29.9 C
Udupi
Saturday, May 30, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 357

ಭರತೇಶ ಶೆಟ್ಟಿ,ಎಕ್ಕಾರು

ಅಶ್ವಮೇಧ ಯಾಗ ದಿಗ್ವಿಜಯದ ನಿಯಮದಂತೆ ಶರಣಾದ, ಸೋತ, ಮೈತ್ರಿ ಮಾಡಿಕೊಂಡ ಅರಸರು ಸೇನಾ ಸಹಿತರಾಗಿ ಕುದುರೆಯ ಜೊತೆ ಮುಂದಣ ಪಯಣಕ್ಕೆ ಸಾಗಬೇಕು. ಹಂಸಧ್ವಜನೂ ತನ್ನ ಸೇನಾ ಸಮೇತನಾಗಿ ಅಶ್ವಮೇಧ ಯಾಗದ ತುರಗದ ಜೊತೆ ಸೇರಿಕೊಂಡನು. ಈಗ ಪಾಂಡವರ ಸೇನೆ ಒಂದೆಡೆ ಯುದ್ಧದಿಂದ ಸೇನಾನಷ್ಟಗೊಳ್ಳುತ್ತಿದ್ದರೂ ವಿಜಯಯಾತ್ರೆಯಲ್ಲಿ ಯವನಾಶ್ವ, ಅನುಸಾಲ್ವ, ನೀಲಧ್ವಜ ಮತ್ತು ಹಂಸಧ್ವಜರ ಸೇನಾ ಜಮಾವಣೆಯಿಂದ ಬಲಿಷ್ಠಗೊಂಡು ಮುನ್ನಡೆಯುತ್ತಿದೆ. ಚಂಪಕಾವತಿಯಿಂದ ಬಂಧಮುಕ್ತವಾಗಿ ಹೊರಟ ಕುದುರೆ ಮುಂದೊತ್ತಿ ಸಾಗುತ್ತಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿದೆ. ಕುದುರೆ ಗೊಂಡಾರಣ್ಯವನ್ನು ಹೊಕ್ಕಿದೆ. ಎತ್ತ ನೋಡಿದರೂ ದಟ್ಟ ಕಾಡು. ಬಹುದೂರದ ಪ್ರಯಾಣ ಮುಂದುವರಿದು ಬೆಟ್ಟ, ಗುಡ್ಡ ಕಾನನವಲ್ಲದೆ ಯಾವ ಪುರದತ್ತಲೂ ಹೋಗಲಿಲ್ಲ. ಹೀಗೆ ಮುಂದೊತ್ತಿ ಸಾಗುತ್ತಾ “ಪಾರಿಪ್ಲವ” ವೆಂಬ ಪರ್ವತ ಪ್ರಾಂತದಲ್ಲಿ ಮುಂದೊತ್ತಿ ಹೋಗುತ್ತಿದೆ. ಈ ಪ್ರದೇಶಕ್ಕೊಂದು ವೈಶಿಷ್ಟ್ಯವಿದೆ. ಹಿಂದೆ ಕಾರಣಾಂತರದಿಂದ ಪಾರ್ವತಿದೇವಿ ಪಾರಿಪ್ಲವದ ಕಾಡು ಪ್ರದೇಶದಲ್ಲಿ ಒಂದು ನಯನ ಮನೋಹರ ಸರೋವರದ ತಟಿಯಲ್ಲಿ ಪರಶಿವನ ಕುರಿತಾಗಿ ತಪಸ್ಸನ್ನಾಚರಿಸುತ್ತಿದ್ದಳು. ಆ ಸಮಯ ಹಸಿವೆಯ ನಿವಾರಣೆಗಾಗಿ ಬೇಟೆಗೆಂದು ಅತ್ತ ಬಂದ ರಾಕ್ಷಸನೋರ್ವನಿಂದ ಪಾರ್ವತಿ ದೇವಿಯ ತಪಸ್ಸಿಗೆ ಭಂಗ ಉಂಟಾಯಿತು. ಸುಂದರಿಯಾದ ಸ್ಪುರದ್ರೂಪಿ ಹೆಣ್ಣೋರ್ವಳು ತಪಸ್ಸನ್ನಚಾರಿಸುವುದನ್ನು ಕಂಡಾಗ ಆತನ ಉದರದ ಹಸಿವು ಮರೆತು ಕಾಮತೃಷೆ ಜಾಗೃತಗೊಂಡಿತೋ ಇಲ್ಲ ಪಾರ್ವತಿದೇವಿಯನ್ನೇ ಹಿಡಿದು ತಿನ್ನಲು ಮುಂದವರಿದನೋ! ಅಂತೂ ಆತನ ಯತ್ನ ಅಂತರ್ಮುಖಿಯಾಗಿದ್ದ ಮಾತೆಯನ್ನು ಬಹಿರ್ಮುಖಿಯಾಗಿಸಿತು. ತಪೋಭಂಗಕ್ಕೆ ಕಾರಣವೇನೆಂದು ತಿಳಿಯಲು ಕಣ್ತೆರೆದರೆ ಆ ರಾಕ್ಷಸ ಗೋಚರಿಸಿದನು. ಆತನನ್ನು ದಿಟ್ಟಿಸಿ ನೋಡಿದಾಗ ಹೊರ ಹೊಮ್ಮಿದ ತಪೋಜ್ವಾಲೆಗೆ ಬಲಿಯಾಗಿ ಭಸ್ಮವಾಗಿ ಹೋದನು. ಅಷ್ಟಕ್ಕೆ ಉಪಶಮನವಾಗದ ಉರಿ ಶಾಪ ವಾಕ್ಯವಾಗಿ ಹೊರಹೊಮ್ಮಿತು. “ಇನ್ನು ಯಾವುದೇ ಪುರುಷ ಜೀವ ಈ ಪ್ರಾಂತವನ್ನು ಪ್ರವೇಶ ಮಾಡಿದರೆ ಹೆಣ್ಣಾಗಿ ಹೋಗಲಿ. ಅದು ಪ್ರಾಣಿ ಪಕ್ಷಿ ಇನ್ಯಾವುದೆ ಜಂತುವಾಗಿದ್ದರೂ ಗಂಡಾಗಿದ್ದುದು ಹೆಣ್ಣಾಗಿ ಲಿಂಗಪರಿವರ್ತನೆಗೊಳ್ಳಲಿ” ಎಂದು ಶಪಿಸಿ ಬಿಟ್ಟಳು. ಆ ಕ್ಷಣದಿಂದ ಪಾರಿಪ್ಲವ ಪ್ರಾಂತ ಕೇವಲ ಸ್ತ್ರೀ ಸಂಕುಲದಿಂದ ತುಂಬಿ ಕೊಳ್ಳ ತೊಡಗಿದೆ.

