27.7 C
Udupi
Saturday, June 27, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 564

ಭರತೇಶ ಶೆಟ್ಟಿ,ಎಕ್ಕಾರು

ಆದಿಶೇಷನು ತನ್ನ ಆಸ್ಥಾನಿಕನಾದ ನಾಗ ಧೃತರಾಷ್ಟ್ರನ ಆಕ್ಷೇಪದ ಕುರಿತಾಗಿ ಯೋಚಿಸಿ “ಹೇ ನಾಗರಾಜನೇ! ನೀನು ಹೇಳಿದಂತೆ ಯಾವುದೇ ಒಂದು ಜಾತಿಯನ್ನು ಅತಿ ಕೆಟ್ಟದ್ದು ಅಥವಾ ಇನ್ನೊಂದು ಜಾತಿಯನ್ನು ಅತಿ ಉತ್ತಮ ಎಂದು ಯಾವ ಕಾಲಕ್ಕೂ ಯಾವ ಕಾರಣಕ್ಕೂ ಹೇಳಲಾಗದು. ಯಾಕೆಂದರೆ ಅದರೊಳಗೆ ಅತ್ಯುತ್ತಮರಾದ ಸಜ್ಜನ ಪುಣ್ಯಾತ್ಮರೂ ಇರುತ್ತಾರೆ, ದುರುಳ ದುರಾತ್ಮರೂ ಇರುತ್ತಾರೆ. ಹಾಗಾಗಿ ಮನುಷ್ಯ ಜಾತಿಯಲ್ಲಿ ಎಲ್ಲರೂ ಕೃತಘ್ನರು, ನೀಚರು, ಪಾಪಿಗಳು ಎಂದು ಆರೋಪಿಸಲಾಗದು. ಯಾಕೆ ನಮ್ಮ ನಾಗ ಸಂಕುಲದೊಳಗೆ ದೈತ್ಯ ನಾಗರು – ದೇವ ನಾಗರು ಎಂಬ ಪಂಗಡವೇ ಎದ್ದು ಕಾಣುವಂತೆ ಇದೆಯಲ್ಲ. ಕಶ್ಯಪ ಬ್ರಹ್ಮನ ಮಕ್ಕಳಲ್ಲೇ ದಿತಿಯ ಪುತ್ರರು ದೈತ್ಯರು, ದಾನುವಿನ ಮಕ್ಕಳು ದಾನವರು, ಅದಿತಿಯ ಮಕ್ಕಳು ಆದಿತ್ಯರು. ಒಂದೇ ತಂದೆಯ ಮಕ್ಕಳಲ್ಲೇ ಎಷ್ಟೊಂದು ಗುಣ ವ್ಯತ್ಯಾಸಗಳಿವೆ. ಹಾಗಿರುವಾಗ ಒಂದು ವಿಭಾಗದ ಸಮಷ್ಟಿ ದೂಷಣೆ ತರವಲ್ಲ. ಇನ್ನು ಸಂಜೀವಕ ಮಣಿಯನ್ನು ನೀಡುವಲ್ಲಿ ಅರ್ಜುನನೂ ನಾಗ ಸಂಕುಲಕ್ಕೆ ಸಂಬಂಧಿಯಾಗಿದ್ದಾನೆ. ಉಲೂಪಿಯ ವೈಧವ್ಯ ನಿವಾರಣೆ ಮತ್ತು ಇರಾವಂತನ ಪಿತೃವಿಯೋಗಕ್ಕೆ ಉತ್ತರವಾಗಿ ಅರ್ಜುನ ಬದುಕಿದರೆ ಪ್ರಯೋಜನ ಪಡೆಯುವುದು ನಮ್ಮ ನಾಗಲೋಕವೇ. ಹೀಗಿರುವಾಗ ಮಣಿಯನ್ನು ನೀಡುವುದು ಉಚಿತವೆಂದೇ ನನ್ನ ಅಭಿಪ್ರಾಯ. ಇದೆಲ್ಲಕ್ಕಿಂತಲೂ ವಿಶಾಲ ದೃಷ್ಟಿಕೋನದಲ್ಲಿ ಚಿಂತನೆ ಮಾಡಿದರೆ ಅತ್ತ ಹಸ್ತಿನಾವತಿಯಲ್ಲಿ ಸಾಗುತ್ತಿರುವುದು ವ್ಯಾಸ, ಧೌಮ್ಯಾದಿ ಮಹರ್ಷಿಗಳ ಪೌರೋಹಿತ್ಯದ ಅಶ್ವಮೇಧ ಯಾಗ. ನಿರ್ದೇಶಕನಾಗಿರುವುದು ಶ್ರೀಹರಿ ಎಂದು ತಿಳಿದ ದೇವರು ಸಂಕಲ್ಪಿಸಿರುವ ಪುಣ್ಯಪ್ರದವಾದ ಈ ಮಹತ್ಕಾರ್ಯಕ್ಕೆ ಸಹಕಾರಿಗಳಾಗಬೇಕು. ಅರ್ಜುನ ಬದುಕದಿದ್ದರೆ ಅತಿಯಾಗಿ ವೇದನೆ ಅನುಭವಿಸುವವರಲ್ಲಿ ಧರ್ಮರಾಯನೂ ಒಬ್ಬನಾಗುತ್ತಾನೆ. ಅವನಂತಹ ಧರ್ಮಾತ್ಮನ ಕಣ್ಣೀರು ತಡೆಯುವ ಕೆಲಸ ಮಾಡುವುದು ಸತ್ಕರ್ಮವೇ ಹೌದು. ಲೋಕ ಕಲ್ಯಾಣಾರ್ಥವಾಗಿ ದಧೀಚಿ ಮಹರ್ಷಿ ತನ್ನ ಬೆನ್ನೆಲುಬನ್ನೇ ದೇವೇಂದ್ರನಿಗೆ ನೀಡುವಂತಹ ಮಹಾನ್ ದಾನ ಮಾಡಿ ಆದರ್ಶಪ್ರಾಯರಾಗಿದ್ದಾರೆ. ಹಾಗಿರುವಾಗ ನಾವು ನೀಡುವುದು ಕೇವಲ ಅರೆ ಕ್ಷಣದ ಬಳಕೆಗೆ ಮಾತ್ರ. ಮತ್ತೆ ನಮ್ಮ ಮಣಿ ನಾಗಲೋಕಕ್ಕೆ ಬರಲಿದೆ. ನಾನು ಸಂಜೀವಕ ಮಣಿಯನ್ನು ಅರ್ಜುನನ ಜೀವ ಉಳಿಸಲು ನೀಡುತ್ತೇನೆ” ಎಂದನು.

ಆಗ ನಾಗ ಧೃತರಾಷ್ಟ್ರನು “ಸ್ವಾಮೀ ನಾನು ಆಕ್ಷೇಪಿಸಿದ ಕಾರಣದಿಂದ ನಿಮ್ಮ ದೃಷ್ಟಿಯಲ್ಲಿ ಕೇಡಿಗನಾಗಿ ಕಂಡಿರಬಹುದು. ಆದರೆ ಯಾವುದೇ ಕಾರಣಕ್ಕೂ ನಮಗೊಬ್ಬ ಅತಿ ಪ್ರಬಲ ವೈರಿ ಇದ್ದಾನೆ ಎಂಬ ಸತ್ಯ ಮರೆಯಬಾರದು. ಅದು ಸುಳ್ಳಾಗಲು ಸಾಧ್ಯವೂ ಇಲ್ಲ. ನಮ್ಮದ್ದಾದ ಈ ವೈಭವೋಪೇತ ನಾಗಲೋಕಕ್ಕೆ ಆ ಗರುಡನಿಗೆ ಬರಲಾಗದಂತೆ ಆತನಿಗೆ ಶಾಪವಿದೆ. ಗರುಡನಿಗಿರುವ ಶಾಪ ನಮ್ಮ ಪಾಲಿಗೆ ವರವಾಗಿದೆ ಎಂದರೆ ತಪ್ಪಾಗದು. ಹೀಗಿರುವಾಗ ನಮ್ಮ ಕೈಯಾರೆ ನಾಗಗಳಾದ ನಮ್ಮ ಪಾಲಿನ ಮಹಾ ಸೌಭಾಗ್ಯ “ಸಂಜೀವಕ ಮಣಿ” ಯನ್ನು ಭೂಲೋಕಕ್ಕೆ ಕಳುಹಿಸಿದರೆ, ಅದು ಗರುಡನಿಗೆ ತಿಳಿದರೆ ಅತಿ ಪ್ರಬಲನಾದ ಆತ ಬಿಡುತ್ತಾನೆಯೇ? ಒಂದೊಮ್ಮೆಗೆ ಅದು ಗರುಡನ ವಶವಾದರೆ ಮತ್ತೆ ನಾಗಲೋಕಕ್ಕೆ ಮರಳಿ ತರುವವರು ಯಾರಿದ್ದಾರೆ? ಯಾರಿಗೆ ಸಾಧ್ಯ? ನೀವೇ ಯೋಚಿಸಿ ನಿರ್ಣಯಿಸಬೇಕೆಂದು ನನ್ನ ಅಭಿಪ್ರಾಯ. ಇನ್ನೂ ಪ್ರಬುದ್ಧನಾಗಿ ಒಂದು ವಿಚಾರ ತಿಳಿಸಲು ಬಯಸುತ್ತೇನೆ. ಅರ್ಜುನ ಹುಟ್ಟಿ ಬೆಳೆಯುತ್ತಿರುವುದು ಮರ್ತ್ಯಲೋಕದಲ್ಲಿ. ಅಲ್ಲಿ ಹುಟ್ಟುವ ಯಾರೇ ಆಗಿರಲಿ ಮೃತ್ಯುವನ್ನು ಬೆನ್ನಲ್ಲಿ ಕಟ್ಟಿಕೊಂಡೇ ಹುಟ್ಟುವುದು ನಿಯಮ. ಹಾಗೆಯೇ ಜನ್ಮ ಪಡೆದಿರುವ ಅರ್ಜುನ ಒಂದೊಮ್ಮೆಗೆ ನಮ್ಮ ಸಂಜೀವಕ ಮಣಿಯಿಂದ ಮರುಜೀವ ಪಡೆದರೂ ಸಾಯದೆ ಅಮರತ್ವ ಹೊಂದಲು ಅವಕಾಶವಿದೆಯೇ? ಇಂದಲ್ಲದಿದ್ದರೆ ನಾಳೆ ಸಾಯಲೇಬೇಕಲ್ಲವೇ? ನಮ್ಮ ಉಲೂಪಿ, ಇರಾವಂತರಿಗೆ ಮನುಷ್ಯ ಸಂಬಂಧ ಮಾಡಿದ ಕಾರಣ ವಿಯೋಗ ಕಟ್ಟಿಟ್ಟದ್ದೇ ಅಲ್ಲವೇ? ಎಲ್ಲಿಯವರೆಗೆ ಸಾವು ಅರ್ಜುನನಿಗೆ ಬರದಂತೆ ನೀವು ತಡೆಯಬಲ್ಲಿರಿ? ಹಾಗಾಗಿ ಮಣಿಯನ್ನು ಕೊಟ್ಟರೂ ಅಂತಹ ಮಹತ್ತರವಾದ ಸಹಾಯವಾಗದು. ದುಡುಕಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಡಿ. ಮಣಿ ನೀಡುವುದು ಬೇಡ” ಎಂದು ವಾದಿಸಿದನು.

