ಭಾಗ – 547
ಭರತೇಶ ಶೆಟ್ಟಿ, ಎಕ್ಕಾರು

ಪ್ರಸಕ್ತ ಕಾಲದಲ್ಲಿ ಬಬ್ರುವಾಹನ ಪಟ್ಟಾಭಿಷಿಕ್ತನಾಗಿ ಮಣಿಪುರದ ಮಹಾರಾಜನಾಗಿ ಮೆರೆಯುತ್ತಿದ್ದಾನೆ. ಅರ್ಜುನನಿಗೆ ಆ ಪ್ರದೇಶಗಳನ್ನು ನೋಡುತ್ತಾ ಬರುತ್ತಿದ್ದಂತೆ ತಾನು ಯಾತ್ರಿಯಾಗಿ ಇಲ್ಲಿಗೆ ಬಂದಿದ್ದ ವಿಚಾರ, ರಾಜಕುಮಾರಿ ಚಿತ್ರಾಂಗದೆಯ ಭೇಟಿ, ಗೌಪ್ಯ ವಿವಾಹ, ಪುತ್ರನ ಜನನ ಎಲ್ಲವೂ ನೆನಪಿನ ಬುತ್ತಿಯಿಂದ ಚಲನ ಚಿತ್ರದಂತೆ ಕಣ್ಮುಂದೆ ಹಾದು ಹೋಯಿತು. ತನಗೊಬ್ಬ ಮಗನಿದ್ದಾನೆ, ಪತ್ನಿಯಿದ್ದಾಳೆ ಎಂಬ ಸಂಗತಿ ಸ್ಮರಣೆಯಾಗುತ್ತಿದ್ದಂತೆ, ಮಗ ಎಂಬ ಸಂಬಂಧದಿಂದ ಮತ್ತೆ ವೀರಕುವರ ಅಭಿಮನ್ಯು ನೆನಪಾದನು. ಮಣಿಪುರದಲ್ಲಿ ತನಗೆ ಹುಟ್ಟಿರುವ ಮಗುವಿಗಿಂತ ಪ್ರಾಯದಲ್ಲಿ ತುಸು ಕಿರಿಯವನಾದರೂ ಅಪ್ರತಿಮ ಸಾಹಸ ಮೆರೆದು, ಅವಿಸ್ಮರಣೀಯನಾಗಿ ಉಳಿದಿರುವ ಸುಭದ್ರೆಯ ಪುತ್ರನನ್ನೊಮ್ಮೆ ಮನಸಾರೆ ನೆನಪಿಸಿಕೊಂಡು ಮಂಕಾದನು. ಕೂಡಲೆ ಇಲ್ಲಿರುವ ನನ್ನ ಮಗ ಅಭಿಮನ್ಯುವಿನಂತೆಯೆ ವಿಕ್ರಮಿಯಾಗಿರಬಹುದು. ಶಸ್ತ್ರ ಶಾಸ್ತ್ರ ಪಾರಂಗತನಾಗಿ, ಧರ್ಮಬುದ್ಧಿ ಉಳ್ಳವನಾಗಿರಬಹುದು. ಹೇಗಿದ್ದಾನೊ! ನೋಡಬೇಕೆಂಬ ಕಾತರ ಉಮ್ಮಳಿಸಿತು. ಹೀಗೆ ಯೋಚನಾ ಲಹರಿಯೊಳಗೆ ಮುಳುಗಿರುವಾಗ ತಲೆ ಭಾರವಾದಂತಾಯಿತು. ಬುದ್ಧಿ ಭ್ರಮಣೆಯಾದಂತಾಯಿತು. ನಿರುತ್ಸಾಹ ಮೈದಳೆಯಿತು. ಆ ಸಮಯ ಎಲ್ಲಿಂದಲೋ ಒಂದು ರಣಹದ್ದು ಹಾರಿ ಬಂದು ಅರ್ಜುನನ ತಲೆಯ ಕಿರೀಟದ ಮೇಲೆ ಕಾಲೂರಿ ಕುಳಿತು, ನಂತರ ಸರ್ರನೆ ಹಾರಿ ಹೋಯಿತು. ನೋಡುತ್ತಿದ್ದ ಪಾಂಡವ ಪಕ್ಷೀಯರಿಗೆ ಆತಂಕವಾಗತೊಡಗಿತು. ಈ ರೀತಿಯ ಶಕುನ ಅಶುಭ ಸೂಚಕವೆಂದು ಭಾವಿಸಿ ಅವರೆಲ್ಲರೂ ಕಳವಳಗೊಂಡರು. ಅರ್ಜುನನಂತೂ ನಿಸ್ತೇಜನಾಗಿ ಮತ್ತಷ್ಟು ಕುಗ್ಗಿ ಹೋಗಿದ್ದಾನೆ.
