ಭಕ್ತಿಗೆ ಮೆಚ್ಚಿದ ಸಿಎಂ ಚಂದ್ರಬಾಬು ನಾಯ್ಡು

ಅಚಲ ಭಕ್ತಿಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಕರ್ನಾಟಕದ 116 ವರ್ಷದ ನವನೀತಮ್ಮ ಸಾಬೀತುಪಡಿಸಿದ್ದಾರೆ. ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಅವರು ಅಲಿಪಿರಿ ಮಾರ್ಗದ ಮೂಲಕ ಕಾಲ್ನಡಿಗೆಯಲ್ಲೇ ಬೆಟ್ಟ ಏರಿ ಭಕ್ತರ ಗಮನ ಸೆಳೆದಿದ್ದಾರೆ. ಅವರ ಈ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ತಿರುಪತಿ ತಿಮ್ಮಪ್ಪನ ಪರಮ ಭಕ್ತರಾಗಿರುವ ನವನೀತಮ್ಮ ಅವರ ಕುಟುಂಬದೊಂದಿಗೆ ಹಲವು ಬಾರಿ ತಿರುಮಲಕ್ಕೆ ಭೇಟಿ ನೀಡಿದ್ದರು. ಆಗ ತಾವೂ ಒಮ್ಮೆ ಕಾಲ್ನಡಿಗೆಯಲ್ಲೇ ಬೆಟ್ಟ ಏರಬೇಕು ಎಂಬ ಸಂಕಲ್ಪ ಮಾಡಿದ್ದು, ಇದೀಗ ಅದನ್ನು ಈಡೇರಿಸಿದ್ದಾರೆ. ಸುಮಾರು 11 ಕಿ.ಮೀ ಉದ್ದದ ಹಾಗೂ 3,550ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹೊಂದಿರುವ ಅಲಿಪಿರಿ ಮಾರ್ಗ ಯುವಕರಿಗೂ ಸವಾಲಿನದ್ದಾಗಿದ್ದರೂ, ಕುಟುಂಬದ ಬೆಂಬಲದೊಂದಿಗೆ ಯಶಸ್ವಿಯಾಗಿ ಬೆಟ್ಟ ಹತ್ತಿದ್ದಾರೆ.
ನವನೀತಮ್ಮ ಬೆಟ್ಟ ಏರುತ್ತಿದ್ದ ದೃಶ್ಯವನ್ನು ಸಹಯಾತ್ರಿಕರೊಬ್ಬರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಈ ವಯಸ್ಸಿನಲ್ಲೂ ಇಂತಹ ದೃಢಸಂಕಲ್ಪ ನಿಜಕ್ಕೂ ಮಾದರಿ” ಎಂದು ನೆಟ್ಟಿಗರು ಪ್ರಶಂಸಿಸಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ಎಕ್ಸ್ನಲ್ಲಿ ಪೋಸ್ಟ್ ಮಾಡಿ, “ನಿಜವಾದ ಭಕ್ತಿಗೆ ವಯಸ್ಸು ಕೇವಲ ಒಂದು ಸಂಖ್ಯೆ. 116 ವರ್ಷದ ನವನೀತಮ್ಮ ಅವರ ಭಕ್ತಿ ಮತ್ತು ಅವರ ಕುಟುಂಬದ ಬೆಂಬಲ ಸ್ಫೂರ್ತಿದಾಯಕ” ಎಂದು ಶ್ಲಾಘಿಸಿದ್ದಾರೆ.
ತಿರುಪತಿ ದೇವಸ್ಥಾನದ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ನವನೀತಮ್ಮ ಅವರಿಗೆ ವಿಶೇಷ ವಿಐಪಿ ದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಜ್ಜಿಯ ಮೊಮ್ಮಗ, ತಮ್ಮ ಅಜ್ಜಿಯ ಆಸೆಯನ್ನು ಈಡೇರಿಸಿ ಕುಟುಂಬದ ಎಲ್ಲ ಸದಸ್ಯರಿಗೆ ದರ್ಶನ ಭಾಗ್ಯ ಕಲ್ಪಿಸಿದ ಟಿಟಿಡಿ ಹಾಗೂ ಅಧ್ಯಕ್ಷರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.








































