“ಸೇಬಿನ ಎಂಜಲು”.. ಹೈಕಮಾಂಡ್ ಅಂಗಳಕ್ಕೂ ತಲುಪಿರಬಹುದೇ: ಶಾಸಕ ವಿ. ಸುನಿಲ್ ಕುಮಾರ್ ಪ್ರಶ್ನೆ
ಕಸದ ಟೆಂಡರ್ ನಲ್ಲಿ ಭಾರಿ ಅಕ್ರಮ, ಸರಕಾರದ ವಿರುದ್ಧ ಬಿಜೆಪಿ ಗಂಭೀರ ಆರೋಪ

ಬೆಂಗಳೂರಿನಲ್ಲಿ ನಡೆದ ಕಸದ ಟೆಂಡರ್ ನಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ವಿಪಕ್ಷ ಬಿಜೆಪಿ ಗಂಭೀರ ಆರೋಪ ಮಾಡಿದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ರಾಜ್ಯಪಾಲರಿಗೆ ದೂರು ನೀಡಿದೆ.
36 ಸಾವಿರ ಕೋಟಿ ರೂ. ಕಸದ ಟೆಂಡರ್ ನಲ್ಲಿ 10 ಸಾವಿರ ಕೋಟಿ ರೂ. ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ರಾಜ್ಯದ “ಘನ” ಇತಿಹಾಸದಲ್ಲಿ ಕಂಡು ಕೇಳರಿಯದ ರೀತಿಯ “ಘನ”ತ್ಯಾಜ್ಯ ವ್ಯವಹಾರವನ್ನು “ಘನ” ಕಾಂಗ್ರೆಸ್ ಸರ್ಕಾರ ನಡೆಸಿದೆ ಎಂದು ಆರೋಪಿಸಿದ್ದಾರೆ.
ಯಾವುದೇ ಸರ್ಕಾರವಾಗಲಿ ಒಂದು ಯೋಜನೆಗೆ ಸಂಬಂಧಪಟ್ಟ ಟೆಂಡರ್ ನ್ನು ಮೂವತ್ತು ವರ್ಷಕ್ಕೆ ನೀಡಲು ಸಾಧ್ಯವೇ ? ಅದರಲ್ಲೂ ಕಪ್ಪುಪಟ್ಟಿಗೆ ಸೇರಿದ ಸಂಸ್ಥೆಯೊಂದಕ್ಕೆ ಇಂಥದೊಂದು ” ಡೀಲ್ ” ಕೊಡುವುದರ ಹಿಂದಿನ ” ಘನ” ಉದ್ದೇಶವನ್ನು ಪ್ರಶ್ನೆ ಮಾಡಲೇಬೇಕಾಗುತ್ತದೆ.
36000 ಕೋಟಿ ₹ ಗಳ ಈ “ಘನ” ವ್ಯವಹಾರದ ಹಿಂದೆ ಕಾಂಗ್ರೆಸ್ ನ ” ಘನ” ವ್ಯಕ್ತಿಗಳು ಭಾಗಿಯಾಗಿರುವುದು ನಿಚ್ಚಳವಾಗಿದ್ದು ಖುರ್ಚಿ ಬಿಟ್ಟು ಹೋಗುವುದಕ್ಕೆ ಒಂದು ವಾರ ಮೊದಲು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಸಿದ್ದರಾಮಯ್ಯನವರು ಒಪ್ಪಿಗೆ ನೀಡಿದ್ದಾದರೂ ಏಕೆ ?
“ಬ್ರ್ಯಾಂಡ್” ಬೆಂಗಳೂರಿನಲ್ಲಿ ನಿರಾತಂಕವಾಗಿ ನಡೆದ ಈ ಹಗರಣದ ” ಸೇಬಿನ ಎಂಜಲು” ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೂ ತಲುಪಿರಬಹುದೇ ? ಎಂದು ಶಾಸಕ ವಿ. ಸುನಿಲ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

































