
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಇಟಲಿ ಪ್ರವಾಸ ಹಾಗೂ ‘ಮೆಲೋಡಿ’ ಟಾಫಿ ವಿಚಾರವನ್ನು ಟೀಕಿಸಿರುವ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ವಿದೇಶ ಪ್ರವಾಸ ಕೈಗೊಂಡಿರುವುದನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ರಾಹುಲ್ ಗಾಂಧಿ ಅವರ ವಿಡಿಯೋ ಹಂಚಿಕೊಂಡಿರುವ ಹರಿಪ್ರಸಾದ್, ದೇಶದಲ್ಲಿ ಉದ್ಯೋಗ ಮತ್ತು ಬೆಲೆ ಏರಿಕೆ ಸಮಸ್ಯೆಗಳು ಗಂಭೀರವಾಗಿರುವಾಗ ಸರ್ಕಾರ ಪಿಆರ್ ಯಂತ್ರ ‘ಟಾಫಿ’ ಹಂಚುವ ದೃಶ್ಯಗಳನ್ನು ವೈರಲ್ ಮಾಡಲು ಬ್ಯುಸಿಯಾಗಿದೆ. ರೂಪಾಯಿ ಮೌಲ್ಯ ಕುಸಿತ, ಸಣ್ಣ ವ್ಯಾಪಾರಿಗಳ ಸಂಕಷ್ಟ ಹಾಗೂ ದರ ಏರಿಕೆ ಬಗ್ಗೆ ಸರ್ಕಾರ ಮೌನವಾಗಿದೆ. ಆದರೆ ‘ರೀಲ್ಸ್ ಡಿಪ್ಲೊಮಸಿ’ಗೆ ಮಾತ್ರ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ದೇಶ ಆರ್ಥಿಕ ಅನಿಶ್ಚಿತತೆಯ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ‘ಮೆಲೋಡಿ ಟಾಫಿ’ ರಾಜತಾಂತ್ರಿಕತೆಯಲ್ಲಿ ತೊಡಗಿರುವುದು ಆಡಳಿತ ವೈಫಲ್ಯವನ್ನು ತೋರಿಸುತ್ತದೆ ಎಂದು ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.



























