ಭಾಗ – 558
ಭರತೇಶ್ ಶೆಟ್ಟಿ, ಎಕ್ಕಾರು

ಚಿತ್ರಾಂಗದೆ ಈ ರೀತಿ ಪತಿ ವಿಯೋಗದ ದುಃಖ ತಡೆಯಲಾಗದೆ ವಿಲಾಪಿಸುವಾಗ ನಾಗರಾಜ ಪುತ್ರಿ ಉಲೂಪಿ ಸಂತೈಸಿದಳು. “ಮಹಾರಾಣಿ, ನೀವು ಅನ್ಯಥಾ ದುಃಖಿಸಬಾರದು. ಪ್ರತ್ಯಕ್ಷ ಕಂಡರೂ ಪರಾಂಬರಿಸಿ ನೋಡಬೇಕು ಎಂಬ ಮಾತಿದೆ. ನಮ್ಮ ಪತಿದೇವ ಅರ್ಜುನ ಸಾಮಾನ್ಯನಲ್ಲ, ಪರಮಾತ್ಮ ಶ್ರೀಕೃಷ್ಣನ ಪರಮಾಪ್ತ ಸಖ. ಈ ರೀತಿ ಯುದ್ಧದಲ್ಲಿ ಮರಣ ಹೊಂದಿದ್ದಾನೆ ಎಂಬ ವಿಚಾರ ನನಗೇಕೋ ನಂಬಿಕೆ ಮೂಡಿಸುತ್ತಿಲ್ಲ. ನನ್ನ ಈ ಬಗೆಯ ಚಿಂತನೆಗೆ ಆಸ್ಪದವಾಗುವ ಕಾರಣವೂ ಇದೆ. ಅಂದು ವಿವಾಹ ಪೂರ್ವದಲ್ಲಿ ಗಂಗಾತಡಿಯಿಂದ ಅರ್ಜುನನ್ನು ನಾನು ನಾಗಲೋಕಕ್ಕೆ ಎಳೆದೊಯ್ದಿದ್ದ ದಿನ, ನಾವು ನಮ್ಮ ನಾಗಲೋಕದ ಕೇಳಿವನದಲ್ಲಿ (ಸತಿಪತಿಗಳು/ಸ್ತ್ರೀ ಪುರುಷರು ವಿಹರಿಸುವ ಉದ್ಯಾನ – ರತಿಕ್ರೀಡಾವನ) ವಿಹರಿಸುತ್ತಿರುವಾಗ ಸಲ್ಲಾಪದ ಮಧ್ಯೆ ನಮ್ಮೊಳಗೆ ವಿಚಾರವೊಂದು ನಡೆದು ಹೋಯಿತು. ಪಾರ್ಥ ಮಹಾಶಯನು ನಮ್ಮ ಉದ್ಯಾನವನದಲ್ಲಿದ್ದ ಐದು ದಾಳಿಂಬೆಯ ಮರಗಳನ್ನು ತೋರಿಸಿ, ಇವುಗಳು ನನ್ನ ಪಂಚ ಪ್ರಾಣಗಳೇ ಆಗಿರಲಿವೆ. ನಾನು ಇಲ್ಲಿಂದ ನಿನ್ನನ್ನೋರ್ವಳನ್ನೇ ಬಿಟ್ಟು ತೆರಳಿದ ಬಳಿಕವೂ ಇವು ನಾನೇ ಆಗಿ ನಿನ್ನ ಜೊತೆಗಿರುತ್ತವೆ. ನನ್ನ ಉಪಸ್ಥಿತಿಯನ್ನು ಸಾರುವ ಈ ಪಂಚವೃಕ್ಷಗಳು ಯಾವಾಗ ಒಣಗುವವೋ ಅಂದು ನನ್ನ ಪ್ರಾಣ ಹೋಯಿತೆಂದು ನೀನು ತಿಳಿಯಬಹುದೆಂದು ಹೇಳಿದ್ದಾರೆ. ಪಾರ್ಥ ಮಹಾಶಯ ತನ್ನ ಅನುಷ್ಠಾನ ಬಲದಿಂದ ಅವುಗಳಲ್ಲಿ ಪ್ರಾಣಶಕ್ತಿ ಪ್ರತಿಷ್ಟಾಪಿಸಿ ತುಂಬಿ ಹೋಗಿದ್ದರು. ವಿಚಾರ ಹೀಗಿರುವಾಗ, ಮಹಾರಾಣಿ ಚಿತ್ರಾಂಗದೆ! ನೀವು ಕೇವಲ ಪ್ರಚಾರದ ಸುದ್ದಿ ಕೇಳಿ ಆತಂಕಕ್ಕೆ ಒಳಗಾಗಬೇಡಿ. ನಾನು ನಾಗಲೋಕಕ್ಕೆ ಹೋಗಿ ದೃಷ್ಟಾಂತವಾಗಿ ಇರುವ ಆ ಮಹಾ ಪಂಚವೃಕ್ಷಗಳ ಸ್ಥಿತಿಯನ್ನು ನೋಡಿ ಖಚಿತಪಡಿಸಿ ಬರುವೆ. ಆವರೆಗೆ ಯಾವುದೇ ರೀತಿಯ ವಿಷಾದ ಬೇಡ, ಸೈರಿಸಿಕೊಳ್ಳಬೇಕು” ಎಂದು ಹೇಳಿ ಚಿತ್ರಾಂಗದೆಯ ಅನುಮತಿ ಪಡೆದು ಉಲೂಪಿ ನಾಗಲೋಕಕ್ಕೆ ಹೋದಳು.