ಆದಿಶೇಷನು ಧೃತರಾಷ್ಟ್ರನ ವಿವಾದ ಆಲಿಸಿ “ಹೇ ನಾಗನೇ! ನಿನ್ನ ಯೋಚನೆ ಒಂದು ಮಿತಿಯೊಳಗೆ ಒಪ್ಪಿಕೊಳ್ಳಬಹುದಾದರೂ, ಸತ್ಯ ಅದಕ್ಜಿಂತಲೂ ವಿಸ್ತಾರವಾಗಿದೆ. ನಮಗೆ ದೇವನಾದ ಶ್ರೀವಿಷ್ಣುವಿನ ಬಗ್ಗೆ ಅನ್ಯರ್ಯಾರೂ ಹೇಳಿ ತಿಳಿಯುವ ಅಗತ್ಯವಿದೆಯೇ ಹೇಳು? ಕೃಷ್ಣಾವತಾರಿಯಾಗಿ ಬಂದಿರುವ ದೇವ ಮಮ ಪ್ರಾಣಾಹಿ ಪಾಂಡವಃ ಎಂದು ಘೋಷಣೆ ಮಾಡಿದ್ದಾನೆ. ಲೋಕಪಾಲಕನಾದ ಶ್ರೀಹರಿಯ ಪಂಚ ಪ್ರಾಣಗಳಂತಿರುವ ಪಂಚ ಪಾಂಡವರ ರಕ್ಷಣೆ ಮಾಡಲು ಬೇರೆ ಯಾರ ಸಹಾಯವಾದರು ಬೇಕಾದೀತೋ? ನೀವೇ ಯೋಚಿಸಿ! ನಾವು ಮಣಿ ನೀಡಿದರೂ ಅದು ನಿಮಿತ್ತ ಮಾತ್ರ. ನೀಡದಿದ್ದರೆ ಅರ್ಜುನ ಬದುಕಲಾರ ಎಂದು ಭಾವಿಸಿದ್ದೀರಾ? ಇನ್ನು ಗರುಡನ ಬಗ್ಗೆ ಗೊಂದಲವೇ? ಗರುಡಗಮನನಾದ ಶ್ರೀಹರಿಯೇ ಪಾಂಡವರ ಜೊತೆ ಇರುವಾಗ ಅವರ ಕಾರ್ಯಕ್ಕೆ ಒದಗಿ ಬಂದ ಮಣಿ ಅಪಹರಣವಾದರೆ ಉತ್ತರ ನೀಡಬೇಕಾದದ್ದು ಯಾರು? ಪಾಂಡವ ಪಕ್ಷದವನಾದ ಶ್ರೀಕೃಷ್ಣನೇ ಅಲ್ಲವೇ? ಶ್ರೀಕೃಷ್ಣನ ಒಲುಮೆಯೇ ಪಾಂಡವರ ಪಾಲಿನ ಸಂಜೀವಕ ಮಣಿಯಾಗಿದೆ. ನಮ್ಮ ಬಳಿ ಇರುವ ದಿವ್ಯ ಮಣಿಯ ಶಕ್ತಿ ಶ್ರೀಹರಿಯ ಒಲುಮೆಗೂ ಇದ್ದು ಅವರಿಗಾಗಬೇಕಾದ ಕೆಲಸವನ್ನು ಪರ್ಯಾಯ ರೂಪದಲ್ಲಿ ನೆರವೇರಿಸಬಲ್ಲುದು. ಹಾಗಿರುವಾಗ ಸುಜನರ ಸತ್ಕಾರ್ಯಕ್ಕೆ ನಾವು ಸಹಾಯ ನೀಡಿದರೆ ನಮಗೂ ಉತ್ತಮ. ಏನು ಆಗಬೇಕೋ ಅದು ಲೋಕ ನಿಯಾಮಕನಾದ ಪಾಲನಾಕರ್ತ ಶ್ರೀಹರಿಯ ಚಿತ್ತಕ್ಕೆ ವೇದ್ಯ ವಿಚಾರ.” ಎಂದನು.

