ಭಾಗ – 574
ಭರತೇಶ ಶೆಟ್ಟಿ ,ಎಕ್ಕಾರು

ತಾಮ್ರಧ್ವಜ, ಕೃಷ್ಣ, ಅರ್ಜುನ ತ್ರಿಕೋನ ಹೋರಾಟ, ನೆಲದ ಮೇಲೆ ಒದ್ದಾಟ, ಏಳುವುದು, ಬೀಳುವುದು, ಒದೆಯುವುದು, ಗುದ್ದುವುದು ಸಾಗುತ್ತಾ ಸಾಗುತ್ತಾ ಬಹು ಹೊತ್ತು ಸಾಗಿತು. ಏನಾದರೂ ತಾಮ್ರಧ್ವಜ ಇಬ್ಬರನ್ನೂ ಬಿಡುತ್ತಿಲ್ಲ. ಬಿದ್ದೂ ಎದ್ದೂ, ನೆಲಕ್ಕೆ ತಲೆ ಕೈ ಕಾಲುಗಳು ಬಡಿದು, ಸೆಳೆದಾಟಕ್ಕೆ ಮೈ ಕೈಯ ಸಿಪ್ಪೆ ಜಾರಿ ರಕ್ತ ಸುರಿಯ ತೊಡಗಿ ಮಣ್ಣು ಮೆತ್ತಿ ಕೊಂಡಿತು. ಯಾರು ಅರ್ಜುನ? ಯಾರು ತಾಮ್ರಧ್ವಜ? ಯಾರು ಕೃಷ್ಣ ಎಂದು ಗುರುತು ಹಿಡಿಯಲಾಗದ ರೀತಿ ಮಣ್ಣು ಮೆತ್ತಿಕೊಂಡಿದೆ.
ಹೀಗೆ ಸಾಗಿದ ಕುಸ್ತಿಯ ಕೊನೆಗೆ ಮೂರೂ ಜನ ನಿಸ್ತೇಜರಾಗುತ್ತಾ ಕಡೆಗೆ ಮೂರ್ಛಿತರಾಗಿ ಬಿದ್ದು ಬಿಟ್ಟರು. ತಾಮ್ರಧ್ವಜ ಸ್ಮೃತಿ ತಪ್ಪಿ ಬಿದ್ದಿರುವ ಈ ಹೊತ್ತಲ್ಲೂ ಕೃಷ್ಣನ ಪಾದ ಬಿಟ್ಟಿಲ್ಲ. ಮೂವರು ವಿಕ್ರಮಿಗಳೂ ಆರಾಮವಾಗಿ ಹಾಸಿಗೆಯಲ್ಲಿ ಮಲಗಿದವರಂತೆ ರಣಭೂಮಿಯಲ್ಲಿ ಪವಡಿಸಿದ್ದಾರೆ. ಬಹಳಷ್ಟು ಹೊತ್ತು ಹೀಗೆ ಸಾಗಿದ ಮೇಲೆ ತಾಮ್ರಧ್ವಜನಿಗೆ ತನು ಚೈತನ್ಯ ಹೊಂದಿ ಎಚ್ಚರವಾಯಿತು. ಎದ್ದು ನೋಡಿದರೆ ಕೃಷ್ಣಾರ್ಜುನರಿಬ್ಬರೂ ಬಿದ್ದು ಕೊಂಡಿದ್ದಾರೆ. ಏಳುವ ಸ್ಥಿತಿಯಲ್ಲಿಲ್ಲ. ಅಯ್ಯೋ ನನ್ನ ದೇವರ ಸ್ಥಿತಿಯೇ ಎಂದೂ ಮರುಕ ಪಟ್ಟನು. “ಸರಿ ನನ್ನ ತಂದೆ ಎಷ್ಟು ವರ್ಷದಿಂದ ಶ್ರೀಕೃಷ್ಣನನ್ನು ಕಾಣಬೇಕೆಂದು ಹಂಬಲಿಸುತ್ತಿದ್ದಾರೆ. ಶ್ರೀಕೃಷ್ಣನನ್ನು ಎತ್ತಿ ಹೆಗಲೇರಿಸಿಕೊಂಡು ಅರಮನೆಯತ್ತ ಹೋಗುತ್ತೇನೆ” ಎಂದು ಕೃಷ್ಣನನ್ನು ಎತ್ತುವ ಪ್ರಯತ್ನ ಮಾಡಿದರೆ, ಏನೇನು ಮಾಡಿದರೂ ಎತ್ತಲಾಗಲಿಲ್ಲ. ಇವನು ಗೋವರ್ಧನಧಾರಿಯಲ್ಲವೇ! ಭೂಮಿ ತೂಕದ ಶರೀರಿ! ತಾಮ್ರಧ್ವಜನ ದಣಿದ ಶರೀರದ ಬಲ ಕೃಷ್ಣನ ಶರೀರವನ್ನೆತ್ತಲು ಹರಸಾಹಸ ಪಟ್ಟರೂ ಆಗಲಿಲ್ಲ. ಎಳೆದುಕೊಂಡು ಹೋಗಲು ನೋಡಿದ ಅದೂ ಆಗಲಿಲ್ಲ. ಕೊನೆಗೆ ಎದ್ದು ನಿಂತು ಇನ್ನೇನು ಮಾಡೋಣ? ಕೃಷ್ಣ ನಮ್ಮ ಪುರ – ಅರಮನೆಗೆ ಬರಬೇಕು. ಬರುವಂತೆ ಮಾಡಬೇಕು. ಅದಕ್ಕೇನು ದಾರಿ? ಎಂದು ಯೋಚಿಸತೊಡಗಿದ.
ಅಶ್ವಮೇಧದ ಪಾಂಡವರ ಕುದುರೆ ಮತ್ತು ರತ್ನಪುರದ ನಮ್ಮ ಕುದುರೆ ಎರಡೂ ಕುದುರೆಗಳನ್ನು ಅಟ್ಟಿಕೊಂಡು ಹೋಗುತ್ತೇನೆ. ಕುದುರೆ ಇಲ್ಲದಿದ್ದರೆ ಇವರಿಗೆ ಮುಂದೆ ಎಲ್ಲಿಗೂ ಹೋಗಲಾಗದು. ಎಚ್ಚರವಾದಾಗ ಏನಾದರು ಮಾಡುತ್ತಾರೆ, ಇಲ್ಲಾ ಯುದ್ದಕ್ಕಾದರೂ ಬರುತ್ತಾರೆ. ನೋಡೋಣ ಎಂದು ಎರಡೂ ಕುದುರೆಗಳ ಜೊತೆ ಅರಮನೆಯತ್ತ ಸಾಗಿದನು.
ಒಂದು ವರ್ಷಕಾಲ ನಡೆಯಬೇಕಾದ ಅಶ್ವಮೇಧ ಯಾಗದ ಕುದುರೆ ಸಂಚಾರ ಕೆಲದಿನಗಳ ಒಳಗೆ ಮರಳಿ ಪುರದೊಳಗೆ ಬಂದಾಗ ಮಯೂರಧ್ವಜನಿಗೆ ಆಶ್ಚರ್ಯವಾಯಿತು. ಅರೆ! ನಮ್ಮ ಕುದುರೆಯ ಜೊತೆ ಮತ್ತೊಂದು ಯಾಗದ ಕುದುರೆಯಿದೆ! ಏನಿದು ವೈಪರೀತ್ಯ? ತಾಮ್ರಧ್ವಜನನ್ನು ಕರೆದು “ಇದೇನು ಮಗನೇ ಯಾಗ ಸಂಪನ್ನತೆಯ ಅವಧಿ ಒಂದು ವರುಷ ಕಾಲ. ಆದರೆ ನೀನು ಕೆಲವೇ ದಿನಗಳಲ್ಲಿ ಮರಳಿ ಬಂದಿರುವೆ. ಏನಾಯಿತು? ಈ ಎರಡನೆ ಕುದುರೆ ಯಾರದ್ದು? ನನಗೊಂದೂ ಅರ್ಥವಾಗುತ್ತಿಲ್ಲ?” ಎಂದು ಕೇಳಿದನು.
