
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ, ಕಾರ್ಕಳದಲ್ಲಿ ಆಗಸ್ಟ್ 15ರಂದು 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತದ ಖ್ಯಾತ ನಿವೃತ್ತ ರಾಕೆಟ್ ತಂತ್ರಜ್ಞಾನ ತಜ್ಞರು ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಮಾಜಿ ಉಪನಿರ್ದೇಶಕರಾದ ಶ್ರೀ ಇ. ಜನಾರ್ಧನ ರಾವ್ ಅವರು ಆಗಮಿಸಿ, ಧ್ವಜಾರೋಹಣ ನೆರವೇರಿಸಿದರು. ಬಳಿಕ ಅವರು ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ, ಬಾಹ್ಯಾಕಾಶ ಸಂಶೋಧನೆ ಹಾಗೂ ಪರಮಾಣು ಶಕ್ತಿಯ ಮಹತ್ವವನ್ನು ವಿವರಿಸಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳು, ಭಾಷಣ, ನೃತ್ಯ ಹಾಗೂ ದೇಶಭಕ್ತರ ವೇಷಭೂಷಣ ಧರಿಸಿ ವಿವಿಧ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಮೆರುಗು ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಶ್ರೀಯುತ ಡಾ. ಪ್ರಶಾಂತ್ ಹೆಗ್ಡೆ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ವಿನಾಯಕ ಜಿ. ಕುಡ್ವ ಹಾಗೂ ಶ್ರೀಯುತ ಕೀರ್ತನ್ ಶೆಣೈ, ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್. ಕಾಮತ್, ಶಿಕ್ಷಕ-ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲಾ ನಾಯಕ ತೇಜಸ್ ವಿ. ಶೇರಿಗಾರ್ ನಿರೂಪಿಸಿದರು. ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಭಟ್ ಸ್ವಾಗತಿಸಿದರು ಹಾಗೂ ಭೂಷಯ್ ಪೈ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.













































































































