ಭಾಗ – 577
ಭರತೇಶ್ ಶೆಟ್ಟಿ, ಎಕ್ಕಾರು

ಮಹಾರಾಜ ಮಯೂರಧ್ವಜ ಈ ರೀತಿ ವಾಗ್ದಾನ ನೀಡಿ ತನ್ನ ಶರೀರವನ್ನು ದಾನವಾಗಿ ನೀಡಲು ಒಪ್ಪಿದಾಗ ಯಾಗಶಾಲೆಯ ಸುತ್ತ ನೆರೆದಿದ್ದ ಪ್ರಜಾ ಜನರೂ, ವಿಪ್ರರೂ, ಇನ್ನುಳಿದ ಪರಿಚಾರಕ ವರ್ಗದವರೆಲ್ಲರೂ ಕಣ್ಣೀರಿಳಿಸುತ್ತಾ ಯಾಕೆ ನಮ್ಮ ರಾಜ ಈ ರೀತಿ ಒಪ್ಪಿಕೊಂಡಿದ್ದಾರೆ? ನಮ್ಮ ಸಾಮ್ರಾಜ್ಯದ ಸೌಭಾಗ್ಯ ಕಸಿದುಕೊಳ್ಳಲು ಎಲ್ಲಿಂದ ಬಂದನೋ ಈ ವೃದ್ಧ ಬ್ರಾಹ್ಮಣ! ಎಂಬಂತೆ ಕೊರಗಿ ಮರುಗತೊಡಗಿದರು. ಪ್ರಜಾಜನರ ದುಃಖವನ್ನು ಅವರೆಲ್ಲರ ಮುಖ ನೋಡಿಯೇ ಅರ್ಥೈಸಿಕೊಂಡ ಮಯೂರಧ್ವಜ ಅವರೆಲ್ಲರನ್ನು ಸಂತೈಸುವ ಸಲುವಾಗಿ ತನ್ನ ಮನದ ಅಭಿಪ್ರಾಯವನ್ನು ವಿವರಿಸಿ ಹೇಳತೊಡಗಿದ “ಒಂದು ರಾಷ್ಟ್ರಕ್ಕೆ ನಿಷ್ಠಾವಂತ ಪ್ರಜೆಗಳೇ ಆಸ್ತಿ. ಪ್ರಜೆಗಳ ಶ್ರಮ, ದೇಶಪ್ರೇಮ ಮತ್ತು ದುಡಿಮೆಯಿಂದಲೇ ಯಾವುದೇ ರಾಷ್ಟ್ರವಾದರು ಸಮೃದ್ಧಿಯತ್ತ ಸಾಗುತ್ತದೆ. ನಮ್ಮ ರತ್ನಪುರ ಈ ವಿಚಾರದಲ್ಲಿ ಬಹಳಷ್ಟು ಉತ್ತಮವಾದ ಸಾಮ್ರಾಜ್ಯವಾಗಿದೆ. ಪ್ರಜ್ಞಾವಂತರೂ, ಪ್ರಾಮಾಣಿಕರೂ, ಸಮರ್ಪಿತ ಬುದ್ಧಿಯ ತ್ಯಾಗಿಗಳೂ, ಧರ್ಮಪಾಲಕರೂ ಆದ ಪ್ರಜಾಪರಿವಾರ ಇಲ್ಲಿರುವ ಕಾರಣ ರಾಜಪರಿವಾರ ನೆಮ್ಮದಿಯಿಂದ ಆಡಳಿತ ನಿರ್ವಹಿಸಲು ಅವಕಾಶ ಒದಗಿ ಬಂದಿದೆ. ಇಂತಹ ಪ್ರಬುದ್ಧ ಪ್ರಜೆಗಳಾದ ನೀವು ಈಗ ನನ್ನ ವಿಚಾರವಾಗಿ ದುಃಖಿಸಬಾರದು. ನಾನು ಈ ರೀತಿಯ ನಿರ್ಣಯ ಕೈಗೊಂಡದ್ದಕ್ಕಾಗಿ ಯಾರೂ ಕೋಪಗೊಳ್ಳಲೂ ಬಾರದು. ನಮ್ಮ ಪ್ರಜೆಗಳಾದ ನಿಮಗೆಲ್ಲರಿಗೂ ನನ್ನ ಮೇಲೆ ಅತೀವ ವಾತ್ಸಲ್ಯವಿದೆ. ಆದರೆ ವಾತ್ಸಲ್ಯದಲ್ಲಿ ಪುತ್ರ ವಾತ್ಸಲ್ಯಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಅದರಲ್ಲೂ ಈ ವೃದ್ಧ ಬ್ರಾಹ್ಮಣೋತ್ತಮರಿಗೆ ಇರುವುದು ಒಬ್ಬನೇ ಮಗನಂತೆ. ಅವನೀಗ ಸಾವಿನ ದವಡೆಗೆ ಸಿಲುಕಿದ್ದಾನೆ. ಹೇಗಾದರು ಮಾಡಿ ತನ್ನ ಮಗನನ್ನು ಬದುಕಿಸಿಕೊಳ್ಳುವುದು ತಂದೆಯಾದವನಿಗೆ ಕರ್ತವ್ಯವಲ್ಲವೇ? ಈ ವಯೋವೃದ್ಧರ ಮಗನನ್ನು ಹಿಡಿದಿಟ್ಟಿರುವ ಸಿಂಹವೇ ಕೇಳಿರುವಾಗ, ಅದರಂತೆ ಈ ಇಳಿವಯಸ್ಸಿನ ಬ್ರಾಹ್ಮಣರು ಬಂದು ರಾಜನಾದ ನನ್ನಲ್ಲಿ ವಿಚಾರ ತಿಳಿಸಿದ್ದಾರೆ. ಅವರು ನನ್ನ ಸಾವು ಬಯಸಿ ಅಥವಾ ನನಗೆ ತೊಂದರೆ ನೀಡಬೇಕೆಂಬ ಯಾವ ಉದ್ದೇಶವನ್ನೂ ಹೊಂದಿಲ್ಲ. ಅವರ ಆಸೆ ಏನಿದ್ದರೂ ತನ್ನ ಮಗನ ಪ್ರಾಣ ರಕ್ಷಣೆ ಅಷ್ಟೇ. ಹಾಗಾಗಿ ಅವರ ಕೋರಿಕೆಯಲ್ಲಿ ಯಾವುದೇ ದುರುದ್ದೇಶ ಕಾಣಿಸುತ್ತಿಲ್ಲ. ಇನ್ನು ಮಹಾರಾಜನಾಗಿ ನನ್ನ ಜವಾಬ್ದಾರಿಯ ಬಗ್ಗೆ ಯೋಚಿಸಿದರೆ ಪ್ರಜೆಗಳ ರಕ್ಷಣೆಯೇ ನನಗೆ ಆದ್ಯ ಕರ್ತವ್ಯವಲ್ಲವೇ? ಒಬ್ಬನ ಪ್ರಾಣ ರಕ್ಷಣೆ ಮಾಡುವುದಕ್ಕಿಂತ ಮಹತ್ಕಾರ್ಯವಾದರು ಯಾವುದಿದೆ? ಸತ್ಪುರುಷನಾದವ ಮಾಡಲೇ ಬೇಕಾದ ಕರ್ತವ್ಯವಲ್ಲವೇ?. ಸ್ಪಷ್ಟವಾಗಿ ಹೇಳಬೇಕಾದರೆ, ರಾಜ್ಯಕ್ಕೆ ವೈರಿಗಳ ಆಕ್ರಮಣವಾದರೆ ಆಗ ಅರಸನಾದವ ತನ್ನ ಪ್ರಾಣ, ನೋವಿನ ಬಗ್ಗೆ ಯೋಚಿಸಲಾದೀತೇ? ಸಮರದಲ್ಲಿ ಮರಣ ಬಂದರೂ ಬರಬಹುದು, ಜಯ ಸಿಕ್ಕರೂ ಸಿಗಬಹುದು. ಆ ಕುರಿತಾಗಿ ಕನಿಷ್ಠ ಯೋಚನೆಯನ್ನೂ ಮಾಡದೆ ಅರಸನಾದವ ಯುದ್ಧ ನಿರತನಾಗುವುದಿಲ್ಲವೇ? ಹಾಗೆಯೇ ಈಗಲೂ ಇದೊಂದು ಜೀವನ ಯುದ್ಧ ಎಂದು ತಿಳಿದೇ ನಾನು ಸಿದ್ಧನಾಗಿದ್ದೇನೆ. ನಿಮ್ಮ ಅರಸನಾಗಿ ಓರ್ವ ಪ್ರಜೆಯ ರಕ್ಷಣೆ ಮಾಡಲಾಗದ ಅಸಮರ್ಥ ನಾನಾದರೆ ಮತ್ತೆ ನನಗೆ ರಾಜ ಪದವಿಯಾದರು ಯಾಕೆ ಬೇಕು? ಆರ್ತರಿಗೆ ಸಹಾಯ ಮಾಡದ ಅರಸ ಎಂಬ ಅಪಕೀರ್ತಿ ಮರಣಕ್ಕಿಂತಲೂ ನಿಕೃಷ್ಟವಾದುದಲ್ಲವೇ? ಪ್ರಜಾಜನರೇ! ನೀವು ಯಾರೂ ದುಃಖಿಸಲೇ ಬಾರದು. ನಿಮ್ಮೆಲ್ಲರ ರಾಜನಾಗಿ ಸುದೀರ್ಘ ಕಾಲ ಆಳ್ವಿಕೆ ಮಾಡಿದ್ದೇನೆ. ವಿವಾಹ, ಸಂಸಾರ, ಅಧಿಕಾರ, ಪುತ್ರಸಂತಾನ ಹೀಗೆ ಸರ್ವ ಸುಖವನ್ನೂ ಅನುಭವಿಸಿಯಾಗಿದೆ. ಇನ್ನೇನು ಕೆಲ ಸಮಯ ಕಳೆದು ನನ್ನ ಮಗನಾದ ತಾಮ್ರಧ್ವಜನಿಗೆ ಪಟ್ಟಾಭಿಷೇಕ ಮಾಡಿಸಿ ನಾನು ವಾನಪ್ರಸ್ಥಕ್ಕೆ ತೆರಳಲೇ ಬೇಕಾದುದು ಪರಂಪರೆಯ ಕ್ರಮ. ಮತ್ತೂ ಸ್ಪಷ್ಟವಾಗಿ ಹೇಳಬೇಕಾದರೆ ಹುಟ್ಟಿದ ಮನುಷ್ಯ ಒಂದಲ್ಲ ಒಂದು ದಿನ ಸಾಯಲೇ ಬೇಕು. ಸಾವು ಯಾರಿಗೂ ದಾಕ್ಷಿಣ್ಯ ತೋರಿಸುವುದೇ ಇಲ್ಲ. ಅದೇ ಸತ್ಯ ಆಗಿರುವಾಗ ಹೇಗೋ ಒಂದು ರೀತಿಯ ಮರಣವನ್ನು ಹೊಂದುವ ಬದಲಾಗಿ, ಓರ್ವ ವರ್ಣೋತ್ತಮರಾದ ಬ್ರಾಹ್ಮಣರ ಜೀವವನ್ನು ಉಳಿಸಿ ನನ್ನ ದೇಹತ್ಯಾಗದಿಂದ ಜೀವನವನ್ನು ಸಾರ್ಥಕಗೊಳಿಸುವ ಭಾಗ್ಯ ನನಗೊದಗಿದೆಯೆಂದರೆ ಅದಕ್ಕಿಂತ ಉತ್ತಮವಾದುದು ಏನಿದೆ ಹೇಳಿ?” ಹೀಗೆ ಪ್ರಜೆಗಳೊಂದಿಗೆ ಸವಿಸ್ತಾರವಾಗಿ ಮಾತನಾಡಿ ಸಮಾಧಾನ ಹೇಳಿದ ಮಹಾರಾಜ ತನ್ನ ಮಗ ತಾಮ್ರಧ್ವಜನತ್ತ ತಿರುಗಿ ಆತನನ್ನು ಬಳಿ ಕರೆದನು.
