ಭಾಗ -552
ಭರತೇಶ್ ಶೆಟ್ಟಿ, ಎಕ್ಕಾರು

ಅರ್ಜುನನ ಕಣ್ಣಾಲಿಗಳು ಕೋಪದಿಂದ ಕೆಂಪಾದವು. ಕೋಪದ ಪ್ರದರ್ಶನವೋ ಎಂಬಂತೆ ಗಾಂಡೀವದ ಹೆದೆಯನ್ನು ಮೀಟಿ ದಶದಿಕ್ಕುಗಳೂ ಪ್ರತಿಧ್ವನಿಸುವಂತೆ ಜೇಗೈದು ಝೇಂಕಾರ ನಾದವೆಬ್ಬಿಸಿದನು. ತತ್ಕ್ಷಣವೇ ಬಾಣಗಳನ್ನು ಹೂಡಿ ಬಬ್ರುವಾಹನನ ರಥದ ಮೇಲೆ ಶರವರ್ಷಗೈದನು. ಬಬ್ರುವಾಹನನೇನು ಕೈಕಟ್ಟಿ ನಿಂತಿದ್ದಾನೆಯೇ? ಒಂದೊಂದು ಶರಗಳನ್ನೂ ಎಣಿಸಿ ಕತ್ತರಿಸುವಂತೆ ಅಷ್ಟೂ ಬಾಣಗಳನ್ನು ಖಂಡಿಸಿದನು. ಆದರೂ ನುಸುಳಿದ ಕೆಲವಷ್ಟು ಬಾಣಗಳು ಬಬ್ರುವಾಹನನ ಶರೀರವನ್ನು ಚುಚ್ಚಿ ಧಾರಕಾರವಾಗಿ ರಕ್ತ ಒಸರತೊಡಗಿತು. ದೂರದಿಂದ ನೋಡುವಾಗ ಮುಳ್ಳಿನ ಮರದಂತೆ ಕಾಣತೊಡಗಿದನು.
ಅಷ್ಟು ಬಾಣಗಳು ಚುಚ್ಚಿದರೂ ಎಳ್ಳಷ್ಟೂ ವಿಚಲಿತನಾಗದೆ “ಹೇ ಪಾರ್ಥ ಮಹಾಶಯಾ! ನಿನ್ನ ಸಾಮಾನ್ಯ ಶರಗಳು ನನಗೇನೂ ಮಾಡಲಾರವು. ಈ ಗಾಯಗಳಿಂದ ನನಗೇನೂ ಆಗದು. ಎಲ್ಲಿ ನೀನು ಮಹಾದೇವ ಶಿವನನ್ನು ಮೆಚ್ಚಿಸಿ ಪಡೆದ ಪಾಶುಪತ? ಅದನ್ನೊಮ್ಮೆ ಪ್ರಯೋಗಿಸಿ ಬಿಡು. ಕಾತರದಿಂದ ಎದುರಿಸಲು ಕಾಯುತ್ತಿದ್ದೇನೆ. ಇದೋ ನಾನು ಪ್ರಯೋಗಿಸುವ ಬಾಣಗಳನ್ನು ಸಹಿಸಬಲ್ಲೆಯಾ ನೋಡೋಣ” ಎಂದು ಸರಸರನೆ ತೀಕ್ಷ್ಣ ಶರಗಳನ್ನು ಸೆಳೆ ಸೆಳೆದು ಬಿಟ್ಟನು. ಅರ್ಜುನತ್ತ ಧಾರಕಾರವಾಗಿ ಬರುತ್ತಿದ್ದ ಅಯುತ – ನಿಯುತ (ಹತ್ತು ಸಾವಿರ ಬಾಣಗಳ ದಂಡು) ಶರಪುಂಜಗಳು ಒಮ್ಮೆಗೆ ಸವಾಲಾಗಿ ಪರಿಣಮಿಸಿದವು. ಅರ್ಜುನನ ಸ್ಥಿತಿ ಬಬ್ರುವಾಹನನೆದುರು ಕೊಂಚ ಮಂಕಾದಂತೆಯೇ ಕಾಣುತ್ತಿದೆ.