ತಾಮ್ರಧ್ವಜ ಪೂರ್ತಿ ಘಟನೆ, ಯುದ್ಧ ವಿಚಾರ, ಹಾಗೂ ಇಲ್ಲಿಗೆ ಬಂದ ಪೂರ್ಣ ಕಥನ ವಿವರಿಸಿ ಹೇಳಿದ. ಮಯೂರಧ್ವಜನಿಗೆ ಮಗನ ಪರಾಕ್ರಮ ಬಹಳ ಹಿತವೆನಿಸಿತು. ಅರ್ಜುನನೂ ಸೋತ ಸುದ್ದಿ ಬಹಳ ಹೆಮ್ಮೆಯಾಯಿತು. ಆದರೆ ಕೊನೆಗೆ ಬಿದ್ದಿರುವ ಕೃಷ್ಣನನ್ನು ಬಿಟ್ಟು ಬಂದೆ ಎಂದಾಗ ಒಮ್ಮೆಲೇ ಕೋಪವೂ, ದುಃಖವೂ ಉಂಟಾಯಿತು. “ಹೇ ಮಗನೇ! ನಿನ್ನಂತಹ ಮೂರ್ಖ ಶಿಖಾಮಣಿ ಈ ಜಗದಲ್ಲಿರಲು ಸಾಧ್ಯವೇ? ಛೀ ನಿನ್ನ ಬುದ್ಧಿಗೇನಾಯಿತು ಮಗನೇ?” ಎಂದು ಏನೋ ಕಳಕೊಂಡವನಂತೆ ಒದ್ದಾಡತೊಡಗಿದ ಮಯೂರಧ್ವಜ. “ನಮ್ಮ ಸ್ವಾಮಿಯನ್ನು ರಣಾಂಗಣದಲ್ಲಿ ಈ ರಾತ್ರಿಯ ಹೊತ್ತಿಗೆ ಬಿಟ್ಟು ಬಂದೆ ಎಂದು ಹೇಳುತ್ತಿರುವೆಯಲ್ಲಾ? ನಿನಗೇನೂ ವೇದನೆಯಾಗುತ್ತಿಲ್ಲವೇ ಮಗನೇ? ಎಂತಹ ಮಹಾಪರಾಧ ಮಾಡಿದೆ? ಅಪರಾಧವಲ್ಲ! ಅಪರಾಧಕ್ಕೆ ಕ್ಷಮೆಯಿದೆ. ಇದು ಅಕ್ಷಮ್ಯ – ಕ್ಷಮೆಯೇ ಇಲ್ಲ ನಿನಗೆ. ಯಾವ ದೇವರನ್ನು ಕಾಣಬೇಕೆಂದು ಅನು ಕ್ಷಣ ಕಾತರಿಸುತ್ತಿದ್ದೆನೋ ಅಂತಹ ಪರಮಾತ್ಮ ಸಿಕ್ಕಿದಾಗ ಶರಣಾಗಿ ಕರೆತರುವುದನ್ನು ಬಿಟ್ಟು ಅಲ್ಲೇ ಬಿಟ್ಟು ಬಂದೆಯಾ! ಏನನ್ನಬೇಕು ಮೂಢನೇ ನಿನ್ನ ಬುದ್ಧಿಗೆ?”
