27 C
Udupi
Wednesday, July 22, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 587

ಭರತೇಶ ಶೆಟ್ಟಿ, ಎಕ್ಕಾರು

ಶ್ರೀಕೃಷ್ಣ ಸಹಿತವಾದ ಪಾಂಡವರ ಅಮಿತ ಸೇನೆ ಅಶ್ವಮೇಧದ ಕುದುರೆಗಳೆರಡನ್ನು ಹಿಂಬಾಲಿಸಿ ಸಾಗುತ್ತಿದೆ. ಅರ್ಜುನ, ತಾಮ್ರಧ್ವಜ, ಬಬ್ರುವಾಹನ, ನೀಲಧ್ವಜ, ಹಂಸಧ್ವಜ, ಯವನಾಶ್ವ, ಸುವೇಗ, ಪ್ರವೀರ, ಸಾತ್ಯಕಿ, ಅನಿರುದ್ದ, ಪ್ರದ್ಯುಮ್ನ, ವೀರವರ್ಮನ ಪುತ್ರರು ಹೀಗೆ ಅತುಲ ವಿಕ್ರಮಿಗಳ ದಂಡೇ ಅನುಸರಿಸಿ ಸಾಗುತ್ತಿದೆ. ಸೇನಾ ಸಾಗರ, ಆಯುಧಗಳ ಭಂಡಾರದ ಬಂಡಿಗಳು, ಆಹಾರ, ಧಾನ್ಯಗಳ ಬಂಡಿಗಳು, ಅವರವರ ಧ್ವಜ ಪತಾಕೆಗಳು, ರಥಗಳು ಹೀಗೆ ಎಲ್ಲಾ ಸೇರಿ ಅಂಬರ ಪಥದಲ್ಲಿ ನಿಂತು ನೋಡಿದರೆ ಅತೀ ದೊಡ್ಡ ಮೆರವಣಿಗೆಯೇ ಹೋದಂತೆ ಕಾಣಿಸುತ್ತಿದೆ.

ವೀರಾಗ್ರಣಿಗಳು ಸಾಗುತ್ತಾ ಅನೇಕ ಪರ್ವತ, ಅರಣ್ಯ, ತಪ್ಪಲು, ಬಯಲು, ನದಿ ನದಗಳು ಹೀಗೆ ಪ್ರಕೃತಿಯ ಮಡಿಲಿನ ಆಹ್ಲಾದಕರ ಸೊಬಗನ್ನು ಸವಿಯುತ್ತಾ ಮುಂದೆ ಮುಂದೆ ಹೋಗುತ್ತಿದೆ. ಗಿರಿ ಶಿಖರಗಳನ್ನೆರುತ್ತಾ ಸಾಗುತ್ತಿದ್ದಂತೆ ಚಳಿಗಾಲದ ಸಮಯವಾದ್ದರಿಂದ, ಸಂಜೆಯಾಗುತ್ತಿದ್ದಂತೆ ಒಮ್ಮೆಲೆ ಚಳಿಗಾಳಿ ಬೀಸಲಾರಂಭಿಸಿತು. ಅದರ ಜೊತೆಗೆ ಹಿಮವೂ ಸ್ವಲ್ಪ ಸ್ವಲ್ಪವೇ ಉದುರತೊಡಗಿತು. ನೋಡ ನೋಡುತ್ತಿದ್ದಂತೆ ಹಿಮ ಮಳೆಯಂತೆ ಆಲಿಕಲ್ಲು ಸುರಿಯತೊಡಗಿತು. ಕೊರೆಯುವ ಚಳಿಯಲ್ಲಿ ಮುಂದೆ ಸಾಗಲಾಗದಂತಹ ಸ್ಥಿತಿ ನಿರ್ಮಾಣವಾಯಿತು. ಸುತ್ತು ತಿರುಗಿ ನೋಡಿದರೆ ಅಲ್ಲಿಯವರೆಗೆ ಹಸಿರು ಸೀರೆ ಉಟ್ಟು ನಳನಳಿಸುವಂತೆ ಶೋಭಿಸುತ್ತಿದ್ದ ಭೂದೇವಿ, ಈಗ ವಸನ ಬದಲಿಸಿ ಶ್ವೇತ ವಸ್ತ್ರ ಧರಿಸಿರುವಂತೆ ಕಾಣಿಸುತ್ತಾ ಮುಸ್ಸಂಜೆಯ ಸೂರ್ಯನ ಕಿರಣಗಳೆದುರು ಹೊಳೆಯುತ್ತಿದ್ದಾಳೆ. ರಥ ಬಂಡಿಗಳೂ ಹಿಮಾಚ್ಛಾದಿತವಾಗಿವೆ. ಕಾಲಾಳು ಸೈನಿಕರು ನಡೆಯಲಾಗದೆ ಎರಡು ಮೂರು ವಸ್ತ್ರಗಳನ್ನು ಹೊದ್ದುಕೊಂಡರೂ ಹಿಮ ಆವರಿಸಿ, ಒದ್ದೆಯಾಗಿ ಚಳಿ ತಾಳಲಾಗದ ಸ್ಥಿತಿ ನಿರ್ಮಾಣವಾಯಿತು. ಅನ್ಯ ಮಾರ್ಗವಿಲ್ಲದೆ ಡೇರೆಗಳನ್ನು ಹಾಕಿ ಸೈನ್ಯವನ್ನು ಅದರೊಳಗೆ ಆಶ್ರಿತರಾಗುವಂತೆ ತುರ್ತು ವ್ಯವಸ್ಥೆ ಮಾಡಲಾಯಿತು. ವೀರರೂ ಬಲುಭಟರೂ, ಯುವಕರೂ ಆಗಿದ್ದ ಸೇನಾನಿಗಳ ಬಿಸಿರಕ್ತವೂ ಬೀಸುವ ಚಳಿಗಾಳಿ, ಸುರಿಯುವ ಹಿಮದೆದುರು ತಣ್ಣಗಾಗಿ ಹೋಗಿದೆ. ಚಳಿ ನಿವಾರಣೆಗಾಗಿ ಒಣಮರಗಳ ರಾಶಿಯನ್ನೇ ತಂದು ಹಾಕಿ ಬೆಂಕಿ ಹಚ್ಚಿ ಅಲ್ಲಲ್ಲಿ ಚಳಿ ನಿವಾರಿಸುತ್ತಿದೆ ಸೇನೆ. ಇಂತಹ ವಿಷಮ ಸ್ಥಿತಿಯಲ್ಲಿ ಮುಂದಿನ ಪ್ರಯಾಣ ಹೇಗೆ? ದಿಗ್ವಿಜಯ ಮುಂದುವರಿಸುವ ಹಾದಿ ಏನು ಎಂಬ ಸಮಾಲೋಚನೆ ವರಿಷ್ಠರ ಸಭೆಯಲ್ಲಿ ಸಾಗುತ್ತಿದೆ.

