ಪ್ರೇಯಸಿ ಮದುವೆಗೆ ಸಿಟ್ಟಾಗಿ ವಿಷ ಕುಡಿಸಿ, ಕತ್ತು ಹಿಸುಕಿ ಕೊಂದ: ಬೆಂಗಳೂರಿನಲ್ಲಿ ಘಟನೆ

ಬೆಂಗಳೂರು: ಯುವಕನೋರ್ವ ಮದುವೆಯಾಗಿ ಆರು ವರ್ಷದ ಮಗನಿದ್ದರೂ, ಇನ್ನೊಂದು ಯುವತಿಯನ್ನು ಪ್ರೀತಿಸಿ ಆಕೆಗೆ ಮದುವೆಯ ವಿಷಯ ತಿಳಿದಾಗ, ವಿಷ ಕುಡಿಸಿ ಕತ್ತು ಹಿಸುಕಿ ಕೊಂದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಕೊಲೆಯಾದ ಯುವತಿಯನ್ನು ಭವಾನಿ (22) ಎಂದು ಗುರುತಿಸಲಾಗಿದ್ದು, ಆಕೆ ಮೂಲತ ಮಾಗಡಿ ಮೂಲದವಳಾಗಿದ್ದಳು. ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಆರೋಪಿ ಚಂದ್ರಶೇಖರ್ ಆಟೋ ಡ್ರೈವರ್ ಕೆಲಸದಲ್ಲಿದ್ದು ಆತನಿಗೆ ಈಗಾಗಲೇ ಮದುವೆಯಾಗಿ ಆರು ವರ್ಷದ ಮಗನಿದ್ದಾನೆ.
ಆಟೋ ಬುಕ್ ಮಾಡುವ ಸಂದರ್ಭದಲ್ಲಿ ಆರೋಪಿ ಜೊತೆ ಪರಿಚಯಕ್ಕೆ ಬಿದ್ದ ಯುವತಿ ಮನೆಯವರಿಗೆ ತಿಳಿಯದಂತೆ ಗುಟ್ಟಾಗಿ ಇಬ್ಬರು ಮದುವೆಯಾಗಿದ್ದರು. ಆರೋಪಿ ಚಂದ್ರಶೇಖರ್ ಗೆ ಈಗಾಗಲೇ ಮದುವೆಯಾಗಿರುವ ವಿಷಯ ಭವಾನಿಗೂ ತಿಳಿದಿತ್ತು.
ಇದೀಗ ಭವಾನಿ ಮನೆಯಲ್ಲಿ ಆಕೆಗೆ ಮದುವೆ ಮಾಡಲು ಮುಂದಾಗಿದ್ದು, ತನ್ನನ್ನು ಬಿಟ್ಟು ಬೇರೆಯವನನ್ನು ಮದುವೆಯಾಗ ಬೇಡ ಎಂದು ಆರೋಪಿ ಚಂದ್ರಶೇಖರ್ ಹಠಕ್ಕೆ ಬಿದ್ದಿದ್ದಾನೆ. ಆದರೆ ಭವಾನಿ ನಿನಗೂ ಕೂಡ ಮದುವೆಯಾಗಿದೆ. ನಾನು ಕೂಡ ಬೇರೆ ಮದುವೆ ಯಾದರೆ ಏನು ತಪ್ಪಿದೆ..? ಮದುವೆಯ ನಂತರ ಕೂಡ ಇಬ್ಬರು ಪ್ರೀತಿ ಮುಂದುವರಿಸೋಣ ಅಂತ ಹೇಳಿದ್ದಾಳೆ .ಇದೇ ವಿಚಾರಕ್ಕೆ, ಇಬ್ಬರ ನಡುವೆ ತೀವ್ರ ಜಗಳ ನಡೆದಿದೆ.
ಜಗಳದ ಸಂದರ್ಭದಲ್ಲಿ ಸಾಯುವ ನಿರ್ಧಾರ ಮಾಡಿ ಇಬ್ಬರು ವಿಷ ಕುಡಿದಿದ್ದಾರೆ. ವಿಷ ಕುಡಿದ ಬಳಿಕ ಭವಾನಿ ವಾಂತಿ ಮಾಡಿಕೊಂಡಿದ್ದು ಆಕೆ ಬದುಕುತ್ತಾಳೆ ಎಂದು ಆರೋಪಿ ಚಂದ್ರಶೇಖರ್ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಸದ್ಯ ಆರೋಪಿ ಚಂದ್ರಶೇಖರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

































