29.8 C
Udupi
Friday, May 29, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 536

ಭರತೇಶ ಶೆಟ್ಟಿ ,ಎಕ್ಕಾರು

ಇತ್ತ ಸುಧನ್ವನು ನೋಡುತ್ತಿದ್ದಾನೆ ಪಾರ್ಥನ ಶರ ತುಂಡರಿಸಲ್ಪಟ್ಟಿದೆ. ತುಂಡಾದ ಬಾಣದ ಹಿಂದಣ ಭಾಗವನ್ನು ಸುಧನ್ವನ ಶರ ಹಿಂದೊತ್ತಿದರೆ, ಮುಂದಣ ಅರ್ಧ ಭಾಗ ಒಮ್ಮೆಗೆ ಕಂಪಿಸಿದರೂ ಧನುರ್ವೇದೋಕ್ತವಾಗಿ ಮಂತ್ರ ಬಲದಿಂದ ಪ್ರಯೋಗಿತ ಗುಣವೊ? ಇಲ್ಲ ಸಾನಿಧ್ಯಗೊಂಡಿರುವ ಪುಣ್ಯಬಲ ವಿಶೇಷಣವೊ! ಉದುರಿ ಕೆಳ ಬೀಳದೆ ಗುರಿ ತಪ್ಪದೆ ಸುಧನ್ವನತ್ತ ಅರೆ ಕ್ಷಣದಲ್ಲಿ ಕಿಡಿ ಕಾರುತ್ತಾ ಬಂದು ಬಿಟ್ಟಿತು. ಶೀಘ್ರಗ್ರಾಹಿಯಾದ ಸುಧನ್ವ ಶರ ಸಂಧಾನಗೊಳಿಸಿ ಖಂಡಿಸುವಷ್ಟು ಅವಕಾಶವಿಲ್ಲ ಎಂದರಿತನು. ತನ್ನ ಕೊನೆಯಾಯಿತು ಎಂಬ ಸತ್ಯ ಗೊತ್ತಾದ ಕೂಡಲೆ ಕಣ್ಮುಚ್ಚಿ ಕೃಷ್ಣನ ನಾಮಸ್ಮರಣೆ ಮಾಡುವೆ ಎಂದು ಹಾಗೆ ತೊಡಗಿದ್ದಾನೆ. ಪಾರ್ಥ ಪ್ರಯೋಗಿತ ಅಂಬು ಬಂದು ಸುಧನ್ವನ ಕೊರಳನ್ನು ಕತ್ತರಿಸಿ ಹಾಕಿದೆ. ಭಕ್ತ ಬಯಸಿದ ಇಂಬು ನೀಡುವತ್ತ ಸೆಳೆದೊಯ್ದಿದೆ. ಛೇದಿಸಲ್ಪಟ್ಟ ರುಂಡ ಹಾರಿ ಪಾರ್ಥನ ರಥದೆದುರು ಜಿಗಿದು ಬಿದ್ದಿದೆ. ಹಾಗೆ ಹಾರಿ ಹೊರಳಿ ಬಿದ್ದಿರುವುದು ಶ್ರೀಕೃಷ್ಣನ ಸಮೀಪದಲ್ಲಿ. ಅದೂ ಪಾದ ಮೂಲದಲ್ಲಿ ಕೊರಳನ್ನು ಭೂಮಿಗೂರಿ ಕೃಷ್ಣಾಭಿಮುಖವಾಗಿ ಸ್ಥಿತವಾಗಿದೆ. ಕೃಷ್ಣಾರ್ಜುನರು