ಈಗ ವಿಪರ್ಯಾಸ ಎಂಬಂತೆ ಪಾರ್ಥನ ಕುದುರೆ ಆ ಪ್ರದೇಶವನ್ನು ಪ್ರವೇಶಿಸಿದೆ. ಗಂಡಾಗಿದ್ದ ಕುದುರೆ ನೋಡ ನೋಡುತ್ತಿದ್ದಂತೆ ಹೆಣ್ಣು ಕುದುರೆಯಾಗಿ ಬದಲಾಯಿತು. ಕುದುರೆಯೂ ತನ್ನಲ್ಲಾದ ವ್ಯತ್ಯಾಸದಿಂದ ವಿಚಲಿತವಾಗಿ ಹಿಂದಿರುಗಿ ಓಡಿ ಬಂದಿತು. ಅದರ ಜೊತೆಗಿದ್ದ ಪರಿಚಾರಕರಿಗೆ ವಿಚಿತ್ರ. ಅಲ್ಲಿಯವರೆಗೆ ಗಂಡಾಗಿದ್ದ ಕುದುರೆ ಹೇಗೆ ಹೆಣ್ಣು ಕುದುರೆಯಾಯಿತು? ಅಲ್ಲಿ ನಿಲ್ಲದ ಕುದುರೆ ಓಡುತ್ತಾ ಪಾರ್ಥನೆದುರು ಬಂದು ನಿಂತಿತು. ಪರಿಚಾರಕರು ಬಂದು ಕುದುರೆಯಲ್ಲಾದ ಪರಿವರ್ತನೆಯನ್ನು ವಿವರಿಸಿ ಹೇಳುವ ಮೊದಲು ಅರ್ಜುನನೂ ಗಮನಿಸಿದನು. ಯಾಕೆ ಹೀಗಾಯಿತು ಎಂಬ ಸಂದೇಹ ಸಮಸ್ತ ಪಾಂಡವ ಸೇನೆಯನ್ನು ವ್ಯಾಪಿಸಿತು. ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಪ್ರಶ್ನೆ ಮಾಡ ತೊಡಗಿದ್ದಾರೆ ಹೊರತು ಉತ್ತರ ಯಾರಿಗೂ ತಿಳಿದಿಲ್ಲ.

