ಭಾಗ – 610
ಭರತೇಶ ಶೆಟ್ಟಿ, ಎಕ್ಕಾರು

ದುಷ್ಟಬುದ್ದಿ ಹಾಗು ಮದನ ಮೃತ ಶರೀರಗಳು ಅಕ್ಕಪಕ್ಕದಲ್ಲಿ ರಕ್ತದೋಕುಳಿಯಲ್ಲಿ ಬಿದ್ದಿವೆ. ಕಾಕತಾಳೀಯವೋ ಏನೋ ಈ ದುರಂತ ನಡೆದು ಸ್ವಲ್ಪ ಹೊತ್ತು ಕಳೆದಾಗ ಸಾಧಕನೋರ್ವ ದೇವಸ್ಥಾನದಲ್ಲಿ ಕುಳಿತು ಧ್ಯಾನ ಮಾಡಲೆಂದು ಅಲ್ಲಿಗೆ ಬಂದನು. ಎರಡು ಹೆಣಗಳು ಬಿದ್ದಿರುವುದನ್ನು ನೋಡಿದನು. ತಕ್ಷಣ ಹೊರಬಂದು ಕುಂತಳದ ಅರಸನಿಗೆ ಈ ವಿಚಾರ ತಿಳಿಸಲು ಕಾಣ ಸಿಕ್ಕವರಲ್ಲಿ ಹೇಳಿ ಕಳುಹಿಸಿದನು.
ಓಡಿ ಬಂದ ಪ್ರಜೆಯೋರ್ವ “ಸಾಧಕರೋರ್ವರು ದೇವಿಯ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಎರಡು ಹೆಣಗಳು ಕಾಣ ಸಿಕ್ಕಿದೆಯಂತೆ. ಈ ಸುದ್ದಿಯನ್ನು ಅರಸರಿಗೆ ತಿಳಿಸಿ ಬಾ ಎಂದು ನನ್ನನ್ನು ಕಳುಹಿಸಿದರು” ಎಂದು ಭಯಭೀತನಾಗಿ ತಿಳಿಸಿದ. ಮದುವೆಯ ಸಂಭ್ರಮದಲ್ಲಿದ್ದ ಕುಂತಳದ ಅರಮನೆಯಲ್ಲಿ ಈ ವಾರ್ತೆ ಕ್ಷಣ ಹೊತ್ತಿನ ಮೌನವನ್ನು ಆವರಿಸಿ ಬಿಟ್ಟಿತು. ಆಗ ಚಂದ್ರಹಾಸನಿಗೆ ದೇವಸ್ಥಾನಕ್ಕೆ ತೆರಳಿದ್ದ ಮದನನ ನೆನಪಾಯಿತು. ಯಾರೇ ಆಗಿರಲಿ ಪ್ರಜೆಗಳು ದೂರು ತಂದಾಗ ತಕ್ಷಣ ಸ್ಪಂದಿಸಬೇಕಾದುದು ರಾಜನ ಕರ್ತವ್ಯ. ಹಾಗಾಗಿ ಹೋಗಿ ನೋಡಿ ಬರಬೇಕೆಂದು ತೀರ್ಮಾನಿಸಿದ. ಅರಸ ಕುಂತಳೇಶನ ಅನುಮತಿ ಪಡೆದು ರಾಜ ಪುರೋಹಿತರು, ಹಾಗು ಕೆಲ ಪರಿಚಾರಕರ ಜೊತೆಯಾಗಿ ದೇವಸ್ಥಾನಕ್ಕೆ ಬಂದನು.