ನೋಡುತ್ತಿದ್ದಾರೆ, ಒಂದು ಕೌತುಕ ಕಾಣಿಸುತ್ತಿದೆ. ತನ್ನ ಭಕ್ತನ ಶಿರದತ್ತ ಮುಗುಳ್ನಗುತ್ತಾ ಪ್ರೀತಿಯಿಂದ ಶ್ರೀಹರಿ ದಿಟ್ಟಿಸಿದರೆ.. ಕತ್ತರಿಸಲ್ಪಟ್ಟ ಸುಧನ್ವನ ರುಂಡ ಕಣ್ಮುಚ್ಚಿದೆ, ಆದರೆ ಹರಿನಾಮ ಸ್ಮರಣೆ ಮಾಡುತ್ತಿದೆ. ಶರಾಘಾತವಾಗುವ ಮುನ್ನ ಆರಂಭಿಸಿದ್ದ ನಾಮೋಚ್ಚರಣೆ ಹಾಗೆಯೆ ಮುಂದುವರಿದು ಶಿರಚ್ಚೇದನದ ನೋವಾಗಲಿ, ನಶ್ವರ ಶರೀರಕ್ಕೊದಗಿದ ಸಾವಾಗಲಿ ಸುಧನ್ವನಿಗೆ ತಿಳಿಯಿತೋ ಇಲ್ಲವೋ ಎಂಬಂತಾಗಿದೆ. “ಆಹಾ! ಎಂತಹ ಭಕ್ತಿ ಈತನದು. ಅನವರತ ಜೀವನದಲ್ಲಿ ಸುಖ, ದುಃಖ, ವೇದನೆ ಸಾಧನೆ, ಆಸೆ ನಿರಾಸೆ, ಕರ್ಮ ಧರ್ಮ ಎಲ್ಲವನ್ನೂ ಕೃಷ್ಣಾರ್ಪಣಮಸ್ತು ಎಂಬಂತೆ ನನಗರ್ಪಿಸುತ್ತಾ ಬದುಕಿದ್ದವನು. ಯಾವ ತರಹದ ಲೋಪ ದೋಷಗಳಿಗೂ ಅವಕಾಶವೀಯದೆ ನಿಷ್ಕಳಂಕನಾಗಿ ಬದುಕಿದ ಈತ ಮೋಕ್ಷಕ್ಕೆ ಅರ್ಹನಾಗಿದ್ದಾನೆ. ಸುಧನ್ವ ಈಗ ಸಾವಿನ ನೋವಲ್ಲೂ ಹರಿಧ್ಯಾನ ನಿರತನಾಗಿದ್ದಾನೆ. ಸರಿ ಈತನಿಗೆ ಸಲ್ಲಬೇಕಾದುದನ್ನು ಸಂದಾಯ ಮಾಡುತ್ತೇನೆ” ಎಂದು ಶ್ರೀಕೃಷ್ಣ ಅಭಯಹಸ್ತ ಮುದ್ರಾಧಾರಿಯಾಗಿ ಸುಧನ್ವನ ಆತ್ಮಜ್ಯೋತಿಯನ್ನು ಸೆಳೆದು ತನ್ನಲ್ಲಿ ಲೀನಗೊಳಿಸಿದನು. ಭಕ್ತಿ ಹಾಗು ಆಚಾರ ಬಲದಿಂದ ಮೋಕ್ಷವನ್ನು ಸಾಧಿಸಿದ ಸುಧನ್ವನ ಆತ್ಮ ಪರಮಾತ್ಮನ ಪರಂಧಾಮದಲ್ಲಿ ಸುಖಿಯಾಗಿ ಜನನ ಮರಣಗಳ ಜೀವನ ಚಕ್ರದಿಂದ ಮುಕ್ತಿಯನ್ನು ಹೊಂದಿದೆ.