ಒಂದೆಡೆ ಹೀಗಾಗುತ್ತಿದ್ದರೆ, ಯಾಗಾಶ್ವ ಮಾತ್ರ ನಿರಾಳವಾಗಿ ತಿರುಗಾಡುತ್ತಾ ಮಣಿಪುರದ ರಾಜ ಉದ್ಯಾನವನವನ್ನು ಹೊಕ್ಕಿದೆ. ಅಲ್ಲಿ ಕಾವಲು ಕಾಯುತ್ತಿದ್ದ ಭಟರು ಕುದುರೆಯ ಬಳಿ ಬಂದಾಗ ಇದು ಸಾಮಾನ್ಯ ಕುದುರೆಯಲ್ಲ. ಏನೋ ವಿಶೇಷವಿದೆ, ಸರ್ವಾಂಗಗಳೂ ಅಮೂಲ್ಯ ಆಭರಣಗಳಿಂದ ಅಲಂಕೃತವಾಗಿವೆ ಎಂಬುವುದನ್ನು ನೋಡಿ ಅರ್ಥೈಸಿದರು. ನೇರವಾಗಿ ಸಂದೇಶವಾಹಕರನ್ನು ರಾಜ ಬಬ್ರುವಾಹನನ ಬಳಿಗೆ ಕಳುಹಿಸಿ ವಿಚಾರ ಮುಟ್ಟಿಸಿದರು. ಕೂಡಲೆ ಬಬ್ರುವಾಹನ ಆ ಕುದುರೆಯನ್ನು ಬಂಧಿಸಿ ಲಾಯಕ್ಕೆ ತಂದು ಕಟ್ಟಿ ಹಾಕುವಂತೆ ಆಜ್ಞೆ ಮಾಡಿದ. ಹಾಗೆಯೆ ರಾಜ ಭಟರು ತೆರಳಿ ಕುದುರೆಯನ್ನು ಬಂಧಿಸಿ ತಂದಾಗ ಹಣೆಯಲ್ಲಿರುವ ಲಿಖಿತ ಗೋಚರಿಸಿತು. ತೆರೆದು ಓದಿ ನೋಡಿದಾಗ ಸಕಲ ವಿಚಾರಗಳೂ ಬಬ್ರುವಾಹನನಿಗೆ ಅರಿವಾಯಿತು. ಕೂಡಲೆ ಸೇನಾಪತಿಗೆ ಯುದ್ಧ ಸಿದ್ಧತೆಗಳನ್ನು ಮಾಡಲು ಆಜ್ಞೆಯಿತ್ತನು. ಆ ಕ್ಷಣದಲ್ಲಿ ತನ್ನ ತಾಯಿ, ರಾಜಮಾತೆ ಚಿತ್ರಾಂಗದೆಯ ನೆನಪಾಗಿ, ಕಾಣಲು ಮಹಾರಾಜ ಬಬ್ರುವಾಹನ ಹೊರಟನು. “ಅಮ್ಮಾ! ಹಸ್ತಿನಾವತಿಯ ಪಾಂಡವರು ತುರಗಾಧ್ವರ ಮಾಡಿಸುತ್ತಿದ್ದಾರಂತೆ. ಯಾಗಾಶ್ವ ನಮ್ಮ ಉದ್ಯಾನವನಕ್ಕೆ ಬಂದಾಗ ವಿಚಾರ ತಿಳಿದು ಬಂಧಿಸಿದ್ದೇನೆ. ಕುದುರೆಯ ಬೆಂಗಡೆಯಲ್ಲಿ ಸೇನಾಸಹಿತನಾಗಿ ಬಂದಿರುವಾತ ಅರ್ಜುನನಂತೆ. ನಾವು ಯುದ್ದಕ್ಕೆ ಸಿದ್ಧರಾಗಬೇಕಾಗಿದೆ. ಅದಕ್ಕೂ ಮೊದಲು ನಿಮಗೆ ಸುದ್ದಿ ತಿಳಿಸಿ ಆಶೀರ್ವಾದ ಪಡೆಯಲು ಬಂದಿದ್ದೇನೆ” ಎಂದನು.