“ಮಗನೇ ತಾಮ್ರಧ್ವಜಾ! ನಿನಗೆ ಬೇಕು ಬೇಕಾದ ಶಾಸ್ತ್ರ, ಶಸ್ತ್ರ, ನ್ಯಾಯ, ಆಡಳಿತ ಶಿಕ್ಷಣ ನೀಡಲಾಗಿದೆ. ಪರಾಕ್ರಮಿಯೂ ಸರ್ವ ಸಮರ್ಥನೂ ಆಗಿ ನೀನು ಈಗಾಗಲೇ ಪ್ರಜೆಗಳ ಪ್ರೀತಿಪಾತ್ರ ಯುವರಾಜನಾಗಿರುವುದು ಸಂತೋಷದ ವಿಚಾರ. ನನಗದು ಬಹಳಷ್ಟು ನೆಮ್ಮದಿಯನ್ನೂ ನೀಡುತ್ತಿದೆ. ನಮ್ಮ ಪ್ರಜೆಗಳು ಪ್ರಭುಭಕ್ತಿ ಪರಾಯಣರು, ಧರ್ಮಾತ್ಮರು, ದೈವ ಭಕ್ತರು, ಶ್ರಮ ಜೀವಿಗಳು, ನಿಯತ್ತು ಉಳ್ಳವರು. ಇಂತಹ ಸತ್ಪ್ರಜಾ ಸಂಪತ್ತನ್ನು ಹೊಂದಿ ಆಳ್ವಿಕೆ ಮಾಡುವುದು ನಿನ್ನ ಪಾಲಿಗೆ ಸೌಭಾಗ್ಯವೇ ಆಗಲಿದೆ. ದೇವರು ನಿನಗೂ – ನನಗೂ ಯಾವ ಕೊರತೆಯನ್ನೂ ನೀಡಿಲ್ಲ. ಆದರೂ ನನ್ನ ಜೀವನದ ಪರಮೋಚ್ಚ ಆಸೆ ಶ್ರೀಕೃಷ್ಣ ಪರಮಾತ್ಮನ ದರ್ಶನ ಮಾತ್ರ ಕೈಗೂಡಲಿಲ್ಲ ಎಂಬ ಒಂದೇ ಒಂದು ಕೊರಗಿದೆ. ಆದರೆ ನನ್ನ ಮಗನಾದ ನೀನು ನಮ್ಮ ದೇವರಾದ ಶ್ರೀಕೃಷ್ಣ ಪರಮಾತ್ಮನ ಮೈಗೆ ಮೈ ತಾಗಿಸಿ, ಅಪ್ಪಿ ಹಿಡಿದುಕೊಂಡು, ಹೊರಳಾಡಿ ಆತನ ಸರ್ವಾಂಗಗಳನ್ನೂ ಸ್ರರ್ಶಿಸಿರುವ ಕಾರಣ ಪುನೀತನೇ ಆಗಿರುವೆ. ರಣಾಂಗಣವಾದರೂ ನಿನ್ನ ಪಾಲಿಗದು ದೇವಾಲಯವಾಗಿ ಶ್ರೀಕೃಷ್ಣನ ದರ್ಶನ, ಸ್ಪರ್ಶ ಸುಖವಿತ್ತ ಪವಿತ್ರ ಅಂಗಣವಾದದ್ದು ಪುಣ್ಯವಿಶೇಷವೇ ಹೌದು. ಅಂತಹ ಮಹಿಮಾನ್ವಿತ ದೇವರ ಮೈಸೋಂಕಿನಿಂದ ಪಾವನವಾದ ನಿನ್ನ ಶರೀರವನ್ನೇ ನಾನೊಮ್ಮೆ ಮುಟ್ಟಿ ಪಾವನನಾಗುತ್ತೇನೆ” ಎಂದು ಭಾವನಾತ್ಮಕವಾಗಿ ತನ್ನ ಮಗ ತಾಮ್ರಧ್ವಜನ ಮೈಯನ್ನೆಲ್ಲ ಒಮ್ಮೆ ಸವರಿದನು. ಆತನ ಬಾಹು ತೋಳುಗಳನ್ನು ಪೂಸುತ್ತಾ ಕೃಷ್ಣನ ಪಾದವನ್ನು ಹಿಡಿದಿದ್ದ ಎಂದು ಹೇಳಿರುವುದನ್ನು