
ಬೆಂಗಳೂರು: ರಾಮ ಮಂದಿರ ನಿರ್ಮಾಣದ ಶ್ರೇಯಸ್ಸು ಪಡೆದಿದ್ದರೆ, ದೇಣಿಗೆ ಹಣದ ದುರುಪಯೋಗದ ಹೊಣೆಯನ್ನೂ ಆರ್ಎಸ್ಎಸ್ ಹೊತ್ತುಕೊಳ್ಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಣಿಗೆ ಹಣ ದುರುಪಯೋಗ ಪ್ರಕರಣದ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬಹಿರಂಗ ಸುದ್ದಿಗೋಷ್ಠಿ ನಡೆಸಿ, ಎಷ್ಟು ದೇಣಿಗೆ ಸಂಗ್ರಹವಾಗಿದೆ ಹಾಗೂ ಹಣ ಹೇಗೆ ಬಳಕೆಯಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು. ಪ್ರಧಾನಿ ನರೇಂದ್ರ ಮೋದಿ ಈ ವಿಚಾರದಲ್ಲಿ ಮೌನವಾಗಿರುವುದೇಕೆ ಎಂದೂ ಪ್ರಶ್ನಿಸಿದರು.
ಇದೇ ವೇಳೆ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳ ಕುರಿತು ಕೇಂದ್ರ ಸರ್ಕಾರವನ್ನು ಟೀಕಿಸಿದ ಖರ್ಗೆ, “ಪರೀಕ್ಷಾ ಪೇ ಚರ್ಚಾ ನಡೆಸುವ ಪ್ರಧಾನಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಒಎಸ್ಎಂ ವಿವಾದದ ಬಗ್ಗೆ ಯಾವಾಗ ಚರ್ಚೆ ನಡೆಸುತ್ತಾರೆ?” ಎಂದು ಪ್ರಶ್ನಿಸಿದರು.
ಕಳೆದ ಹತ್ತು ವರ್ಷಗಳಲ್ಲಿ ಸುಮಾರು 90 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ ಎಂದು ಆರೋಪಿಸಿದ ಅವರು, ಸರ್ಕಾರದ ನಿರ್ಲಕ್ಷ್ಯದಿಂದ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿದ್ದಾರೆ ಎಂದು ಹೇಳಿದರು. ನೀಟ್-ಯುಜಿ, ಟಿಇಟಿ, ಯುಜಿಸಿ-ನೆಟ್ ಹಾಗೂ ಸಿಬಿಎಸ್ಇ ಒಎಸ್ಎಂ ವಿವಾದಗಳ ಹಿನ್ನೆಲೆಯಲ್ಲಿ ಅವರು ಈ ಟೀಕೆಗಳನ್ನು ಮಾಡಿದರು.











