ಚಿತ್ರಾಂಗದೆಗೆ ಅರ್ಜುನನು ಬಂದಿದ್ದಾನೆ ಎಂಬ ವಿಷಯ ತಿಳಿಯುತ್ತಿದ್ದಂತೆ ಮಹದಾನಂದ ಆಯಿತು. ತನ್ನ ನಲ್ಲ ಮತ್ತೆ ನಮ್ಮ ಪುರಪ್ರವೇಶ ಮಾಡಿದ್ದಾನೆ ಎಂದರೆ ಅದಕ್ಕಿಂತ ಮಿಗಿಲಾದ ಆನಂದ ಇನ್ನೇನಿದೆ? ಇಂದಿನ ತನಕ ಹಿಡಿದಿಟ್ಟಿದ್ದ ವಿರಹದುರಿ ಒಮ್ಮೆಲೆ ಹೊತ್ತಿ ಜ್ವಾಲೆಯಾಗಿ ಉರಿದಂತಾಯಿತು. ಮೈಮೇಲೆಲ್ಲಾ ಏನೋ ಸಂಚಲನ. ಒಂದೆಡೆ ಪತಿಗಾಗಿ ಅನುರಾಗ ಉಕ್ಕಿ ಹರಿಯುತ್ತಿದೆ. ಮೈಮರೆತು ಹೋಗಿದ್ದಾಳೆ. “ಅಮ್ಮಾ! ಏನು ಯೋಚಿಸುತ್ತಿರುವೆ? ಆಶೀರ್ವದಿಸಿ ನನ್ನನ್ನು ಕಳುಹಿಸಿ ಕೊಡಮ್ಮಾ” ಎಂಬ ಮಗನ ಮಾತು ವಾಸ್ತವಕ್ಕೆ ಎಳೆದು ತಂದಿತು.
“ಮಗೂ ಬಬ್ರುವಾಹನಾ! ನಾವೀಗ ಯುದ್ದ ಮಾಡಬೇಕಾದ ಅಗತ್ಯವಿಲ್ಲ. ಬಂದಿರುವ ಅರ್ಜುನ ಮಹಾಶಯ ನಮಗೆ ವೈರಿಯಲ್ಲ. ಪರಮಾಪ್ತನೂ, ಪೂಜನೀಯನೂ, ಅತಿಪ್ರೀತ ಬಂಧುವೂ ಆಗಿದ್ದಾನೆ. ಅರ್ಜುನ ಬೇರೆ ಯಾರೂ ಅಲ್ಲ, ನನ್ನ ಪತಿ, ನಿನಗೆ ಪಿತನು. ಹಾಗಾಗಿ ಅಶ್ವಮೇಧ ಯಾಗವೆ ನಮ್ಮದು. ನಮ್ಮವರು ಆಚರಿಸುತ್ತಿರುವ ಯಾಗಕ್ಕೆ ನಾವು ಭಾಗಿಗಳು ಹೊರತು ಬಾಧೆಯಾಗಬಾರದು. ಯಥೇಚ್ಚವಾದ ಕಪ್ಪಕಾಣಿಕೆಗಳನ್ನು ಇತ್ತು ಸಹಕರಿಸಬೇಕಾದುದು ಧರ್ಮ. ಜೊತೆಗೆ ಯಾಗಾಶ್ವವನ್ನು ಬಂಧಮುಕ್ತಗೊಳಿಸಿ ಅವರಿಗೊಪ್ಪಿಸಬೇಕು” ಎಂದು ಮಗನಿಗೆ ಗತಸತ್ಯವನ್ನು ವಿವರಿಸಿ ಮಾರ್ಗದರ್ಶನ ಮಾಡಿದಳು.