ಛೇ! ಛೇ! ಭಗವಂತ ಏನಂದು ಕೊಂಡನೋ! ನನ್ನ ಮಗನ ಅವಿವೇಕದ ಬುದ್ಧಿಗೆ ಕೋಪಗೊಂಡಿರುವನೋ! ಅಯ್ಯೋ… ಶ್ರೀಕೃಷ್ಣನ ಪಾದಕ್ಕೆರಗಿ ಮಗನಿಂದಾದ ಅಪರಾಧಕ್ಕಾಗಿ ಕ್ಷಮೆ ಬೇಡಬೇಕು. ಅನ್ಯಥಾ ದಾರಿಯೇ ಇಲ್ಲ. ಈಗ ರಾತ್ರಿಯಾದುದರಿಂದ ಯುದ್ಧ ಭೂಮಿಯಾದ ಕಾರಣ ಬೆಳಗಿನವರೆಗೆ ಕಾಯದೆ ಅಲ್ಲಿಗೆ ಹೋಗುವಂತಿಲ್ಲ. ಹೇಗೆ ನಾನು ರಾತ್ರಿ ಬೆಳಗು ಮಾಡಲಿ? ಕೃಷ್ಣ ದರ್ಶನದ ಕಾತರ ಒಂದೆಡೆ, ಮಗನ ಅವಿವೇಕದ ಬಗ್ಗೆ ದುಃಖ ಒಂದೆಡೆ ನನ್ನ ನೆಮ್ಮದಿಯನ್ನೇ ಹಾಳು ಮಾಡಿದೆ. ಬೆಳಗಾದಾಗ ದೇವರು ಅಲ್ಲಿರುತ್ತಾರೋ? ಮರಳಿ ಹೊರಟು ಹೋದರೆ? ನನಗೆ ದರುಶನ ಭಾಗ್ಯ ಸಿಗದೇ ಹೋದರೆ! ಆತಂಕಕ್ಕೊಳಗಾಗಿ ಒದ್ದಾಡ ತೊಡಗಿದ. ರಾತ್ರಿಯಿಡೀ ಹೊರ ಬಂದು ಅರ್ಧ ದಾರಿ ನಡೆಯುವುದು. ಇಲ್ಲ ಈ ಹೊತ್ತು ಹೋಗುವುದು ಅಧರ್ಮವಾಗುತ್ತದೆ. ಎಂದು ಮರಳಿ ಬರುವುದು. ಹೀಗೆ ಹೇಗೋ ರಾತ್ರಿ ಬೆಳಗು ಮಾಡಿದ ಮಹಾರಾಜ ಮಯೂರಧ್ವಜ.
ಪೂರ್ತಿ ಬೆಳಗಾಗುವ ಮೊದಲೇ ಎದ್ದು ಪ್ರಾತಃವಿಧಿಗಳನ್ನು ಪೂರೈಸಿ ಯಜ್ಞಶಾಲೆಗೆ ಧಾವಿಸಿ ವಿಪ್ರ ಪ್ರಮುಖರನ್ನೆಲ್ಲ ಸೇರಿಸಿ ಎಲ್ಲಾ ವಿಚಾರಗಳನ್ನು ನಿವೇದಿಸಿಕೊಂಡನು. ಶ್ರೀಕೃಷ್ಣ ಪರಮಾತ್ಮನನ್ನು ಕಾಣಲು ಹೋಗಬೇಕಾಗಿದೆ ಎಲ್ಲರೂ ಸಿದ್ಧರಾಗಿ ಎಂದು ಅಪ್ಪಣೆ ಮಾಡಿ ಯಥೇಚ್ಚ ದಾನ ಧರ್ಮಗಳನ್ನೂ ನೀಡಿದನು. ತನ್ನ ಪತ್ನಿ ಕುಮುದ್ವತಿಯನ್ನು ಹೊರಡಿಸಿ ಸಿದ್ಧನಾದನು. ಮತ್ತೆ ಕೃಷ್ಣ ಪರಮಾತ್ಮನಿಗೆ ನಮ್ಮಿಂದ ದೇವರಿಗೆ ಅಪಚಾರವಾಗಿದ್ದರೆ, ಅದರಿಂದ ಪಾಪ ಕೃತ್ಯವಾಗಿದ್ದರೆ ಎಂದು ದೋಷ ನಿವಾರಣೆಗಾಗಿ ಒಂದಷ್ಟು ವಿಪ್ರರನ್ನು ಪಾಪ ಪರಿಹಾರ ವಿಧಿಗಾಗಿ ತೊಡಗಿಸಿದನು. ಸಕಲ ಸಿದ್ಧನಾಗಿ ದೇವರನ್ನು ಕರೆತರಲು ಹೊರಡಲು ಸನ್ನದ್ಧನಾದನು.








































