
ನವದೆಹಲಿ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಕಾರ್ಯಕರ್ತರ ಮೇಲಿನ ಪೊಲೀಸರ ಲಾಠಿ ಚಾರ್ಜ್‌ನ್ನು ಸೋನಮ್ ವಾಂಗ್ಚುಕ್ ತೀವ್ರವಾಗಿ ಖಂಡಿಸಿದ್ದಾರೆ. ಸಂಸದರು ಆಸ್ಪತ್ರೆಗೆ ಭೇಟಿ ನೀಡುವವರೆಗೆ ಅಥವಾ ಸಿಜೆಪಿ ಯುವ ನಾಯಕರಿಗೆ ಸಂಸತ್‌ನಲ್ಲಿ ಸಂಸದರನ್ನು ಭೇಟಿಯಾಗಲು ಅವಕಾಶ ನೀಡುವವರೆಗೆ ತಮ್ಮ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸುವುದಿಲ್ಲ ಎಂದು ಅವರು ಘೋಷಿಸಿದ್ದಾರೆ.
ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಕೈಬರಹದ ಪತ್ರ ಹಂಚಿಕೊಂಡಿರುವ ವಾಂಗ್ಚುಕ್, ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಯುವಕರ ಮೇಲೆ ಸರ್ಕಾರ ದೌರ್ಜನ್ಯ ಎಸಗಿದೆ ಎಂದು ಆರೋಪಿಸಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಂಸತ್ತಿನತ್ತ ತೆರಳುತ್ತಿದ್ದ ವಿದ್ಯಾರ್ಥಿಗಳನ್ನು ತಡೆದ ಕ್ರಮವನ್ನು ಅವರು ಖಂಡಿಸಿದ್ದಾರೆ.
“ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಯುವಕರೊಂದಿಗೆ ಕ್ರೂರವಾಗಿ ವರ್ತಿಸಲಾಗಿದೆ. ಯುವ ನಾಯಕರಿಗೆ ಸಂಸದರನ್ನು ಭೇಟಿಯಾಗಲು ಅವಕಾಶ ನೀಡಬೇಕು ಅಥವಾ ಆಸ್ಪತ್ರೆಯಲ್ಲಿ ನನ್ನನ್ನು ಭೇಟಿಯಾಗಲು ಅನುಮತಿ ನೀಡಬೇಕು. ಅಲ್ಲಿಯವರೆಗೆ ನನ್ನ ಉಪವಾಸ ಮುಂದುವರಿಯಲಿದೆ” ಎಂದು ವಾಂಗ್ಚುಕ್ ಹೇಳಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ ದೇಶದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್‌ನಿಂದ ಸಂಸತ್‌ವರೆಗೆ ಸಾವಿರಾರು ವಿದ್ಯಾರ್ಥಿಗಳು ಮತ್ತು ಬೆಂಬಲಿಗರು ‘ಚಲೋ ಸಂಸದ್’ ಮೆರವಣಿಗೆ ನಡೆಸಿದರು. ಈ ಪ್ರತಿಭಟನೆಗೆ ದೇಶದ ವಿವಿಧ ಭಾಗಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

















































