30.8 C
Udupi
Tuesday, May 26, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 533

ಭರತೇಶ ಶೆಟ್ಟಿ, ಎಕ್ಕಾರು

ಶ್ರೀಕೃಷ್ಣ ಸಾರಥ್ಯ ಪೀಠದಲ್ಲಿ ಕುಳಿತಲ್ಲಿಂದ ತಿರುಗಿ ನೋಡಿದರೆ ಶರಸಂಧಾನ ಮಾಡಿ ಅರ್ಜುನ ಪ್ರಯೋಗಿಸಲು ಸಿದ್ಧನಾಗಿದ್ದಾನೆ. “ಅರರೆ, ಏನು ಮರುಳಾಟ ಪಾರ್ಥಾ! ಜೀವನದಲ್ಲಿ ತಪ್ಪು ಆಗಿ ಹೋಗುವುದು ಸಹಜ. ಆದರೆ ಮಾಡಿದ ತಪ್ಪಿನಿಂದ ಅನುಭವ ಕಲಿಯದೆ ಅದನ್ನು ಮತ್ತೆ ಮತ್ತೆ ಪುನರಾವರ್ತಿಸುವುದು ಮೂರ್ಖತನ ಮಹಾಭಾರತ ಯುದ್ಧವನ್ನೊಮ್ಮೆ ನೆನಪಿಸಿಕೋ. ಗುರುದ್ರೋಣಾಚಾರ್ಯರ ಸೇನಾಧಿಪತ್ಯದಲ್ಲಿ ಅಭಿಮನ್ಯು ಕುಮಾರನ ವಧೆಗೆ ಕಾರಣನಾದ ಎಂಬ ಕಾರಣದಿಂದ ಜಯದ್ರಥನ ಮೇಲೆ ಉಗ್ರ ಕೋಪ ತಾಳಿದೆ. ಬುದ್ಧಿಯನ್ನು ಕೋಪದ ಕೈಗಿತ್ತು ಅವಸರದ ಪ್ರತಿಜ್ಞೆಯನ್ನು ಮಾಡಿದವನು ನೀನು. ಸೂರ್ಯಾಸ್ಥಮಾನದೊಳಗೆ ಆ ಸೈಂಧವನ ಶಿರಚ್ಚೇದನ ಮಾಡುತ್ತೇನೆ ಎಂಬಂತೆ. ನಂತರ ನಿನ್ನ ಪ್ರತಿಜ್ಞಾ ಪೂರ್ಣವಾಗಬೇಕಾದರೆ ಏನೆಲ್ಲ ಆಗಿ ಹೋಗಿದೆ ಎನ್ನುವುದು ನಿ‌ನಗೆ ಅರಿವಿದೆ ತಾನೆ. ಉಳಿಸಿಕೊಳ್ಳಲಾಗದ ಮಾತು ಆಡುವ ಮೊದಲು ಆಲೋಚಿಸಬೇಕು. ಒಂದೊಮ್ಮೆಗೆ ಆಡಿದರೆ ನಂತರ ಪೂರೈಸಿ ಸಾಧಿಸುವ ಯೋಗ್ಯತೆ ಇರಬೇಕು. ವಚನಭ್ರಷ್ಟನಾಗುವುದು ಮಹಾ ಪಾತಕಗಳಲ್ಲಿ ಒಂದು ಎಂಬುವುದನ್ನು ನೀನು ಯಾವತ್ತೂ ಮರೆಯಬಾರದಿತ್ತು. ಇಂದು ಮತ್ತೆ ನೀ‌ನು ಆತುರಗಾರನಿಗೆ ಬುದ್ಧಿ ಮಟ್ಟ ಎಂಬಂತೆ ಆಡಿ ಬಿಟ್ಟೆಯಲ್ಲ. ನೀನು