
ಬೆಂಗಳೂರು: ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯಡಿ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಜುಲೈ 1ರಿಂದ ಆರಂಭವಾಗಿದ್ದು, ಬಾಡಿಗೆದಾರರ ಉಚಿತ ವಿದ್ಯುತ್ ಸೌಲಭ್ಯ ಕುರಿತ ಗೊಂದಲಕ್ಕೆ ಇದೀಗ ಬೆಸ್ಕಾಂ ಸ್ಪಷ್ಟನೆ ನೀಡಿದೆ.
ಪರಿಶೀಲನೆ ವೇಳೆ ಅಧಿಕಾರಿಗಳು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಬಾಡಿಗೆ ಅಥವಾ ಲೀಸ್ ಕರಾರು ಪತ್ರವನ್ನು ಪರಿಶೀಲಿಸಲಿದ್ದಾರೆ. ದಾಖಲೆಗಳ ಕೊರತೆಯಿಂದ ಗೃಹ ಜ್ಯೋತಿ ಸೌಲಭ್ಯ ಸ್ಥಗಿತಗೊಳ್ಳಬಹುದು ಎಂಬ ಆತಂಕ ವ್ಯಕ್ತವಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಸ್ಕಾಂ, ಬಾಡಿಗೆದಾರರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ. ಮನೆ-ಮನೆ ಸಮೀಕ್ಷೆ ನಡೆಸುವ ಸಿಬ್ಬಂದಿಯೇ ಹಳೆಯ ಬಾಡಿಗೆದಾರರ ಆಧಾರ್ ವಿವರಗಳನ್ನು ತೆಗೆದು, ಪ್ರಸ್ತುತ ವಾಸವಿರುವ ಬಾಡಿಗೆದಾರರ ಮಾಹಿತಿಯನ್ನು ಸ್ಥಳದಲ್ಲೇ ನವೀಕರಿಸಲಿದ್ದಾರೆ.
ಹೀಗಾಗಿ ಹಳೆಯ ದಾಖಲೆಗಳ ಕಾರಣಕ್ಕೆ ಉಚಿತ ವಿದ್ಯುತ್ ಸೌಲಭ್ಯ ರದ್ದಾಗುವುದಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಆಧಾರ್ ಕಾರ್ಡ್ ಹಾಗೂ ಬಾಡಿಗೆ/ಲೀಸ್ ಕರಾರು ಪತ್ರವನ್ನು ಸಮೀಕ್ಷೆ ವೇಳೆ ನೀಡಿದರೆ ಸಾಕು. ಈ ಪ್ರಕ್ರಿಯೆ ಕೇವಲ ಫಲಾನುಭವಿಗಳ ವಿವರಗಳನ್ನು ದೃಢೀಕರಿಸಲು ಮಾತ್ರವಾಗಿದ್ದು, ಕಚೇರಿಗಳಿಗೆ ತೆರಳುವ ಅಗತ್ಯವಿಲ್ಲ. ಸಮೀಕ್ಷಾ ಸಿಬ್ಬಂದಿಗೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸುವಂತೆ ಹಾಗೂ ಮನೆ ಮಾಲೀಕರು ಬಾಡಿಗೆದಾರರಿಗೆ ಸಹಕಾರ ನೀಡುವಂತೆ ಬೆಸ್ಕಾಂ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿ ಅಥವಾ ಗೊಂದಲಗಳಿದ್ದರೆ ಗ್ರಾಹಕರು ಸಮೀಪದ ಬೆಸ್ಕಾಂ ಉಪ ವಿಭಾಗದ ಕಚೇರಿಯನ್ನು ಸಂಪರ್ಕಿಸಬಹುದು. ಜೊತೆಗೆ ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ 1912 ಸಹಾಯವಾಣಿ ಅಥವಾ 9480816111, 9480816112, 9480816113 ಹಾಗೂ 9480816114 ವಾಟ್ಸಾಪ್ ಸಂಖ್ಯೆಗಳ ಮೂಲಕವೂ ಮಾಹಿತಿ ಪಡೆಯಬಹುದು.








