“ಏನು ಬಂದಿರುವ ಅರ್ಜುನ ನನಗೆ ತಂದೆಯೇ?” ಎಂದು ಅರಳಿದ ಮುಖಾರವಿಂದದಲ್ಲಿ ಸಂಭ್ರಮ ಸಡಗರ ತುಂಬಿಕೊಳ್ಳುತ್ತಾ “ಅಮ್ಮಾ! ನಿಮ್ಮ ಮಾತು ನಿಜವೇ!?” ಎಂದು ಆಶ್ಚರ್ಯದಿಂದ ಪ್ರಶ್ನಿಸಿದನು. ತಾಯಿಯಿಂದ ಹೌದು, ಇದೇ ಈ ತನಕ ಮುಚ್ಚಿಡಲಾದ ಸತ್ಯ. ನೀನು ಬಂದು ಎಷ್ಟು ಬಾರಿ ನನ್ನ ತಂದೆ ಯಾರು ಎಂದು ಕೇಳುತ್ತಿದ್ದೆಯಲ್ಲಾ ಮಗನೇ? ಈ ಪಾರ್ಥ ಮಹಾಶಯನೇ ನಿನ್ನ ಪಿತಾಶ್ರಿ” ಎಂದು ನುಡಿದಳು.
“ಅರೆ ಏನು ಭಾಗ್ಯವಿದು ನನಗೆ! ತಂದೆಯನ್ನು ಕಾಣಬೇಕು, ಕಂಡು ಮಾತನಾಡಿಸಬೇಕು. ನನಗೆ ಸಿಗದ ತಂದೆಯ ಪ್ರೀತಿ ಇಂದಾದರು ಪಡೆಯುವ ಭಾಗ್ಯ ಕೂಡಿ ಬಂತಲ್ಲಾ!” ಎಂದು ಮಹದಾನಂದ ತುಂದಿಲನಾದನು ಬಬ್ರುವಾಹನ. “ಅಮ್ಮಾ ಈ ಕ್ಷಣವೆ ಅನುಮತಿ ನೀಡು. ಅಪ್ಪನನ್ನು ಕಾಣುವ ಹೆಬ್ಬಯಕೆ ನನ್ನ ಮನ ಮಾಡಿದೆ” ಎಂದು ಅವಸರ ಪಡತೊಡಗಿದನು.
ಬಬ್ರುವಾಹನ ಬಂಡಿ ಬಂಡಿಗಳಲ್ಲಿ ಅಮಿತವಾದ ಕಪ್ಪಕಾಣಿಕೆಗಳನ್ನು ಹೇರಿಸಿಕೊಂಡು, ತನ್ನ ಮಂತ್ರಿ, ಹಿರಿಯರು, ಆಸ್ಥಾನ ಪುರೋಹಿತರೊಂದಿಗೆ ಅರ್ಜುನನ್ನು ಕಾಣಲು ಹೊರಟನು. ಜೊತೆಗೆ ಯಾಗಾಶ್ವವನ್ನೂ ಸಿಂಗರಿಸಿ ಮುಂದಿನಿಂದ ನಡೆಸಿಕೊಂಡು ಕಪ್ಪಸಹಿತನಾಗಿ ಬಂದಿದ್ದಾನೆ…
ಮುಂದುವರಿಯುವುದು…





















































