“ಮಹಾರಾಜಾ! ನಿಮ್ಮ ಮಾತಿನಲ್ಲೇ ಸಮಸ್ಯೆಯ ಪರಿಹಾರವಿದೆ. ನಾವು ಮಣಿ ನೀಡದಿದ್ದರೂ ಕೃಷ್ಣನೇ ಅರ್ಜುನನನ್ನು ಬದುಕಿಸಬಲ್ಲನಾದರೆ ವ್ಯರ್ಥವಾಗಿ ಕೇವಲ ಹೆಸರಿಗೋಸ್ಕರ ಮಣಿಯನ್ನೊಮ್ಮೆ ಕಳುಹಿಸುವ ಕ್ಷುಲ್ಲಕ ಬುದ್ದಿ ನಾವ್ಯಾಕೆ ಪ್ರದರ್ಶಿಸಬೇಕು? ವೈರಿಯಾದ ಗರುಡ ನಮ್ಮವರ ಮೇಲೆ ಭವಿಷ್ಯದಲ್ಲಿ ಆಕ್ರಮಣ ಮಾಡಿ ಕೊಂದರೆ ಆಗ ಬದುಕಿಸಲು ನಮ್ಮವರಿಗೆ ಬೇಕಾದ ನಮ್ಮ ಜೀವಕ್ಕೆ ಸಮನಾದ ಮಣಿ ಇಲ್ಲೇ ಇರಲಿ. ಮಂತ್ರಿ ಪುಂಡರೀಕನ ಜೊತೆ ಉಲೂಪಿ ಶ್ರೀಕೃಷ್ಣನಲ್ಲಿಗೆ ಹೋಗಿ ಅರ್ಜುನನನ್ನು ಬದುಕಿಸಲು ಬೇಡಿಕೊಳ್ಳಲಿ ಸಮಸ್ಯೆಗೆ ಸರಳ ಉಪಾಯ ಇರುವಾಗ ಇಷ್ಟು ದೊಡ್ಡ ತೊಂದರೆ ಯಾಕೆ ಎದುರಿಸಬೇಕು. ಮಣಿ ನೀಡುವುದು ಬೇಡ” ಎಂದು ಪುಂಡರೀಕ ಮರು ವಾದ ಮಂಡಿಸಿದನು.