ಅರ್ಜುನನಿಗೆ ಹಿನ್ನಡೆಯಾಗಲು ಗಂಗಾಮಾತೆಯ ಶಾಪವೂ ಪರೋಕ್ಷ ಕಾರಣವಾಗಿದೆ. ಶಾಪವಾಕ್ಯದ ಪರಿಣಾಮವೋ ಎಂಬಂತೆ ಬಬ್ರುವಾಹನ ವಿಜ್ರಂಭಿಸುತ್ತಿದ್ದಾನೆ.
ಮಾಹಿಷ್ಮತಿಗೆ ಅಶ್ವಮೇಧದ ಕುದುರೆ ಬಂದು ಸಾಗಿದ ಕಾಳಗದಲ್ಲಿ ಅಗ್ನಿದೇವನ ಸಂಧಾನಕ್ಕೆ ಒಪ್ಪಿ ಅರಸ ನೀಲಧ್ವಜ ಕಪ್ಪಕಾಣಿಕೆ ನೀಡಲು ಒಪ್ಪಿದ. ಆ ಸಮಯ ಸ್ವಾಭಿಮಾನಭಂಗವಾಯಿತೆಂದು ಮಹಾರಾಣಿ ಜ್ವಾಲಾ ಆಕ್ಷೇಪಿಸುತ್ತಾಳೆ. ಶರಣಾಗಬಾರದು, ಕಪ್ಪ ನೀಡಬಾರದು. ಒಂದು ವೇಳೆ ಹಾಗೆ ಮಾಡಿದರೆ ನಾನು ಅರಮನೆ ತೊರೆದು ಹೋಗುತ್ತೇನೆ ಎಂದು ಹಠ ಹಿಡಿದಿದ್ದಳು. ಆದರೆ ನೀಲಧ್ವಜ ಅಗ್ನಿ ದೇವನ ಮಾತಿನಂತೆಯೇ ವ್ಯವಹರಿಸಿ ಸಂಧಾನವನ್ನೇ ಮಾಡಿದ ಕಾರಣ ಜ್ವಾಲಾ ಪುರ ತೊರೆದು ಹೊರ ಹೋಗಿದ್ದಳು.
ಹಾಗೆ ಹೊರಟ ಮಾಹಿಷ್ಮತಿಯ ಮಹಾರಾಣಿ ಜ್ವಾಲಾ ಗಂಗಾತೀರಕ್ಕೆ ಬಂದು ನಿಂತಳು. ಅಲ್ಲಿದ್ದ ಅಂಬಿಗರನ್ನೆಲ್ಲ ಕೂಗಿ ಕರೆದು “ಯಾರು ನನಗೆ ಒಂದು ತೊಟ್ಟೂ ನೀರು ಸೋಕದಂತೆ ಗಂಗಾನದಿ ದಾಟಿಸಬಲ್ಲಿರೋ ಅವರಿಗೆ ವಿಶೇಷ ದಾನ ನೀಡುವೆ” ಎಂದು ಘೋಷಿಸಿದಳು. ಆಗ ಅಂಬಿಗರೆಲ್ಲರೂ “ನಮ್ಮಿಂದಾಗದು, ನದಿ ದಾಟುವಾಗ ಎಲ್ಲಾದರೂ ಒಂದು ಹನಿ ನೀರು ಸೋಕದಿರದು. ಅಮ್ಮಾ ಗಂಗಾ ಜಲ ಈ ಜಗದಲ್ಲೇ ಪವಿತ್ರಜಲ. ಪಾಪನಾಶಿನಿಯಾದ ಗಂಗೆಯ ಜಲದಲ್ಲಿ ಸ್ನಾನ ಮಾಡಿದರೆ ಕೃತ ದೋಷಗಳಿದ್ದರೂ ನಾಶವಾಗುತ್ತವೆ. ಅಂತಹದ್ದರಲ್ಲಿ ನೀವು ಪವಿತ್ರ ಜಲ ಸ್ಪರ್ಶವಾಗಲೇ ಬಾರದು ಎನ್ನುವಿರಲ್ಲ! ಯಾಕಮ್ಮಾ?” ಎಂದು ಕುತೂಹಲಿಗರಾಗಿ ಕೇಳಿದರು.