ಪಾತಾಳದ ನಾಗಲೋಕ ಸೇರಿದ ಉಲೂಪಿ ನೇರವಾಗಿ ಕ್ರೀಡಾವನಕ್ಕೆ ಧಾವಿಸಿದಳು. ನಾಗರಾಜ ಪುತ್ರಿ ಉಲೂಪಿ ಅಲ್ಲಿ ನೋಡಿದರೆ ಐದು ದಾಳಿಂಬೆಯ ವೃಕ್ಷಗಳೂ ಮಹಾಗ್ನಿಯ ಝಳಕ್ಕೆ ಸಿಲುಕಿದ ರೀತಿ ಕರಟಿ ಹೋಗಿದ್ದವು. ಆ ಕ್ಷಣವೇ ಆಕೆಗೆ ಅರ್ಜುನ ಮೃತ್ಯುವಶನಾಗಿರುವ ಸುದ್ಧಿ ಸತ್ಯವೆಂಬ ವಿಚಾರ ಸ್ಪಷ್ಟವಾಯಿತು. ಶೋಕಾರ್ತಳಾಗಿ ಮರಳಿ ಬಂದು ತಡೆದುಕೊಳ್ಳಲಾಗದ ದುಃಖದಿಂದ ವಿಷಯದ ಸತ್ಯಾಸತ್ಯತೆಯನ್ನು ಪ್ರಮಾಣೀಕರಿಸಿ ಹೇಳಿದಳು. ಕೂಡಲೇ ಅವರೆಲ್ಲರೂ ಎದ್ದು ಓಡುತ್ತಾ ಅರ್ಜುನನ ಮೃತಕಾಯ ಬಿದ್ದಿರುವ ರಣಭೂಮಿಯತ್ತ ಓಡಿದರು. ರಣಾಂಗಣದಲ್ಲಿ ನೋಡಿದರೆ ಅರ್ಜುನನ ಶಿರಸ್ಸು ಛೇದನಗೊಂಡಿದ್ದು, ಶರೀರ ರುಂಡ ಮುಂಡಗಳಾಗಿ ಬೇರ್ಪಡಿಸಲ್ಪಟ್ಟು ಧರಾಶಾಯಿಯಾಗಿದೆ. ಸಹಿಸಲಾಗದ ದುಃಖದೊಂದಿಗೆ ಬೊಬ್ಬಿರಿದು ಅಳುತ್ತಾ ನೆಲದ ಮೇಲೆ ಬಿದ್ದಿರುವ ಪಾರ್ಥನ ಪಾರ್ಥಿವ ದೇಹದ ಮೇಲೆ ಹೊರಳಾಡುತ್ತಾ ಆಕ್ರಂದನಗೈದರು.
ಚಿತ್ರಾಂಗದೆ ಅರ್ಜುನನ ಭೀಭತ್ಸಕರ ಸ್ಥಿತಿಯ ತುಂಡರಿಸಲ್ಪಟ್ಟಿರುವ ದೇಹವನ್ನು ನೋಡುತ್ತಾ “ಅಯ್ಯಾ ಮಹಾತ್ಮನೇ ನನ್ನ ವಿಚಾರ ಬದಿಗಿಡೋಣ. ನಿನ್ನ ಪತ್ನಿಯೇ ನಾನು ಹೌದಾದರೂ, ಪತಿಯ ಅಂಗಸಂಗವಿಲ್ಲದೆ ಅದೆಷ್ಟೋ ಕಾಲ ಕಳೆದಿದ್ದೇನೆ. ಆದರೆ ನೀನು ಇನ್ನೊಮ್ಮೆ ಬರಬಹುದು, ನಾವು ಮತ್ತೊಮ್ಮೆ ಕೂಡುವ ಭಾಗ್ಯ ಒದಗೀತು ಎಂಬ ಮಹದಾಸೆಯನ್ನು ಹೊತ್ತು ಬದುಕಿದ್ದೆ ಎಂಬುವುದು ಸತ್ಯ. ಆದರೆ ನಿನ್ನ ಜೊತೆಯಲ್ಲೇ ಬದುಕುತ್ತಿರುವ ಸುಭದ್ರೆ, ದ್ರೌಪದಿಯರು ಈ ಮರಣವಾರ್ತೆ ಕೇಳಿ ಹೇಗೆ ಸಹಿಸಿಕೊಂಡಾರು ಹೇಳು ಪತಿದೇವಾ! ಅವರನ್ನು ತೊರೆದು ಹೋಗುವ ಮನಸ್ಸಾದರು ಹೇಗೆ ಬಂತು? ಹಾಗೂ ನಿನ್ನ ಬಗ್ಗೆ ಅರಿಯದವರೇ ನಾವು? ರೂಪ, ಗುಣ, ಪ್ರೌಢಿಮೆ, ಪರಾಕ್ರಮ, ಜ್ಞಾನ, ಆಚಾರ, ವಿಚಾರಗಳಲ್ಲಿ ನಿನ್ನೊಳಗೆ ಎಳ್ಳಿನಿತು ಲೋಪವೂ ಕಾಣ ಸಿಕ್ಕಿಲ್ಲ. ಅಂತಹ ಮಹಾನ್ ವ್ಯಕ್ತಿಯೂ ಶಕ್ತಿಯೂ ಆಗಿರುವ ನಿನಗೆ ಹೋಲಿಸಿದರೆ ನಾವು ಅತಿ ದುರ್ಬಲರು. ಹಾಗಿದ್ದೂ ನಮ್ಮ ಶರೀರದಲ್ಲಿ ಇನ್ನೂ ಪ್ರಾಣ ಯಾಕೆ ಉಳಿದಿದೆಯೋ ತಿಳಿಯದು” ಹೀಗೆಲ್ಲಾ ಹತಾಶರಾಗಿ ರೋಧಿಸತೊಡಗಿದರು.
ಇತ್ತ ಉಲೂಪಿಯೂ ಅರ್ಜುನ ಪಾದ ಮೂಲದಲ್ಲಿ ಬಿದ್ದು ಹೊರಳಿ ಚರಣಗಳಿಗೆ ವಂದಿಸುತ್ತಾ ಬಿಗಿದಪ್ಪುತ್ತಾ, ಕಾಲು, ಹೊಟ್ಟೆ ಎದೆ ಹೀಗೆ ಮೇಲೇರುತ್ತಾ, ಮೈಮೇಲೆ ಹರಿದಾಡುತ್ತಾ, ಕುತ್ತಿಗೆಯ ಭಾಗಕ್ಕೆ ಬಂದಾಗ ಒಮ್ಮೆಲೇ ಹೌಹಾರಿ ಹೆದರಿ ಚೀರಿ ಕಿರುಚಾಡಿ ಹುಚ್ಚಿಯಂತಾಗಿ ಓಡಿದಳು. ಪಾರ್ಥನ ರುಂಡವನ್ನೆತ್ತಿ ಮಡಿಲಲ್ಲಿ ಹಾಕಿ ಚುಂಬಿಸಿ ಮತ್ತೆ ಮತ್ತೆ ತನ್ನ ಎದೆಗೊತ್ತಿ ಹಿಡಿದು ತ್ರಾಣವಿರುವಷ್ಟು ಬೊಬ್ಬಿರಿದು ಅತ್ತಳು. ಮೇಲಿಂದ ಮೇಲೆ ಅರ್ಜುನನ ಸಾಹಸ ವಿಕ್ರಮಗಳ ವರ್ಣನೆ ಮಾಡುತ್ತಾ, ಇಂತಹ ಅದ್ಬುತ ಚೈತನ್ಯವಂತನನ್ನು ಕಳಕೊಂಡೆವಲ್ಲಾ ಎಂದು ಮರುಗತೊಡಗಿದಳು.
