್ಲುದೆ? ಮಡದಿ ಬೇಕೆಂದು ಬಯಸದಿರಲು ಸಾಧ್ಯವೆ? ಮಡದಿ ಸಿಕ್ಕರೆ ಸಂಸಾರದಲ್ಲಿ ಮಕ್ಕಳಾಗದೆ ಇರಲು ಹೇಗೆ ಸಾಧ್ಯ. ಇದೆಲ್ಲಾ ಆದರೆ ಆಗ ಸಂಸಾರ ಬಂಧನವಾಗುತ್ತದೆ. ಇದು ದುಃಖಕ್ಕೆ ಈಡಾಗುವ ಆರಂಭದ ಹೆಜ್ಜೆ ಎಂದು ತಿಳಿದಾಗಿದೆ. ಯಾಕೆಂದರೆ ಹೆಣ್ಣಿಗಾಗಿ ಅಥವಾ ಹೆಣ್ಣಿನಿಂದ ಆರಂಭಗೊಂಡು ಬೆಂಬತ್ತಿ ಬರುವ ಸಂಸಾರದ ಆಸೆಗಳನ್ನು ಈಡೇರಿಸುವಲ್ಲಿ ಕೃತ್ಯ ಅಕೃತ್ಯಗಳ ವ್ಯತ್ಯಾಸ ಮರೆತು ಹೋಗುತ್ತದೆ. ಆಸೆ ಬಲಗೊಳ್ಳುತ್ತಾ ಅದರ ಪೋಷಣೆಗೆ ಮುಂದಾಗುವ ಪ್ರೇರಣೆ ಸಿಗುತ್ತಾ ಹೋದಾಗ ಪಾಪ ಸಂಚಯಗೊಳ್ಳಲು ತೊಡಗುತ್ತದೆ. ಬಯಸಿದ್ದು ಸಿಗದೆ ಹೋದಾಗ ಅದು ದುಃಖವಾಗಿ ಹಗೆ, ಹಠ, ದ್ವೇಷಾದಿ ಭಾವಗಳ ಉತ್ಪತ್ತಿಯಾಗಿಸುತ್ತದೆ. ಹೀಗಾದಾಗ ನೆಮ್ಮದಿ ಸಿಗಲು ಹೇಗೆ ಸಾಧ್ಯ? ಆಸೆಗಳು ಬೆಳೆಯುತ್ತಾ ಅವುಗಳು ಕನಸುಗಳಾಗುತ್ತವೆ. ಅದನ್ನು ನನಸಾಗಿಸುವ ಹೋರಾಟದಲ್ಲಿ ಮತ್ತಷ್ಟು ಕುಕೃತ್ಯಗಳನ್ನು ಮಾಡಬೇಕಾಗುತ್ತದೆ. ಅಧರ್ಮಗಳೂ ಜೊತೆಯಲ್ಲಿ ಆಚರಿಸಲ್ಪಡುತ್ತವೆ. ಹೀಗಾಗುವಲ್ಲಿ ನಮ್ಮ ತಪ್ಪುಗಳು, ಪಾಪ ಕೃತ್ಯಗಳು ನಮಗೆ ದೋಷವೆಂದು ಅರಿವಾಗುವುದಿಲ್ಲ. ಬದಲಾಗಿ ಅದು ಸರಿ ಅಥವಾ ಅನಿವಾರ್ಯ, ಬದುಕಬೇಕಾದರೆ ಹಾಗೆ ಮಾಡಲೇಬೇಕು, ಎಲ್ಲರೂ ಹೀಗಾಗುತ್ತಾ ಸ್ವಾರ್ಥಿಗಳಾಗಿ ಬದುಕುವುದು ಎಂಬ ವಿಚಾರ ಬಲಗೊಳ್ಳುತ್ತದೆ. ಪರಿಣಾಮ ದಿನೇ ದಿನೇ ಪಾಪ ಸಂಚಯವಾಗುತ್ತಾ ಮೋಕ್ಷಗಾಮಿಯಾದ ನನಗೆ ಮೋಕ್ಷ ಸಿಗುವುದು ಅಸಾಧ್ಯವಾಗುತ್ತದೆ. ಜನನ ಮರಣಗಳ ಈ ಜೀವನ ಚಕ್ರದಲ್ಲಿ ಸಿಲುಕಿ ಕರ್ಮಾನುಸಾರ ಮತ್ತೆ ಹುಟ್ಟುವುದು, ಸಾಯುವುದು ನಿರಂತರವಾಗುತ್ತದೆ. ಹಾಗಾಗಿ ನನಗೆ ಮನೆಯ ಆಸೆಯಾಗಲಿ, ದೋಷ, ಪಾಪ ಕೃತ್ಯಗಳಿಗೆ ಪೂರಕಳಾಗುವ ಸ್ತ್ರೀಯ ಬಯಕೆಯಾಗಲಿ ಇಲ್ಲವೇ ಇಲ್ಲ. ಇಷ್ಟಕ್ಕೆ ನಿಲ್ಲದ ಸಂಸಾರದ ಆಸೆ ತನಗಾದ ಮೇಲೆ ಮಕ್ಕಳಿಗಾಗಿ ಕೂಡಿಡಬೇಕು, ಮೊಮ್ಮಕ್ಕಳಿಗೂ ಸ್ಥಿರವಾದ ಆಸ್ತಿ ಮಾಡಿಡಬೇಕು ಎಂಬ ಮಹದಾಸೆಯನ್ನು ಬೆಳೆಸುತ್ತದೆ. ಒಂದೊಮ್ಮೆಗೆ ಬಯಸಿದ್ದಷ್ಟನ್ನು ಗಳಿಸಲು ಶಕ್ತನಾದರೂ ಆಗಲೂ ನೆಮ್ಮದಿ ಸಿಗದು. ಗಳಿಸಿದುದರ ಸಂರಕ್ಷಣೆ ಹೇಗೆ, ಪರರ ಪಾಲಾಗದಂತೆ ಕಾಪಾಡಿ ಉಳಿಸುವುದು ಹೇಗೆ? ಎಂಬ ಭಯ, ಸ್ವಾರ್ಥ ಹೆಮ್ಮರವಾಗುತ್ತಾ ಕಪಟ, ವಂಚನೆಗಳಿಗೆ ಪ್ರೇರಣೆ ನೀಡುತ್ತಾ ಆಯುಷ್ಯ ಪೂರ್ತಿ ಕಳೆದು ಕೊನೆಗೆ ಸತ್ತು ಹೋಗುತ್ತೇವೆ. ಪಾಪ ಅಧಿಕವಾಗಿಸಿಕೊಂಡು ಸತ್ತರೆ ಮೋಕ್ಷ ಸಾಧ್ಯವೇ? ಮತ್ತೆ ಹುಟ್ಟಿ ಬರಲೇ ಬೇಕಲ್ಲ. ಇಂತಹ ಪಾಪ ನಿರ್ದೇಶಿತ ಮಾರ್ಗವಾದ ಮನೆ, ಮಡದಿ, ಸಂಸಾರ, ಸಂಪತ್ತು ಇವುಗಳೆಲ್ಲದರ ಆಸೆಯ ಪಾಶಕ್ಕೆ ಸಿಲುಕಿ ಈ ಜಗತ್ತು ಕೆಡುತ್ತಿದೆ ಎಂಬ ಸತ್ಯ ಅರಿತವನಿದ್ದೇನೆ. ಈ ಜಗತ್ತಿನಲ್ಲಿ ಪುಣ್ಯ ಕ್ಷೀಣವಾಗಿ ಪಾಪ ಸಂಚಯ ಅಧಿಕವಾಗಲು ಮೂಲ ಕಾರಣ ಮೂರು ವಿಷಯಾಸಕ್ತಿಗಳು. “ಹೆಣ್ಣು, ಹೊನ್ನು ಮತ್ತು ಮಣ್ಣು”. ಇವುಗಳ ಸಂಪಾದನೆಗಾಗಿ ರಕ್ತಪಾತ, ಕೊಲೆ, ಸುಲಿಗೆ, ಮೋಸ, ವಂಚನೆ, ದ್ರೋಹ, ಮತ್ಸರ, ಹಗೆ, ದ್ವೇಷ, ಪ್ರತಿಕಾರಗಳು ಹುಟ್ಟುವುದು. ಇದನ್ನು ಸುಖಗಳೆಂದು ಮೂರ್ಖತನದಿಂದ ನಂಬಿ ತನ್ನದಾಗಿಸುವ ಭ್ರಮೆಗೊಳಗಾದರೆ ಕೇವಲ ಈ ಮರ್ತ್ಯಲೋಕದ ಕ್ಷಣಿಕ ಜೀವನವಷ್ಟೇ ಗಣನೆಯೊಳಗೆ ಬರುತ್ತದೆ. ಜೀವರುಗಳ ವ್ಯಾಪ್ತಿಯಲ್ಲಷ್ಟೆ ವ್ಯವಹಾರ ಸೀಮಿತಗೊಳ್ಳುತ್ತದೆ. ದೇವರು, ದೇವರಾಚೆಗಿನ ಸತ್ಯ, ಸತ್ವಗಳ ಬಗ್ಗೆ ಕನಿಷ್ಠ ಕಲ್ಪನೆಯೂ ಇಲ್ಲದಾಗಿ ಹೋಗುತ್ತದೆ. ಆಗ ಭ್ರಮಾತ್ಮಕವಾದ ಕಾಮನೆಗಳೊಳಗೆ ಸಿಲುಕಿ ಮನುಷ್ಯ ಪಾಪ ಕೂಪದಲ್ಲಿ ಬೀಳುತ್ತಾ ಅಧೋಗತಿಗೆ ಇಳಿದು ಬಿಡುತ್ತಾನೆ. ಗಳಿಸಿದ ಮಣ್ಣು, ಹೊನ್ನು ತನ್ನವಳಾದ ಹೆಣ್ಣು ಮತ್ತು ಅವಳಿಂದ ಜನಿಸಿದ ಸಂಸಾರಕ್ಕಾಗಿ ವಿನಿಯೋಗವಾಗಿ ನಷ್ಟಗೊಳ್ಳತೊಡಗುತ್ತದೆ. ಈ ಮಧ್ಯೆ ಬಯಸಿದ್ದು ಸಿಕ್ಕರೆ ಅಥವಾ ಸಿಗದಿದ್ದರೆ ಉದ್ಭವಿಸುವ ಅಶಾಂತಿ, ಅಸ್ಥಿರತೆ, ಭಯಗಳು ಮನಶಾಂತಿಯನ್ನು, ಸಂತೋಷವನ್ನು ಬಯಸಿ ವ್ಯಸನಗಳ ದಾಸರನ್ನಾಗಿಸುತ್ತದೆ. ತತ್ಪರಿಣಾಮ ಆತ್ಮ ವಾಸಿಸಬೇಕಾದ ಈ ದೇಹ ರೋಗದ ಗೂಡಾಗಿ ನರಕಯಾತನೆ ಅನುಭವಿಸಬೇಕಾಗುತ್ತದೆ. ನನ್ನ ಸಂಸಾರ, ನನ್ನ ಮಡದಿ, ನನ್ನ ಮಕ್ಕಳು, ನನ್ನ ಮೊಮ್ಮಕ್ಕಳು ಎಂಬ ಸ್ವಾರ್ಥ ಜೀವನದಲ್ಲಿ ಮನೆ, ವಿತ್ತ, ವಸ್ತು, ವಾಹನ, ಒಡವೆ ಮುಂತಾದ ಹತ್ತು ಹಲವು ಬೇಕುಗಳ ಹಿಂದೆ ಓಡುತ್ತಾ ಆಯುಷ್ಯ ಸವೆದು ಹೋಗಿ ಬಿಡುತ್ತದೆ. ಈ ಬೇಕುಗಳ ಹಿಂದೆ ಓಡುವ ಧಾವಂತದಲ್ಲಿ ವೈಷಮ್ಯ ಬೆಳೆಯುತ್ತಾ ಜಗಳ, ಗಲಾಟೆ, ಯುದ್ದ, ಸಂಗ್ರಾಮಗಳು ನಡೆದು ಹೋಗಿ ಸರ್ವನಾಶವಾಗುವುದೂ ಇದೆ. ಇವೆಲ್ಲಾ ಹೆಣಗಾಟಗಳ, ಹೋರಾಟಗಳ ಅಂತಿಮ ಪರಿಣಾಮ ಬರೇ ಶೂನ್ಯ. ಯಾಕೆಂದರೆ ಇಹದಲ್ಲಿ ಸಾಧಿಸಿದೆ ಎಂದು ಹೇಳಿಕೊಳ್ಳುವ ಇದ್ಯಾವುದನ್ನೂ ಅಂತ್ಯದಲ್ಲಿ ಒಯ್ಯಲಾಗದು. ಇಲ್ಲಿ ತನ್ನದಾಗಿಸಿಕೊಂಡದ್ದು ಏನು ಇದ್ದರೂ ಒಂದೋ ಇಲ್ಲೇ ನಾಶವಾಗಿ, ನಷ್ಟವಾಗಿ ಅಥವಾ ಬಿಟ್ಟು ಹೋಗುವಂತಹುಗಳು ಹೊರತು ಯಾವುದೂ ಜೊತೆಗೆ ಒಯ್ಯುವಂತಹುಗಳಲ್ಲ. ಅಂತಹ ಕ್ಷಣಿಕ ಸುಖ ನೀಡುವ, ಜೊತೆಗೆ ಅಗಾಧ ಆತಂಕ ನೀಡುವ, ಮನಶಾಂತಿ ಕದಡುವ ವಿಷಯಗಳಲ್ಲಿ ನನಗೆ ಆಸಕ್ತಿಯಿಲ್ಲ. ನನಗೆ ನೀನು ಕೇಳುತ್ತಿರುವ ಅಂತಹ ಸಾವಿರ ಬೇಕುಗಳು ಬೇಡವಾದ ಸಂಗತಿಗಳಾಗಿವೆ. ಆಸೆ ಮತ್ತು ದುಃಖಕ್ಕೆ ಕಾರಣವಾಗುವ ಹೆಣ್ಣು ಈ ಬೇಕುಗಳ ಆರಂಭಕ್ಕೆ ಕಾರಣ. ಅಲ್ಲಿಂದ ಆ ಬೇಕುಗಳು ಬೆಳೆಯುತ್ತಾ ಮಣ್ಣು ಹೊನ್ನುಗಳ ವರೆಗೂ ಸಾಗುವುದು ಕೊನೆಗೆ ಬರಿಗೈಯಲ್ಲಿ ಹೋಗುವುದು ಎಂದು ನಾನು ಅರಿತು ಕೊಂಡಿರುವ ಮಹತ್ತರ ಸತ್ಯ. ಸತ್ಯ ಏನೆಂದು ಗೊತ್ತಾದ ಮೇಲೆ ನನಗೆ ಅದ್ಯಾವುದೂ ಬೇಡ. ಈ ಇಹಲೋಕದ ಜೀವನ ತಾತ್ಕಾಲಿಕ. ನಾನು ನನ್ನದು ಎನ್ನುವ ಪ್ರತಿಷ್ಠೆ ಅಹಂಗಳು ಮೌಲ್ಯರಹಿತವಾದವುಗಳು ಎಂದು ಅರ್ಥವಾಗಿದೆ. ಅದರ ಸಂಕೇತವಾಗಿ ಶೀಘ್ರವಾಗಿ ನಾಶಹೊಂದುವ ತರಗೆಲೆಯನ್ನು ನನ್ನ ತಲೆಯ ಮೇಲೆ ಇರಿಸಿದ್ದೇನೆ. ಈ ಎಲ್ಲಾಆಸೆ ಪ್ರತಿಷ್ಠೆಗಳ ಕಿರೀಟ ನನ್ನ ಪಾಲಿಗೆ ಒಣಗಿ ಉದುರಿ ನಷ್ಟಗೊಂಡಿರುವ ತರಗೆಲೆಗೆ ಸಮ ಎಂಬ ಭಾವ ನನ್ನದು ಎಂದರು.
ಅರ್ಜುನನ ಮನಸ್ಸು ಮತ್ತಷ್ಟು ಆಳಕ್ಕಿಳಿಯಿತು. ಈಗ ಆಚರಿಸುತ್ತಿರುವ ಅಶ್ವಮೇಧ, ಅದಕ್ಕೆ ಕಾರಣವಾದ ರಕ್ತಪಾತ, ಬಂಧುಹತ್ಯೆಯ ಮಹಾಭಾರತ ಯುದ್ದ, ಅದಕ್ಕೂ ಕಾರಣವಾದ ದ್ಯೂತ, ರೋಷಕ್ಕೆ ಕಾರಣವಾದ ಹೆಣ್ಣು ದ್ರೌಪದಿಯ ಮಾನಭಂಗ ಯತ್ನ, ದ್ಯೂತಕ್ಕೆ ಕಾರಣವಾದ ರಾಜಸೂಯದ ಸಂಪಾದನೆ, ಸಂಪಾದನೆಯಿಂದ ಕೌರವರಲ್ಲಿ ಉತ್ಪನ್ನವಾಗಿದ್ದ ಮತ್ಸರ… ಹೀಗೆ ಎಲ್ಲವೂ ಇವರು ಹೇಳಿದ ವಿಷಯ ಸಂಬಂಧವಾಗಿಯೆ ಇದೆಯಲ್ಲಾ! ಹಾಗಾದರೆ ಸುಕೃತಗಳ್ಯಾವುದಿರಬಹುದು ಎಂಬ ಜಿಜ್ಞಾಸೆ ಮೂಡಿತು. “ಮಹಾತ್ಮರೇ! ಹಾಗಿದ್ದರೆ ನೀವು ಈ ರೀತಿ ಇರಬೇಕಾದರೆ ಏನೋ ಸಾಧಿಸಲು ಬಯಸಿದ್ದೀರಿ ಎಂಬುವುದು ತರ್ಕಕ್ಕೆ ನಿಲುಕುವ ವಿಚಾರ. ನಿಮ್ಮ ಗುರಿ ಯಾವುದು? ನಿಮ್ಮ ಈ ಸಾಧನೆಯ ಹಿಂದಿರುವ ಆಶಯವೇನು? ತಿಳಿಸಬಹುದೆ?” ಎಂದು ಮತ್ತೆ ಪ್ರಶ್ನೆ ಮಾಡಿದನು.
ಮುಂದುವರಿಯುವುದು…


















































































