
ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ತರಕಾರಿ ಬೆಲೆ ಏರಿಕೆಯ ನಡುವೆ ಇದೀಗ ಅಕ್ಕಿ ದರವೂ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಮತ್ತೊಂದು ಹೊರೆ ಎದುರಾಗಿದೆ. ರಾಜ್ಯದ ಹಲವು ಮಾರುಕಟ್ಟೆಗಳಲ್ಲಿ ವಿವಿಧ ತಳಿಯ ಅಕ್ಕಿಯ ಬೆಲೆ ಪ್ರತಿ ಕೆಜಿಗೆ 10ರಿಂದ 20 ರೂಪಾಯಿವರೆಗೆ ಹೆಚ್ಚಳ ಕಂಡಿದೆ.
ವ್ಯಾಪಾರಿಗಳ ಮಾಹಿತಿ ಪ್ರಕಾರ, ದೇಶೀಯ ಬೇಡಿಕೆ ಹೆಚ್ಚಳ ಮತ್ತು ಪೂರೈಕೆ ಕೊರತೆಯೇ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ. ಜೊತೆಗೆ ಅಕ್ಕಿ ರಫ್ತಿಗೆ ಅವಕಾಶ ಹೆಚ್ಚಾದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಉತ್ತಮ ತಳಿಯ ಅಕ್ಕಿ ಲಭ್ಯತೆ ಕಡಿಮೆಯಾಗಿದೆ.
ಹೊಸ ಭತ್ತದ ಬೆಳೆ ಮಾರುಕಟ್ಟೆಗೆ ಬರಲು ಇನ್ನೂ ಕೆಲವು ತಿಂಗಳು ಬೇಕಿರುವುದರಿಂದ ಸದ್ಯಕ್ಕೆ ದರ ಇಳಿಕೆಯಾಗುವ ಸಾಧ್ಯತೆ ಕಡಿಮೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಬೇಡಿಕೆ ಇದೇ ರೀತಿ ಮುಂದುವರಿದರೆ ಕೆಲವು ತಳಿಯ ಅಕ್ಕಿ ದರ ಕೆಜಿಗೆ 100 ರೂಪಾಯಿ ದಾಟುವ ಸಾಧ್ಯತೆಯೂ ಇದೆ.
ಪ್ರಸ್ತುತ ದರ ಏರಿಕೆಯಿಂದ ಗ್ರಾಹಕರು ಖರೀದಿ ಕಡಿಮೆ ಮಾಡಿದ್ದು, ವ್ಯಾಪಾರದಲ್ಲೂ ಕುಸಿತ ಕಂಡುಬಂದಿದೆ. ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಸಾರ್ವಜನಿಕರ ಜೀವನ ನಿರ್ವಹಣೆ ಮತ್ತಷ್ಟು ಕಷ್ಟಕರವಾಗಿದೆ.
ವಿವಿಧ ತಳಿಯ ಅಕ್ಕಿಗಳ ಹಳೆಯ ಮತ್ತು ಹೊಸ ದರಗಳ ಪಟ್ಟಿ (ಪ್ರತಿ ಕೆ.ಜಿಗೆ)
ಸ್ಟೀಮ್ ರೈಸ್ 47 56
ರಾ ರೈಸ್ 50 62
ಕೋಲಂ ರೈಸ್ 68 80
ಕೋಲಂ ಸ್ಟೀಮ್ 55 65

































