ಸಾಲುಮರದ ತಿಮ್ಮಕ್ಕ ಜನ್ಮದಿನದ ಪ್ರಯುಕ್ತ, ಬೀಜ ದುಂಡೆಗಳನ್ನು ವಿತರಿಸಿ ಪರಿಸರ ಜಾಗೃತಿ ಕಾರ್ಯಕ್ರಮ

ಕಾರ್ಕಳ : ಪರಿಸರ ಸಂರಕ್ಷಣೆ ಹಾಗೂ ಹಸಿರು ಪರಿಸರ ನಿರ್ಮಾಣದ ಉದ್ದೇಶದಿಂದ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾಲು ಮರದ ತಿಮ್ಮಕ್ಕನ ಜನ್ಮದಿನದ ಪ್ರಯುಕ್ತ ಜೂ. 30ರಂದು ಬೈಲೂರು ಪೇಟೆಯಲ್ಲಿ ರಿಕ್ಷಾ ಚಾಲಕರಿಗೆ ಬೀಜದುಂಡೆಗಳನ್ನು ವಿತರಿಸಿ ಪರಿಸರ ಜಾಗೃತಿ ಮೂಡಿಸಿದರು.
ಈ ಸಂದರ್ಭ ಮಾತನಾಡಿದ ಕಾರ್ಕಳ ರಿಕ್ಷಾ ಚಾಲಕ-ಮಾಲಕ ಸಂಘದ ಅಧ್ಯಕ್ಷ, ನ್ಯಾಯವಾದಿ ಸದಾನಂದ ಸಾಲಿಯಾನ್, ರಿಕ್ಷಾ ಚಾಲಕರು ಸಂಚಾರದ ವೇಳೆ ರಸ್ತೆ ಬದಿಗಳು, ಖಾಲಿ ಜಾಗಗಳು ಹಾಗೂ ಮರಗಳ ಕೊರತೆಯಿರುವ ಪ್ರದೇಶಗಳಲ್ಲಿ ಬೀಜದುಂಡೆಗಳನ್ನು ಎಸೆಯುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸುವಂತೆ ಮನವಿ ಮಾಡಿದರು.
ರಿಕ್ಷಾ ಚಾಲಕರು ವಿದ್ಯಾರ್ಥಿಗಳ ಪರಿಸರ ಕಾಳಜಿಯನ್ನು ಮೆಚ್ಚಿ ಬೀಜದುಂಡೆಗಳನ್ನು ಸೂಕ್ತ ಸ್ಥಳಗಳಲ್ಲಿ ಬಿತ್ತರಿಸಿ ಹಸಿರು ಪರಿಸರ ನಿರ್ಮಾಣಕ್ಕೆ ತಮ್ಮ ಸಹಕಾರ ನೀಡುವುದಾಗಿ ತಿಳಿಸಿದರು. ವಿದ್ಯಾರ್ಥಿಗಳ ಈ ವಿನೂತನ ಹಸಿರು ಅಭಿಯಾನ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ತೋಟಗಾರಿಕಾ ಇಲಾಖೆಯ ರಮೇಶ್ ಉಳ್ಳಾಗಡ್ಡಿ ಉಪಸ್ಥಿತರಿದ್ದರು. ಶಿಕ್ಷಕರಾದ ಮನೋಜ್, ಗಾಯತ್ರಿ, ಪುಷ್ಪಲತಾ, ಶ್ವೇತಾ ಸಹಕರಿಸಿದರು.








































