90 ಬಾರಿ ರಕ್ತದಾನ ಮಾಡಿದ ರೋಟೇರಿಯನ್ ಇಕ್ಬಾಲ್ ಅಹ್ಮದ್ ರವರಿಗೆ ಗೌರವಾರ್ಪಣೆ

ಕಾರ್ಕಳ ವರ್ಧಮಾನ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ರೋಟೇರಿಯನ್ ಇಕ್ಬಾಲ್ ಅಹ್ಮದ್ ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಸಮಾಜಸೇವೆಯ ಮನೋಭಾವವನ್ನೂ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಇಂದಿನ ಮಕ್ಕಳೇ ನಾಳಿನ ಉತ್ತಮ ಪ್ರಜೆಗಳು ಹಾಗೂ ದೇಶದ ಭವಿಷ್ಯ ನಿರ್ಮಾತೃಗಳು ಎಂದು ಶುಭ ಹಾರೈಸಿದರು.
90 ಬಾರಿ ರಕ್ತದಾನ ಮಾಡಿ ಅನೇಕರಿಗೆ ಜೀವದಾನ ನೀಡಿರುವ ಹಾಗೂ 95ಕ್ಕೂ ಅಧಿಕ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತದಾನದ ಮಹತ್ವದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿರುವ ಮಹಾನ್ ಸಮಾಜಸೇವಕರಾದ ರೋಟೇರಿಯನ್ ಇಕ್ಬಾಲ್ ಅಹ್ಮದ್ ರವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಸಂಸ್ಥೆಯ ಯೋಗ ಶಿಕ್ಷಕಿ ಮಮತಾ ದೇವಾಡಿಗ ರವರು ಮಕ್ಕಳಿಗೆ ಯೋಗ, ಧ್ಯಾನ ಹಾಗೂ ವಿವಿಧ ಮುದ್ರೆಗಳ ಮಹತ್ವವನ್ನು ತಿಳಿಸಿಕೊಟ್ಟರು. ಯೋಗಾಭ್ಯಾಸವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು.
ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ಕೆ. ಹೆಗ್ಡೆ ರವರು ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳನ್ನು ಕೋರಿ, ಪ್ರಾಸ್ತಾವಿಕ ನುಡಿಗಳೊಂದಿಗೆ ಆಗಮಿಸಿದ ಅತಿಥಿಗಳು ಹಾಗೂ ಅಭ್ಯಾಗತರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಕುಮಾರಯ್ಯ ಹೆಗ್ಡೆ ಹಾಗೂ ಜಗದೀಶ್ ಹೆಗ್ಡೆ ರವರು ಉಪಸ್ಥಿತರಿದ್ದರು.
ಶಿಕ್ಷಕಿ ಕೃತಿಕಾ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ದೀಪಿಕಾ ರವರು ವಂದನಾರ್ಪಣೆಗೈದರು.


