ಇತ್ತ ಚಂಪಕಾವತಿಯ ಅರಸ ಹಂಸಧ್ವಜ ಹಾಗೂ ಸುಧನ್ವನ ಸೋದರ ಸುರಥ ಪಾರ್ಥನ ಮೇಲೆ ಅತ್ಯುಗ್ರರಾಗಿದ್ದಾರೆ. ಸುರಥ ವೀರಾವೇಶದಿಂದ ಮುನ್ನುಗ್ಗಿ ಬಂದು ಅರ್ಜುನನಿಗೆ ಯುದ್ಧಾಹ್ವಾನವಿತ್ತಿದ್ದಾನೆ.

ಸುಧನ್ವನ ಸೋದರ ಸುರಥನೂ ಭಕ್ತ ಮಾಣಿಕ್ಯನೂ, ಶಕ್ತ ಸಾಮರ್ಥ್ಯವಂತನೂ ಆಗಿದ್ದು ಸುಧನ್ವನ ತತ್ಸಮಾನ ರೀತಿಯಲ್ಲಿ ಸಾಹಸ ಮೆರೆಯುತ್ತಿದ್ದಾನೆ. ಹಂಸಧ್ವಜ ತನ್ನ ಮಕ್ಕಳಿಗೆ ಭಕ್ತಿಯನ್ನೂ ಶಕ್ತಿ ಸಾಧನೆಯನ್ನೂ ಸಮಾನವಾಗಿ ಬೋಧನೆ ಮಾಡಿಸಿದ್ದನು. ಪರಿಣಾಮ ಫಲವಾಗಿ ಸುರಥನೂ ಅತ್ಯುಗ್ರ ಕದನ ಕಲಿಯಾಗಿ ರಣದಲ್ಲಿ ಪ್ರತಾಪ ಮೆರೆಯತೊಡಗಿದನು. ಆದರೆ ಸುಧನ್ವನಿಗೂ ಸುರಥನಿಗೂ ಸಂಗ್ರಾಮದಲ್ಲಿ ಒಂದು ವ್ಯತ್ಯಾಸವಿದೆ. ಸುಧನ್ವ ಮೊದಲು ಕೃಷ್ಣಸಾರಥ್ಯವಿಲ್ಲದ ಪಾರ್ಥನನ್ನೆದುರಿಸಿ ಗೆದ್ದಿದ್ದನು. ನಂತರದಲ್ಲಿ ಶ್ರೀಕೃಷ್ಣನು ಪಾರ್ಥ ಸಾರಥ್ಯ ವಹಿಸಿದ ಬಳಿಕ ಹತನಾಗಿದ್ದನು. ಆದರೆ ಈಗ ಸುರಥನಿಗೆ ಎದುರಾಗುವಾಗಲೆ ಪಾರ್ಥಸಾರಥಿಯಾಗಿ ಶ್ರೀಕೃಷ್ಣ ಕಂಗೊಳಿಸುತ್ತಿದ್ದಾನೆ. ವಿವೇಚನೆ ಮಾಡಿದ ಆತನಿಗೆ ಒಂದು ವಿಚಾರ ನೆನಪಿಗೆ ಬಂತು.

ಯತ್ರ ಯೋಗೇಶ್ವರಃ ಕೃಷ್ಣ ಯತ್ರ ಪಾರ್ಥೋ ಧನುರ್ಧರ : |
ತತ್ರ ಶ್ರೀರ್ವಿಜಯೋ ಭೂತಿರ್ಧುವಾ ನೀತಿರ್ಮತಿರ್ಮಮ ||

ದಿವ್ಯೋಕ್ತಿಯಂತೆ ಎಲ್ಲಿ ಯೋಗೀಶ್ವರನಾದ ಕೃಷ್ಣನಿರುವನೋ, ಎಲ್ಲಿ ಗಾಂಡೀವಧಾರಿ ಪಾರ್ಥ ಇರುವನೋ ಅಲ್ಲಿ ದೈವಿಕ ಶಕ್ತಿ ಇರುತ್ತದೆ. ವಿಜಯವೂ ಅಲ್ಲಿಯೆ ಇರುತ್ತದೆ. ನ್ಯಾಯ‌ ಮತ್ತು ಯಶಸ್ಸೂ ಅಲ್ಲಿಯೆ ಸ್ಥಿತವಾಗಿರುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ಶ್ರೀ ಕೃಷ್ಣನನ್ನು ನಂಬಿಕೆ ಮತ್ತು ಭಕ್ತಿಯಿಂದ ಪ್ರಾರ್ಥನೆ ಮಾಡುವುದು ಬಿಟ್ಟು ಅನ್ಯ ಮಾರ್ಗವಿಲ್ಲ. ಪ್ರಾರ್ಥನೆ ನಮ್ಮೆಲ್ಲರನ್ನು ರಕ್ಷಿಸುವ ದಿವ್ಯ ಔಷಧಿ ಎಂದರಿತು ಕೊಂಡನು. ಹಾಗಿದ್ದರೆ ಈಗ ಪಾಲಿಸಬೇಕಾದ ಧರ್ಮವೇನು ಎನ್ನುವ ವಿಚಾರದಲ್ಲಿ ಯೋಚಿಸತೊಡಗಿದನು.

ರಣರಂಗದಲ್ಲಿ ಮಡಿದರೆ ಸ್ವರ್ಗ ಪ್ರಾಪ್ತಿ. ಗೆದ್ದರೆ ಭೂಮಂಡಲವನ್ನು ಆಳಬಹುದು. ಇಲ್ಲ ಕ್ಷತ್ರಿಯೋಚಿತ ಕರ್ಮ ಧರ್ಮ ಪಾಲನೆಯಿಂದ ಶ್ರೇಷ್ಟ ಗತಿಯೇ ಪ್ರಾಪ್ತವಾಗುತ್ತದೆ. ಆದುದರಿಂದ ಯುದ್ದವನ್ನು ಮಾಡುವುದು ಶ್ರೇಯಸ್ಕರ.

ಯದಾ ಸಂಹರತೇ ಚಾಯಂ ಕರ್ಮೋಂಗಾನೀವ ಸರ್ವಶಃ |
ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾಪ್ರಿಷ್ಠಿತಾ ||

ಆಮೆ ತನ್ನ ಇಂದ್ರಿಯಗಳನ್ನು ಒಳಗೆ ಎಳೆದುಕೊಳ್ಳುವ ಹಾಗೆ ಜ್ಞಾನನಿಷ್ಠನಾದ ಯೋಗಿ ವಿಷಯ ಲಾಲಸೆಗಳಿಂದ ಹಿಂದೆ ಸರಿದು, ತನ್ನ ಯೋಚನೆಗಳನ್ನು ಒಳ ಎಳೆದುಕೊಳ್ಳುವನು. ಹೀಗೆ ಯೋಚಿಸಿದ ಸುರಥನು ಶ್ರೀಕೃಷ್ಣನನ್ನು ಮನಸಾರೆ ಧ್ಯಾನಿಸುತ್ತಾ, ತನ್ನದ್ದಾದ ಬಾಹ್ಯ ಚಿಂತನೆಗಳನ್ನೆಲ್ಲಾ ಒಳ ಸೆಳೆದು, ಧರ್ಮವೂ ಕರ್ಮವೂ ಆದ ಯುದ್ಧದಲ್ಲಿ ತೊಡಗಿದನು.

ತನಗಾಗುವಷ್ಟು ಪೂರ್ಣ ಬಲದೊಂದಿಗೆ ಶಕ್ತಿ ಮತ್ತು ಭಕ್ತಿಯನ್ನು ಸೇರಿಸಿ ಕಾದಾಡಿದನಾದರೂ ಕೊನೆಗೆ ಪಾರ್ಥನ ಶರಕ್ಕೆ ತುತ್ತಾಗಿ ಪಾರ್ಥಿವ ಶರೀರವಾಗಿ ಧರೆಗೆ ಉರುಳ ಬೇಕಾಯಿತು.