ನುಡಿದಂತೆ ಸುಧನ್ವನ ಶಿರಚ್ಚೇಧನ ಮೂರು ಶರದಿಂದ ಮಾಡಲು ಸಮರ್ಥ ನೀನು ಹೌದಾಗಿದ್ದರೆ, ಅಂತಹ ಶಕ್ತ ಶರಗಳು‌ ನಿನ್ನಲ್ಲಿದಿದ್ದರೆ ಒಮ್ಮೆ ಸೋತು ರಕ್ಷಣೆಗೆ ನನ್ನನ್ನು ಯಾಕಾಗಿ ಕರೆಯಬೇಕಿತ್ತು? ಆಲೋಚಿಸು ಅರ್ಜುನಾ! ಪರಮ ಸತ್ಯಸಂಧನೂ, ಅತ್ಯಂತ ನಿಸ್ವಾರ್ಥಿಯೂ, ಉತ್ಕೃಷ್ಟ ಧರ್ಮಿಷ್ಠನೂ, ಅಪ್ರತಿಮ ಸಾಹಸಿಯೂ, ಅದ್ವಿತೀಯ ತ್ಯಾಗಿಯೂ, ಮಹಾ ಧೈರ್ಯಶಾಲಿಯೂ ಆಗಿರುವ ಸುಧನ್ವ ನಿಷ್ಕಲ್ಮಶ ಶುದ್ಧಾಂತಃಹಕರಣಿಯೂ, ಶ್ರೇಷ್ಠ ಭಗವದ್ಭಕ್ತನೂ, ಸತ್ಯ ವ್ರತನೂ ಆಗಿದ್ದಾನೆ. ಆತನ ಸ್ವಸಾಮರ್ಥ್ಯದ ಜೊತೆ ಧರ್ಮವೂ, ದೈವಬಲವೂ ಆತನನ್ನು ಕವಚವಾಗಿ ಸಂರಕ್ಷಣೆ ಮಾಡುತ್ತಿದೆ. ಅಂತಹ ಸಮಷ್ಠಿ ಶಕ್ತಿಯ ಕೇಂದ್ರವಾಗಿರುವ ಸುಧನ್ವ ನಿನ್ನ ಪಾಲಿಗೆ ಅಜೇಯನು ಎಂಬುವುದು ನಿಜ ಸಂಗತಿ. ಇಂತಹ ಸುಧನ್ವನ ವಧೆ ಸುಲಭ ಸಾಧ್ಯವಲ್ಲದ ವಿಚಾರ. ಅಸದಳ ಪುಣ್ಯದ ಬಲಹೊಂದಿರುವ ಭಕ್ತ ಭಾಗವತನನ್ನು ಮಣಿಸುವ ಅಸ್ತ್ರವಾಗಲಿ ಶಸ್ತ್ರವಾಗಲಿ ಯಾವುದೂ ಇಲ್ಲ. ಆತನ ಪ್ರಾಣವನ್ನು ಮುಕ್ತಗೊಳಿಸಬೇಕಾದರೆ ಪುಣ್ಯದ ಬಲ ವಿನಿಯೋಗವಾಗಬೇಕು ಹೊರತು ತ್ರಾಣದ ಬಲದಿಂದ ಪ್ರಾಣ ಹೀರಲು ಸಾಧ್ಯವಾಗದು.
ಮಾನವ ಜನ್ಮದಲ್ಲಿ ಜನಿಸಿ, ಮರ್ಯಾದಾ ಪುರುಷೋತ್ತಮ ಎಂಬ ನೆಗಳ್ತೆಗೆ ಪಾತ್ರನಾದವ ಶ್ರೀರಾಮಚಂದ್ರ. ಪಿತೃವಾಕ್ಯ ಪರಿಪಾಲಕನೂ, ಪ್ರಜಾಕೋಟಿ ಪ್ರಿಯನೂ, ಧರ್ಮಾತ್ಮನೂ, ಭಕ್ತಾಗ್ರಣಿಯೂ, ಉತ್ತಮ ವ್ರತಾನುಷ್ಠಾನ ಪಾಲಕನೂ, ಏಕಪತ್ನಿ ವ್ರತಸ್ಥನೂ ಆಗಿ ಅಜರಾಮರ ಕೀರ್ತಿ ಹೊಂದಿದವನು. ಅಂತಹ ತ್ರೇತೆಯ ಶ್ರೀರಾಮ ಲೋಕಕ್ಕೆ ಯಾವೆಲ್ಲಾ ಅನುಸರಣೀಯ ಆದರ್ಶಗಳನ್ನು ತೋರಿದ್ದಾನೋ ಅವೆಲ್ಲವನ್ನೂ ಚಾಚೂ ತಪ್ಪದೆ ಪಾಲಿಸುತ್ತಾ ಬದುಕುತ್ತಿರುವ ಪರಮ ವೈಷ್ಣವನು ಈ ಸುಧನ್ವ. ಅಂತಹ ಅನರ್ಘ್ಯ ರತ್ನದಂತೆ ಶೋಭಿಸುವ ನನ್ನ ಈ ಭಕ್ತ ನಿನಗಿಂತಲೂ ಸಾರಸ ಭಕ್ತ ನನಗೆ ಅತಿ ಪ್ರೀತ. ಆತನನ್ನು ನಾನು ಬಿಟ್ಟು ಕೊಡುವುದಕ್ಕುಂಟೆ? ಕೊಡಲಾದೀತೆ? ಆದರೆ ಧರ್ಮಸಂಕಟದಲ್ಲಿ ಸಿಲುಕಿ ಗೊಂದಲದಲ್ಲಿ ದಿಕ್ಕು ತೋಚದೆ ಪರದಾಡುವ ಸ್ಥಿತಿಯನ್ನು ನೀನು ನನಗೆ ತಂದಿತ್ತೆಯಲ್ಲಾ ಪಾರ್ಥಾ! ‘ನೀವೈವರು ಪಾಂಡವರ ಪ್ರಾಣವನ್ನು ಸದಾ ಕಾಯುತ್ತೇನೆ’ ಎಂಬ ಅಭಯವಾಕ್ಯವನ್ನು ನಿನ್ನ ತಾಯಿ – ನನ್ನ ಅತ್ತೆ ಕುಂತಿದೇವಿಗಿತ್ತಿದ್ದೇನೆ. ಈಗ ನಿನ್ನ ಸಂರಕ್ಷಣೆ ಮಾಡದೆ ಉಳಿದೆನಾದರೆ ವಚನ ಭ್ರಷ್ಟನೆಂಬ ಅಪವಾದಕ್ಕೆ ಗುರಿಯಾಗುವೆ. ಹಾಗೆಂದು ಸದ್ಭಕ್ತನೂ, ನಿಷ್ಕಳಂಕ ಚರಿತನೂ, ಗುಣೋಪೇತನೂ ಆದ ಸುಧನ್ವನಿಗೆ ಅನ್ಯಾಯ ಮಾಡಲಾದೀತೆ? ಆತನು ನಂಬಿಕೆ ಇಟ್ಟಿರುವುದು ಆತ ಸದಾ ಜಾಗೃತವಾಗಿರುವ ಭಕ್ತಿಯ ಮೇಲೆ. ಅದು ಸತ್ಯವಾಗಿರುವಾಗ ಆತನ ವಧೆ ಅಸಾಧ್ಯವಾದ ಮಾತು. ನಾನೇನು ಮಾಡಲಿ ಪಾರ್ಥ? ಅವಸರದಿಂದ ಅನರ್ಥ ಕಾರ್ಯವೆಸಗಿ ಬಿಟ್ಟೆಯಲ್ಲಾ! ಅಚಿಂತ್ಯನಾದ ನನಗೆ ಚಿಂತೆಯನ್ನು ತಂದಿತ್ತೆಯಲ್ಲಾ” ಎಂದು ಶ್ರೀಕೃಷ್ಣ ಅರ್ಜುನನ ಅವಿವೇಕದ ಪ್ರತಿಜ್ಞೆಯನ್ನು ಯೋಚಿಸಿ ತರ್ಕಿಸುತ್ತಿದ್ದಾನೆ.