ಆಗ ರಾಣಿ ಜ್ವಾಲಾ “ಯಾರು ಹೇಳಿದ್ದು ಗಂಗೆ ಪಾವನಳೆಂದು? ಆಕೆ ಮಹಾಪಾಪಿ. ಯಾಕೆ ಎಂಬ ಸತ್ಯವನ್ನು ನಿಮಗೆ ಹೇಳಲಾರೆ. ಸ್ವತಃ ಗಂಗೆಯೇ ಬಂದು ನನ್ನಲ್ಲಿ ಪ್ರಶ್ನಿಸಿದರೆ ನೇರವಾಗಿ ಆಕೆಗೆ ಉತ್ತರಿಸುವೆ” ಎಂದಳು.
ಈ ಪ್ರಕರಣವನ್ನೆಲ್ಲಾ ಗಮನಿಸುತ್ತಿದ್ದ ಗಂಗೆಗೆ “ನನ್ನಲ್ಲೂ ಈ ಜ್ವಾಲಾ ದೋಷ ಕಂಡಿರುವಳೇ? ಏನೆಂದು ಆಕೆಯಲ್ಲಿ ನಾನೇ ಕೇಳಿ ತಿಳಿದುಕೊಳ್ಳುವೆ” ಎಂದು ಪ್ರತ್ಯಕ್ಷವಾಗಿ ಪ್ರಕಟಗೊಂಡಳು. “ಹೇ ಜ್ವಾಲಾ! ನೀನು ಅಂಬಿಗರಲ್ಲಿ ಅದೇನೋ ಹೇಳುತ್ತಿದ್ದೆ. ನಾನು ಮಾಡಿರುವ ಪಾಪವೇನು? ನಾನೇ ಗಂಗಾದೇವಿ. ನಿನ್ನನ್ನು ಕೇಳಿ ತಿಳಿಯಲು ಪ್ರಕಟಳಾಗಿದ್ದೇನೆ” ಎಂದು ಪ್ರಶ್ನಾರ್ಥವಾಗಿ ಕೇಳಿದಳು.
ಆಗ ರಾಣಿ ಜ್ವಾಲಾ “ನಿನ್ನ ಮುಖದರ್ಶನವೂ ನನ್ನಂತಹವರಿಗೆ ನಿಷಿದ್ಧ. ನೀನು ಮಹಾಪಾಪಿಯೇ ಆಗಿರುವೆ. ನಿನ್ನ ಪುತ್ರನಾದ ಭೀಷ್ಮ ಮಾಡಿರುವ ತ್ಯಾಗ ಸಾಧಾರಣವಾದುದೇ? ಸತ್ಯಸಂಧನೂ, ಧರ್ಮಾತ್ಮನೂ, ನ್ಯಾಯಪರನೂ, ಮಹಾ ದೈವಭಕ್ತನೂ ಆಗಿದ್ದು ತನ್ನ ಸುಧೀರ್ಘ ಜೀವಮಾನವನ್ನೇ ತಪಸ್ಸಿನಂತೆ ಕಳೆದ ಮಹಾತ್ಮನಲ್ಲವೇ? ಅಂತಹ ಮಹಾಮಹಿಮನನ್ನು ಕಪಟ ಮೋಸದಿಂದ ಕಗ್ಗೊಲೆ ಮಾಡಿದರಲ್ಲಾ? ಷಂಡನಾದ ಆ ಶಿಖಂಡಿಯನ್ನು ಎದುರು ನಿಲ್ಲಿಸಿ ಶಸ್ತ್ರ ತ್ಯಾಗ ಮಾಡಿದ ನಿರಾಯುಧನ ಮೇಲೆ ನಿಷ್ಕರುಣಿಯಾಗಿ ಬಾಣ ಪ್ರಯೋಗಿಸಿದನಲ್ಲಾ ಆ ಅರ್ಜುನ ಆತನ ಮಹಾಪಾತಕಕ್ಕೆ ತಾಯಿಯಾದ ನೀನೇನು ಶಿಕ್ಷೆ ನೀಡಿದೆ? ತುತ್ತನ್ನ ನೀಡಿ, ವಿದ್ಯೆ ಬುದ್ದಿ ಇತ್ತು ಸಾಕಿ ಸಲಹಿದ ಪಿತಾಮಹನನ್ನು ಕೊಂದ ಕೊಲೆಗಡುಕ ಅರ್ಜುನನ ಜೊತೆ ನೀನು ಅತಿ ಪ್ರೀತಿಯಿಂದಲೇ ವ್ಯವಹರಿಸುವೆಯಲ್ಲ? ನಿನಗಿಂತ ದೊಡ್ಡ ನಯ ವಂಚಕಿ, ದೋಷಿ ಮಾತೆ ಜಗದಲ್ಲಿ ಇರಲು ಸಾಧ್ಯವೇ? ಬಾಯಿಬಾರದ ನಾಯಿ ತನ್ನ ಮರಿಯನ್ನು ಮುಟ್ಟಿದರೆ ತನಗಾಗುವಷ್ಟು ಹೋರಾಡಿ ಕಚ್ಚುತ್ತದೆ. ಒಂದು ಪಕ್ಷಿ ತನ್ನ ಮರಿಯ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಕಾದಾಡುತ್ತದೆ. ಆದರೆ ತಾಯಿಯಾದ ನಿನಗೆ ನಿನ್ನ ಪುಣ್ಯಾತ್ಮನಾದ ಮಗನನ್ನು ಕೊಂದ ಆ ಪಾತಕಿ ಅರ್ಜುನನ ಬಗ್ಗೆ ಅದೇನು ಒಲವು? ಸಮಗ್ರ ಜಗತ್ತಿನಲ್ಲೇ ನಿನ್ನಂತಹ ಕರುಣಾಶೂನ್ಯಳಾದ ತಾಯಿ ಇನ್ನೊಬ್ಬರಿರಲಿಕ್ಕಿಲ್ಲ. ನೀನು ಪಾಪನಾಶಿನಿಯಲ್ಲ. ನಿನ್ನ ಒಂದು ಹನಿ ನೀರು ಸೋಕಿದರೂ ದೋಷ ಬಂದೀತು.” ಎಂದು ಆಕ್ರೋಶದ ದನಿಯಲ್ಲಿ ಅಬ್ಬರಿಸಿದಳು.
ಗಂಗೆ ಕಾಲದ ಕೈಗೊಂಬೆಯಾದಳೋ ಏನೋ! ಜ್ವಾಲಾಳ ದುಷ್ಪ್ರೇರಣೆಗೆ ಬಲಿಯಾಗಿ ಅರ್ಜುನನಿಗೆ ಘೋರ ಶಾಪವನ್ನೇ ನೀಡಿದಳು. “ಇಂದಿನಿಂದ ಕೆಲ ತಿಂಗಳೊಳಗಾಗಿ ನನ್ನ ಮಗನ ಹತ್ಯೆ ಮಾಡಿದ ದೋಷಿ ಅರ್ಜುನ ಆತನ ಮಗನ ಕೈಯಲ್ಲೇ ಸೋತು, ಶಿರಚ್ಛೇದನಕ್ಕೊಳಗಾಗಿ ಸಾಯಲಿ” ಎಂದು ಶಪಿಸಿದಳು.
ಜ್ವಾಲಾಳ ಮನಸ್ಸು ಮಹದಾನಂದದಿಂದ ಕುಣಿಯ ತೊಡಗಿತು. ಒಳಗಿಂದೊಳಗೆ ಆಕೆ ತರ್ಕಿಸುತ್ತಿದ್ದಾಳೆ. ಅರ್ಜುನನ ಸಾವುಇಷ್ಟು ಸುಲಭ ಸಾಧ್ಯವೆಂದು ಕಲ್ಪನೆಯನ್ನೂ ಮಾಡಿರಲಿಲ್ಲ. ಹರ್ಷೋತ್ಕರ್ಷೆಯಿಂದ ದಡದಲ್ಲಿ ಸಾಗುವಾಗ ಉಲೂಪಿ ಎದುರಾದಳು. ಸಂತೋಷದಿಂದ ಕುಣಿದು ಕುಪ್ಪಳಿಸುವ ಜ್ವಾಲಳನ್ನು ಕಂಡು ಆಶ್ಚರ್ಯಕ್ಕೊಳಗಾಗಿ ಕಾರಣ ಕೇಳಿದಳು.

