ಹೀಗಿರುವಾಗ ಕುದುರೆಯ ಬೆಂಗಡೆಯಲ್ಲೇ ಸಾಗಬೇಕಾಗಿದ್ದ ಅಶ್ವ ಪಾಲಕರು ಚಳಿಯ ಮಧ್ಯೆಯೂ ಬೆವರುತ್ತಾ, ಚಳಿಗೆ ನಡುಗ ಬೇಕಾಗಿದ್ದವರು ಹೆದರಿ ನಡುಗುತ್ತಾ ಓಡಿಬಂದರು. ಅರ್ಜುನನ ಮುಂದೆ ನಿಂತು ತಲೆ ತಗ್ಗಿಸಿ ಭಯದಿಂದ ಬಾಯ್ದೆರೆಯಲೂ ಆಗದೆ ಕಂಪಿಸುತ್ತಿದ್ದಾರೆ.

ಅರ್ಜುನ ಸಾವಧಾನದಿಂದ “ಏನಾಯಿತು, ಯಾಕೆ ತಲೆ ತಗ್ಗಿಸಿ ನಿಂತಿದ್ದೀರಿ?. ನೋಡಿದರೆ ಬಹಳಷ್ಟು ಭಯಭೀತರಾದವರಂತೆ ಕಾಣಿಸುತ್ತಿದ್ದೀರಿ! ಯಾಕೆ ಭಯ? ಯಾರಿಂದ ತೊಂದರೆಯಾಯಿತು? ಏನಾದರು ಆಗ ಬಾರದ್ದು ಸಂಭವಿಸಿತೇ? ನಮ್ಮವರಿಗೇನಾದರು ಆಪತ್ತು ಒದಗಿದೆಯೇ? ಧೈರ್ಯ ತಾಳಿ, ಹೆದರದೆ ಏನಾಯಿತು ಎಂದು ಹೇಳಿ, ಪರಿಹರಿಸೋಣ” ಎಂದು ಅಭಯದಾನ ಮಾಡಿದನು.