ಸ್ಮರಿಸಿ ಮಗನ ಎರಡೂ ಅಂಗೈಗಳನ್ನು ತೆರೆದು ಹಿಡಿದು, ಆತನ ಪಾದಮೂಲದಲ್ಲಿ ಕುಳಿತು ತನ್ನ ಮುಖಕ್ಕೆ ಅಂಗೈಗಳನ್ನು ಒತ್ತಿ ಹಿಡಿದು ಕೃಷ್ಣಾ ಕೃಷ್ಣಾ ಕೃಷ್ಣಾ…. ಎಂದು ಮನಸಾರೆ ನಾಮಸ್ಮರಣೆ ಮಾಡಿ ಕೃಷ್ಣನ ಪಾದಸ್ಪರ್ಶದ ಸುಖವನ್ನು ಕಲ್ಪಿಸುತ್ತಾ ಹಿತಾನುಭವ ಪಡೆದನು. “ಮಗನೇ ನಿನ್ನ ಮನದಲ್ಲಿ ಯಾವ ದುಃಖ ದುಮ್ಮಾನವಾಗಲಿ, ದುಗುಡವನ್ನಾಗಲಿ ತಳೆಯಬೇಡ. ಹೇಗೂ ಒಂದು ದಿನ ಸಾಯಲೇ ಬೇಕಾದ, ವ್ಯರ್ಥವಾಗಿ ಪಂಚಭೂತಗಳಲ್ಲಿ ಲೀನವಾಗಿ ಹೋಗಲೇ ಬೇಕಾದ ನನ್ನೀ ಮುದಿ ಶರೀರ ಸಾರ್ಥಕವಾದ, ನಮ್ಮ ನಾಡಿಗೇ ಕೀರ್ತಿ ತರುವಂತಹ, ವಂಶಕ್ಕೇ ಆದರ್ಶವಾಗಲಿರುವ ಸತ್ಕಾರ್ಯಕ್ಕೆ ವಿನಿಯೋಗವಾಗಲಿದೆ ಎಂದು ಸಂತೋಷ ಪಡಬೇಕು. ನಮಗೆ ಈ ಅವಕಾಶವನ್ನು ದೇವರಾದ ವಾಸುದೇವನೇ ಕರುಣಿಸಿ ಕೃತಾರ್ಥನಾಗಿಸುತ್ತಿದ್ದಾನೆ ಎಂದೇ ತಿಳಿಯಬೇಕು. ಅನ್ಯಥಾ ಯಾವುದೇ ವಿಚಾರ ಮಾಡದೆ ದುಃಖಿಸದೇ ನನ್ನ ಶರೀರವನ್ನು ಸೀಳುವಲ್ಲಿ ನೀನು ಮುಂದಾಗಬೇಕು. ಇಂತಹ ದಾನ ನೀಡುವ ಭಾಗ್ಯ ನಿನ್ನ ಹೊರತು ಈ ಜಗತ್ತಿನಲ್ಲಿ ಯಾರಿಗೂ ಸಿಗುವ ಸಾಧ್ಯತೆಯೇ ಇಲ್ಲ. ತೀರಾ ಅಪರೂಪವಾದ ದಾನಿಯಾಗಲಿರುವ ನೀನು ಅದಕ್ಕೆ ತಕ್ಕುದಾದ ಶ್ರೇಷ್ಟ ಮನಸ್ಸಿನಿಂದಲೇ ತೊಡಗಿಕೋ. ನಿನ್ನ ತಂದೆಯಾಗಿ ಪೂರ್ಣ ಮನಸ್ಸಿನಿಂದ ಅನುಗ್ರಹಿಸುತ್ತಿದ್ದೇನೆ. ನೀನು ಶ್ರೇಯೋವಂತನಾಗಿ ಉತ್ತಮ ರಾಜನಾಗಿ ಬಾಳು. ಸದಾ ಶ್ರೀಕೃಷ್ಣ ಪರಮಾತ್ಮನ ಭಕ್ತನಾಗಿರು. ಆತನೇ ನಮ್ಮ ಪುರದ ರಕ್ಷಕನಾಗಿರುತ್ತಾನೆ. ಎಲ್ಲರಿಗೂ ಒಳ್ಳೆಯದೇ ಆಗುತ್ತದೆ.” ಎಂದು ಹರಸಿದನು.
