
ಬೆಂಗಳೂರು: ದ್ವಿತೀಯ ಪಿಯುಸಿ ಹಾಗೂ ಯುಜಿ-ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಹೊಸ ಸೌಲಭ್ಯ ಘೋಷಿಸಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಪಿಯುಸಿ ಹಾಗೂ ಸಿಇಟಿಗೆ ಪ್ರತ್ಯೇಕ ಅರ್ಜಿ ಸಲ್ಲಿಸುವ ಬದಲು ‘ಒಂದೇ ಅರ್ಜಿ’ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ.
ಹೊಸ ನಿಯಮದಂತೆ, ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಗೆ ದಾಖಲಾತಿ ಪಡೆಯುವಾಗಲೇ ಸಿಇಟಿ ಆಯ್ಕೆಯನ್ನು ನಮೂದಿಸಿ ನಿಗದಿತ ಶುಲ್ಕ ಪಾವತಿಸಬಹುದು. ಬಳಿಕ ನೇರವಾಗಿ ಪ್ರವೇಶಪತ್ರ ಪಡೆಯುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಪ್ರತಿ ವರ್ಷ ಸಿಇಟಿ ಅರ್ಜಿ ಸಲ್ಲಿಕೆಯಲ್ಲಿ ಎದುರಾಗುತ್ತಿದ್ದ ಸರ್ವರ್ ಸಮಸ್ಯೆ, ದಾಖಲೆ ದೋಷ ಹಾಗೂ ಸಮಯ ಮಿತಿ ಸಮಸ್ಯೆಗಳನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಾಲೇಜುಗಳ ಮೇಲ್ವಿಚಾರಣೆಯಲ್ಲಿ ಮಾಹಿತಿ ಸಂಗ್ರಹವಾಗುವುದರಿಂದ ತಪ್ಪುಗಳ ಸಾಧ್ಯತೆ ಕಡಿಮೆಯಾಗಲಿದೆ ಎಂದು ಕೆಇಎ ತಿಳಿಸಿದೆ.
ರಾಜ್ಯದ ಬಹುತೇಕ ಸಿಇಟಿ ವಿದ್ಯಾರ್ಥಿಗಳು ರಾಜ್ಯ ಪಠ್ಯಕ್ರಮದವರಾಗಿರುವುದರಿಂದ, ಈ ಸಂಯೋಜಿತ ಅರ್ಜಿ ವ್ಯವಸ್ಥೆ ಗ್ರಾಮೀಣ ಹಾಗೂ ನಗರ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

