ಸುಧನ್ವನಿಗೆ ಏಕೊ ತನ್ನ ಅಂತರಂಗದ ಆಲಯದ ದೇವ ಪರಮಾತ್ಮ ಶ್ರೀಕೃಷ್ಣ ವ್ಯಥೆಗೊಳಗಾದಂತೆ ಅನುಭವವಾಗತೊಡಗಿತು. ಅಯ್ಯೋ ನನ್ನ ದೇವರ ಸಂಕಟಕ್ಕೆ ನಾನು ಕಾರಣನಾದೆನೆ? ನನ್ನಿಂದ ಹಾಗಾಬಾರದು “ದೇವಾ! ನಿನ್ನ ಭಕ್ತನಾಗಿ ನನ್ನ ಕೋರಿಕೆಯನ್ನು ಆಲಿಸಿ ಈಡೇರಿಸುವೆಯಾ ಭಕ್ತವತ್ಸಲಾ… ಲೋಕವನ್ನು ಪಾಲಿಸಬೇಕಾದ ಪಾಲನಾಕರ್ತ ನೀನಾಗಿರುವೆ. ಕಾಲಚಕ್ರದ ಚಲನೆಯ ಗಣನೆ ನಿನ್ನ ಅಧೀನದಲ್ಲಿದೆ ಎಂದು ಬಲ್ಲವನು ನಾನು. ಹೇ ಶ್ರೀಕಾಂತನೇ! ನಿನಗಿಂತ, ನಿನ್ನ ಪ್ರೀತಿಗಿಂತ ಅಧಿಕತರವಾದ ಸಿರಿ ನನ್ನ ಪಾಲಿಗೆ ಇನ್ನೊಂದಿಲ್ಲ. ನಿನ್ನ ಚರಣ ಸೇವಕನಾಗಿ ನಿನ್ನ ಸೇವೆ ಮಾಡುವ ಅವಕಾಶ ದೊರೆತರೆ ನನಗದು ಮಹಾ ಸೌಭಾಗ್ಯ. ಕನಿಷ್ಠ ಪಕ್ಷ ನಿನಗಾಗುತ್ತಿರುವ ವೇದನೆಗೆ ಪರಿಹಾರವನ್ನಾದರೂ ಕಾಣಿಸಿ ನನ್ನ ಜೀವನವನ್ನು ಕೃತಾರ್ಥಗೊಳಿಸುವ ಯೋಗ ಭಾಗ್ಯವನ್ನಾದರೂ ಕರುಣಿಸು ದೇವಾ. ನೀನು ಪಂಚ ಪಾಂಡವರ ಕುರಿತಾಗಿ ” ಮಮ ಪ್ರಾಣಾಹಿ ಪಾಂಡವಃ” ಎಂದು ಪ್ರಾಣ ಸಾಕ್ಷಿಯಾಗಿ ಪ್ರಮಾಣ ಮಾಡಿರುವೆ. ಆ ವಚನದ ಬಾಧ್ಯತೆಯಾಗಿ ಪಾಂಡವರಲ್ಲಿ ಒಬ್ಬನಾದ ಆ ಅರ್ಜುನನ ರಕ್ಷಣೆ ನಿನಗೆ ಅನಿವಾರ್ಯ ಕರ್ತವ್ಯವಾಗಿದೆ ಎಂದು ನಾನು ಅರಿತಿದ್ದೇನೆ. ಅದನ್ನು ಪಾಲಿಸುವಲ್ಲಿ ನಿನಗೆ ತೊಡಕಾಗಿ ನಿನ್ನ ಭಕ್ತನಾದ ಸುಧನ್ವನಿಂದ ಅಪವಾದ ಬರುವಂತಾಗಲು ಸಾಧ್ಯವೆ? ನಿನ್ನನ್ನು “ಪಾಂಡವ ಪ್ರತಿಷ್ಠಾಪನಾಚಾರ್ಯ” ಎಂದು ಲೋಕ ಲೋಕಗಳು ಕೊಂಡಾಡುತ್ತಿವೆ. ಅಂತಹ ಪ್ರಸಿದ್ಧಿಗೆ ಎಳ್ಳಿನ ಏಳು ಭಾಗದಷ್ಟು ಲೋಪ ಬರಬಾರದು ಎಂಬುವುದು ನಿನ್ನ ಭಕ್ತನಾದ ಸುಧನ್ವನ ಮಹಾಭಿಲಾಷೆ. ನಿನ್ನ ಘನವಾದ ಬಿರುದಿಗೆ ಕೊರತೆಯಾಗಬಾರದು. ಭಗವಂತಾ ನಾನು ಅಲ್ಪಮತಿಯಾಗಿದ್ದೇನೆ. ಆದರೂ ಅತ್ಯಲ್ಪವಾದ ನನ್ನ ಚಿತ್ತಸ್ಮೃತಿಯಿಂದ ನೀನೇನು ಎಂದು ಅರಿಯುವ ಪ್ರಯತ್ನ ಮಾಡಿದ್ದೇನೆ. ನಿನ್ನ ಅಜಾನು – ಅತಿಬಲ ಬಾಹುಗಳಿಂದ ನನ್ನಂತಹ ಕ್ಷತ್ರಿಯ ಶಕ್ತಿಗಳೆಲ್ಲವು ಉದ್ಭವಿಸಿರುವುದು ಎಂದು ಸ್ಮೃತಿಗಳು ಸಾರಿ ಹೇಳುತ್ತಿವೆ. ಬಾಹುಜನಾಗಿ ಸಂಭವಿಸಿದ ನಾನು ಕ್ಷಾತ್ರ ಧರ್ಮ ಪಾಲಿಸದೆ ಹಿಂದುಳಿದೆನಾದರೆ ನಿನಗೆ ಅಪಚಾರವಾದೀತೆಂಬ ಧರ್ಮಪ್ರಜ್ಞೆಯಿಂದ ಪಾರ್ಥನೊಡನೆ ಸಂಗರ ನಿರತನಾಗಬೇಕಾಯಿತು. ಮುಂದಕ್ಕಿಟ್ಟ ಹೆಜ್ಜೆ ಸ್ವರ್ಗದ ಸೋಪಾನ, ಹಿಂದಕ್ಕೆಳೆದರೆ ಅದು ನರಕ ಎಂಬುವುದು ಕ್ಷಾತ್ರ ನ್ಯಾಯವಲ್ಲವೆ? ಸ್ವಾಮೀ! ನಿನ್ನ ಭಕ್ತನಾಗಿ ನನಗೆ ಯಾವ ಗತಿ ಪ್ರಾಪ್ತವಾದರೂ ಸಂತೋಷದಿಂದ ಸ್ವೀಕರಿಸುವೆ. ದೇವರಾಗಿ ನನ್ನೆದುರು ನೀನಿರುವಾಗ ಅಳುಕುವ ಅಂಜುವ ಪ್ರಶ್ನೆ ಇಲ್ಲ. ನಿನ್ನಿಂದಲೆ ಪ್ರಾಪ್ತವಾಗಿರುವ ಈ ದೇಹವನ್ನು ನಿನ್ನ ಚರಣಗಳಿಗೆ ಅರ್ಪಿಸಲು ನಾನು ಸಿದ್ಧನಿದ್ದೇನೆ. ನನಗೇನು ಬೇಕೋ ಅದನ್ನು ನನಗೆ ಕರುಣಿಸು. ಪಾರ್ಥನಿಗೇನು ಅಗತ್ಯವೋ ಅದನ್ನವನಿಗೆ ಪಾಲಿಸು. ನಿನ್ನನ್ನು ಕಣ್ತುಂಬಾ ಕಾಣುವ ಯೋಗ ದೊರೆತಲ್ಲಿಗೆ ನನಗೆ ಬೇಕಾದುದೆಲ್ಲವೂ ದೊರೆತಾಯಿತು. ನಿನಗಿಂತ ಮಿಗಿಲಾದುದು ಇನ್ನೇನಿದೆ ದೇವಾ?” ಎಂದು ಭಕ್ತನಾಗಿ ಬೇಡುತ್ತಾ “ಇದೋ ಯುದ್ಧಕ್ಕೆ ಸನ್ನದ್ಧನಾಗಿದ್ದೇನೆ. ಭಗವಂತಾ ನಿನ್ನ ಸಖನಾದ ಆ ಪಾರ್ಥ ಈ ಕ್ಷಣ ಬಯಸಿರುವುದು ಲೋಕ ವ್ಯಾಪ್ತಿಯ ಲೌಕಿಕ ಜಯ, ನನಗೆ ಬೇಕಾಗಿರುವುದು ಪರಮಾರ್ಥಿಕವಾದ ಶಾಶ್ವತ ವಿಜಯವಾದ ಮುಕ್ತಿ. ನಮ್ಮಿಬ್ಬರ ಆಸೆಗಳೂ ಈಡೇರಬೇಕಾದರೆ ಧರ್ಮಯಜ್ಞ ಸದೃಶವಾದ ಯುದ್ಧ ಆಗಬೇಕು. ಆದರೆ ಅರ್ಜುನೇಕೆ ಅಳುಕಿದನೊ? ಆತ ಸಂಧಾನ ಮಾಡಿದ ಶರ ಪ್ರಯೋಗಿಸಲ್ಪಡದೆ ಯಾಕೆ ಹಿಂದುಳಿದಿದ್ದಾನೆ ನಾನರಿಯೆ. ಇದೋ ನಿನಗೆ ಮನದಾಳದಿಂದ ವಂದಿಸಿ ನಾನು ಯುದ್ಧ ಪುನರಾರಂಭ ಮಾಡುತ್ತೇನೆ. ನಿಮ್ಮ ರಥಕ್ಕೆ ಗುರಿಯಾಗಿ ಸುಧನ್ವನ ಶರ ಹೊರಟಿದೆ. ಪಾರ್ಥನ ರಥದ ಗತಿಯೇನಾಗುತ್ತದೆ ಎಂದು ನೋಡಿಕೊಳ್ಳಿ”ಎಂದು ಸುಧನ್ವನು ಯುದ್ಧ ಪ್ರೇರಕನಾದನು.