ಆಗ ಅಲ್ಲಿಗೆ ಬಂದು ನಿಂತಿದ್ದ ಅಶ್ವಪಾಲಕರ ತಂಡದ ನಾಯಕ “ಪ್ರಭುಗಳೇ, ನಿಮ್ಮ ಆಜ್ಞಾನುವರ್ತಿಗಳಾಗಿ ಕುದುರೆಯ ಜೊತೆಯಲ್ಲೇ ನಾವು ಸಾಗುತ್ತಿದ್ದೆವು. ಮೂರು ತಂಡಗಳನ್ನು ರಚಿಸಿ ದಿನ ರಾತ್ರಿ ಎನ್ನದೆ ಮೂರು ಪಾಳಿಯಲ್ಲೂ ಕುದುರೆಯ ಜೊತೆಯಲ್ಲೇ ಇದ್ದು ಕೆಲಸ ನಿರತರಾಗಿದ್ದೆವು. ಈ ಗಿರಿ ಶಿಖರದ ಮೇಲೇರುತ್ತಾ ಬಂದಾಗಲೂ ಹಿಮಪಾತ, ಕೊರೆಯುವ ಚಳಿ ಇದ್ದರೂ ಸಾಧ್ಯವಾದಷ್ಟು ಕುದುರೆಯ ಬೆಂಬತ್ತಿ ಹೋಗುತ್ತಲೇ ಇದ್ದೆವು. ಮುಂದೆ ಮುಂದೆ ಸಾಗಿದಂತೆ ಒಮ್ಮೆಲೆ ಹಿಮ ಮಳೆ ಜೋರಾದಾಗ ನಮಗೆ ಮುಂದುವರಿಯಲು ಸಾಗಲಾಗಲಿಲ್ಲ. ತುಸು ಹೊತ್ತು ನಿಲ್ಲಲೇ ಬೇಕಾಯಿತು. ಆನಂತರ ಈ ಪ್ರದೇಶದಾದ್ಯಂತ ಎಲ್ಲಿ ಹುಡುಕಿದರೂ ಕುದುರೆಗಳು ಕಾಣಿಸುತ್ತಿಲ್ಲ. ಬಹಳಷ್ಟು ದೂರದವರೆಗೆ ಕಾಡು ಮೇಡುಗಳನ್ನು ದಾಟಿ ಕುದುರೆಗಳನ್ನರಸಿ ಓಡಾಡಿದೆವು, ಹುಡುಕಿದೆವು. ಆದರೆ ಕುದುರೆಗಳು ಎಲ್ಲೂ ಕಾಣದಾಗಿದೆ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ದೂರದವರೆಗೆ ನಮ್ಮ ಪೂರ್ತಿ ತಂಡ ಸುತ್ತಾಡಿ ಹುಡುಕಿದರೂ ಕುದುರೆಗಳೆರಡೂ ಕಾಣಿಸುತ್ತಿಲ್ಲ. ನಾವು ಕರೆದಾಗ ಕೆನೆಯುತ್ತಾ ಸ್ಪಂದಿಸುತ್ತಿದ್ದ ಕುದುರೆಗಳು ಇಂದು ಪ್ರತಿಕ್ರಿಯೆ ನೀಡುತ್ತಿಲ್ಲ. ಏನಾಗಿದೆ? ಯಾರಾದರೂ ಅಪಹರಿಸಿದರೆ? ಅಥವಾ ದೂರ ಓಡಿ ಹೋಗಿವೆಯೋ ಒಂದು ತಿಳಿಯದಾಗಿದೆ ಪ್ರಭೋ…. ನಮ್ಮಿಂದಾದ ಕರ್ತವ್ಯಲೋಪಕ್ಕೆ ಹೆದರಿ ಭಯಭೀತರಾಗಿದ್ದೇವೆ. ಉದ್ದೇಶಪೂರ್ವಕವಾಗಿ ಅಥವಾ ಆಲಸ್ಯ, ಅಜಾಗರೂಕತೆಯಿಂದ ಆದುದಲ್ಲ. ಪ್ರಕೃತಿಯ ಪ್ರತಿಕೂಲ ಹವಾಮಾನ ಕೊರೆಯುವ ಚಳಿ ಹಾಗು ಆಲಿಕಲ್ಲು ಮಳೆ ಸುರಿದಾಗ ಕುದುರೆ ಜೊತೆಯಲ್ಲಿ ಅನುಸರಿಸಿ ಹೋಗಲಾಗದೆ ಹಿಂದುಳಿದೆವು. ನಮ್ಮನ್ನು ಕ್ಷಮಿಸಬೇಕು, ಮುಂದಿನ ದಾರಿ ಏನೆಂದು ನೀವೇ ಹೇಳಬೇಕು” ಎಂದು ಏನಾದರು ಶಿಕ್ಷೆ ವಿಧಿಸುತ್ತಾರೋ ಎಂಬ ಭಯದಿಂದ ನಡುಗುತ್ತಾ ತಮ್ಮ ಕಷ್ಟವನ್ನು ನಿವೇದಿಸಿಕೊಂಡರು.

ಈಗ ಅರ್ಜುನನಿಗೆ ಹೊಸ ಸವಾಲು ಎದುರಾಗಿದೆ. ಕುದುರೆಗಳು ನಾಪತ್ತೆಯಾಗಿವೆ. ಒಂದೆಡೆ ಚಳಿಗಾಳಿ, ಹಿಮ ಮಳೆ, ಅದರೆಡೆಯಲ್ಲಿ ಆಘಾತಕಾರಿ ಸುದ್ದಿ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page