ದೇವಳದ ಒಳ ಹೊಕ್ಕು ನೋಡಿದರೆ ಅಲ್ಲಿ ಸತ್ತು ಬಿದ್ದಿರುವುದು ಬೇರಾರು ಅಲ್ಲ ದೇಶದ ಮಂತ್ರಿ ಹಾಗು ಮಂತ್ರಿಕುಮಾರ. ತನ್ನ ಮಾವ ಮತ್ತು ಭಾವ! “ಅರೆ, ಇದೇನು ದುರಂತ ಘಟಿಸಿದೆ? ಅದೂ ಸರ್ವ ರಕ್ಷಕಿಯಾದ ದೇವಿಯ ಮುಂದೆ! ಹೀಗಾಗಬಾರದಿತ್ತು” ಎಂದು ಹೇಳಿ, ರಾಜ ಪುರೋಹಿತರ ಅಪ್ಪಣೆ ಪಡೆದು ರಾತ್ರಿಯ ಹೊತ್ತಲ್ಲೇ ದೇವಿಯ ಗರ್ಭಗುಡಿಯ ಬಾಗಿಲು ತೆರೆಸಿದನು. ದೀಪಗಳನ್ನು ಬೆಳಗಿಸಿದನು. ಕರ ಜೋಡಿಸಿ ಕುಳಿತು ಅನನ್ಯ ಭಕ್ತಿಯಿಂದ ಶ್ರೀದೇವಿಯ ಸ್ತೋತ್ರ ಮಾಡಿದನು. ಭಕ್ತಿಯಿಂದ ಭಜಿಸಿದನು. ನಂತರ “ಅಮ್ಮಾ ತಾಯೇ ನಾವು ನಿನ್ನ ಮಕ್ಕಳು. ಅರಿಯದೆ ಏನಾದರು ಅಪರಾಧವಾಗಿದ್ದರೆ ಕ್ಷಮಿಸಬೇಕಮ್ಮಾ… ನಿನ್ನ ಸ್ಥಾನದಲ್ಲಿ ಈ ರೀತಿಯ ನರಮೇಧವಾಗಬಾರದು. ಅದು ರಾಜ್ಯಕ್ಕೂ ಶ್ರೇಯಸ್ಕರವಲ್ಲ. ನೀನೇದರು ಮುನಿದಿರುವೆಯಾ? ನಿನ್ನ ಮುನಿಸಿಗೆ ಇದಿರಾಗಿ ನಾವು ನಿಂತು ಬದುಕಲಾದೀತೇ ತಾಯೇ? ಅಥವಾ ನಿನಗೆ ನರಬಲಿಯೇ ಬೇಕೆಂಬ ಆಸೆಯಾಗಿದೆಯೇ? ಅದಕ್ಕಾಗಿ ಈ ಎರಡು ಜೀವಗಳ ಪ್ರಾಣ ಹೀರಿದೆಯಾ? ಅಮ್ಮಾ ಅರಿತು ಅನ್ಯಾಯ ಮಾಡಿದವನಲ್ಲ ನಾನು. ಏನಾದರೂ ತಿಳಿಯದೆ ಪ್ರಮಾದಗಳಾಗಿದ್ದರೆ ಅದಕ್ಕೂ ಕ್ಷಮೆ ಬೇಡುತ್ತೇನೆ. ನಿನಗೆ ನರಬಲಿ ಪಡೆಯುವ ಮನಸ್ಸಾಗಿದ್ದರೆ, ಇದೋ ನನ್ನ ಪ್ರಾಣವನ್ನೂ ನಿನ್ನ ಪಾದಾರವಿಂದಗಳಿಗೆ ಸಮರ್ಪಿಸುವೆ. ಇನ್ನು ಮುಂದಕ್ಕೆ ಪ್ರಜಾ ಪರಿವಾರಕ್ಕೆ ಭಯಪ್ರದಳಾಗದೆ ಅಭಯಪ್ರದಳಾಗು. ನನ್ನ ಪ್ರಾಣಬಲಿ ಸ್ವೀಕರಿಸಿ ಈ ದೇಶಕ್ಕೆ ಅನುಗ್ರಹಕಾರಕಳಾಗು. ಈ ರಕ್ತತರ್ಪಣ ನನ್ನ ಬಲಿದಾನದೊಂದಿಗೆ ಕೊನೆಯಾಗಯವಂತಾಗಲಿ ಎಂದು ನಿನ್ನಲ್ಲಿ ಬೇಡಿಕೊಳ್ಳುತ್ತೇನೆ. ಇದೋ ನನ್ನ ಅಸುವನ್ನು ಹೀರಿ ಪೂರ್ಣತೃಪ್ತಳಾಗು” ಎಂದು ಹೇಳಿ ಅಲ್ಲೇ ರಕ್ತಸಿಕ್ತವಾಗಿ ಬಿದ್ದಿದ್ದ ಖಡ್ಗವನ್ನೆತ್ತಿ ತನ್ನ ಶಿರಚ್ಛೇದನ ಗೊಳಿಸಲು ಬೀಸುತ್ತಿದ್ದಂತೆ “ತಡೆ ಮಗನೇ, ಅವಸರ ಪಡದಿರು” ಎಂಬ ಅಶರೀರವಾಣಿ ಕೇಳಿಸಿತು. ಚಂದ್ರಹಾಸನ ಕೈಯಲ್ಲಿದ್ದ ಖಡ್ಗ ಜಾರಿತೋ, ದೇವಿಯ ಮಾಯಾ ಶಕ್ತಿ ಸೆಳೆಯಿತೋ! ಅಂತೂ ಕೆಳಗೆ ಬಿತ್ತು. “ಅಮ್ಮಾ ನಿನ್ನ ಕಂದನ ಭಕ್ತಿಗೆ ಒಲಿದೆಯಾ ತಾಯೇ! ಧನ್ಯನಾದೆನಮ್ಮಾ, ಜನ್ಮ ಸಾರ್ಥಕವಾಯಿತು. ಜೀವನ ಪಾವನವಾಯಿತು. ಆದರೆ ಇಲ್ಲಿ ಸತ್ತು ಬಿದ್ದಿರುವವರು ಬೇರಾರು ಅಲ್ಲ ಈ ರಾಜ್ಯದ ಮಂತ್ರಿವರ್ಯ, ನನಗೆ ಕನ್ಯಾದಾನ ಮಾಡಿದ ಕನ್ಯಾಪಿತ. ಮತ್ತೋರ್ವ ನನಗೆ ಪಾಣಿಗ್ರಹಣ ಮಾಡಿಸಿದವನು, ನನ್ನ ಸತಿಯ ಅಗ್ರಜ. ಇವರೀರ್ವರ ಪ್ರಾಣ ನನಗೂ ಈ ರಾಜ್ಯಕ್ಕೂ ಅಮೂಲ್ಯವಾಗಿದೆ. ಅವರಿಂದ ಏನಾದರು ಅಪರಾಧವಾಗಿದ್ದರೆ ಕ್ಷಮಿಸಿ ಮನ್ನಿಸಬೇಕು ತಾಯೇ. ನಿನ್ನ ಕರುಣಾದೃಷ್ಟಿಯಿಂದ ಅವರೀರ್ವರನ್ನು ಬದುಕಿಸಬೇಕು ಜಗನ್ಮಾತೇ. ಕೊಡುವವಳೂ ನೀನೇ, ಪಡೆಯುವವಳೂ ನೀನೇ. ಭಕ್ತನ ಭಕ್ತಿಯ ಶರಣಾಗತ ಬೇಡಿಕೆಯನ್ನು ಅನುಗ್ರಹಿಸು ಜಗದೀಶ್ವರೀ” ಎಂದು ಪರಿ ಪರಿಯಾಗಿ ಬೇಡುತ್ತಾ ಮತ್ತೆ ಬಹುಭಕ್ತಿಯಿಂದ ಸ್ತುತಿ ಮಾಡುತ್ತಾ ಕೈ ಮುಗಿದು ಕುಳಿತನು.
ಆಶ್ಚರ್ಯವೆಂಬಂತೆ ದುಷ್ಟಬುದ್ದಿಯೂ, ಮದನನೂ ಏನೂ ಆಗಿಲ್ಲವೆಂಬಂತೆ, ನಿದ್ದೆಯಿಂದ ಎದ್ದವರಂತೆ ಎಚ್ಚರಗೊಂಡು ಎದ್ದು ಕುಳಿತರು. ನಿಂತು ಬಳಿ ಬಂದರು. ಎಲ್ಲರಿಗೂ ಪರಮಾಶ್ಚರ್ಯ. ಕತ್ರಿಸಲ್ಪಟ್ಟು, ತಲೆಯೊಡೆದು ರಕ್ತದೋಕುಳಿಯಲ್ಲಿ ಬಿದ್ದು ಶವವಾಗಿದ್ದವರು ಜೀವತಳೆದು ನಿಂತಿದ್ದಾರೆ. ಅವರು ಎರಡು ಹೆಜ್ಜೆ ನಡೆದು ಮುಂದೆ ಬಂದಾಗ ಅಲ್ಲಿದ್ದವರಿಗೆ ಇದು ಕನಸೋ ನನಸೋ ಒಂದೂ ಅರ್ಥವಾಗದೆ ಸ್ಥಂಭೀಭೂತರಾಗಿದ್ದಾರೆ.
ಮುಂದುವರಿಯುವುದು…



























