ಈವರೆಗೆ ಆದಿಶೇಷನಿಗೆ ಮರು ಉತ್ತರ ನೀಡದೆ ಸುಮ್ಮನುಳಿದಿದ್ದ ಸರ್ಪಗಳು ಈಗ ಧೃತರಾಷ್ಟ್ರನ ವಾದ ಸರಿಯಾಗಿದೆ. ಸಮಸ್ಯೆಗೆ ಅನ್ಯ ಮಾರ್ಗ ಇದೆ ಎಂದಾದ ಮೇಲೆ ಮಣಿಯನ್ನು ಇಷ್ಟು ತೊಂದರೆ ಮೈಮೇಲೆ ಎಳೆದುಕೊಂಡು ನೀಡುವುದು ಬೇಡ ಎಂದು ಹೇಳಿ ಬುಸುಗುಟ್ಟಿದವು. ಸರ್ವರ ಬೆಂಬಲವೂ ಮಣಿಯನ್ನು ನೀಡದೆ ಇರುವುದಕ್ಕೆ ಅನುಮೋದನೆಯಾಯಿತು.

ಆದಿಶೇಷನಿಗೆ ಈ ರೀತಿಯ ವರ್ತನೆ ಬಹಳ ಬೇಸರ ತಂದಿತು. ಒಬ್ಬನಿಂದಾಗಿ ಎಲ್ಲರ ಮನಸ್ಸೂ ದುಷ್ಪ್ರೇರಣೆಗೊಳಗಾಯಿತು. ಯಾವತ್ತೂ ಹಾಗೆಯೇ ಆಗುವುದು ಕಾರ್ಯ ಉತ್ತಮ ಎಂದು ತಿಳಿದಿದ್ದರೂ, ಯಾರೋ ಒಬ್ಬ ಏನಾದರೊಂದು ಕಾರಣ ಹುಡುಕಿ ಆಕ್ಷೇಪಿಸಿದರೆ, ಆಗ ಉಳಿದವರು ಆತನ ಆಕ್ಷೇಪದೆಡೆ ಸುಲಭವಾಗಿ ಕುತೂಹಲ ಹರಿಸಿ, ಗಮನಿಸುತ್ತಾ ಹೌದಲ್ಲಾ, ತೊಂದರೆ ಆದಿತಲ್ಲಾ ಎಂಬ ಭ್ರಮೆಗೊಳಗಾಗಿ ತಾವೂ ಅಂಧತ್ವಕ್ಕೊಳಗಾಗಿ ಪ್ರತಿಭಟಿಸತೊಡಗುತ್ತಾರೆ ಇಲ್ಲೂ ಈಗ ಅಂತಹ ಭ್ರಮೆಯೇ ಕಾರ್ಯರೂಪಕ್ಕೆ ಬಂತು.

ಆದಿಶೇಷ ಪುಂಡರೀಕನನ್ನು ಕರೆದು ” ಅಯ್ಯಾ ಮಂತ್ರಿವರ್ಯನೇ, ನೀನು ಇಲ್ಲಿ ಸಾಗಿದ ಎಲ್ಲಾ ಸಂಗತಿಗಳಿಗೆ ಪ್ರತ್ಯಕ್ಷ ಸಾಕ್ಷಿ ಆಗಿರುವೆ. ಮರಳಿ ಉಲೂಪಿಯಲ್ಲಿಗೆ ಹೋಗಿ ಇಲ್ಲಿ ನಡೆದ ವಿಚಾರಗಳನ್ನು ತಿಳಿಯಪಡಿಸು. ಮಣಿಯನ್ನು ಹೊರಗೆ ನೀಡಲು ನಾಗಲೋಕದ ಒಪ್ಪಿಗೆ ಸಿಗಲಿಲ್ಲ ಎಂದು ತಿಳಿಸು” ಎಂದು ಹೇಳಿ ಕಳುಹಿಸಿದನು.

ಪುಂಡರೀಕ ಅನ್ಯ ಮಾರ್ಗವಿಲ್ಲದೆ ಮರಳಿ ಮಣಿಪುರದತ್ತ ಹೊರಟನು. ನಾಗ ಧೃತರಾಷ್ಟ್ರ ಬಹಳಷ್ಟು ಸಂತೋಷಗೊಂಡನು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page