ಮಕ್ಕಳಿಬ್ಬರ ವೀರ ಮರಣದ ವಾರ್ತೆ ಕೇಳಿದ ಮಹಾರಾಜ ಹಂಸಧ್ವಜ ಅತ್ಯುಗ್ರನಾಗಿ ಸಮರಾಂಗಣದಲ್ಲಿ ವೀರಾವೇಶದಿಂದ ಮುನ್ನುಗ್ಗಿದನು. ಆದರೆ ಶ್ರೀಕೃಷ್ಣ ಯುದ್ಧವನ್ನು ಮುಂದುವರಿಸಗೊಡದೆ ಸಂಧಾನವನ್ನು ನಿರ್ದೇಶಿಸಿ ತನ್ನ ಭಕ್ತನ ಮನವೊಲಿಸಿದನು. ದೇವರ ಅಪ್ಪಣೆ ಎಂದು ಭಕ್ತಿಯಿಂದ ಒಪ್ಪಿದ ಹಂಸಧ್ವಜ ಅರ್ಜುನ ಮತ್ತು ಶ್ರೀಕೃಷ್ಣನನ್ನು ಅರಮನೆಗೆ ಕರೆದೊಯ್ದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಸೇವೆಗೈದು ಪಾಂಡವರ ಅಶ್ವಮೇಧ ಯಾಗಕ್ಕೆ ಯಥೇಚ್ಚ ಕಪ್ಪ ಕಾಣಿಕೆಗಳನ್ನಿತ್ತು ಶರಣಾಗತನಾದನು. ಶ್ರೀಕೃಷ್ಣ ಪರಮಾತ್ಮ ಭಕ್ತನ ಆತಿಥ್ಯ ಸೇವೆ ಸ್ವೀಕರಿಸಿ ಹಂಸಧ್ವಜನಿತ್ತ ಕಪ್ಪಕಾಣಿಕೆಗಳನ್ನು ಬಂಡಿಗಳಲ್ಲಿ ಹೊರಿಸಿಕೊಂಡು ಹಸ್ತಿನೆಯತ್ತ ಹೊರಟನು. ಹಂಸಧ್ವಜನ ಪತ್ನಿ ಮಹಾರಾಣಿ ಸುಗರ್ಭಾದೇವಿ ಮಕ್ಕಳ ಮರಣದಿಂದ ದುಃಖಿತಳಾಗಿ ಕೊರಗುತ್ತಿರುವುದನ್ನು ಕಂಡು ಹಂಸಧ್ವಜ ಸಂತೈಸುತ್ತಾ “ರಾಣಿ, ನಿನ್ನ ದುಃಖ ನನಗೂ ಸಮಾನ ಪ್ರಮಾಣದಲ್ಲಿದೆ. ಆದರೆ ಒಂದು ಸತ್ಯವನ್ನು ನಾವು ಅರಿತುಕೊಳ್ಳ ಬೇಕು. ವಸುದೇವ ದೇವಕಿಯರಿಗೆ ಶ್ರೀ ಕೃಷ್ಣ ಕಾಣಿಸಿಕೊಳ್ಳಬೇಕಾದರೆ ತನಗಿಂತ ಮೊದಲು ಅವರು ಹೆತ್ತ ಆರು ಮಕ್ಕಳನ್ನು ಬಲಿ ನೀಡಬೇಕಾಯಿತು. ನಮಗೂ ಭಗವಂತ ಬಹಳಷ್ಟು ಕರುಣೆ ತೋರಿದ್ದಾನೆ ಇಬ್ಬರು ಪುತ್ರರತ್ನರ ಬಲಿದಾನವಾದ ಕೂಡಲೆ ನಮಗೊಲಿದು ನಮ್ಮ ಅರಮನೆಗೆ ಬಂದು ಪ್ರತ್ಯಕ್ಷವಾಗಿ ಸೇವೆ ಸ್ವೀಕರಿಸಿರುವುದು ಮಹಾಭಾಗ್ಯವಲ್ಲವೆ? ಹುಟ್ಟಿದ ಎಲ್ಲರಿಗೂ ಮರಣ ಇದ್ದೇ ಇದೆ. ಆದರೆ ನಮ್ಮ ಮಕ್ಕಳು ದೇವರ ಸಮ್ಮುಖದಲ್ಲಿ ಕ್ಷಾತ್ರ ಧರ್ಮ ಪಾಲಿಸುತ್ತಾ, ಕಣ್ಣಾರೆ ಭಗವಂತನ ದಿವ್ಯರೂಪವನ್ನು ಕಾಣುತ್ತಾ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಅಂದರೆ ಅವರೀರ್ವರನ್ನು ಭಗವಂತ ಸ್ವೀಕರಿಸಿದ್ದಾನೆ. ಇದಕ್ಕಿಂತ ಮಿಗಿಲಾದ ಮಹಾಯೋಗ ನಮ್ಮ ಪಾಲಿಗೆ ಸಿಗಲು ಸಾಧ್ಯವೆ? ಹಾಗಾಗಿ ನೀನು ದುಃಖಿಸಬಾರದು” ಎಂದು ಸಾಂತ್ವಾನ ಮಾಡಿದನು.

ಅರ್ಜುನ ಅಶ್ವಮೇಧ ಮುಂದುವರಿಸುತ್ತಾ ಯಾಗಾಶ್ವದ ಬೆಂಗಾವಲಿಗನಾಗಿ ಸಾಗತೊಡಗಿದ್ದಾನೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page