ಚಿತ್ರಾಂಗದೆಯ ರೋಷ ಈಗ ತಾನು ಹೆತ್ತು ಹೊತ್ತು ಸಲಹಿದ ಮಗನತ್ತ ತಿರುಗಿತು. “ಹೇ ಮಹಾವೀರನೇ! ಯಾಕೆ ಕಂಬದಂತೆ ನಿಂತಿರುವೆ? ಅಪ್ಪನನ್ನೇ ಕೊಂದ ವಿಕ್ರಮಿಯೇ! ಮಹಾಸಾಹಸಿಗ ಎಂಬ ಜಗದ್ವಿಖ್ಯಾತಿ ನಿನಗೆ ಸಿಕ್ಕಿದೆಯಲ್ಲಾ? ಸಂತೋಷದಿಂದಿರು ನೀನು. ಆದರೆ ನಿನ್ನ ತಾಯಂದಿರಾದ ನಮ್ಮಿಬ್ಬರನ್ನು ಮಾತ್ರ ನಿನ್ನ ಕೈಯಾರೆ ಕೊಂದು ಬಿಡು. ಹಾಗೆ ಮಾಡಿದರೆ ಅಪರಾಧವಾದೀತು ಎಂಬ ಭಯವೇ? ನಿನಗೆ ಆ ವಿಚಾರದ ಅಂಜಿಕೆ ಬೇಡ. ಯಾಕೆಂದರೆ ಆ ಕಾರ್ಯಕ್ಕೆ ಆದರ್ಶರಾಗಿ ಭಾರ್ಗವರಾಮರೇ ತಮ್ಮ ತಾಯಿಯ ಶಿರಸ್ಸನ್ನು ಪರಶುವಿನಿಂದ ಕಡಿದು ಕತ್ತರಿಸಿರುವ ಘಟನೆಯನ್ನು ಸ್ಮರಿಸಿಕೋ. ನಾವಿನ್ನು ಬದುಕುವ ಯಾವ ಅಗತ್ಯವೂ ಇಲ್ಲ, ಇಚ್ಚೆಯೂ ಇಲ್ಲ. ನಮ್ಮಿಬ್ಬರ ಶಿರಸ್ಸನ್ನೂ ಈ ಕೂಡಲೆ ಕತ್ತರಿಸು. ನಮ್ಮ ಪತಿಯ ಜೊತೆಯಾಗಿ ಆ ಲೋಕದಲ್ಲಿ ಬದುಕುವ ಯೋಗವನ್ನಾದರು ಕರುಣಿಸು. ಅಪ್ಪನನ್ನೇ ಕೊಂದವನಿಗೆ ಈ ಕೆಲಸ ಕಷ್ಟವಾಗದು. ವೀರನಾದ ನಿನ್ನಲ್ಲಿ ಅಂತಹ ಸ್ಥೈರ್ಯದ ಕೊರತೆಯಿರದು. ಹೇ ಮಹಾಬಲಶಾಲಿಯೇ! ಈಗಲೇ ನಮ್ಮಿಬ್ಬರ ಶಿರಸ್ಸನ್ನು ಕಡಿದು ಹಾಕು. ಇದು ನಿನಗೆ ನಮ್ಮ ಆಜ್ಞೆ” ಎಂದು ಅಧಿಕಾರವಾಣಿಯಿಂದ ನುಡಿದಳು.
ಬಬ್ರುವಾಹನನಿಗೆ ತಾಯಿಯ ಆಜ್ಞೆ ಮೀರುವ ಹಾಗಿಲ್ಲ, ಹಾಗೆಂದು ಪೂರೈಸಲಾಗದು. ದುಃಖತಪ್ತನಾಗಿ ಏನು ಮಾಡಲಿ ನಾನೀಗ ಎಂಬ ದ್ವಂದ್ವಕ್ಕೊಳಗಾಗಿ ಧಾರಾಕಾರವಾಗಿ ಕಣ್ಣೀರ್ಗರೆಯುತ್ತಾ ಸ್ಥಂಭೀಭೂತನಾಗಿದ್ದಾನೆ.


