ಅರ್ಜುನನೂ ಬಹುವಿಧದಿಂದ ತರ್ಕಿಸತೊಡಗಿದನು. ಯಾರಲ್ಲಾದರೂ ಕೇಳೋಣವೆ, ಆ ಪ್ರದೇಶದಲ್ಲೆಲ್ಲೂ ಋಷ್ಯಾಶ್ರಮಗಳೂ ಇಲ್ಲ. ಕೊನೆಗೆ ಏನು ಸಂಕಟ ಎದುರಾದರೂ ಪರಿಹಾರ ಮಾಡುವವನು ಶ್ರೀಹರಿಯಲ್ಲವೆ? ಆತನನ್ನು ಮನಸಾರೆ ಧ್ಯಾನಿಸತೊಡಗಿದನು. ಮನಸ್ಸಿಗಾದ ಪ್ರೇರಣೆಯಂತೆ ಶ್ರೀಕೃಷ್ಣ ಪರಮಾತ್ಮನನ್ನು ಧ್ಯಾನಿಸುತ್ತಾ “ದೇವಾ ನಮಗೊದಗಿರುವ ಸಮಸ್ಯೆಗೆ ನೀನೇ ದಾರಿ ತೋರಿ ಉತ್ತರವಾಗಬೇಕು” ಎಂದು ಪ್ರಾರ್ಥಿಸುತ್ತಾ ಕುದುರೆಯ ಮೈದಡವಿ ಪೂಸಿದನು. ಅರ್ಜುನನ ಕರಸ್ಪರ್ಶವಾಗುತ್ತಿದ್ದಂತೆ ಹೆಣ್ಣಾಗಿದ್ದ ಕುದುರೆ ಮತ್ತೆ ಗಂಡಾಯಿತು. ಎಲ್ಲರಿಗೂ ಆಶ್ಚರ್ಯ. ಏನಿದು ಭ್ರಮೆಯೊ? ನಿಜವೊ ಎಂಬ ಗೊಂದಲವೂ ಆಯಿತು. ಎಲ್ಲರೂ ಏನಿದು! ಹೇಗೆ ಸಾಧ್ಯ? ಎಂದೆಲ್ಲಾ ಕೇಳುತ್ತಿದ್ದಂತೆಯೆ ಅರ್ಜುನ “ಇದೆಲ್ಲವೂ ಶ್ರೀಹರಿಯ ಕರುಣೆಯ ಪ್ರಭಾವ” ನಾವು ನಮ್ಮ ಕರ್ತವ್ಯದಲ್ಲಿ ತೊಡಗೋಣ. ಏನು ತೊಂದರೆ ತೊಡಕು ಎದುರಾದರೂ ಪರಮಾತ್ಮನಿದ್ದಾನೆ” ಎಂದು ಗೊಂದಲ ಪರಿಹರಿಸಿದನು. ನಾವೆಲ್ಲರೂ ಕರ್ತವ್ಯ ನಿರತರಾಗೋಣ ಎಂದು ಜಾಗೃತಿ ಮೂಡಿಸಿದನು.

ಪಶ್ಚಿಮಕ್ಕೆ ಮುಖ ಮಾಡಿದ್ದ ಕುದುರೆ ಹೆಣ್ಣಾಗಿ ತಿರುಗಿ ಓಡಿ ಬಂದಿತ್ತು. ಉತ್ತರದಿಂದ ಪಶ್ಚಿಮ ದಿಕ್ಕಿನತ್ತ ಸಾಗುತ್ತಿದ್ದ ಕುದುರೆ ದಿಕ್ಕು ಬದಲಿಸಿ ಪೂರ್ವಾಭಿಮುಖವಾಗಿ ಸಾಗತೊಡಗಿತು. ಕುದುರೆ ಹೋದತ್ತ ಬೆಂಗಾವಲು ಪಡೆ ಅನುಸರಿಸಿ ನಡೆಯತೊಡಗಿತು.

ತಿರುಗಿ ಸಾಗಿದರೂ ಮತ್ತೆ ಕಾಡ ದಾರಿಯೇ! ಈಗ ಸಾಗುತ್ತಿರುವುದೂ ಅರಣ್ಯ ಮಾರ್ಗದಲ್ಲಿ. ಈ ಪ್ರದೇಶಕ್ಕೂ ಒಂದು ಕೌತುಕಪ್ರದ ಹಿನ್ನೆಲೆಯಿದೆ. ಹಿಂದೆ ಕೃತಯುಗದಲ್ಲಿ “ಅಕೃತವೃಣ” ಎಂಬ ತೀರ್ಥಯಾತ್ರಿಕನೋರ್ವ ಹಲವು ಪುಣ್ಯಕ್ಷೇತ್ರ, ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತಾ ಈ ದಾರಿಯಾಗಿ ಸಾಗಿ ಬಂದಿದ್ದನು. ಪಾರಿಪ್ಲವ ಪ್ರದೇಶದ ಎದುರು ಪಾರ್ಶ್ವ ಭಾಗದ ಈ ಕಾಡಿನ ಮಧ್ಯೆ ಸಾಗುತ್ತಿರುವಾಗ ಒಂದು ಸರೋವರವನ್ನು ಕಂಡು ಸ್ನಾನಾದಿ ಕರ್ಮಗಳನ್ನು ಪೂರೈಸಿ ಮತ್ತೆ ಮುನ್ನಡೆಯೋಣ ಎಂದು ಯೋಚಿಸಿ ನೀರಿಗಿಳಿದನು. ಹೀಗೆ ಉಪಕ್ರಮಿಸಿದ್ದೇ ತಡ ನೀರಿನೊಳಗೆ ಅವಿತ್ತಿದ್ದ ಮೊಸಳೆಯೊಂದು ಅವನ ಕಾಲನ್ನು ಕಚ್ಚಿ ಎಳೆಯತೊಡಗಿತು. ಪ್ರಾಣ ಸಂಕಟಕ್ಕೊಳಗಾದ ಯಾತ್ರಿಕ ಬಂಧ ಮುಕ್ತಿಗಾಗಿ ಒದ್ದಾಡತೊಡಗಿದ್ದನು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page