ಪಾರ್ಥಸಾರಥಿ ಸ್ಥಿತನಾಗಿರುವ ರಥ ಚಿಮ್ಮಿ ಹಿಂದಕ್ಕೆ ಜಾರಿತು. ಒಂದು ಸುತ್ತು ತಿರುಗಿಸಲ್ಪಟ್ಟು ನಿಂತಿತು. ಶ್ರೀಕೃಷ್ಣನಿಗೆ ರಥನಿಯಂತ್ರಣ ಹೇಳಿಕೊಡಬೇಕೆ? ಮತ್ತೆ ಸುಸ್ಥಿತಿಗೆ ತಂದು ನಿಲ್ಲಿಸಿದನು. ಅರ್ಜುನನೂ ಅದ್ವಿತೀಯ ಕ್ಷತ್ರಿಯ ವೀರಾಗ್ರಣಿಯಲ್ಲವೆ? ಯುದ್ಧಾಹ್ವಾನವಿತ್ತು ಈ ರೀತಿ ವಿಕ್ರಮ ಮೆರೆದ ಸಾಹಸಿ ಸುಧನ್ವನ ಮೇಲೆ ಕೋಪ ನೆತ್ತಿಗೇರಿತು. “ಕೃಷ್ಣಾ ನನ್ನಿಂದ ಇನ್ನು ಸಹಿಸಿ ನಿಲ್ಲಲಾಗದು. ಇದೋ ಶರ ಪ್ರಯೋಗಿಸುತ್ತೇನೆ.” ಎಂದು ಅಬ್ಬರಿಸಿದನು.

“ನಿಲ್ಲು ನಿಲ್ಲು ಪಾರ್ಥಾ, ನಿನ್ನ ಬರಿದೆ ಸರಳು ಸುಧನ್ವನಿಗೇನೂ ಮಾಡದು. ನಿನ್ನ ಈ ಶರಕ್ಕೆ ಬಲಪೂರಣೆಯಾಗಬೇಕು. ಇದೋ ನನ್ನ ಜೀವನದಲ್ಲಿ ಗೋವುಗಳ ರಕ್ಷಣೆಗಾಗಿ ಗೋವರ್ಧನಗಿರಿಯನ್ನು ಉದ್ಧರಿಸಿ ಗೋಕುಲವನ್ನು ರಕ್ಷಣೆ ಮಾಡಿದುದರಿಂದ ಸಂಚಯವಾಗಿರುವ ಪೂರ್ಣ ಪುಣ್ಯಫಲದ ಬಲವನ್ನು ಈ ಸರಳಿಗೆ ಧಾರೆಯೆರೆದಿದ್ದೇನೆ. ಪುಣ್ಯದ ಬಲದಿಂದ ಪ್ರಬಲವಾಗಿರುವ ಈ ಶರವನ್ನೀಗ ಪ್ರಯೋಗಿಸು” ಎಂದು ಶ್ರೀಕೃಷ್ಣ ಅಪ್ಪಣೆಯಿತ್ತನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page