ಮತ್ತೆ ಪ್ರಜಾ ಪರಿವಾರದತ್ತ ತಿರುಗಿ “ನಾಡಿನ ಪ್ರಜೆಗಳಾದ ನೀವು ನನ್ನ ಆಡಳಿತಾವಧಿಯಲ್ಲಿ ಯಾವ ರೀತಿ ಪೂರ್ಣ ಸಹಕಾರ ನೀಡಿದ್ದೀರೋ, ನಾಡಿನ ರಕ್ಷಣೆ ಮಾಡಿದ್ದೀರೋ, ಸಮೃದ್ಧಿಗೆ ಕಾರಣರಾಗಿದ್ದಿರೋ ಅದೇ ರೀತಿ ಇನ್ನು ಮುಂದೆಯೂ ತಾಮ್ರಧ್ವಜನನ್ನು ಆಧರಿಸಿ ಸಲಹಬೇಕು. ಏನಾದರು ತಿಳಿಯದೆ ಆತ ತಪ್ಪು ಮಾಡಿದನಾದರೆ ತಿಳಿ ಹೇಳಿ ಸುಧಾರಿಸುತ್ತಾ ಒಗ್ಗಟ್ಟಿನಿಂದರಬೇಕು ಎಂದು ನಿಮ್ಮೆಲ್ಲರಲ್ಲಿ ಕೈ ಜೋಡಿಸಿ ಪ್ರಾರ್ಥಿಸುತ್ತೇನೆ” ಎಂದು ಬೇಡಿಕೊಂಡನು.
ಇಷ್ಟಾಗಿ ಮಯೂರಧ್ವಜ ತನ್ನ ಶರೀರ ದಾನಕ್ಕೆ ಮುಂದಾಗಿ ಎದುರು ಬಂದನು. ಆಗ ಮಯೂರಧ್ವಜನ ರಾಣಿ ಕುಮುದ್ವತಿ ಕಣ್ಣೀರಿಡುತ್ತಾ “ಸ್ವಾಮೀ! ಗಂಡನ ಅರ್ಧ ಶರೀರವೇ ಪತ್ನಿ ಎಂದು ಶಾಸ್ತ್ರಗಳೇ ಹೇಳಿವೆ. ಹಾಗಾಗಿ ನಿಮ್ಮ ಅರ್ಧಾಂಗಿನಿಯಾದ ನಾನು ನಿಮ್ಮ ಅರ್ಧ ಶರೀರದ ಬದಲಾಗಿ ದಾನವಾಗಲು ಸಿದ್ಧಳಿದ್ದೇನೆ. ನಿಮ್ಮ ರಾಜಕೀಯದ ಅನುಭವ ಮತ್ತು ರಕ್ಷಣೆ ನಮ್ಮ ರತ್ನಪುರಕ್ಕೆ ಬಹಳಷ್ಟು ಬೇಕಾಗಿದೆ. ಅದನ್ನರಿತು ಓರ್ವ ರಾಜಕಾರಣಿಯಾಗಿ ಯೋಚಿಸಿ, ಈ ಸಂದರ್ಭ ಉದಾರ ಮನಸ್ಸಿನಿಂದ ವೃದ್ದ ಬ್ರಾಹ್ಮಣೋತ್ತಮರ ಮಗನ ಜೀವಕ್ಕೆ ಪ್ರತಿಯಾಗಿ ನಾನೇ ಸಿಂಹದ ಬಾಯಿಗೆ ತುತ್ತಾಗುವ ಅವಕಾಶ ನೀಡಬೇಕು. ದಯೆದೋರಿ ನೀವು ಅನುಮತಿ ನೀಡಿದರೆ ನಮ್ಮ ರಾಜ್ಯಕ್ಕೂ ಕ್ಷೇಮ. ಪ್ರಜೆಗಳಿಗೂ ಉಪಯುಕ್ತ ಹಾಗೆಯೇ ಸಮಸ್ಯೆಗೂ ಪರಿಹಾರವಾಗುತ್ತದೆ” ಎಂದು ಪತಿಯ ಪಾದಬುಡದಲ್ಲಿ ಕುಳಿತು ಪ್ರಾರ್ಥಿಸಿದಳು.
ಕುಮುದ್ವತಿಯ ವಿಚಾರದಲ್ಲೂ ಸತ್ಯವಿತ್ತು. ಏಕೆಂದರೆ ಧರ್ಮಪತ್ನಿ ಪತಿಯ ಅರ್ಧ ಎಂದೇ ಶಾಸ್ತ್ರ ಸಾರಿರುವ ಕಾರಣದಿಂದಲೇ ಅರ್ಧಾಂಗಿನಿ ಎಂಬ ಸ್ಥಾನಮಾನ ನೀಡಿದೆ.











































